ಆಂಗ್ಲ ಮಾಧ್ಯಮ ಮಕ್ಕಳ ಜೊತೆ ಶಿಕ್ಷಕರು ಇಂಗ್ಲೀಷ್‌ನಲ್ಲೇ ಮಾತನಾಡುವಂತಾಗಬೇಕು: ಶಾಸಕ ರೈ
ಪುತ್ತೂರು: ನೆಟ್ಟಣಿಗೆ ಮುಡ್ನೂರು ಸರಕಾರಿ ಹಿ ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ತರಗತಿ ಆರಂಭವಾಗಿದ್ದು ಇಲ್ಲಿನ ಶಿಕ್ಷಕರು ಮಕ್ಕಳ ಜೊತೆ ಇಂಗ್ಲೀಷ್‌ನಲ್ಲೇ ಮಾತನಾಡಬೇಕು ಹಾಗಿದ್ದರೆ ಮಾತ್ರ ಮಕ್ಕಳು ಇಂಗ್ಲೀಷ್ ಕಲಿಯಬಹುದು, ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿ ನಮ್ಮ ಶಿಕ್ಷಕರು ಬದಲಾಗಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ನೆಟ್ಟಣಿಗೆ ಮುಡ್ನೂರು ಸರಕಾರಿ ಹಿ ಪ್ರಾ ಶಾಲೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಎಲ್‌ಕೆಜೆ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಭಾವನೆಯನ್ನು ಪ್ರತೀಯೊಬ್ಬರೂ ಬಿಟ್ಟುಬಿಡಬೇಕು, ಹುಟ್ಟುವಾಗಲೇ ಯಾರಿಗೂ ಪ್ರತಿಭೆ ಇರುವುದಿಲ್ಲ, ಬೆಳೆಯುತ್ತಲೇ ಕನಸುಗಳು ಚಿಗುರುತ್ತದೆ ಆ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು. ಮಕ್ಕಳು ದೊಡ್ಡ ಡೊಡ್ಡ ಕನಸುಗಳನ್ನು ಕಾಣಬೇಕು, ಕನಸು ಕಾಣದೇ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಕಷ್ಟ ಎಂಬುದು ಎಲ್ಲಾ ಕಡೆಯೂ ಇದೆ ಕಷ್ಟಪಟ್ಟರೆ ಮಾತ್ರ ಮುಂದೆ ಜೀವನದಲ್ಲಿ ಸುಖ ಸಿಗಬಹುದು. ಇಲ್ಲಿನ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವ ಮೂಲಕ ಸರಕಾರದ ಯೋಜನೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವನ್ನು ವೀಕ್ಷಿಸಿದ ಶಾಸಕರು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ವಿದ್ಯಾರ್ಥಿನಿಯರನ್ನು ಶಾಸಕರು ಸನ್ಮಾನಿಸಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಅರ್, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ, ಸದಸ್ಯರಾದ ಇಬ್ರಾಹಿಂ ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಂಕರ ಆಳ್ವ ಇತ್ಲುಮೂಲೆ, ಗ್ರಾ ಪಂ ಸದಸ್ಯ ಕುಮಾರನಾಥ ,ಪ್ರದೀಪ್ ರೈ ಕರ್ನೂರು, ಪ್ರಫುಲ್ಲಾ ರೈ, ಮೂಸಾ ಅಡ್ಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೂಪಿ ಸ್ವಾಗತಿಸಿ ವಂದಿಸಿದರು.