ಶಾಲೆಯಿಂದ ಹೊರಗುಳಿದ ಒಂದೇ ಮನೆಯ 5 ಗಂಡು ಮಕ್ಕಳು; ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗೆ ಸೇರ್ಪಡೆಗೊಳಿಸುವಂತೆ ಆಗ್ರಹ
ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಾಪಿನಬಾಗಿಲುನ ಒಂದೇ ಮನೆಯ 5 ರಿಂದ 10ನೇ ತರಗತಿಯ ಐವರು ಮಕ್ಕಳು ಶಾಲೆಗೆ ಬರುತ್ತಿಲ್ಲ. ಇವರನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ ಘಟನೆ ಕೌಕ್ರಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ಆ.23ರಂದು ಕೌಕ್ರಾಡಿ-ಕೊಕ್ಕಡ ಸಂತಜಾನರ ಚರ್ಚ್ ಶಾಲೆಯಲ್ಲಿ ನಡೆಯಿತು. ಪುತ್ತೂರು ತಾಲೂಕು ಪಂಚಾಯತ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ರವರು ನೋಡಲ್ ಅಧಿಕಾರಿಯಾಗಿದ್ದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಕಾಪಿನಬಾಗಿಲುನಲ್ಲಿರುವ ಒಂದೇ ಮನೆಯ 5 ಗಂಡು ಮಕ್ಕಳು ಶಾಲೆಗೆ ಬರುತ್ತಿಲ್ಲ. ಈ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೇ ಒಪ್ಪುತ್ತಿಲ್ಲ. ಮಕ್ಕಳು ತಂದೆ, ತಾಯಿಯ ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದು ಮದ್ಯಪಾನವೂ ಮಾಡುತ್ತಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನೆಗೆ ಹೋಗಿ ಶಿಕ್ಷಕರು ಹೇಳಿದರೂ ಕೇಳುತ್ತಿಲ್ಲ. ಸಂಜೆ ವೇಳೆ ಬಂದು ಗಲಾಟೆ ಮಾಡುತ್ತಾರೆ ಎಂದರು. ಸಮಾಜ ಕಲ್ಯಾಣ ಇಲಾಖೆಯವರು ಸಹಕಾರ ನೀಡಿದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಆರ್ಪಿ ಪ್ರಕಾಶ್ ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಈ ಮಕ್ಕಳನ್ನು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಅವರ ಮನವೊಲಿಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅನಧಿಕೃತ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳಿ:
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನಧಿಕೃತ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಳೆದ ಗ್ರಾಮಸಭೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಸಾಧ್ಯವಾಗದೇ ಇದ್ದಲ್ಲಿ ಇಂತಹ ಅಂಗಡಿದಾರರಿಂದಲೂ ತೆರಿಗೆ ಸಂಗ್ರಹಿಸಿ ಎಂದು ಗ್ರಾಮಸ್ಥ ಜಾನ್ಸನ್ ಗಲ್ಬಾವೋ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಯಶವಂತ ಅವರು, ಅನಧಿಕೃತ ಅಂಗಡಿಯವರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ಹಂತದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಇಂತಹ ಅಂಗಡಿಯವರಿಗೆ ದಂಡ ವಿಧಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ಲೋಕೇಶ್ ಬಾಣಜಾಲು ಹೇಳಿದರು.
