ಸಂತ ಫಿಲೋಮಿನಾ ಕಾಲೇಜಿನ ವತಿಯಿಂದ “ಫಿಲೋ ಕೆಸರ್‌ದ ಗೊಬ್ಬು”

0

ಪುತ್ತೂರು:  ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘದ ವತಿಯಿಂದ  ಬಿ ಎ ವಿದ್ಯಾರ್ಥಿಗಳಿಗಾಗಿ “ಫಿಲೋ ಕೆಸರ್‌ದ ಗೊಬ್ಬು” ಸ್ಪರ್ಧೆಗಳನ್ನು ಕೊಡಂಕಿರಿ ಶ್ರೀಧರ ಪೂಜಾರಿಯವರ ಗದ್ದೆಯಲ್ಲಿ ಸೆ.6ರಂದು ಆಯೋಜಿಸಲಾಯಿತು. ಸ್ಪರ್ಧೆಗಳನ್ನು ಉದ್ಘಾಟಿಸಿದ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕರಾದ ಸ್ಟ್ಯಾನಿ ಪಿಂಟೋರವರು “ಈ ರೀತಿಯ ಸ್ಪರ್ಧೆಗಳು ಉಲ್ಲಾಸವನ್ನು ನೀಡುವುದರೊಂದಿಗೆ ಭಾಗವಹಿಸುವವರ ದೈಹಿಕ ಕ್ಷಮತೆ ಮತ್ತು ಮಾನಸಿಕ ದೃಢತೆಗಳನ್ನು ಪರೀಕ್ಷಿಸುತ್ತವೆ. ವಿದ್ಯಾರ್ಥಿಗಳಲ್ಲಿ ಒತ್ತಡ ನಿರ್ವಹಣೆ ಮತ್ತು ಸಂಘಟನಾ ಕೌಶಲ್ಯಗಳನ್ನು ಬೆಳೆಸುವಲ್ಲಿ ಈ ರೀತಿಯ ಸ್ಪರ್ಧೆಗಳು ಸಹಕಾರಿಯಾಗುತ್ತವೆ.

ಗ್ರಾಮೀಣ ಕ್ರೀಡೆಗಳಿಗೆ ದುಬಾರಿ ಪರಿಕರಗಳ ಅವಶ್ಯಕತೆ ಇರುವುದಿಲ್ಲ. ನಮ್ಮ ಪರಿಸರದಲ್ಲಿ ದೊರೆಯುವ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಈ ಗ್ರಾಮೀಣ ಕ್ರೀಡೆಗಳು ಗ್ರಾಮೀಣ ಜನರ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತವೆ ಹಾಗೂ ನಮ್ಮ ಜನರ  ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗೆ ರವಾನಿಸಲು ಸಹಕಾರಿಯಾಗುತ್ತವೆ. ಇಲ್ಲಿ ಆಟಗಳನ್ನು ಸಾಮಾನ್ಯವಾಗಿ ಗುಂಪುಗಳಲ್ಲಿ ಆಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಜೊತೆ ಸೇರಲು, ಸಾಮಾಜಿಕ ಬಂಧಗಳನ್ನು ಬಲಪಡಿಸಲು ಮತ್ತು ಕೃಷಿ ಸಮುದಾಯಗಳೊಡನೆ ಬೆರೆಯುವ ಅವಕಾಶವನ್ನು ಒದಗಿಸುತ್ತವೆ” ಎಂದು ಹೇಳಿ ಕಾರ್ಯಕ್ರಮದ ಆಯೋಜಕರನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಸ್ಥಳದಾತರಾದ ಶ್ರೀಧರ ಪೂಜಾರಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಗ್ರಾಮೀಣ ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪದ ಪ್ರತಿಭೆಗಳಾದ ಕಮಲ ಹಾಗೂ ಬೇಬಿ ರವರು  ಪಾಡ್ದನಗಳನ್ನು ಹಾಡಿದರು. ವಿದ್ಯಾರ್ಥಿಗಳಿಗಾಗಿ ಕೆಸರು ಗದ್ದೆ ಓಟ, ಗೋಣಿ ಚೀಲ ಓಟ, ಹಗ್ಗ ಜಗ್ಗಾಟ, ಮೊಸರು ಕುಡಿಕೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ದ್ವಿತೀಯ ಬಿ ಎ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ವಾಸುದೇವ ಎನ್‌ ಸ್ವಾಗತಿಸಿದರು. ಕಲಾ ವಿಭಾಗದ ಡೀನ್‌ ಡಾ. ನೋರ್ಬರ್ಟ್‌ ಮಸ್ಕರೇನಸ್‌ರವರು ಶ್ರೀಧರ ಪೂಜಾರಿಯವರ ಪರಿಚಯ ಮಾಡಿಕೊಟ್ಟರು. ತೃತೀಯ ಬಿ ಎ ವಿದ್ಯಾರ್ಥಿ ಇರ್ಫಾನ್‌ ವಂದಿಸಿದರು, ತೃತೀಯ ಬಿಎ ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಸಿದರು. ಸ್ಥಳೀಯರಾದ ವೀರಪ್ಪ ಪೂಜಾರಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ, ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್‌ ರೈ ಹಾಗೂ ಕಲಾ ವಿಭಾಗದ ಪ್ರಾಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.   

LEAVE A REPLY

Please enter your comment!
Please enter your name here