ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಮನೆಯಲ್ಲಿ ದರೋಡೆ-ಮನೆಮಂದಿಯನ್ನು ಕಟ್ಟಿಹಾಕಿ ಕೃತ್ಯ| ಲಕ್ಷಾಂತರ ರೂ.ಮೌಲ್ಯದ ನಗದು ಕಳ್ಳತನ | ನೀರು ಕೊಟ್ಟು, ಕಾಲು ಹಿಡಿದು ತೆರಳಿದ ಕಳ್ಳರು ಚಿನ್ನಾಭರಣ,

0

ಪುತ್ತೂರು: ಸೆ.6ರ ತಡರಾತ್ರಿ ಮನೆಗೆ ನುಗ್ಗಿದ ಡಕಾಯಿತರ ತಂಡವೊಂದು ಮನೆಮಂದಿಯನ್ನು ಕಟ್ಟಿಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ ನಗದು, ಚಿನ್ನಾಭರಣ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ದೋಚಿರುವ ಘಟನೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ನಡೆದಿದೆ.


ಕುದ್ಕಾಡಿ ನಿವಾಸಿ, ಬಡಗನ್ನೂರು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿಯವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸೆ.6ರ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಸುಮಾರು 5 ಮಂದಿ ಇದ್ದ ದರೋಡೆಕೋರರ ತಂಡ ಈ ಕೃತ್ಯ ಎಸಗಿದೆ. ಮನೆಮಂದಿಯನ್ನು ಹಗ್ಗ, ಬಟ್ಟೆಯಿಂದ ಕಟ್ಟಿ, ಬಾಯಿಯನ್ನು ಬಿಗಿದು, ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ ದರೋಡೆ ಮಾಡಿದೆ. ಮನೆಯ ಕಪಾಟನ್ನು ಒಡೆಯಲು ಮಾಡಿದ ಪ್ರಯತ್ನ ವಿಫಲವಾದಾಗ, ಗುರುಪ್ರಸಾದ್ ರೈಯವರ ತಾಯಿಯನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದೆ.


ಘಟನೆಯ ಬಗ್ಗೆ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ದ.ಕ.ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್‌ಪಿ ಧರ್ಮಪಾಲ್, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ.ಗಾನ ಪಿ. ಕುಮಾರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ.


ಕೇಸು ದಾಖಲು: ಘಟನೆ ಕುರಿತು ಗುರುಪ್ರಸಾದ್ ರೈ ಎನ್.,ರವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸೆ.6ರಂದು ರಾತ್ರಿ ತನ್ನ ತಾಯಿಯೊಂದಿಗೆ ಮನೆಯಲ್ಲಿರುವಾಗ ತಡರಾತ್ರಿ 5 ಜನ ಅಪರಿಚಿತ ಯುವಕರು ಮನೆಯ ಹಿಂದಿನ ಬಾಗಿಲನ್ನು ಒಡೆದು ಮನೆಯನ್ನು ಪ್ರವೇಶಿಸಿದ್ದು, ನನ್ನನ್ನು ಸೋಫಾದಲ್ಲಿ ಕಟ್ಟಿ ಹಾಕಿ ತಾಯಿಗೆ ಚೂರಿಯನ್ನು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ರೂ.2.40 ಲಕ್ಷ ಮೌಲ್ಯದ ಚಿನ್ನದ ಆಭರಣ ಮತ್ತು ರೂ.30 ಸಾವಿರ ನಗದು ದರೋಡೆ ಮಾಡಿದ್ದಾರೆ. ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದಲ್ಲಿ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 84-2023. ಕಲಂ: 395, 458 IPC ಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಗುರುಪ್ರಸಾದ್‌ರವರು ಸುದ್ದಿಬಿಡುಗಡೆ ಪತ್ರಿಕೆಯ ಪತ್ರಿನಿಧಿಯಾಗಿಯೂ ಕೆಲಸ ಮಾಡಿದ್ದರು.


ಘಟನೆ ಹೇಗಾಯ್ತು? :
ಸೆ.6ರಂದು ರಾತ್ರಿ ಮನೆಯಲ್ಲಿದ್ದ ಗುರುಪ್ರಸಾದ್ ರೈ ಹಾಗೂ ಅವರ ತಾಯಿ ಕಸ್ತೂರಿಯವರು ಸುಮಾರು 11.30ರವರೆಗೆ ಟಿವಿ ನೋಡಿ ಮನೆಯಲ್ಲಿ ಮಲಗಿದ್ದರು. ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯ ಹಿಂಬದಿಯ ಬಾಗಿಲ ಬಳಿ ಸದ್ದಾಗಿತ್ತು. ಬೆಕ್ಕು ಇರಬಹುದು ಎಂದು ಸುಮ್ಮನಾದಾಗ ಮತ್ತೊಮ್ಮೆ ದೊಡ್ಡದಾಗಿ ಶಬ್ದ ಕೇಳಿಸಿತ್ತು. ಏನಾಯ್ತು ಎಂದು ಎದ್ದು ಮನೆಯ ಬಾಗಿಲ ಬಳಿಗೆ ಬರುವಷ್ಟರಲ್ಲಿ ನಾಲ್ಕೈದು ಮಂದಿ ಮುಸುಕುಧಾರಿಗಳು ಮಾರಕಾಸ್ತ್ರಗಳ ಜೊತೆಗೆ ಮನೆಯೊಳಗೆ ಪ್ರವೇಶ ಮಾಡಿದ್ದರು. ಯಾರು ನೀವು ? ಬಾಗಿಲು ತೆರೆದದ್ದು ಯಾರು?’ ಎಂದು ಕೇಳುವಷ್ಟರಲ್ಲಿ ಇಬ್ಬರನ್ನೂ ಸುತ್ತುವರಿದ ದರೋಡೆಕೋರರು ಇಬ್ಬರನ್ನು ಕೂಡ ಮನೆಯ ಹಾಲ್ ಬಳಿಗೆ ಕರೆದೊಯ್ದು ಅಲ್ಲಿ ಕುರ್ಚಿಯಲ್ಲಿ ಕೂರಿಸಿದ್ದರು. ಗುರುಪ್ರಸಾದ್ ರೈಯವರ ಕೈಯನ್ನು ಹಗ್ಗ ಮತ್ತು ಬೈರಾಸಿನಿಂದ ಕಟ್ಟಿದ್ದರು. ಕಸ್ತೂರಿಯವರ ಕುತ್ತಿಗೆಗೆ ಉದ್ದದ ಕತ್ತಿಯನ್ನು ಹಿಡಿದುಕೊಂಡು ಮನೆಯಲ್ಲಿದ್ದ ಚಿನ್ನಾಭರಣ ನೀಡುವಂತೆ ಪೀಡಿಸಿದ್ದರು. ಇವರ ಬಳಿಯಿಂದ ಎಲ್ಲಾ ಕಡೆಯ ಕೀಗಳನ್ನು ಪಡೆದುಕೊಂಡು ಮನೆಯನ್ನು ಜಾಲಾಡಲು ಆರಂಭಿಸಿದ್ದಾರೆ. ಇಬ್ಬರು ಇವರ ಬಗ್ಗೆ ನಿಗಾ ವಹಿಸಿದ್ದರೆ ಉಳಿದವರು ಮನೆಯಲ್ಲಿಡೀ ತಡಕಾಡುತ್ತಿದ್ದರು. ಪ್ರತಿಯೊಂದು ಕೋಣೆಯನ್ನು ಕೂಡ ಬಿಡದೆ ಜಾಲಾಡಿದ್ದಾರೆ. ವಸ್ತುಗಳೆಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಾಧ್ಯವಾದಷ್ಟು ಹುಡುಕಾಡಿದ್ದಾರೆ. ಮನೆಯ ಒಳಕೋಣೆಯಲ್ಲಿದ್ದ ಕಬ್ಬಿಣದ ಅಲ್ಮೇರಾ/ಕಪಾಟನ್ನು ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅದನ್ನು ಒಡೆಯಲು ಶತಪ್ರಯತ್ನ ನಡೆಸಿದರೂ ಸಾಧ್ಯವಾಗದೇ ಇದ್ದಾಗ ಕಸ್ತೂರಿಯವರನ್ನು ಇನ್ನಷ್ಟು ಬೆದರಿಸಿ ಅವರ ಕೈಯಿಂದ ಕಪಾಟಿನ ಬೀಗದ ಕೀ ಪಡೆದುಕೊಂಡು ಅದರಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಬಳಿಕ ಕಟ್ಟುಬಿಚ್ಚಿ, ಪೊಲೀಸ್ ಕಂಪ್ಲೇಟ್ ನೀಡಿದರೆ ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಸಿ ಮನೆಯಿಂದ ಪರಾರಿಯಾಗಿದ್ದಾರೆ ಎಂದು ಮನೆಮಂದಿ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಇದ್ದುದು ಇಬ್ಬರೇ:
ಕಳ್ಳತನ ನಡೆದಿರುವ ಕುದ್ಕಾಡಿಯ ಮನೆಯು ಕುದ್ಕಾಡಿ ಗುರುಪ್ರಸಾದ್ ರೈಯವರ ಅಜ್ಜಿ ಶೀಲಾವತಿ ರೈಯವರದಾಗಿದ್ದು, ಸುಮಾರು ಎರಡು ತಿಂಗಳ ಹಿಂದೆ ಅವರು ಮೃತಪಟ್ಟಿದ್ದರು. ಗುರುಪ್ರಸಾದ್ ರೈಯವರ ಸಹೋದರ ಕೇರಳದ ನಾರಂಪಾಡಿಯಲ್ಲಿದ್ದು, ಗುರುಪ್ರಸಾದ್ ರೈಯವರ ತಾಯಿ ಕಸ್ತೂರಿಯವರು ಇಲ್ಲಿಗೆ ಮತ್ತು ನಾರಂಪಾಡಿಗೆ ಹೋಗಿಬರುತ್ತಿದ್ದರು. ಆ.26ರಂದು ಇಲ್ಲಿಂದ ನಾರಂಪಾಡಿಗೆ ತೆರಳಿದ್ದ ಕಸ್ತೂರಿಯವರು ಕಳೆದ ವಾರವಷ್ಟೇ ಈ ಮನೆಗೆ ಬಂದಿದ್ದರು. ಇತ್ತೀಚೆಗೆ ಕುಟುಂಬದ ಪೈಕಿ ಕಾರ್ಯಕ್ರಮವೊಂದಿದ್ದು, ತನ್ನೊಂದಿಗೆ ಚಿನ್ನಾಭರಣವನ್ನು ತಂದಿದ್ದರು. ಅದು ಮನೆಯಲ್ಲಿದ್ದು, ಇದೀಗ ಕಳ್ಳರ ಪಾಲಾಗಿದೆ.

ಕೆಲಸದಾಳು ಊರಿಗೆ ಹೋಗಿದ್ದರು:
ಕುದ್ಕಾಡಿಯ ಮನೆಯಲ್ಲಿ ಸಾಮಾನ್ಯವಾಗಿ ಗುರುಪ್ರಸಾದ್ ರೈ ಹಾಗೂ ತೋಟದ ಕೆಲಸದಾಳುಗಳು ಮಾತ್ರ ಇರುತ್ತಿದ್ದರು. ರಾತ್ರಿ ವೇಳೆ ಓರ್ವ ಕೆಲಸದಾಳು ಹಾಗೂ ಗುರುಪ್ರಸಾದ್ ರೈಯವರು ಮಾತ್ರ ಮನೆಯಲ್ಲಿ ಇರುತ್ತಿದ್ದರು. ಆದರೆ 3 ದಿನಗಳ ಹಿಂದೆ ಅನ್ಯ ಕಾರಣಗಳಿಂದ ಕೆಲಸದಾಳು ಊರಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ತೋಟದ ಕೆಲಸದಾಳುಗಳಿಗೆ ಅಡುಗೆ ಮಾಡಲು ಕಸ್ತೂರಿ ರೈಯವರು ಕುದ್ಕಾಡಿಯ ಮನೆಗೆ ಬಂದಿದ್ದರು.

ಏನೆಲ್ಲಾ ಕಳವು:
ಕಸ್ತೂರಿಯವರಿಗೆ ಸೇರಿದ ನಾಲ್ಕು ಚಿನ್ನದ ಬಳೆ, ಒಂದು ದೊಡ್ಡ ಚಿನ್ನದ ಸರ ಸೇರಿ ಸುಮಾರು 9 ಪವನ್ ಚಿನ್ನ, ಜೊತೆಗೆ ಮನೆಯಲ್ಲಿದ್ದ 25 ಸಾವಿರ ರೂ.ನಗದನ್ನು ದೋಚಲಾಗಿದೆ. ಗುರುಪ್ರಸಾದ್ ರೈಯವರ ಪರ್ಸ್‌ನಲ್ಲಿದ್ದ 5 ಸಾವಿರ ರೂ. ನಗದನ್ನು ಕೊಂಡೊಯ್ದಿದ್ದಾರೆ. ಕಳವಾದ ಸೊತ್ತು ಮತ್ತು ನಗದುಗಳ ಒಟ್ಟು ಮೌಲ್ಯ ಸುಮಾರು 4.5 ಲಕ್ಷ ಎಂದು ಅಂದಾಜಿಸಲಾಗಿದೆ.

ಮೊಬೈಲ್ ನೀರಿಗೆ..!:
ಮನೆಯೊಳಗೆ ಬಂದ ತಕ್ಷಣ ದರೋಡೆಕೋರರ ತಂಡ ಮನೆಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಫೋನ್‌ಗಳನ್ನು ನೀರಿಗೆ ಹಾಕಿ ನಿಷ್ಕ್ರಿಯಗೊಳಿಸಿದೆ. ಮನೆಮಂದಿಯ ಕೈಯಲ್ಲಿದ್ದ ಟಾರ್ಚ್‌ಲೈಟ್‌ನ್ನು ಕಿತ್ತುಕೊಂಡಿದೆ. ಜೊತೆಗೆ ಗುರುಪ್ರಸಾದ್ ರೈಯವರ ಒಂದು ಮೊಬೈಲ್ ಫೋನ್ ಡಿಸ್‌ಪ್ಲೇಗೆ ಕತ್ತಿಯಿಂದ ಹೊಡೆದಿದ್ದಾರೆ. ಇದರ ಪರಿಣಾಮ ಮೊಬೈಲ್ ಡಿಸ್ಪ್ಲೇ ಸಂಪೂರ್ಣ ಒಡೆದುಹೋಗಿದೆ. ಆರೋಪಿಗಳು ಮೊಬೈಲ್‌ನ್ನು ನೀರಿಗೆ ಹಾಕಿದ ವಿಚಾರ ಬೆಳಗ್ಗೆ 5.30ರ ವೇಳೆಗೆ ಮನೆಯವರ ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ತೆಂಗಿನಕಾಯಿ ಕೀಳುವ ಸಲಕರಣೆ ಬಳಕೆ:
ಗುರುಪ್ರಸಾದ್ ರೈಯವರ ಮನೆ ಹಂಚಿನ ಛಾವಣಿಯದ್ದಾಗಿದ್ದು ಹಳೆಯ ಕಾಲದ ಮನೆ. ಹೀಗಾಗಿ ಬಾಗಿಲುಗಳು ಕೂಡ ಅಷ್ಟೇನೂ ಗಟ್ಟಿಮುಟ್ಟಾಗಿರಲಿಲ್ಲ. ಹಿಂಬದಿಯ ಬಾಗಿಲು ಗಟ್ಟಿಯಿದ್ದರೂ ಸಣ್ಣ ಚಿಲಕವಷ್ಟೇ ಇತ್ತು. ಇದನ್ನು ಮುರಿಯಲು ದರೋಡೆಕೋರರ ತಂಡ ಹಟ್ಟಿಯಲ್ಲಿ ಇಟ್ಟಿದ್ದ ತೆಂಗಿನಕಾಯಿ ಕೀಳುವ ಸಲಕರಣೆಯನ್ನು ಬಳಸಿರುವುದು ಗಮನಕ್ಕೆ ಬಂದಿದೆ. ಇದನ್ನು ಬಾಗಿಲು ಮತ್ತು ದಾರಂದದ ಸಂದಿಗೆ ತೂರಿಸಿ ಎಳೆದಿರುವ ಖದೀಮರು, ಇದರ ಮೂಲಕ ಒಳಭಾಗದ ಚಿಲಕವನ್ನು ಮುರಿದಿದ್ದಾರೆ. ಇದರಿಂದಾಗಿ ಬಾಗಿಲಿನ ಸಣ್ಣ ಭಾಗ ಕತ್ತರಿಸಿಹೋಗಿರುವುದು ಕಂಡುಬಂದಿದೆ.

ಕನ್ನಡ-ತುಳು ಮಾತನಾಡುತ್ತಿದ್ದರು:
ಬಂದ ದರೋಡೆಕೋರರ ತಂಡದಲ್ಲಿದ್ದವರ ಪೈಕಿ ಕೆಲವರು ತುಳು ಮಾತನಾಡುತ್ತಿದ್ದರು. ಇನ್ನು ಕೆಲವರು ಕನ್ನಡ ಭಾಷೆ ಮಾತನಾಡುತ್ತಿದ್ದರು. ಇನ್ನು ಕೆಲವರು ಯಾವ ಭಾಷೆ ಮಾತನಾಡುತ್ತಿದ್ದರು ಎನ್ನುವುದು ಅರ್ಥವಾಗುತ್ತಿರಲಿಲ್ಲ ಎನ್ನುವ ