ಪ್ರಿಯದರ್ಶಿನಿಯಲ್ಲಿ ಸಂಸ್ಕೃತ ದಿನಾಚರಣೆಯ ಅಂಗವಾಗಿ ‘ಸಂಸ್ಕೃತದರ್ಶಿನೀ’ ವಸ್ತು ಪ್ರದರ್ಶನ 

0

ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ  ಸಂಸ್ಕೃತ ದಿನಾಚರಣೆ ಆ.31ರಂದು ನಡೆಯಿತು. ಶ್ರಾವಣ ಮಾಸದ ಹುಣ್ಣಿಮೆಯ ದಿನ ನಡೆದ ಸಂಸ್ಕೃತದರ್ಶಿನೀ ವಸ್ತು ಪ್ರದರ್ಶನವನ್ನು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ವೇ.ಮೂ.ವೆಂಕಟರಮಣ ಭಟ್ ಕಾನುಮೂಲೆ ಉದ್ಘಾಟಿಸಿದರು. ವಸ್ತು ಪ್ರದರ್ಶನದಲ್ಲಿದ್ದ ನೂರಾರು ವಸ್ತುಗಳು ವಿದ್ಯಾರ್ಥಿಗಳ ಮನಸೂರೆಗೊಂಡವು. ಇದರಲ್ಲಿ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು, ರಾಮಕುಂಜ ಇಲ್ಲಿನ ನಿವೃತ್ತ ಪ್ರಾಂಶುಪಾಲ ಸತೀಶ ಭಟ್ ಎಂ. ಮಾತನಾಡಿ ‘ಸಂಸ್ಕೃತ ಪ್ರತಿಯೊಂದು ಭಾಷೆಗಳಿಗೂ ತಾಯಿ ಇದ್ದಂತೆ ,ಈ ಭಾಷೆಯ ಕಲಿಕೆ ನಮ್ಮ ಜೀವನದ ಪ್ರತಿಯೊಂದು ಹಂತಗಳಲ್ಲೂ ಪ್ರಯೋಜನಕ್ಕೆ ಬರುವುದು ಹಾಗಾಗಿ ಅದನ್ನು ಕಲಿಯುವುದರ ಜೊತೆಗೆ ಮನನ ಮಾಡಿಕೊಳ್ಳೋಣ’ ಎಂದರು. ಸಂಸ್ಕೃತ ಸಂಘವನ್ನು ಉದ್ಘಾಟಿಸಿದ ಶಾಲಾ ಮುಖ್ಯಗುರು ರಾಜೇಶ್  ಎನ್. ಮಾತನಾಡುತ್ತಾ ‘ಎಳವೆಯಲ್ಲಿ ಸಂಸ್ಕೃತ ಭಾಷೆ ಕಲಿಯುವುದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಸ್ಪಷ್ಟ ಉಚ್ಚಾರಣೆ ರೂಪುಗೊಳ್ಳುತ್ತದೆ’ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ ಭಗವದ್ಗೀತೆಯ ಪ್ರಥಮ ಅಧ್ಯಾಯದ ಸಾಮೂಹಿಕ ಪಾರಾಯಣ ಜರುಗಿತು.  ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಕೃತ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್ ಸಂಸ್ಕೃತ ಕಲಿತಿದ್ದರಿಂದ ತಮಗಾದ ಪ್ರಯೋಜನದ ಅನುಭವ ಹಂಚಿಕೊಂಡರು.  ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು. ಸಂಸ್ಕೃತ ಅಧ್ಯಾಪಕ ಶಿವರಾಮ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪೂಜಾ ಲಕ್ಷ್ಮಿ ವಂದಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಕೃತಿ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here