ಎಲ್ಲರನ್ನು ಗೌರವಿಸುವ ಸ್ವಭಾವ ನಮ್ಮದಾಗಬೇಕು-ಪೇರೋಡ್ ಉಸ್ತಾದ್
ರಕ್ತಕ್ಕೆ ಇಲ್ಲದ ಜಾತಿ, ಧರ್ಮದ ಭಿನ್ನತೆ ನಮಗೆ ಬೇಡ-ಅಶೋಕ್ ರೈ
ನಮ್ಮ ಜೀವನ ಪರಿಶುದ್ಧವಾಗಿರಲಿ- ಝೈನುಲ್ ಉಲಮಾ ಮಾಣಿ ಉಸ್ತಾದ್
ಪುತ್ತೂರು: ನಮ್ಮ ಸ್ವಭಾವ, ನಡತೆ ಪರಿಶುದ್ದವಾಗಿರಬೇಕು, ಇನ್ನೊಬ್ಬರನ್ನು ನೋಯಿಸುವ ಒಂದು ಮಾತು ಕೂಡಾ ನಮ್ಮಿಂದ ಬರಬಾರದು, ಎಲ್ಲರನ್ನು ಪ್ರೀತಿಸುವ, ಗೌರವಿಸುವ ಸ್ವಭಾವ ನಮ್ಮದಾಗಬೇಕು, ನಮ್ಮ ಹೃದಯ ಪರಿಶುದ್ದತೆಯಿಂದ ಕೂಡಿರಬೇಕು, ನಾವು ಮಾಡುವ ಕಾರ್ಯಚಟುವಟಿಕೆಗಳಲ್ಲಿ ಸ್ವಾರ್ಥ ಇರಬಾರದು, ಪ್ರತಿಯೊಂದು ವಿಚಾರದಲ್ಲೂ ಚಿಂತಿಸಿ, ಆಲೋಚಿಸಿ ಮುಂದಡಿಯಿಡಬೇಕು ಎಂದು ಸುನ್ನೀ ವಿದ್ವಾಂಸ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.

ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಪುತ್ತೂರು ಟೌನ್ ಹಾಲ್ ಸಭಾಂಗಣದಲ್ಲಿ ಸೆ.2ರಂದು ನಡೆದ ಅಲ್ ಅರ್ಖಮಿಯ್ಯ ಯೂತ್ ಸ್ಕ್ವೇರ್ ಜಿಲ್ಲಾ ಪ್ರತಿನಿಧಿ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಮರಣ ಕಡ್ಡಾಯ. ಜನನ ಮರಣದ ನಡುವೆ ಮಾಡುವ ಸತ್ಕಾರ್ಯಗಳು ಮಾತ್ರ ಶಾಶ್ವತ. ನಮ್ಮ ಆಯುಷ್ಯ, ಆರೋಗ್ಯವನ್ನು ಒಳಿತಿನ ಕ್ಷೇತ್ರದಲ್ಲಿ ಮಾತ್ರ ವಿನಿಯೋಗಿಸಬೇಕು ಎಂದು ಅವರು ಹೇಳಿದರು.
ಯಾರೂ ಏಕಾಂಗಿಯಾಗಬಾರದು:
ನಾನು ಯಾವುದಕ್ಕೂ ಇಲ್ಲ, ಏಕಾಂಗಿಯಾಗಿರುತ್ತೇನೆ ಎನ್ನುವ ಚಿಂತನೆ ಯಾರಲ್ಲಾದರೂ ಇದ್ದರೆ ಅದನ್ನು ಬಿಡಬೇಕು. ಮನುಷ್ಯನಾದವನು ಸಂಘ ಜೀವಿಯಾಗಬೇಕು, ಎಲ್ಲರೊಂದಿಗೆ ಸೇರಿಕೊಂಡು ಕೆಲಸ ಮಾಡಬೇಕು. ಎಸ್‌ವೈಎಸ್, ಎಸ್ಸೆಸ್ಸೆಫ್ ಸಂಘಟನೆಗಳಲ್ಲಿರುವ ಕಾರ್ಯಕರ್ತರು ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು ಅದು ಒಗ್ಗಟ್ಟು ಮತ್ತು ಸಂಘಟನೆ ಇರುವುದರಿಂದ ಸಾಧ್ಯವಾಗಿದೆ ಎಂದು ಪೇರೋಡ್ ಉಸ್ತಾದ್ ಹೇಳಿದರು.

