ತುಳುಮಾತನಾಡುವಾಗ ಬೆಂಬಲಿಸಿದ್ದ ಸಚಿವ ಝಮೀರ್ ಅಹ್ಮದ್ ಅಭಿನಂದಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ನಾನು ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡುವಾಗ ನನಗೆ ಬೆಂಬಲ ನೀಡಿದವರು ಸಚಿವ ಝಮೀರ್ ಅಹ್ಮದ್ ರವರು, ನಾನು ಅಧಿವೇಶನದಲ್ಲಿ ಎದ್ದು ನಿಂತು ಮಾತನಾಡುವಾಗ ಕೆಲವರು ಆಕ್ಷೇಪ ಮಾಡಿದ್ದರು. ಆ ವೇಳೆ ಪಾತೆರ‍್ಲೆ ಅಶೋಕರೆ ಪಾತೆರ‍್ಲೆ ಎಂದು ನನಗೆ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಇಂದು ತುಳುನಾಡಿಗೆ ಬಂದ ಸಚಿವ ಝಮೀರ್ ಅಹ್ಮದ್ ರವರಿಗೆ ನಾನು ತುಳುನಾಡಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಅಶೋಕ್ ರೈ ಹೇಳಿದರು.


ಅವರು ಮಿತ್ತೂರು ದಾರುಲ್ ಇರ್ಷಾದ್ ಶಾಲೆಯಲ್ಲಿ ಪ್ರಧಾನಮಂತ್ರಿ ಜನ ವಿಕಾಸ ಯೋಜನೆಯಡಿ ನಿರ್ಮಾಣವಾದ ಪ್ರೌಢ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳುವನ್ನು ಎಂಟನೇ ಪರಿಚ್ಚೇದ ಮತ್ತು ರಾಜ್ಯದ ದ್ವಿತೀಯ ಭಾಷೆಯಾಗಿ ಪರಿಗಣಿಸಬೇಕು ಎಂಬ ಕಾರಣಕ್ಕೆ ನಾನು ತುಳುವಿನಲ್ಲಿ ಅಧಿವೇಶನದಲ್ಲಿ ಮಾತನಾಡಿದ್ದೆ ಈ ವೇಳೆ ನನಗೆ ಸಚಿವರು ನೀಡಿದ ಪ್ರೋತ್ಸಾಹ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಿಂದ ಇದ್ದಾರೆ. ಐದು ಗ್ಯಾರಂಟಿಗಳು ಜನರಿಗೆ ಬದುಕು ಕೊಟ್ಟಿದೆ. ಶಕ್ತಿ ಯೋಜನೆ, ಅನ್ನಾಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಎಲ್ಲಾ ಮನೆಗಳನ್ನು ಬೆಳಗಿಸಿದೆ. ಯೋಜನೆಯನ್ನು ಅಪಹಾಸ್ಯ ಮಾಡುತ್ತಿದ್ದವರು ತಮ್ಮ ಖಾತೆಗೆ ಹಣ ಜಮಾವಣೆಯಾದಾಗ ಮೌನವಾಗಿದ್ದಾರೆ. ಮನೆಯಲ್ಲಿ ಉಚಿತ ಕರೆಂಟ್ ಉರಿಯುವಾಗಿ ಹಾಸ್ಯ ಮಾಡುತ್ತಿದ್ದವರ ಉರಿ ನಿಂತು ಹೋಗಿದೆ. ರಾಜ್ಯದ ಎಲ್ಲಾ ಜನರಿಗೂ ಸಮಾನ ಅವಕಾಶವನ್ನು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಸೀದಿ ಆಡಳಿತದಿಂದ ಉತ್ತಮ ಬಾಂಧವ್ಯ
ಜಿಲ್ಲೆಯಲ್ಲಿ ಪುತ್ತೂರು ಮತ್ತು ಉಳ್ಳಾಲ ಹೊರತುಪಡಿಸಿ ಬೇರೆ ಕಡೆ ಕಾಂಗ್ರೆಸ್ ಅಲ್ಪಮತದಿಂದ ಸೋತಿದೆ. ವಿನಾ ಕಾಂಗ್ರೆಸ್ ಗೆ ಹಾನಿಯಾಗಿಲ್ಲ, ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಜನ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಜನತೆ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ರಾಜ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಕೋಮುವಾದ ಮಾಡುವವರ ಹೆಡೆಮುರಿ ಕಟ್ಟುವಲ್ಲಿ ಸರಕಾರ ಸಫಲವಾಗಿದೆ ಎಂದ ಶಾಸಕರು ಈ ಭಾಗದ ಮಸೀದಿ ಆಡಳಿತ ಕಮಿಟಿಯವರು ಸಮಾಜದಲ್ಲಿ ಸೌಹಾರ್ದದ ವಾತಾವರಣವನ್ನು ಬೆಂಬಲಿಸುತ್ತಿದ್ದು, ಎಲ್ಲರ ಜೊತೆಯೋ ಅನ್ಯೋನ್ಯತೆಯಿಂದ ಇದ್ದು, ಇದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನನ್ನ ಕ್ಷೇತ್ರದ ಜತೆಗೆ ಹೆಚ್ಚುವರಿಯಗಿ ನೀಡಬೇಕು. ಅನೇಕ ಬೇಡಿಕೆಗಳಿದ್ದು ಎಲ್ಲವನ್ನೂ ತಮ್ಮ ಮುಂದೆ ತರುತ್ತೇನೆ ಸಹಕಾರ ನೀಡಬೇಕು ಎಂದು ಸಚಿವ ಝಮಿರ್ ಅಹ್ಮದ್‌ರವರಿಗೆ ಮನವಿ ಮಾಡಿದರು.

ತುಳುವಿನಲ್ಲೇ ಮಾತು ಆರಂಭಿಸಿದ ಸಚಿವ ಝಮೀರ್
ಸಚಿವ ಝಮೀರ್ ಅಹ್ಮದ್‌ರವರು ತುಳುವಿನಲ್ಲೇ ತನ್ನ ಮಾತು ಆರಂಭಿಸಿ ಎಂಕ್ ಒಂತೆ ತುಳು ಬರ‍್ಪುಂಡು ಜಾಸ್ತಿ ಗೊತ್ತಿಜ್ಜಿ ಎಂದು ಹೇಳುವ ಮೂಲಕ ತುಳುನಾಡಿನ ಭಾಷೆಗೂ ಗೌರವ ನೀಡುವ ಕೆಲಸವನ್ನು ಮಾಡಿದರು.

LEAVE A REPLY

Please enter your comment!
Please enter your name here