ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲಾ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ.ರವರಿಗೆ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಕಡಬ: ದ.ಕ.ಜಿಲ್ಲಾ ಮಟ್ಟದ 2023-24ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು ಪುತ್ತೂರು ತಾಲೂಕಿನಿಂದ ಪ್ರೌಢಶಾಲಾ ವಿಭಾಗದಲ್ಲಿ ಕಡಬ ತಾಲೂಕಿನ ಕುಂತೂರು ಗ್ರಾಮದ ಕುಂತೂರುಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ.,ಅವರು ಆಯ್ಕೆಯಾಗಿದ್ದಾರೆ.


ಇವರು ಆಲಂಕಾರು ಗ್ರಾಮದ ನಗ್ರಿಕೋಡ್ಲ ದಿ.ಮುತ್ತಪ್ಪ ಗೌಡ ಹಾಗೂ ಭಾಗೀರಥಿ ದಂಪತಿ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಶರವೂರು ಕಿ.ಪ್ರಾ.ಶಾಲೆ ಹಾಗೂ ಆಲಂಕಾರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಆಲಂಕಾರು ಶ್ರೀ ದುರ್ಗಾಂಬಾ ಪ್ರೌಢಶಾಲೆ, ಪಿಯುಸಿ ಉಪ್ಪಿನಂಗಡಿ ಜೂನಿಯರ್ ಕಾಲೇಜು(ವಿಜ್ಞಾನ ವಿಭಾಗದ ಪ್ರಥಮ ಬ್ಯಾಚ್ ವಿದ್ಯಾರ್ಥಿ), ಪದವಿಯನ್ನು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಮಾಡಿರುತ್ತಾರೆ. ಬೆಂಗಳೂರಿನ ಕುರುಬರಹಳ್ಳಿಯ ಡಾ| ಬಿ.ಆರ್.ಅಂಬೇಡ್ಕರ್ ಕಾಲೇಜ್ ಆಫ್ ಎಜ್ಯುಕೇಶನ್ ಸಂಸ್ಥೆಯಲ್ಲಿ ಬಿ.ಇಡಿ ಮಾಡಿರುತ್ತಾರೆ. ಪದವಿಯ ಬಳಿಕ ಆರ್ಥಿಕ ಅಡಚಣೆಯಿಂದಾಗಿ ಮನೆಯಲ್ಲಿಯೇ ಕೃಷಿಕೆಲಸದಲ್ಲಿ ತೊಡಗಿಕೊಂಡಿದ್ದರು. ಆ ನಂತರ 1 ವರ್ಷ ಡೈರೆಕ್ಟ್ ಮಾರ್ಕೆಟಿಂಗ್ ಮೂಲಕ ಮನೆ ಮನೆಗೆ ತೆರಳಿ ವಸ್ತುಗಳ ಮಾರಾಟದಲ್ಲಿಯೂ ತೊಡಗಿಕೊಂಡಿದ್ದರು.