ಜೀವನ ಪರಿಶುದ್ಧವಾಗಿರಲಿ-ಮಾಣಿ ಉಸ್ತಾದ್ :
ಕರ್ನಾಟಕ ಎಸ್‌ವೈಎಸ್ ತನ್ನ ಮೂವತ್ತನೇ ವಾರ್ಷಿಕ ಆಚರಿಸುವ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಮೂವತ್ತು ಧ್ವಜಸ್ಥಂಭಗಳಲ್ಲಿ ಧ್ವಜಾರೋಹಣ ನಡೆಯಿತು. ನಂತರ ಝೈನುಲ್ ಉಲಮಾ ಮಾಣಿ ಉಸ್ತಾದ್ ಜಿಲ್ಲಾ ಪ್ರತಿನಿಧಿ ಸಮಾವೇಶ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಲ್ಲಾಹು ನಮಗೆ ಎಲ್ಲವನ್ನೂ ನೀಡಿದ್ದು ಅದಕ್ಕಾಗಿ ಅಲ್ಲಾಹನಿಗೆ ನಾವು ಏನು ನೀಡಿದ್ದೇವೆ ಎಂದು ಆತ್ಮಾವಲೋಕನ ಮಾಡಬೇಕಿದೆ, ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕು, ಧರ್ಮದ ಅನುಸಾರ ಜೀವಿಸಬೇಕು, ನಿಷ್ಕಲ್ಮಶ ಹೃದಯ ಮತ್ತು ಮನಸ್ಸಿನಿಂದ ಜೀವಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಹೇಳಿದರು.

ಸಯ್ಯದ್ ಸಾದತ್ ತಂಙಳ್ ಕರ್ವೇಲು ದುವಾ ಮಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಅಬೂಬಕ್ಕರ್ ಸಅದಿ ಮಜೂರು, ಖಾಸಿಂ ಹಾಜಿ ಮಿತ್ತೂರು, ಕರೀಂ ಹಾಜಿ ಚೆನ್ನಾರ್, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಇಸ್ಮಾಯಿಲ್ ಹಾಜಿ ಕೊಂಬಳ್ಳಿ, ಮಹಮೂದ್ ಮದನಿ, ಅಬೂಬಕ್ಕರ್ ಕೂರ, ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ, ಹಸೈನಾರ್ ಹಾಜಿ ಮಜ್ಮ, ಜಿ. ಎಂ ಕುಂಞಿ ಜೋಗಿಬಿಟ್ಟು ಉಪಸ್ಥಿತರಿದ್ದರು. ಎಸ್‌ವೈಎಸ್ ದ.ಕ ಈಸ್ಟ್ ಪ್ರ.ಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿದರು. ಸಿರಾಜುದ್ದೀನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ತರಗತಿ:
ತ್ವಾಹಿರ್ ಸಖಾಫಿ ಮಂಜೇರಿ ಅವರು ಪರಂಪರೆಯ ಪ್ರತಿನಿಧಿಗಳಾಗೋಣ ಎನ್ನುವ ವಿಷಯದಲ್ಲಿ ತರಗತಿ ನಡೆಸಿದರು. ನಂತರ ಮರ್ಕಝ್ ನಾಲೆಡ್ಜ್ ಸಿಟಿಯ ಡಾ.ಸಯ್ಯಿದ್ ಸೈಫುದ್ದೀನ್ ಅವರು
ಹೆಲ್ತ್ ಕೋರ್ಟ್’ ಎನ್ನುವ ವಿಷಯದಲ್ಲಿ ತರಗತಿ ನಡೆಸಿದರು. ನಂತರ ಮರ್ಕಝ್ ಕಾರಂದೂರು ಇಲ್ಲಿನ ಮರ್ಝೂಕ್ ಸಅದಿ `ಅವರು ನವ ತಲೆಮಾರಿನ ಎಸ್.ವೈಎಸ್’ ಎನ್ನುವ ವಿಷಯದಲ್ಲಿ ತರಗತಿ ನಡೆಸಿದರು. ನಂತರ ಯುನಿಫಾರ್ಮ್ ಸಿವಿಲ್ ಕೋಡ್ ಎನ್ನುವ ವಿಷಯದಲ್ಲಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹಾಗೂ ಎ.ಕೆ ನಂದಾವರ ಅವರು ಡಿಬೇಟ್ ನಡೆಸಿದರು.
