ಬೆಳ್ತಂಗಡಿಯಲ್ಲಿ ಸೌಜನ್ಯ ಪರ ಬೃಹತ್ ಪ್ರತಿಭಟನೆ

0

ನ್ಯಾಯಾಲಯದ ಸುಪರ್ದಿಯಲ್ಲಿ ವಿಶೇಷ ತನಿಖಾ ದಳ ರಚಿಸಿ ತನಿಖೆಗೆ ಆಗ್ರಹ


ಬೆಳ್ತಂಗಡಿ: 11 ವರ್ಷದ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ನಡೆದ ಉಜಿರೆ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಲಯದ ಸುಪರ್ದಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೆ.3ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಿತು.


ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಂಗಳೂರು ಶಾಖಾಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು, ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ವಿಫಲವಾಗಿರುವುದು ಈ ದೇಶದ ದುರಂತವಾಗಿದೆ. ಈ ಪ್ರಕರಣದ ಪ್ರಾರಂಭಿಕ ಹಂತದಲ್ಲಿದ್ದ ಅಧಿಕಾರಿಗಳನ್ನು ತನಿಖೆ ಮಾಡಿದ್ದಲ್ಲಿ ಕಾಣದ ಕೈಗಳು ಸಿಕ್ಕಿ ಬೀಳುವುದು ಗ್ಯಾರಂಟಿ. ಸಮಾಜದ ಯಾವುದೇ ಹೆಣ್ಣು ಮಗುವಿಗೆ ಇಂತಹ ನೋವು ಆಗಬಾರದು. ಸತ್ಯ ಧರ್ಮದ ಹೋರಾಟಕ್ಕೆ ಆದಿಚುಂಚನಗಿರಿ ಮಠ ಸದಾ ನಿಮ್ಮೊಂದಿಗೆ ನಿಲ್ಲುತ್ತದೆ. ತಿಮರೋಡಿ ಅವರ ಈ ಹೋರಾಟವು ಶ್ಲಾಘನೀಯ ಎಂದು ಹೇಳಿದರು.

ಬಳಿಕ ಸ್ವಾಮೀಜಿ ತುರ್ತು ಕಾರ್ಯಕ್ರಮದ ನಿಮಿತ್ತ ಸಭೆಯಿಂದ ನಿರ್ಗಮಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯವರು ಮಾತನಾಡಿ, ಸೌಜನ್ಯಳ ಹೋರಾಟದ ಸಂಗ್ರಾಮ ಇದು. ಮುಂದಿನ ದಿನಗಳಲ್ಲಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಸಾಕ್ಷಿ ಆಧಾರದ ದಾಖಲೆಗಳನ್ನು ಸಭೆಯ ಮೂಲಕ ಮಾಧ್ಯಮಗಳ ಮುಂದೆ ಪ್ರಕಟಿಸಲಾಗುವುದು. ಈ ಹೋರಾಟವು ರಾಜ್ಯ ಮಟ್ಟದಲ್ಲಿ ಪ್ರಾರಂಭವಾಗಿ ಮುಂದಿನ ದಿನಗಳಲ್ಲಿ ಡೆಲ್ಲಿ ಸೇರಿದಂತೆ ದೇಶದ ವಿವಿಧೆಡೆ ನಡೆಯಲಿದೆ ಎಂದು ಹೇಳಿದರು. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ರವರು ಮಾತನಾಡಿ, ಸೌಜನ್ಯ ಪ್ರಕರಣದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಸರಕಾರ ಈ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಹೇಳಿದ ಅವರು, ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಅಣ್ಣಪ್ಪ ತಿಮರೋಡಿ ಎಂದು ಕರೆದು, ನಿಮ್ಮ ಹೋರಾಟಕ್ಕೆ ನಾವು ಕೈಜೋಡಿಸಿ ಉತ್ತರ ಕರ್ನಾಟಕದ ಭಾಗದಲ್ಲಿ ಹೋರಾಟ ನಡೆಸುತ್ತೇವೆ ಸರ್ಕಾರವು ಸೌಜನ್ಯ ಮತ್ತು ಸಂತೋಷ ರಾವ್ ಕುಟುಂಬಕ್ಕೆ ತಲಾ ೨೫ ಲಕ್ಷವನ್ನು ನೀಡಬೇಕು ಅಷ್ಟೇ ಅಲ್ಲದೇ ದ.ಕ.ಮತ್ತು ಉಡುಪಿ ಜಿಲ್ಲೆಯ ಸಂಸದರು, ಶಾಸಕರು ತಲಾ 5 ಲಕ್ಷವನ್ನು ನೀಡಬೇಕು ಎಂದರು.


ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿಯವರು ಮಾತನಾಡಿ, ಸೌಜನ್ಯಳಿಗೆ ನ್ಯಾಯ ಕೊಡಿಸುವಲ್ಲಿ ಮಹಿಳೆಯರು ಸದಾ ಮುಂದೆ ಬರುತ್ತೇವೆ. ರಾಜಕೀಯ ವ್ಯಕ್ತಿಗಳಿಗೆ ಹಿಂದುತ್ವವನ್ನು ಸಾಲವಾಗಿ ನೀಡಲಿಲ್ಲ. ನಾವು ಸೌಜನ್ಯಳ ಕುಟುಂಬದವರನ್ನು, ಮುಖ್ಯಮಂತ್ರಿ, ರಾಜ್ಯಪಾಲರನ್ನು ಭೇಟಿ ಮಾಡಿಸುತ್ತೇವೆ. ನಮಗೆ ರಾಜಕೀಯ ಪಕ್ಷಗಳ ಅಗತ್ಯವಿಲ್ಲ, ಸೌಜನ್ಯ ಸಾವಿಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಗೀತಾರವರು ಮಾತನಾಡಿ, ಈ ಪ್ರಕರಣದ ಕುರಿತು ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ. ನ್ಯಾಯ ಸಿಗಲೇಬೇಕು ಎಂದರು. ಸಂತೋಷ್ ರಾವ್ ಪರ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿ ಮೋಹಿತ್ ಕುಮಾರ್‌ರವರು ಸೌಜನ್ಯ ಅತ್ಯಾಚಾರ ಪ್ರಕರಣದ ತನಿಖಾ ವರದಿಯಲ್ಲಿ ಮಾಡಿರುವ ಉಲ್ಲೇಖಗಳ ಬಗ್ಗೆ ವಿವರಿಸಿ, ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯ ಹಾಗೂ ನಿರಪರಾಧಿ ಸಂತೋಷ್ ರಾವ್ ಮೇಲೆ ನಡೆದ ಅನ್ಯಾಯದ ಬಗ್ಗೆ ತಿಳಿಸಿದರು. ಒಡನಾಡಿ ಸಂಸ್ಥೆಯ ಪರಶುರಾಮ್‌ರವರು ಮಾತನಾಡಿ, ತಪ್ಪೇ ಮಾಡದ ಸಂತೋಷ್ ರಾವ್ ಕುಟುಂಬ ಸಂಕಷ್ಟ ಅನುಭವಿಸುತ್ತಿದೆ. ಈ ರೀತಿಯ ಸನ್ನಿವೇಶ ನಮ್ಮ ಮನೆಯ ಮಕ್ಕಳಿಗೂ ಬರಬಾರದು. ನಡೆದ ದುರಂತಕ್ಕೆ ನ್ಯಾಯ ಕೇಳುತ್ತಿzವೆ. ನ್ಯಾಯಕ್ಕಾಗಿ ನಾವು ದಂಗೆ ಏಳುತ್ತೇವೆ ಎಂದರು.


ತುಳು ಸಂಸ್ಕೃತಿಯ ಚಿಂತಕ ತಮ್ಮಣ್ಣ ಶೆಟ್ಟಿ ಮಾತನಾಡಿ, ಸೌಜನ್ಯವೆಂಬುದು ದೈವೀ ಶಕ್ತಿ, ತುಳುನಾಡಿನ ದೈವಗಳ ಮೇಲೆ ನಂಬಿಕೆಯಿದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೂ ನಂಬಿಕೆಯಿದೆ. ಪ್ರಧಾನಿಯವರು ಸೌಜನ್ಯ ಮತ್ತು ಸಂತೋಷ ರಾವ್ ಅವರ ಕುಟುಂಬದ ಸಂಕಷ್ಟವನ್ನು ಅವರ ಮನೆಯವರಿಂದ ತಿಳಿದುಕೊಳ್ಳಬೇಕೆಂದು ಹೇಳಿದರು. ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಿಳಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು. ಸಾಮಾಜಿಕ ಹೋರಾಟಗಾರ ಗೀರಿಶ್ ಮಟ್ಟಣ್ಣನವರ್ ಮಾತನಾಡಿ, ಬಲಪಂಥೀಯರು ಹಾಗೂ ಎಡಪಂಥೀಯರು ಒಂದಾಗಿ ಸೇರಿ ಹೋರಾಟ ನಡೆಸುತ್ತಿzವೆ ಎಂದು ಹೇಳಿ ತನಿಖೆಯಲ್ಲಿ ನಡೆದ ಲೋಪಗಳನ್ನು ವಿವರಿಸಿದರು. ನ್ಯಾಯವಾದಿ ಶ್ರೀನಿವಾಸ್‌ರವರು ಮಾತನಾಡಿ ಪೊಲೀಸ್, ಸಿಐಡಿ, ಸಿಬಿಐ ತನಿಖೆ ನಡೆದರೂ ನೈಜ ಆರೋಪಿಗಳ ಬಂಧನವಾಗಿಲ್ಲ. ನಮ್ಮ ಹೋರಾಟದ ದಿಕ್ಕನ್ನು ತಪ್ಪಿಸಬೇಡಿ ಎಂದು ಹೇಳಿದರು.


