ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

0

ಬಾಳಿಲ ವಿದ್ಯಾಬೋಧಿನೀ ಶಾಲಾ ಶಿಕ್ಷಕ, ಸಂಪ್ಯದ ಉದಯ ಕುಮಾರ್ ರೈಯವರಿಗೆ ಪ್ರಶಸ್ತಿ

ಪುತ್ತೂರು:ಶಿಕ್ಷಣ ಇಲಾಖೆಯಿಂದ ನೀಡುವ 2023-24ನೇ ಸಾಲಿನ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು ಸುಳ್ಯ ತಾಲೂಕಿನ ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಅನುದಾನಿತ ಪ್ರೌಢ ಶಾಲಾ ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿರುವ ಸಂಪ್ಯದ ಉದಯಗಿರಿಯ ಉದಯ ಕುಮಾರ್ ರೈ ಎಸ್‌ರವರು ಆಯ್ಕೆಯಾಗಿದ್ದಾರೆ. ಸೆ.5ರಂದು ಸುಳ್ಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಸ್ವೀಕರಿಸಿಲಿದ್ದಾರೆ.


ಪೆರ್ಲದ ಶೇಣಿಯ ನಿವಾಸಿಯಾಗಿರುವ ವಿಠಲ ರೈ ಎ.ಎಸ್ ಹಾಗೂ ಜಯಂತಿ ದಂಪತಿ ಪುತ್ರನಾಗಿರುವ ಉದಯ ಕುಮಾರ್ ರೈ ಪೆರ್ಲ ಬಣ್ಪುತ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ದರ್ಬೆ ಸಂತ ಫಿಲೋಮಿನಾ ಪ್ರೌಡಶಾಲೆಯಲ್ಲಿ ಪ್ರೌಢ ಶಿಕ್ಷಣ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ, ಹಾಸನ ಹಾಸನಾಂಬ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಎಂಎಸ್ಸಿ ಪದವಿಯನ್ನು ಪಡೆದಿರುತ್ತಾರೆ. 1998ರಲ್ಲಿ ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಅನುದಾನಿತ ಪ್ರೌಢಶಾಲೆಗೆ ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡು ಸುಧೀರ್ಘ 25 ವರ್ಷಗಳ ಕಾಲ ಕರ್ತವ್ಯನಿರ್ವಹಿಸಿರುತ್ತಾರೆ.


ಸಾಧನೆಗಳು:
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತವಾಗಿ ಶಾಲಾ ಫಲಿತಾಂಶಕ್ಕಿಂತ ಹೆಚ್ಚು ಗಣಿತದಲ್ಲಿ ಫಲಿತಾಂಶ ದಾಖಲೆ, ವಿಶೇಷ ಕಲಿಕೆಯ ಆದ್ಯತೆಯಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಾರ್ಷಿಕ ಪರೀಕ್ಷೆಯ ಅವಧಿಯಲ್ಲಿ ಶನಿವಾರ ತರಗತಿ ಆಯೋಜನೆ, 8ನೇ ತರಗತಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಎನ್‌ಎಂಎಂಎಸ್ ತರಬೇತಿ ನೀಡಿ 25ಕ್ಕಿಂತಲು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯುವಲ್ಲಿ ಸಫಲತೆ, ಗಣಿತ ವಿಷಯದಲ್ಲಿ ಜಿಲ್ಲಾ, ತಾಲೂಕು ಹಂತದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಖಗೋಳ ಮಾಹಿತಿ ಮತ್ತು ರಾತ್ರಿ ನಕ್ಷತ್ರ ವೀಕ್ಷಣೆಯ ಕಾರ್ಯಕ್ರಮಗಳ ಆಯೋಜನೆ, 2012ರಲ್ಲಿ ಉದಯವಾಣಿ ಪತ್ರಿಕೆಯ ಶಿಕ್ಷಣ ಮಾರ್ಗದರ್ಶಿ 60 ಸಂಚಿಕೆಗಳಲ್ಲಿ ಗಣಿತ ವಿಷಯದ ಬೋಧನೆ, ಪ್ರಶ್ನೆಗಳು, ಪರಿಹಾರ, ಮಾದರಿ ಪ್ರಶ್ನೆಪತ್ರಿಕೆಗಳು ಪ್ರಕಟಗೊಂಡಿರುತ್ತದೆ.


ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ…!
ಹಿಮಾಲಯನ್ ವುಡ್‌ಬ್ಯಾಡ್ಜ್ ಸ್ಕೌಟ್ ಶಿಕ್ಷಕ ತರಬೇತಿ ಪಡೆದಿರುವ ಇವರು, ಸ್ಕೌಟ್ ಶಿಕ್ಷಕರ ರಾಜ್ಯ ಪ್ರತಿನಿಧಿಯಾಗಿ, ಸ್ಕೌಟ್ ಗೈಡ್ ಜಿಲ್ಲಾ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯನಾಗಿ, ಸ್ಕೌಟ್ ಗೈಡ್ ಪಂಜ ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಪಂಜ ಸ್ಥಳೀಯ ಸಂಸ್ಥೆಯಲ್ಲಿ ಪಟಾಲಂ ನಾಯಕರ ಶಿಬಿರ, ವಾರ್ಷಿಕ ರ್‍ಯಾಲಿ, ಈಜು ತರಬೇತಿ ಶಿಬಿರ, ಗೀತಗಾಯನ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಪ್ರಧಾನ ಪಾತ್ರ, ಅಬಿಯಾನ, ಪರಿಸರ ಸಂಸರಕ್ಷಣೆಯ ಜಾಗೃತಿ ಕಾರ್ಯ, 2015-16ರಲ್ಲಿ ಸುಬ್ರಹ್ಮಣ್ಯದಲ್ಲಿ ಜಿಲ್ಲಾ ರ್‍ಯಾಲಿ, 2011ರಲ್ಲಿ ಸುಬ್ರಹ್ಮಣ್ಯ ಮತ್ತು 2014ರಲ್ಲಿ ಬೆಳ್ಳಾರೆಯಲ್ಲಿ ರಾಜ್ಯಮಟ್ಟದ ಪ್ರಕೃತಿ ಅಧ್ಯಯನ ಶಿಬಿರ, 2019ರಲ್ಲಿ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಹಿಮಾಲಯನ್ ವುಡ್‌ಬ್ಯಾಡ್ಜ್ ಶಿಕ್ಷಕರ ಸಮಾವೇಶ ಆಯೋಜಿಸಿದ್ದರು.


2018ರಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸ್ಥಳೀಯ ಸಂಸ್ಥೆ ವಾರ್ಷಿಕ ಮೇಳದ ಆಯೋಜನೆ, ಬೆಳಗಾವಿಯ ವಾಯುಪಡೆ ಮೈದಾನದಲ್ಲಿ 24ನೇ ಕರ್ನಾಟಕ ಜಾಂಬೋರೇಟ್, 2001ರಲ್ಲಿ ಬಾಳಿಲದ 5 ಸ್ಕೌಟ್ ಮತ್ತು 7 ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ತಂಡದ ನೇತೃತ್ವ, ಉತ್ತರಾಂಚಲದ ಹರಿದ್ವಾರದಲ್ಲಿ 2005ರಲ್ಲಿ ನಡೆದ 15ನೇ ರಾಷ್ಟ್ರೀಯ ಜಾಂಬೋರಿಯಲ್ಲಿ ಬಾಳಿಲ 6 ಸ್ಕೌಟ್ಸ್, 7 ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ತಂಡದ ನೇತೃತ್ವ, 2008ರಲ್ಲಿ ಮಂಗಳೂರು ಪಡೀಲು ಕೋಠಾರಿಕುದ್ರು ದ್ವೀಪದಲ್ಲಿ ನಡೆದ ರಾಜ್ಯಮಟ್ಟದ ಬ್ರೌನ್‌ಸೀ ದ್ವೀಪದ ಪುನರ್ ನಿರ್ಮಾಣ ಶಿಬಿರದಲ್ಲಿ ಸಬ್ ಕ್ಯಾಂಪ್ ಚೀಫ್ ಆಗಿ ಕರ್ತವ್ಯ, ಸುರತ್ಕಲ್ ಕೊಂಡಜ್ಜಿಯಲ್ಲಿ ನಡೆದ ಸ್ಕೌಟ್ ರಾಷ್ಟ್ರಪತಿ ಪೂರ್ವಸಿದ್ದತಾ ಪರೀಕ್ಷಾ ಶಿಬಿರ ಹಾಗೂ ರಾಜ್ಯ ಪುರಸ್ಕಾರ ಶಿಬಿರಗಳಲ್ಲಿ ಪರೀಕ್ಷಾ ಸಹಾಯಕರಾಗಿ ಭಾಗಿ, 2017, 2018ರಲ್ಲಿ ಜಿಲ್ಲಾ ಸಂಸ್ಥೆಯಿಂದ ಆಯೋಜಿಸಲಾದ ಸ್ಕೌಟ್ಸ್-ಗೈಡ್ಸ್ ಕರ್ನಾಟಕ ದರ್ಶನದಲ್ಲಿ 250 ವಿದ್ಯಾರ್ಥಿಗಳನ್ನು ಒಳಗೊಂಡ ಬಸ್‌ನ ಸಂಪೂರ್ಣ ನಿರ್ವಹಣೆ, ಸ್ಕೌಟ್ ಗೈಡ್ ಶಿಕ್ಷಕರಾಗಿ ಬಾಳಿಲದಲ್ಲಿ ಒಟ್ಟು 52 ವಿದ್ಯಾರ್ಥಿಗಳು ಸ್ಕೌಟ್ ರಾಜ್ಯ ಪುರಸ್ಕಾರ, 8 ವಿದ್ಯಾರ್ಥಿಗಳು ರಾಷ್ಟ್ರಪತಿ ಪುರಸ್ಕಾರ ಪಡೆಯುವಲ್ಲಿ ಪ್ರಮುಖವಾಗಿದ್ದರು. ಕೋವಿಡ್ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಸೇವೆ, ಸುಳ್ಯ ತಾಲೂಕು ಸ್ವಯಂ ಸೇವಕರ ತಂಡದ ನೋಡೆಲ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ.