ರಕ್ತಕ್ಕೆ ಇಲ್ಲದ ಜಾತಿ, ಧರ್ಮದ ಭಿನ್ನತೆ ನಮಗೆ ಬೇಡ-ಅಶೋಕ್ ರೈ:
ಕಾರ್ಯಕ್ರಮಕ್ಕೆ ಮಧ್ಯಾಹ್ನದ ವೇಳೆಗೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ನಾವು ನಮ್ಮ ಧರ್ಮವನ್ನು ಆಚರಿಸಿಕೊಂಡು ಇನ್ನೊಂದು ಧರ್ಮವನ್ನು ಗೌರವಿಸಿದಾಗ ಸಮಾಜದಲ್ಲಿ ಅನ್ಯೋನ್ಯತೆ ನೆಲೆ ನಿಲ್ಲುತ್ತದೆ, ರಕ್ತಕ್ಕೆ ಇಲ್ಲದ ಜಾತಿ ಧರ್ಮ ಮನುಷ್ಯರಾದ ನಮಗೆ ಯಾಕೆ, ಜಾತಿ ಧರ್ಮವನ್ನು ನಾವೆಲ್ಲರೂ ಬದಿಗಿಟ್ಟು ನಾವೆಲ್ಲಾ ಒಂದೇ ಎಂಬ ಭಾವನೆಯಲ್ಲಿ ಜೀವಿಸಬೇಕು, ನಮ್ಮ ದೇಶ ವಿಶ್ವಗುರು ಆಗಬೇಕಾದರೆ ಎಲ್ಲ ಧರ್ಮಗಳ ಧರ್ಮಗುರುಗಳು ಒಂದೇ ಕಡೆ ಸೇರುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್‌ನವರು ಸಮಾಜಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶ್ಲಾಘನೀಯ, ನಿಮ್ಮ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಯಾವತ್ತೂ ಇದೆ ಎಂದ ಅಶೋಕ್ ರೈ ಅವರು ಎಸ್‌ವೈಎಸ್ ಹಮ್ಮಿಕೊಂಡ ಶಿಸ್ತುಬದ್ದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶಾಸಕರನ್ನು ಎಸ್‌ವೈಎಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವ್ಹೀಲ್ ಚೆಯರ್ ವಿತರಣೆ:
ಅನಾರೋಗ್ಯ ಪೀಡಿತರಿಗೆ ಎಸ್‌ವೈಎಸ್ ವತಿಯಿಂದ 6 ವ್ಹೀಲ್ ಚೆಯರ್ ವಿತರಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು. ಎಸ್‌ವೈಎಸ್‌ನ ಆರು ವಲಯಗಳಿಂದ ವ್ಹೀಲ್ ಚೆಯರ್ ನೀಡಲಾಗಿತ್ತು. ಪ್ರಮುಖರಾದ ಸಾದಾತ್ ತಂಙಳ್ ಕರ್ವೇಲ್, ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಯೂಸುಫ್ ಗೌಸಿಯಾ ಸಾಜ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಯೂಸುಫ್ ಹಾಜಿ ಕೈಕಾರ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಬನ್ನೂರು, ಜಲೀಲ್ ಸಖಾಫಿ ಜಾಲ್ಸೂರು, ಹಸೈನಾರ್ ಹಾಜಿ ಮಜ್ಮ, ಜಿ.ಎಂ ಕಾಮಿಲ್ ಸಖಾಫಿ, ಖಾಸಿಂ ಹಾಜಿ ಮಿತ್ತೂರು, ಯು.ಕೆ ಮಹಮ್ಮದ್ ಸಅದಿ ವಳವೂರು, ಡಾ.