ಪುತ್ತೂರು ನಗರಸಭೆಯ 30 ಮಂದಿ ಪೌರ ಕಾರ್ಮಿಕರು ನೇರ ನೇಮಕಾತಿ

0

ಪುತ್ತೂರು:ಪುತ್ತೂರು ನಗರಸಭೆಯಲ್ಲಿ ನೇರಪಾವತಿಯಡಿ ಕೆಲಸ ಮಾಡಿಕೊಂಡಿದ್ದ 30 ಮಂದಿ ಪೌರ ಕಾರ್ಮಿಕರ ನೇರ ನೇಮಕಾತಿಯಾಗಿದ್ದು,ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನೇರ ನೇಮಕಾತಿಯಡಿ ಆಯ್ಕೆಯಾಗಿರುವ ಪೌರಕಾರ್ಮಿಕರ ಪಟ್ಟಿಯನ್ನು ಪುತ್ತೂರು ನಗರಸಭೆಗೆ ಕಳುಹಿಸಿದ್ದಾರೆ.


ನಗರಸಭೆಯಲ್ಲಿ 41 ಮಂದಿ ನೇರ ಪಾವತಿಯಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಪೈಕಿ 30 ಮಂದಿಯನ್ನು ಇದೀಗ ನೇರ ನೇಮಕಾತಿ ಮಾಡಲಾಗಿದೆ.ನೇರ ನೇಮಕಾತಿಯಾಗಿ ಆಯ್ಕೆಗೊಂಡ ಪೌರ ಕಾರ್ಮಿಕರು ತಮ್ಮ ದಾಖಲೆ ಪತ್ರಗಳನ್ನು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಹಸ್ತಾಂತರಿಸಿದ್ದಾರೆ.


ಚಾಲಕರು, ಸೂಪರ್‌ವೈಸರ್‌ಗಳು ನೇರಪಾವತಿಗೆ:
ನಗರಸಭೆಯಲ್ಲಿ ಈಗಿರುವ 41 ಮಂದಿ ಪೌರ ಕಾರ್ಮಿಕರನ್ನು ಹೊರತು ಪಡಿಸಿ 17 ಚಾಲಕರು ಮತ್ತು 2 ಮಂದಿ ಸೂಪರ್‌ವೈಸರ್, 10 ಮಂದಿ ಲೋಡರ್‍ಸ್, ಕ್ಲೀನರ್‌ಗಳು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಅವರನ್ನು ಹೊರಗುತ್ತಿಗೆಯಿಂದ ನೇರಪಾವತಿಯಡಿ ತರಲು ಈಗಾಗಲೇ ಹಲವು ಉನ್ನತ ಮಟ್ಟದ ಸಭೆಗಳು ನಡೆದಿದ್ದು, ಮುಂದಿನ ದಿನ ಅವರನ್ನೂ ನೇರಪಾವತಿಯಡಿ ತರುವ ವ್ಯವಸ್ಥೆಯಾಗಲಿದೆ ಎಂದು ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ಸಮಿತಿ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ತಿಳಿಸಿದ್ದಾರೆ.


39 ಪೌರಕಾರ್ಮಿಕರ ಕೊರತೆ
ಪುತ್ತೂರು ನಗರಸಭೆಯಲ್ಲಿ 88 ಪೌರ ಕಾರ್ಮಿಕರು ಇರಬೇಕಾಗಿದ್ದು, ಈ ಪೈಕಿ 11 ಮಂದಿ ಖಾಯಂ, 30 ಹೊರಗುತ್ತಿಗೆ, 11 ನೇರಪಾವತಿ ಸೇರಿ ಒಟ್ಟು 52 ಮಂದಿ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ.ಚಾಲಕರ ಹುದ್ದೆಯಲ್ಲೂ ಮೂರು ಮಂದಿ ಖಾಯಂ ನೌಕರರಿದ್ದು, 17 ಮಂದಿ ಹೊರ ಗುತ್ತಿಗೆಯಲ್ಲಿದ್ದಾರೆ.ಇನ್ನೂ 2 ಹುದ್ದೆ ಖಾಲಿ ಇದೆ.21 ಲೋಡರ್‍ಸ್ ಮತ್ತು ಕ್ಲೀನರ್‌ಗಳು ಇರಬೇಕಾದಲ್ಲಿ 10 ಮಂದಿ ಮಾತ್ರ ಇದ್ದಾರೆ.3 ಮಂದಿ ಸೂಪರ್‌ವೈಸರ್ ಇರಬೇಕಾದಲ್ಲಿ 2 ಮಂದಿ ಮಾತ್ರ ಇದ್ದಾರೆ.ಹೀಗೆ ಮುಂದಿನ ದಿನ ಖಾಲಿ ಹುದ್ದೆಯನ್ನೂ ಭರ್ತಿ ಮಾಡುವಲ್ಲೂ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹ ವ್ಯಕ್ತವಾಗಿದೆ.


ಶೀಘ್ರ ಶಾಸಕರ ನೇತೃತ್ವದಲ್ಲಿ ಕಾರ್ಯಾದೇಶ ಪತ್ರ ಹಸ್ತಾಂತರ
ನಗರಸಭೆಯಲ್ಲಿ ನೇರ ನೇಮಕಾತಿಯಾಗಿರುವ 30 ಮಂದಿ ಪೌರ ಕಾರ್ಮಿಕರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಕಾರ್ಯಾದೇಶ ಪತ್ರ ಹಸ್ತಾಂತರ ಕಾರ್ಯಕ್ರಮವನ್ನು ಅತಿ ಶೀಘ್ರದಲ್ಲಿ ಮಾಡಲಾಗುವುದು ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here