2000ನೇ ಜೂನ್‌ನಿಂದ ಅಕ್ಟೋಬರ್ ತನಕ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಕನಾಗಿ ಸೇವೆ ಮಾಡಿದ್ದರು. ನಂತರ ಬಿ.ಇಡಿ ಪದವಿ ಪಡೆದು ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆಯಲ್ಲಿ 2-1-2002ರಲ್ಲಿ ಶಿಕ್ಷಕನಾಗಿ ಸೇರ್ಪಡೆಗೊಂಡರು. 2011ರಲ್ಲಿ ಖಾಯಂ ಶಿಕ್ಷಕನಾಗಿ ಸರಕಾರದಿಂದ ಆಯ್ಕೆಯಾಗಿದ್ದರು. 2020ರ ಫೆಬ್ರವರಿ 19ರಂದು ಖಾಯಂ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಸಹಶಿಕ್ಷಕನಾಗಿದ್ದ ವೇಳೆ ಗಣಿತದ ಸರಳ ಮಾದರಿಗಳ ರಚನೆ ಮಾಡಿ ಗಣಿತ ಬೋಧನೆ ಮಾಡುತ್ತಿದ್ದು ಇದರಿಂದಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಗಣಿತ ವಿಷಯದಲ್ಲಿ ಸರಾಸರಿ 95 ಶೇ.ಫಲಿತಾಂಶ ಬರುತ್ತಿದೆ. ಸುಮಾರು ಆರೂವರೇ ವರ್ಷದಿಂದ ಇವರು ಮುಖ್ಯಶಿಕ್ಷಕರಾಗಿದ್ದು ಶಾಲೆಯ ಹಳೆವಿದ್ಯಾರ್ಥಿಗಳು, ಆಡಳಿತ ಮಂಡಳಿ ಹಾಗೂ ಊರವರಿಂದ ರೂ.20 ಲಕ್ಷಕ್ಕಿಂತಲೂ ಹೆಚ್ಚು ಮೊತ್ತ ಸಂಗ್ರಹಿಸಿ ಶಾಲಾ ಆಟದ ಮೈದಾನ, ಕಂಪ್ಯೂಟರ್, ಬಾಲಕರ ಶೌಚಾಲಯ, ಕಿಟಿಕಿ-ಬಾಗಿಲುಗಳು, ಗ್ರಂಥಾಲಯಕ್ಕೆ ಪುಸ್ತಕ, ಕಂಪ್ಯೂಟರ್, ನೀರಿನ ಫಿಲ್ಟರ್, ಕಚೇರಿಗೆ ಗೋದ್ರೇಜ್, ಅಡುಗೆ ಪಾತ್ರೆ, ಅಡುಗೆ ಕೋಣೆಗೆ ಟೈಲ್ಸ್, ಊಟದ ಸಭಾಂಗಣ, ನೀರಿನ ಟ್ಯಾಂಕ್, ಮಳೆನೀರು ಇಂಗಿಸುವಿಕೆ, ಪ್ರವೇಶದ್ವಾರ, ಸಿಸಿ ಕ್ಯಾಮರಾ ಅಳವಡಿಕೆ, ಕ್ರೀಡಾ ಸಾಮಾಗ್ರಿ ಸೇರಿ ಹಲವಾರು ಮೂಲಭೂತ ಸೌಲಭ್ಯಗಳನ್ನು ಶಾಲೆಗೆ ಮಾಡಿರುತ್ತಾರೆ. ಇಲ್ಲಿ ೧೬ವರ್ಷ ಸಹಶಿಕ್ಷಕನಾಗಿ, 6 ವರ್ಷದಿಂದ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಇವರು ಎಸ್‌ಎಸ್‌ಎಲ್‌ಸಿಯಲ್ಲಿ ಗಣಿತದಲ್ಲಿ ೧೦ವರ್ಷಕ್ಕಿಂತಲೂ ಹೆಚ್ಚು ಬಾರಿ ಶೇ.100 ಫಲಿತಾಂಶ ದಾಖಲಿಸಲು ಕಾರಣರಾಗಿದ್ದಾರೆ.


ಸಂಘ ಸಂಸ್ಥೆ:
ಇವರು ಹಲವು ಸಂಘ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. 2006ರಲ್ಲಿ ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ಸದಸ್ಯರಾಗಿ ಸೇರ್ಪಡೆ, 2010ರಿಂದ 2013ರ ತನಕ ಸಂಘದ ಕಾರ್ಯದರ್ಶಿಯಾಗಿ ಸೇವೆ, ಸುಮಾರು 200ಕ್ಕಿಂತಲೂ ಹೆಚ್ಚು ತಾಳಮದ್ದಲೆ ಕೂಟಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದಾರೆ. 2009ರಲ್ಲಿ ಜೆಸಿಐ ಆಲಂಕಾರು ಘಟಕದ ಸ್ಥಾಪಕ ಸದಸ್ಯನಾಗಿ ಸೇರ್ಪಡೆಗೊಂಡಿದ್ದು 2011ರಲ್ಲಿ ಘಟಕದ ಕಾರ್ಯದರ್ಶಿಯಾಗಿ, 2018ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಇವರು ಜೆಸಿಐನಿಂದ ಕಮಲಪತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದಿಶಕ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಶರವೂರು ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2021ರಿಂದ ಸೀನಿಯರ್ ಛೇಂಬರ್ ಆಫ್ ಇಂಡಿಯಾ ಕಡಬ ಶಾಖೆಯ ಸದಸ್ಯರಾಗಿದ್ದಾರೆ. 2022-23ರಲ್ಲಿ ಶ್ರೀ ಅರಸು ಉಳ್ಳಾಕುಲು ಕೆಡೆಂಜೊಟ್ಟುನಾರು ದೈವ ಕ್ಷೇತ್ರ ಕಕ್ವೆ ಕೋಡ್ಲ ಇದರ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಪತ್ನಿ ಮೋಹಿನಿ ಡಿ. ಗೃಹಿಣಿಯಾಗಿದ್ದಾರೆ. ಮಕ್ಕಳಾದ ಕುಲದೀಪ್(6ನೇ), ತೇಜಸ್(3ನೇ) ಹಾಗೂ ಅಭಿನವ್ ಹೆಚ್(ಎಲ್‌ಕೆಜಿ)ರವರು ಆಲಂಕಾರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಲಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here