ಪುತ್ತೂರು: ದೇಶಪ್ರೇಮವೆಂದರೆ ಮೈಕ್ ಕಟ್ಟಿ ರಸ್ತೆ ಬದಿಯಲ್ಲಿ ನಿಂತು ಅನ್ಯರನ್ನು ದೂಷಣೆ ಮಾಡುವುದಲ್ಲ, ವಿದ್ಯೆ ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದೇ ದೇಶಪ್ರೇಮವಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಹೇಳಿದರು.
ಅವರು ಮಿತ್ತೂರು ದಾರುಲ್ ಇರ್ಷಾದ್ ಸಂಸ್ಥೆಯ ಪ್ರಧಾನಮಂತ್ರಿ ಜನ ವಿಕಾಸ ಯೋಜನೆಯಡಿ ನಿರ್ಮಾಣವಾದ ಪ್ರೌಢ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕರದ ಅನುದಾನದಿಂದ ಈ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಮಕ್ಕಳು ಶಿಕ್ಷಣವನ್ನು ಪಡೆಯುವಂತಾಗಬೇಕು ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು. ರಾಜಕಾರಣಿಗಳು, ಅಧಿಕಾರಿಗಳು, ಮಂತ್ರಿಗಳು ಬಲಿಷ್ಟರಾದರೆ ಭಾರತ ಬಲಿಷ್ಟವಾಗುವುದಿಲ್ಲ, ನಮ್ಮ ಮಕ್ಕಳು ಶಿಕ್ಷಣದಲ್ಲಿ ಬಲಿಷ್ಠರಾದರೆ ಮಾತ್ರ ನಮ್ಮ ದೇಶ ಬಲಿಷ್ಟವಾಗುತ್ತದೆ. ಬಲಿಷ್ಠ ಭಾರತದ ನಿರ್ಮಾಣ ಕಾರ್ಯ ಮಾಡುತ್ತಿರುವ ಮಾಣಿ ದಾರುಲ್ ಇರ್ಷಾದ್ ಸಂಸ್ಥೆಯ ಸ್ಥಾಪಕರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಯವರ ಕಾರ್ಯ ಶ್ಲಾಘನೀಯವಾಗಿದೆ. ಕಳೆದ ಹಲವು ವರ್ಷಗಳಿಂದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ನೂರಾರು ಮಂದಿ ವಿದ್ಯಾವಂತ ಯುವಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಪ್ರತೀಯೊಬ್ಬರೂ ಸರಕಾರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ ಅವರು ಸಚಿವ ಝಮೀರ್ ಅಹ್ಮದ್‌ರವರು ಸಚಿವರಾಗಿ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ವಾರಕ್ಕೊಂದು ಬಾರಿ ಅಧಿಕಾರಿಗಳ ಸಭೆ ಕರೆದು ಅವರು ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯನ್ನು ಚುರುಕುಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ದುಶ್ಚಟ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಎಲ್ಲಾ ಧರ್ಮದ ಮುಖಂಡರುಗಳು ಸಹಕಾರವನ್ನು ನೀಡಬೇಕಿದೆ. ದುಶ್ಚಟವನ್ನು ನಿಯಂತ್ರಣ ಮಾಡದೇ ಇದ್ದಲ್ಲಿ ಮುಂದೆ ಅದು ಸಮಾಜಕ್ಕೆ ದೊಡ್ಡ ಮಾರಕವಾಗಿ ಪರಿಣಮಿಸಬಹುದು ಎಂದು ಸಭಾಪತಿ ಖಾದರ್ ಹೇಳಿದರು.
ಮಾಜಿ ಸಚಿವ ಬಿ ರಮಾನಾಥ ರೈಯವರು ಮಾತನಾಡಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಾಣಿ ಉಸ್ತಾದರ ಈ ಸಂಸ್ಥೆ ಸಮಾಜಮುಖಿ ಕೆಲಸವನ್ನು ನಿರ್ವಹಿಸುತ್ತಿದ್ದು, ಸರಕಾರ ಈ ರೀತಿಯ ಸಂಶ್ಥೆಗಳಿಗೆ ಸಹಕಾರವನ್ನು ನೀಡಬೇಕು ಎಂದು ಹೇಳಿದರು.
ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್, ಸಚಿವ ಝಮೀರ್ ಅಹ್ಮದ್, ಜಿ ಪಂ ಸಿಇಒ ಆನಂದ್, ಪುತ್ತೂರು ಎ ಸಿ ಗಿರೀಶ್ ನಂದನ್, ಜಿ.ಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ಟಿ ಎಂ ಶಹೀದ್ ಸುಳ್ಯ, ಶಾಫಿ ಮುಸ್ಲಿಯಾರ್ ಸಅದಿ, ಮೊದಲಾದವರು ಉಪಸ್ಥಿತರಿದ್ದರು.