ಪುತ್ತೂರು: ಕೆಪಿಸಿಸಿ ಸಂಯೋಜಕ, ನ್ಯಾಯವಾದಿ ನೂರುದ್ದೀನ್ ಸಾಲ್ಮರರವರು ಸೆ.5ರಂದು ಮಿತ್ತೂರಿನ ದಾರುಲ್ ಇರ್ಶಾದ್ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯದ ವಸತಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್‌ರವರನ್ನು ಭೇಟಿಯಾಗಿ, ಅಲ್ಪಸಂಖ್ಯಾತ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು,ಕರ್ನಾಟಕ ರಾಜ್ಯದಲ್ಲಿ ಪುನರ್ ಸ್ಥಾಪಿಸಿದ್ದಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿದರು.
ಕೇಂದ್ರ ಸರಕಾರವು ಕಳೆದ ವರ್ಷದಿಂದ ಒಂದರಿಂದ ಹತ್ತನೇ ತರಗತಿವರೆಗಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳ(ಮೆಟ್ರಿಕ್ ಪೂರ್ವ)ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿತ್ತು.ಆದರೆ ರಾಜ್ಯ ಸರಕಾರವು ಇದನ್ನು ಪುನರ್ ಸ್ಥಾಪಿಸಿ ರಾಜ್ಯದ ಸುಮಾರು 5 ಲಕ್ಷದಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಿದೆ.
ಈ ಸೌಲಭ್ಯ, ದೇಶದ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಪುನರ್ ಸ್ಥಾಪಿತಗೊಂಡಿದೆ.ಇದಕ್ಕಾಗಿ ಮುತುವರ್ಜಿ ವಹಿಸಿದ್ದಕ್ಕಾಗಿ ಸಚಿವರನ್ನು ನೂರುದ್ದೀನ್‌ರವರು ಅಭಿನಂದಿಸಿದರು.ಮಾತ್ರವಲ್ಲ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಂದರಿಂದ ಹತ್ತನೇ ತರಗತಿ (ಮೆಟ್ರಿಕ್ ಪೂರ್ವ) ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದ ಆದಾಯ ಮಿತಿಯನ್ನು ಸಮಾನವಾಗಿ ಅಂದರೆ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಇರುವಂತೆ ನಿಗದಿಪಡಿಸಲು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂಎಸ್ ಮೊಹಮ್ಮದ್, ನ್ಯಾಯವಾದಿ ಸಾತ್ವಿಕ ಆರಿಗ, ಹನೀಫ್ ಅಳಕೆ ಮಜಲು,ಕುರಿಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಬ್ಬಾರ್ ಕುರಿಯ ಉಪಸ್ಥಿತರಿದ್ದರು.