ಟ್ಯಾಂಕ್ ನಿರ್ಮಾಣಕ್ಕೆ ಜಾಗ ಗುರುತಿಸಿ:
ಕೌಕ್ರಾಡಿ ಗ್ರಾಮದ ಕಲ್ಲಡ್ಕ ಎಂಬಲ್ಲಿ ನೀರಿನ ಟ್ಯಾಂಕ್ ರಚನೆಗೆ ಜಾಗ ಗುರುತಿಸಲಾಗಿದೆ. ಅಲ್ಲಿ ಟ್ಯಾಂಕ್ ಆದಲ್ಲಿ 10 ಮನೆಗಳಿಗೆ ಮಾತ್ರ ನೀರು ಪೂರೈಕೆ ಸಾಧ್ಯ. ಇದರ ಬದಲು ಕಾಪಿನಬಾಗಿಲುನಲ್ಲಿ ಟ್ಯಾಂಕ್ ರಚನೆಯಾದಲ್ಲಿ ಎಲ್ಲಾ ಕಡೆಯೂ ನೀರು ಪೂರೈಕೆಯಾಗಲಿದೆ. ಆದ್ದರಿಂದ ಕಾಪಿನಬಾಗಿಲುನಲ್ಲಿ ಟ್ಯಾಂಕ್ ರಚನೆಗೆ ಸರಕಾರಿ ಜಾಗ ಗುರುತಿಸಬೇಕೆಂದು ಜಾನ್ಸನ್ ಗಲ್ಬಾವೋ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕ ಸಿದ್ದಲಿಂಗ ಜಂಗಮಶೆಟ್ಟಿ ಅವರು, ಕಲ್ಲಡ್ಕದಲ್ಲಿ ಈಗಾಗಲೇ ಜಾಗ ಗುರುತಿಸಿಕೊಟ್ಟಿದ್ದೇವೆ. ಇದರ ಬದಲಾವಣೆಗೆ ಪಂಚಾಯತ್ನಿಂದ ತಹಶೀಲ್ದಾರ್ಗೆ ಪತ್ರ ಬರೆದು ಕೇಳಿಕೊಳ್ಳಬೇಕೆಂದು ಹೇಳಿದರು. ಚರ್ಚೆಯಾಗುತ್ತಿದ್ದಂತೆ ಮಾತನಾಡಿದ ಅಧ್ಯಕ್ಷ ಲೋಕೇಶ್ ಅವರು, ಈ ಸಲ ಮಳೆ ಕಡಿಮೆಯಾಗಿರುವುದರಿಂದ ಮುಂದೆ ನೀರಿನ ಅಭಾವವೂ ಉಂಟಾಗಬಹುದು. ಆದ್ದರಿಂದ ಕಾಪಿನಬಾಗಿಲುನಲ್ಲಿಯೇ ಟ್ಯಾಂಕ್ ರಚನೆಗೆ ಜಾಗ ಗುರುತಿಸಲು ಕಂದಾಯ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೆಚ್ಚುತ್ತಿರುವ ಕಳವು ಪ್ರಕರಣ:
ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಇಚ್ಲಂಪಾಡಿಯಲ್ಲಿ ಪೊಲೀಸ್ ಗಸ್ತು ಆಗಬೇಕೆಂದು ಗ್ರಾಮಸ್ಥ ವರ್ಗೀಸ್ ಅಬ್ರಹಾಂ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನೆಲ್ಯಾಡಿ ಹೊರಠಾಣೆಯ ಹೆಡ್ಕಾನ್ಸ್ಸ್ಟೇಬಲ್ ಕುಶಾಲಪ್ಪ ನಾಯ್ಕ್ ಅವರು, ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಕಳವು ಪ್ರಕರಣದ ಪತ್ತೆ ಕಾರ್ಯವೂ ನಡೆಯುತ್ತಿದೆ. ಅಂಗಡಿ ಮಾಲಕರು ಸಿಸಿ ಕ್ಯಾಮರಾಗಳನ್ನು ರಸ್ತೆ ಕಾಣುವಂತೆ ಅಳವಡಿಸಬೇಕೆಂದು ಹೇಳಿದರು. ಪೆರಿಯಶಾಂತಿಯಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಗ್ರಾಮಸ್ಥ ಜಾರ್ಜ್ಕುಟ್ಟಿ ಉಪದೇಶಿ ಹೇಳಿದರು. ನೆಲ್ಯಾಡಿ ಹೊರಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇದ್ದು ಇಲ್ಲಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು.