ವೇದಿಕೆಯಲ್ಲಿ ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಉಪಸ್ಥಿತರಿದ್ದರು. ಸೌಜ್ಯನ ಕುಟುಂಬದವರು ಹಾಡು ಹಾಡಿದರು ಈ ಸಂದರ್ಭ ಸಭೆಯು ಭಾವುಕತೆಯಿಂದ ಕೂಡಿತ್ತು.
ಮುಖೇಶ್ ಶೆಟ್ಟಿ ವಂದೇ ಮಾತರಂ ಗೀತೆ ಹಾಡಿದರು. ಸಂದೀಪ್ ಶೆಟ್ಟಿ ವಂದಿಸಿದರು. ಆನಂದ ಕುಲಾಲ್ ಎರ್ಡತ್ತೂರು ಮತ್ತು ಅನಿಲ್ ಅಂತರ ನಿರೂಪಿಸಿದರು.


ಪುತ್ತೂರು, ಕಡಬದಿಂದಲೂ ಸಾವಿರಾರು ಮಂದಿ ಭಾಗಿ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಲಯದ ಸುಪರ್ದಿಯಲ್ಲಿ ವಿಶೇಷ ತನಿಖಾ ದಳ ರಚಿಸಿ ತನಿಖೆಗೆ ಆಗ್ರಹಿಸಿ
ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪುತ್ತೂರು, ಕಡಬದಿಂದಲೂ ಸಾವಿರಾರು ಮಂದಿ ಭಾಗಿಯಾಗಿದ್ದರು. ಬೈಕ್, ಪಿಕಪ್ ಸೇರಿದಂತೆ ಇತರೇ ವಾಹನಗಳಲ್ಲಿ ಪುತ್ತೂರು, ಕಡಬದ ವಿವಿಧ ಕಡೆಗಳಿಂದ ಜನರು ತಂಡೋಪತಂಡವಾಗಿ ತೆರಳುತ್ತಿರುವುದು ಕಂಡುಬಂದಿದೆ.


ನ್ಯಾಯಕೊಡಿ ಎಂದು ಜನರ ಮುಂದೆ ಸೆರಗೊಡ್ಡಿದ ಸೌಜನ್ಯ ತಾಯಿ
ಸೌಜನ್ಯಳ ತಾಯಿ ಕುಸುಮಾವತಿಯವರು ಮಾತನಾಡಿ, ನನ್ನ ಮಗಳನ್ನು ಅತ್ಯಾಚಾರ ಮಾಡಿ ಎಸೆದು ಬಿಟ್ಟಿದ್ದಾರೆ. ನಾನು ಇಂದು ಜೀವಂತವಾಗಿ ವೇದಿಕೆಯಲ್ಲಿ ಮಾತನಾಡಲು ಕಾರಣ ಮಹೇಶ್ ಅಣ್ಣ. ನನ್ನ ಮಗಳಿಗಾದ ಅನ್ಯಾಯಕ್ಕೆ ನ್ಯಾಯ ತಂದು ಕೊಡಿ ಎಂದು ಭಾವುಕರಾಗಿ ಸೆರಗೊಡ್ಡಿ ಬೇಡಿಕೊಂಡರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು ಹಲವೆಡೆ ಎಲ್.ಇ.ಡಿ ಪರದೆ ಅಳವಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here