ಉಮರುಲ್ ಫಾರೂಕ್, ಶಾಫಿ ಸಖಾಫಿ ಕೊಕ್ಕಡ, ಇಸ್ಮಾಯಿಲ್ ಹಾಜಿ ಬೈತಡ್ಕ, ಎಸ್ .ವೈ.ಎಸ್ ದ.ಕ. ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ತ್ವೈಬಾ, ಸ್ವಾಗತ ಸಮಿತಿಯ ಚೇರ್‌ಮ್ಯಾನ್ ಕರೀಂ ಹಾಜಿ ಚೆನ್ನಾರ್, ಸ್ವಾಗತ ಸಮಿತಿಯ ಕನ್ವೀನರ್ ಇಕ್ಬಾಲ್ ಬಪ್ಪಳಿಗೆ, ಹಫೀಲ್ ಸಅದಿ ಕೊಡಗು, ಹಮೀದ್ ಸುಣ್ಣಮೂಲೆ, ಕರೀಂ ಕಾವೇರಿ, ಆಶಿಕುದ್ದೀನ್ ಅಖ್ತರ್ ಕುಂಬ್ರ, ಅಬ್ಬಾಸ್ ಹಾಜಿ ಬಟ್ಲಡ್ಕ, ಝುಬೈರ್ ಬ್ರೈಟ್, ಅಬುಲ್ ಬುಶ್ರಾ ಅಬ್ದುಲ್ ರಹ್ಮಾನ್ ಫೈಝಿ, ಇಸ್ಮಾಯಿಲ್ ಹಾಜಿ ಕೊಂಬಾಳಿ, ಮಹಮ್ಮದ್ ಹಾಜಿ ಪಾಪೆತ್ತಡ್ಕ, ಮಹಮ್ಮದ್ ಹಾಜಿ ಮಟನ್, ಹಂಝ ಮದನಿ ಮಿತ್ತೂರು, ಮುಸ್ತಫಾ ಕೋಡಪದವು, ಎ.ಬಿ ಅಶ್ರಫ್ ಸಅದಿ ಮತ್ತಿತರರು ಉಪಸ್ಥಿತರಿದ್ದರು.
ಸೆ.10ರಂದು ಎಸ್ಸೆಸ್ಸೆಫ್ ಇತಿಹಾಸ ನಿರ್ಮಿಸಲಿದೆ:
ಗೋಲ್ಡನ್ ರ್‍ಯಾಲಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಮಾತನಾಡಿ ಎಸ್ಸೆಸ್ಸೆಫ್ ಸಂಘಟನೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಗೋಲ್ಡನ್ ಫಿಫ್ಟಿ ಬೃಹತ್ ಸಮಾವೇಶ ಸೆ.10ರಂದು ನಡೆಯಲಿದ್ದು ಆ ಕಾರ್ಯಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲಿದೆ. ನಮ್ಮ ಸಂಘಟನೆಯ ಬಗ್ಗೆ ಮುಖ್ಯಮಂತ್ರಿ, ಮಂತ್ರಿಗಳು, ಅಧಿಕಾರಿಗಳು ತಿಳಿದುಕೊಳ್ಳಬೇಕು ಮತ್ತು ಸಂಘಟನೆಯ ಶಕ್ತಿ ಏನೆಂಬುದನ್ನು ಈ ನಾಡಿನ ಜನತೆ ಅರಿಯಬೇಕು ಎನ್ನುವ ಉದ್ದೇಶದಿಂದ ಗೋಲ್ಡನ್ ಫಿಫ್ಟಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ಆಯೋಜನೆ ಮಾಡಲಾಗಿದೆ. ಇದು ನಮ್ಮ ಅಭಿಮಾನ ಮತ್ತು ಪ್ರತಿಷ್ಠೆಯ ಕಾರ್ಯಕ್ರಮವಾಗಿದ್ದು ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು, ಪ್ರತೀ ಮನೆಗೂ ಕಾರ್ಯಕ್ರಮದ ಆಯೋಜನೆ ಮತ್ತು ಮಹತ್ವದ ಬಗ್ಗೆ ತಿಳಿಸುವ ಕೆಲಸ ಮಾಡಬೇಕು, ಆ ಮೂಲಕ ಕಾರ್ಯಕ್ರಮದ ಯಶಸ್ಸಿನಲ್ಲಿ ತಾವೆಲ್ಲಾ ಸಹಭಾಗಿಗಳಾಗಬೇಕು ಎಂದು ಸುಫಿಯಾನ್ ಸಖಾಫಿ ಹೇಳಿದರು.
ಮೂವತ್ತರ ಸಂಭ್ರಮದಲ್ಲಿ ಎಸ್.ವೈ.ಎಸ್
ಏಕಕಾಲದಲ್ಲಿ 30 ಧ್ವಜಸ್ಥಂಭಗಳಲ್ಲಿ ಧ್ವಜಾರೋಹಣ
ಕರ್ನಾಟಕದಲ್ಲಿ ಎಸ್‌ವೈಎಸ್ ಮೂವತ್ತನೇ ವಾರ್ಷಿಕ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ `ಅಲ್ ಅರ್ಖಮಿಯ್ಯ-23′ ಎನ್ನುವ ಹೆಸರಿನಲ್ಲಿ ಒಂದು ದಿನದ ವಿಶೇಷ ಕ್ಯಾಂಪ್ ಏರ್ಪಡಿಸಲಾಗಿತ್ತು. ಕಿಲ್ಲೆ ಮೈದಾನದಲ್ಲಿ ಅಳವಡಿಸಲಾಗಿದ್ದ ಮೂವತ್ತು ಧ್ವಜಸ್ಥಂಭಗಳಲ್ಲಿ ಬೆಳಗ್ಗೆ ಏಕಕಾಲದಲ್ಲಿ ಧ್ವಜಾರೋಹಣ ನಡೆಯಿತು. ಉಲಮಾ, ಉಮರಾ ಪ್ರಮುಖರು ಧ್ವಜಾರೋಹಣ ನೆರವೇರಿಸಿದರು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊಂಡ ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಯ ವರೆಗೆ ಅತ್ಯಂತ ಶಿಸ್ತು ಬದ್ದವಾಗಿ ನಡೆಯಿತು. ಇಡೀ ಸಭಾಂಗಣ ಬಿಳಿ ವಸ್ತ್ರಧಾರಿಗಳಿಂದ ತುಂಬಿ ತುಳುಕಿತ್ತು. ಎಸ್‌ವೈಎಸ್ ನಾಯಕರು, ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಭಾಗವಹಿಸಿದವರಿಗೆ, ಉಪಹಾರ, ಊಟ ಮತ್ತು ಜ್ಯೂಸ್ ವಿತರಿಸಲಾಯಿತು.
ಎಸ್ಸೆಸ್ಸೆಫ್
ಗೋಲ್ಡನ್ ರ್‍ಯಾಲಿ ಸಂಜೆ ಸುನ್ನೀ ಸಂಘ ಕುಟುಂಬದ ವತಿಯಿಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಕಿಲ್ಲೆ ಮೈದಾನದಿಂದ ದರ್ಬೆ ವೃತ್ತದ ವರೆಗೆ ಬೃಹತ್ ಗೋಲ್ಡನ್ ರ್‍ಯಾಲಿ ನಡೆಯಿತು. ರ್‍ಯಾಲಿಯುದ್ದಕ್ಕೂ ನಡೆದ ಆಕರ್ಷಕ ದಫ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ವಿವಿಧ ಕಡೆಗಳಿಂದ ಆಗಮಿಸಿದ್ದ ಸುನ್ನೀ ಸಂಘ ಕುಟುಂಬದ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.