ಯೋಗ ಮತ್ತು ನೈತಿಕ ಶಿಕ್ಷಣ:
2003ರಲ್ಲಿ ಶಿಕ್ಷಣ ಇಲಾಖೆ ಮತ್ತು ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನಿಂದ ಯೋಗ ಮತ್ತು ನೈತಿಕ ಶಿಕ್ಷಣದ ತರಬೇತಿ ಪಡೆದು ಯೋಗ ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ತರಬೇತಿ, ಯೋಗ ತರಬೇತಿ ಪಡೆದ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಸ್ಥಾನ ಪಡೆಯುವಲ್ಲಿ ಪ್ರಮುಖರಾಗಿದ್ದರು. 2014ರಲ್ಲಿ ಸುಳ್ಯ ಮತ್ತು ಪುತ್ತೂರು ತಾಲೂಕುಗಳ ಯೋಗೋತ್ಸವವನ್ನು ಬಾಳಿಲದಲ್ಲಿ ಆಯೋಜಿಸಿರುತ್ತಾರೆ.


ರಾಜ್ಯ ವಿಜ್ಞಾನ ಪರಿಷತ್:
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕರಾಗಿ ಕರ್ತವ್ಯ, ಬಾಳಿಲದಲ್ಲಿ ಕರ್ನಾಟಕ ರಾಜ್ಯ ಪರಿಷತ್‌ನ ಕಾರ್ಯಕ್ರಮವನ್ನು ಆರ್ಬ್ ಎನರ್ಜಿ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸೋಲಾರ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿರುತ್ತಾರೆ.


ಮಕ್ಕಳ ಶೈಕ್ಷಣಿಕ ಅಧ್ಯಯನ ಪ್ರವಾಸ:
ವಿದ್ಯಾರ್ಥಿಗಳಿಗೆ 5 ದಿನಗಳ ದಕ್ಷಿಣ ಬಾರತ, 5 ದಿನಗಳ ಉತ್ತರ ಕರ್ನಾಟಕ, 5 ದಿನಗಳ ಹೈದರಾಬಾದ್ ಮಂತ್ರಾಲಯ, 5 ದಿನಗಳ ಮುಂಬಯಿ, 7 ದಿನಗಳ ದೆಹಲಿ ಆಗ್ರಾ, ಮಥುರಾ ಶೈಕ್ಷಣಿಕ ಅಧ್ಯಯನ ಪ್ರವಾಸ, ಗಡಾಯಿಕಲ್ಲು, ಬಂಡಾಜೆ, ಕುಮಾರ ಪರ್ವತ, ಮೇರ್‍ತಿ, ಗುಡ್ಡ(ಕಳಸ), ಕೊಳಿಕ್ಕಮಲೆ, ಪೆರಾಜೆ, ಬಂಟಮಲೆ, ಕೊಯನಾಡು, ಕಳ್ಯಾಲ ಜಲಪಾತ, ತಡಿಯಂಡಮೋಲ್(ಭಾಗಮಂಡಲ) ಮೊದಲಾದ ಕಡೆಗಳಿಗೆ ಸ್ಕೌಟ್, ಗೈಡ್ ಮತ್ತು ವಿಜ್ಞಾನ ಸಂಘದ ವಿದ್ಯಾರ್ಥಿಗಳಿಗೆ ಚಾರಣವನ್ನು ಆಯೋಜಿಸಿರುತ್ತಾರೆ.


ಇತರ ಸೇವಾ ಕಾರ್ಯಗಳು:
2014ರಲ್ಲಿ ಬಾಳಿಲದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಸಂವಹನ ಕಾರ್ಯಕ್ರಮದಲ್ಲಿ ಸ್ಪರ್ಧಾ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿರುವ ಇವರು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸುಳ್ಯ ತಾಲೂಕು ಸಂಫದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿಯಾಗಿರುವ ಪತ್ನಿ ದಿವ್ಯಾ ಎಸ್.ಆರ್. ಹಾಗೂ ಮಂಗಳೂರು ಸಿಎಫ್‌ಎಲ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿರುವ ಪುತ್ರಿ ಪ್ರಾರ್ಥನಾ ರೈ ಯು.ಎಸ್‌ರವರೊಂದಿಗೆ ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿಯಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here