ದಾರ್ಶನಿಕರ ಆದರ್ಶಗಳು ಇವತ್ತಿನ ಕಾಲಕ್ಕೆ ಪ್ರಸ್ತುತ-ಪುತ್ತೂರು ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಜಯಂತಿಯಲ್ಲಿ ಎಸಿ ಗಿರೀಶ್‌ನಂದನ್

0

ಪುತ್ತೂರು: ದಾರ್ಶನಿಕರ ಜಯಂತಿ ಕೇವಲ ಸ್ಮರಣೆಗೆ ಮಾತ್ರ ಸೀಮಿತಗೊಳಿಸದೆ ಅವರ ಸಂದೇಶ, ಬದುಕು ನಮಗೆ ಆದರ್ಶವಾಗಬೇಕು, ಅವರ ಆದರ್ಶಗಳು ಇವತ್ತಿನ ಕಾಲಕ್ಕೆ ಪ್ರಸ್ತುತ ಎಂದು ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಹೇಳಿದರು.


ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಂಯುಕ್ತ ಆಶ್ರಯದಲ್ಲಿ ಆ.31ರಂದು ಪುತ್ತೂರು ತಾಲೂಕು ಆಡಳಿತ ಸೌದದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾರಾಯಣಗುರುಗಳು ಜಾತಿ, ಮತ ಭೇದವಿಲ್ಲದೆ ಸಾಮರಸ್ಯವನ್ನು ಸಾರಿದವರು. ಶಿಕ್ಷಣಕ್ಕೆ ಒತ್ತು ನೀಡಿದವರು. ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಮತ್ತು ಶಿಕ್ಷಣ ಪಡೆದರೆ ಮಾತ್ರ ಸಾಲದು ಮೌಲ್ಯವನ್ನು ಮುಖ್ಯವಾಗಿ ಇರಿಸಬೇಕೆಂದರು.


ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿದರೆ ನಾರಾಯಣಗುರುಗಳಿಗೆ ಅರ್ಚನೆ ಮಾಡಿದಂತೆ:
ಸಂಸ್ಮರಣಾ ಉಪನ್ಯಾಸ ನೀಡಿದ ಕುಂಬ್ರ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಸಿ.ನಾರಾಯಣ ಅವರು ಮಾತನಾಡಿ ಸಾಮಾಜಿಕ ಪಿಡುಗುಗಳ ಬದಲಾವಣೆ ಮಾಡುವ ಮೂಲಕ ಧರ್ಮದ ಜಾಗೃತಿಯಿಂದ ಸಮಾಜದ ಸ್ವಾಸ್ತ್ಯವನ್ನು ಕಾಪಾಡುವ ಕೆಲಸವನ್ನು ನಾರಾಯಣ ಗುರುಗಳು ಮಾಡಿದ್ದಾರೆ. ಅನೇಕ ಯುಗ ಪುರುಷರಗಳು, ಗುರುಗಳು, ಅನೇಕ ಧರ್ಮದ ವಿಚಾರಗಳನ್ನು ಮಾಡುತ್ತಾ ಹೋದಾಗ ನಾರಾಯಣ ಗುರುಗಳು ವಿಶೇಷವಾಗಿ ಬೇರೆ ರೀತಿಯಲ್ಲಿ ಚಿಂತನೆ ಮಾಡುತ್ತಾರೆ. ಒಂದೇ ಜಾತಿ, ಒಂದೆ ಮತ, ಒಂದೇ ದೇವರು ಎಂಬ ಪರಿಕಲ್ಪಣೆ ನೂರಾರು ವರ್ಷಗಳ ಹಿಂದೆ ಒಬ್ಬ ಸಂತನಿಗೆ ಬರಬೇಕಾದರೆ ಅವರ ಚಿಂತನೆ ಇವತ್ತಿನ ದಿನಮಾನಸಕ್ಕೆ ಹೇಗೆ ಪ್ರಜ್ವಲನೆ ಆಗುತ್ತದೆ ಎಂಬುದಕ್ಕೆ ನಾವೆಲ್ಲ ಸಾಕ್ಷಿಭೂತರಾಗುತ್ತೇವೆ. ಜನಸಾಮಾನ್ಯರಿಗೆ ಅಂತ್ಯೋದಯದ ಪರಿಕಲ್ಪಣೆಯಂತೆ ಕೊನೆಯ ವ್ಯಕ್ತಿಗೆ ನ್ಯಾಯ ಒದಗಿಸಿಕೊಡುವ ವ್ಯವಸ್ಥೆಯನ್ನು ನಾವು ಮಾಡಿದಾಗ ನಾರಾಯಣಗುರುಗಳೀಗೆ ಮಾಡಿದಂತಹ ಅರ್ಚನೆ ಆಗುತ್ತದೆ ಎಂದರು.


ದೇಶ ಅಖಂಡತೆಗೆ ಗುರುಗಳ ತತ್ವ ಸಂದೇಶ ಅಡಕವಾಗಿದೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಮಾತನಾಡಿ ಇವತ್ತು ನಮ್ಮ ದೇಶ ಅಖಂಡತೆಯಿಂದ ಕೂಡಿರಲು ನಾರಾಯಣ ಗುರುಗಳ ತತ್ವ ಸಂದೇಶಗಳು ಅಡಕವಾಗಿದೆ. ಬೇರೆ ಜಾತಿ, ಧರ್ಮದ ಜನರು ಈ ದೇಶದಲ್ಲಿ ಇದ್ದರೂ ನಾವೆಲ್ಲ ಏಕತೆಯಲ್ಲಿ ಇರಲು ನಾರಾಯಣಗುರುಗಳಂತಹ ಅನೇಕ ದಾರ್ಶನಿಕರು ನೀಡಿದ ತತ್ವ ಸಂದೇಶ ಕಾರಣ ಎಂದು ಹೇಳಿದರು.

ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಾಮಣ್ಣ ನಾಯ್ಕ್, ಚಂದ್ರಶೇಖರ್, ಕೆಂಪರಾಜು, ಗೋಪಾಲ್ ಅತಿಥಿಗಳನ್ನು ಗೌರವಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಶಿಶು ಅಭಿವೃದ್ಧಿ ಯೋಜನಾಧಕಾರಿ ಶ್ರೀಲತಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಕೃಷ್ಣ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಉಪಾಧ್ಯಕ್ಷ ಅಶೋಕ್ ಪಡ್ಪು, ಜತೆ ಕಾರ್ಯದರ್ಶಿ ದಯಾನಂದ, ಮಾಜಿ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಸಹಿತ ಹಲವಾರು ಮಂದಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೋಟಿ ಚೆನ್ನಯರ ಕ್ಷೇತ್ರ ಅಭಿವೃದ್ಧಿಗೆ ಮನವಿ
ಸರಕಾರ ಕಳೆದ ಅವಧಿಯಲ್ಲಿ ಕೋಟಿ ಚೆನ್ನಯರು ಹುಟ್ಟಿ ಬೆಳೆದ ಊರಾದ ಪುತ್ತೂರಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ರೂ. 5 ಕೋಟಿಯನ್ನು ಬಜೆಟ್‌ನಲ್ಲಿ ಮಂಜೂರಾತಿ ಮಾಡಿದೆ. ಆದರೆ ಅಲ್ಲಿ ಕೆಲವೇ ಕೆಲವು ಅಭಿವೃದ್ಧಿ ಕಾರ್ಯ ನಡೆದಿದೆ. ಉಳಿದಂತೆ ಇನ್ನೂ ಹಲವು ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಸಹಾಯಕ ಕಮೀಷನರ್ ಅವರಿಗೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here