ಪುತ್ತೂರು: ಮಳೆ ಅಭಾವ ಇರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಇರುವ ಬೋರ್ವೆಲ್ಗಳನ್ನು ವ್ಯವಸ್ಥಿತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಿ ಎಂದು ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನ ಅಧಿಕಾರಿಗಳಿಗೆ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಸೂಚನೆ ನೀಡಿದರು.
ಕುಡಿಯುವ ನೀರಿನ ಬಗ್ಗೆ ಸೆ.2ರಂದು ನಡೆದ ಪುತ್ತೂರು ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಳೆ ಸರಾಗವಾಗಿ ಬರುತ್ತಿಲ್ಲ. ಮಳೆ ಕಡಿಮೆಯಾಗಿದೆ. ಸರಕಾರಿ ಬೋರ್ವೆಲ್ಗಳ ಜೊತೆಗೆ ಖಾಸಗಿ ಬೋರ್ವೆಲ್ಗಳನ್ನು ಬಳಕೆ ಮಾಡಿಕೊಳ್ಳಿ. ನೀರು ಕಡಿಮೆ ಇರುವ ಬೋರ್ವೆಲ್ಗಳಿಗೆ ಅಗತ್ಯವಾಗಿ ರೀಚಾರ್ಜ್ ಮಾಡಬೇಕು. ನಗರ ವ್ಯಾಪ್ತಿಯಲ್ಲಿ ಹಾಗೂ ಗ್ರಾಮಂತರದಲ್ಲಿ ನೀರಿನ ಸಮಸ್ಯೆ ಬರಬಾರದು. ನೀರಿನ ಸಮಸ್ಯೆ ಬಗ್ಗೆ ಯಾವುದೇ ದೂರುಗಳು ಬಾರದಂತೆ ಎಚ್ಚರವಹಿಸಬೇಕು ಎಂದರು.
ನರೇಗಾ ಯೋಜನೆಯಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟ ಕಾಮಗಾರಿ ಮಾಡಬಹುದು. ನರೇಗಾದಲ್ಲಿ ಯಾವುದೇ ಮಿತಿಗಳಿಲ್ಲ. ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ನೀರಿನ ಅಭಾವ ಕಡಿಮೆ. ಹೆಚ್ಚಾಗಿ ನೀರಿನ ಸಮಸ್ಯೆ ತಲೆದೋರುವುದಿಲ್ಲ ಸರಕಾರಿ ಬೋರ್ವೆಲ್ಗಳಲ್ಲಿ ನೀರು ಬತ್ತಿ ಹೋದರೆ ಖಾಸಗಿ ಬೋರ್ವೆಲ್ಗಳ ಮೂಲಕ ನೀರಿನ ಪೂರೈಕೆ ಮಾಡಬೇಕು. ಕಿಂಡಿ ಅಣೆಕಟ್ಟುಗಳನ್ನು ಪರಿಶೀಲಿಸಿ ಅವುಗಳನ್ನು ಉಪಯೋಗಿಸಿ ಎಂದು ಎ.ಸಿ.ಯವರು ಹೇಳಿದರು.
ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಮನೆಗಳ ನಿರ್ಮಾಣ ಆಗಿಲ್ಲ. ಶೀಘ್ರವೇ ಮನೆಗಳನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಿ. ಎಂದರು.
ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕಿನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಬೋರ್ವೆಲ್ಗಳ ಹಾಗೂ ರೀಚಾರ್ಜ್ ಮಾಡಿದ ಬೋರ್ವೆಲ್ಗಳ ಮಾಹಿತಿ ನೀಡಿದರು. ಸುಳ್ಯ ತಾಲೂಕಿನಲ್ಲಿ 43 ಬೋರ್ವೆಲ್ ಇದೆ. ಹಾಗೂ ಪಯಸ್ವಿನಿ ನದಿಯ ನೀರಿನ ಬಳಕೆ ಮಾಡಲಾಗುತ್ತದೆ. ಹೊಸದಾಗಿ ನಿರ್ಮಾಣ ಮಾಡಿದ ಡ್ಯಾಂಗೆ ಗೇಟ್ ಅಳವಡಿಸಲಾಗಿಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ 35 ಬೋರ್ವೆಲ್ ರೀಚಾರ್ಜ್ ಮಾಡಲಾಗಿದೆ. 590 ಬೋರ್ವೆಲ್ ಇದೆ. ಪುತ್ತೂರಿನಲ್ಲಿ 550 ಬೋರ್ವೆಲ್ ಹಾಗೂ 140 ಬೋರ್ವೆಲ್ಗೆ ರೀಚಾರ್ಜ್ ಮಾಡಲಾಗಿದೆ. ಕಡಬದಲ್ಲಿ 347 ಬೋರ್ವೆಲ್ ಹಾಗೂ 37 ಬೋರ್ವೆಲ್ಗೆ ರೀಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದರು.
ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ., ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ, ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಮ್.ಎಚ್., ಪುತ್ತೂರು ತಾಲೂಕು ಕಛೇರಿ ಶಿರಸ್ತೇದಾರ್ ಕವಿತ ಎಸ್., ಪುತ್ತೂರು ತಾಲೂಕು ಪಂಚಾಯತ್ ಪ್ರಥಮ ದರ್ಜೆ ಸಹಾಯಕಿ ತುಳಸಿ, ಬೆಳ್ತಂಗಡಿ ತಾಲೂಕು ಕಚೇರಿಯ ಶಿರಸ್ತೇದಾರ್ ಪಿ.ಎಸ್.ರವಿಕುಮಾರ್, ಸುಳ್ಯ ಮತ್ತು ಕಡಬ ತಹಶೀಲ್ದಾರ್ ಎಂ.ಮಂಜುನಾಥ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ ಬಿ. ಉಪಸ್ಥಿತರಿದ್ದರು.
ನಗರ ಮತ್ತು ಗ್ರಾಮ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಿ. ಗ್ರಾಮ ಪಂಚಾಯತ್ ಪಿಡಿಒಗಳ ಸಭೆ ನಡೆಸಿ ಗ್ರಾಮ ಪಂಚಾಯತ್ ಮಟ್ಟದ ಸಮಸ್ಯೆಗಳನ್ನು ಸರಿಪಡಿಸುವಂತೆ ಪಿಡಿಒಗಳಿಗೆ ತಿಳಿಸಬೇಕು. ಕಳೆದ ಸಾಲಿನಲ್ಲಿ ನೀರಿನ ತೊಂದರೆಯಾದ ಸ್ಥಳಗಳನ್ನು ತಿಳಿದುಕೊಂಡು ಕಾರ್ಯನಿರ್ವಹಿಸಿ. ಆಡಳಿತಾತ್ಮಕ ನಿರ್ಧಾರ ಕೈಗೊಳಬೇಕು ಎಂದು ಸಹಾಯಕ ಆಯಕ್ತರು ಸೂಚಿಸಿದರು.