ಅರ್ಧಂಬರ್ಧವಾಗಿರುವ ಜೆಜೆಎಂ ಕಾಮಗಾರಿ:
ಕುಡಿಯುವ ನೀರು ಪೂರೈಸುವ ಜೆಜೆಎಂ ಕಾಮಗಾರಿ ಅರ್ಧಂಬರ್ಧವಾಗಿದ್ದು ಸಮಸ್ಯೆಯಾಗಿದೆ. ಅನುಷ್ಠಾನ ಇಲಾಖೆಯವರಿಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ವರ್ಗೀಸ್ ಅಬ್ರಹಾಂ ಹೇಳಿದರು. ಈ ಕಾಮಗಾರಿಯಿಂದ ಜನರಿಗೆ ಸಮಸ್ಯೆಯಾಗಿದೆ. ಶೀಘ್ರ ಪೂರ್ಣಗೊಳಿಸುವಂತೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಎ.ಎಸ್.ಹುಕ್ಕೇರಿ ಅವರು, ಗುತ್ತಿಗೆದಾರರಿಗೆ ಈಗಾಗಲೇ ಮೂರು ಸಲ ನೋಟಿಸ್ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನೂ ಸ್ಪಂದಿಸದೇ ಇದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಡ್ಡಿ ಮೊತ್ತ ಬಳಕೆಗೆ ಮನವಿ:
ಗ್ರಾಮವಿಕಾಸ ಯೋಜನೆಯಡಿ ಮಂಜೂರಾದ ಅನುದಾನದ ಬಡ್ಡಿಯ ಮೊತ್ತವನ್ನೂ ಗ್ರಾಮದ ಅಭಿವೃದ್ಧಿಗೆ ಬಳಸಲು ಗ್ರಾಮ ಪಂಚಾಯತ್ಗೆ ಅವಕಾಶ ನೀಡಬೇಕೆಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಹೇಳಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸವಲತ್ತುಗಳ ಕರಪತ್ರ ಹಂಚಿ:
ತೋಟಗಾರಿಕೆ, ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಗ್ರಾಮಸ್ಥರಿಗೆ ಕರಪತ್ರ ಹಂಚಬೇಕು. ಪ್ರತಿ ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸುತ್ತಿದ್ದೇವೆ. ಆದರೆ ಅನುಷ್ಠಾನ ಆಗುತ್ತಿಲ್ಲ ಎಂದು ಎಂ.ಕೆ.ಇಬ್ರಾಹಿಂ, ವರ್ಗೀಸ್ ಅಬ್ರಹಾಂ ಮತ್ತಿತರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗದ್ದೆ ಕೃಷಿಗೆ ಪ್ರೋತ್ಸಾಹ ನೀಡಬೇಕೆಂದು ಜಾರ್ಜ್ಕುಟ್ಟಿ ಉಪದೇಶಿ ಆಗ್ರಹಿಸಿದರು.
ಬಿಪಿಎಲ್ ಆದಾಯ ಮಿತಿ ಹೆಚ್ಚಿಸಿ:
ಬಿಪಿಎಲ್ ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಹೆಚ್ಚಿಸಬೇಕೆಂದು ಗ್ರಾಮಸ್ಥ ವಾಸುದೇವ ಗೌಡ ಒತ್ತಾಯಿಸಿದರು. ಈ ಬಗ್ಗೆ ಹಿಂದಿನ ಸಭೆಯಲ್ಲೂ ಮನವಿ ಮಾಡಲಾಗಿದೆ. ಆದರೆ ಯಾವುದೇ ಉತ್ತರ ಸಿಕ್ಕಿಲ್ಲ. ನಿರ್ಣಯಗಳಿಗೆ ಮಹತ್ವವಿಲ್ಲವೇ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಲೋಕೇಶ್ ಅವರು, ಗ್ರಾಮಸಭೆಯಲ್ಲಿ ಕೈಗೊಂಡಿರುವ ಎಲ್ಲಾ ನಿರ್ಣಯಗಳ ಅನುಷ್ಠಾನಕ್ಕೆ ಮುಂದಿನ ದಿನಗಳಲ್ಲಿ ಒತ್ತು ನೀಡುತ್ತೇವೆ ಎಂದರು.
ಮುಚ್ಚಿದ ಶಾಲೆಯ ನಿರ್ವಹಣೆ ಮಾಡಿ:
ಕೊರಮೇರು ಸರಕಾರಿ ಕಿ.ಪ್ರಾ.ಶಾಲೆ ಮಕ್ಕಳ ಕೊರತೆಯಿಂದಾಗಿ ಮುಚ್ಚಲ್ಪಟ್ಟಿದೆ. ಆ ಕಟ್ಟಡದ ನಿರ್ವಹಣೆ ಯಾರು ಮಾಡುವುದು ಎಂದು ಗ್ರಾಮಸ್ಥ ವರ್ಗೀಸ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಷ್ಣುಪ್ರಸಾದ್ ಅವರು, ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಸದ್ರಿ ಶಾಲೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. ಮಕ್ಕಳು ಸೇರ್ಪಡೆಯಾದಲ್ಲಿ ಶಾಲೆ ಪುನರಾರಂಭಿಸಲು ಅವಕಾಶವಿದೆ. ಮುಚ್ಚಿರುವ ಶಾಲೆಗೆ ಇಲಾಖೆಯಿಂದ ಯಾವುದೇ ಅನುದಾನ ಬಿಡುಗಡೆಯಾಗುವುದಿಲ್ಲ. ಆ ಕಟ್ಟಡದಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯ ಸೇರಿದಂತೆ ಇತರೇ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದರು. ಶಾಲೆಯ ನಿರ್ವಹಣೆ ಕುರಿತು ಬಿಇಒ ಜೊತೆ ಮಾತುಕತೆ ನಡೆಸಿರುವುದಾಗಿ ಪಿಡಿಒ ಯಶವಂತ ಬೆಳ್ಚಡ ತಿಳಿಸಿದರು. ಇದು ಚುನಾವಣೆ ಬೂತ್ ಸಹ ಆಗಿರುವುದರಿಂದ ಪಂಚಾಯತ್ನಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಲೋಕೇಶ್ ತಿಳಿಸಿದರು.
ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ:
ನಿಡ್ಯಡ್ಕ ನೀರಿನ ಟ್ಯಾಂಕ್ ಬಳಿಯ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಪಂಚಾಯತ್ನಿಂದ ಅನುಮತಿ ನೀಡಲಾಗಿದೆಯೇ ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಯಶವಂತ ಬೆಳ್ಚಡ ಹೇಳಿದರು. ನೆಲ್ಯಾಡಿ ಬಸ್ನಿಲ್ದಾಣ ಸಮಸ್ಯೆ, ಕಾಡಾನೆ ದಾಳಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನ ಸೆಳೆದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಳರೋಗಿಯಾಗಿ ದಾಖಲು ವ್ಯವಸ್ಥೆ, ಆಂಬುಲೆನ್ಸ್ ಸೇವೆ, ರಾತ್ರಿಯೂ ವೈದ್ಯರ ಸೇವೆ ಸಿಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ನೆಲ್ಯಾಡಿ ಹೊರಠಾಣೆಯ ಕುಶಾಲಪ್ಪ ನಾಯ್ಕ್, ಜಿ.ಪಂ.ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಮೆಸ್ಕಾಂ ಜೆಇ ರಮೇಶ್, ತೋಟಗಾರಿಕೆ ಇಲಾಖೆಯ ಶಿವಪ್ರಕಾಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪುಷ್ಪಾವತಿ, ಹಿರಿಯ ಪಶುವೈದ್ಯ ಪರೀಕ್ಷಕ ರವೀಂದ್ರ, ಸಾಮಾಜಿಕ ಅರಣ್ಯ ಇಲಾಖೆಯ ಕೃಷ್ಣ, ಗ್ರಾಮ ಆಡಳಿತಾಧಿಕಾರಿಗಳಾದ ಸಿದ್ದಲಿಂಗ ಜಂಗಮಶೆಟ್ಟಿ, ಲಾವಣ್ಯ, ಸಿಆರ್ಪಿ ಪ್ರಕಾಶ್ ಬಾಕಿಲ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಪಿಡಬ್ಲ್ಯುಡಿ, ಆರೋಗ್ಯ, ಅರಣ್ಯ ಇಲಾಖೆ ಅಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ವನಿತಾ, ಸದಸ್ಯರುಗಳಾದ ಜಿ.ಭವಾನಿ, ಮಹೇಶ್ ಪಿ., ಜನಾರ್ದನ ಎಂ., ಪುಷ್ಪಾ, ಸುಧಾಕರ ಜಿ., ಸವಿತಾ ಎಸ್., ಶೈಲ, ದೇವಕಿ, ಉದಯಕುಮಾರ್ ಗೌಡ, ಹನೀಫ್, ಡೈಸಿ ವರ್ಗೀಸ್, ಕುರಿಯಾಕೋಸ್ ಯಾನೆ ರೋಹಿ ಟಿ.ಎಂ., ರತ್ನಾವತಿ ಎಸ್., ಬಿ.ದಿನೇಶ್ ಕುಮಾರ್, ವಿಶ್ವನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಕಸ್ತೂರಿ ವರದಿ ಮಂಡಿಸಿದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಹೊಸ ಲೋಕಸಭಾ ಕ್ಷೇತ್ರಕ್ಕೆ ಮನವಿ:
ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕು ವ್ಯಾಪ್ತಿಯನ್ನು ಸೇರಿಸಿಕೊಂಡು ಹೊಸ ಲೋಕಸಭಾ ಕ್ಷೇತ್ರ ರಚನೆ ಮಾಡಬೇಕೆಂದು ಗ್ರಾಮಸ್ಥ ಜಾರ್ಜ್ಕುಟ್ಟಿ ಉಪದೇಶಿ ಒತ್ತಾಯಿಸಿದರು.
ಇಚ್ಲಂಪಾಡಿ ಪ್ರತ್ಯೇಕ ಗ್ರಾ.ಪಂ.ಆಗಲಿ:
ಇಚ್ಲಂಪಾಡಿ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆ ಮಾಡಬೇಕೆಂದೂ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.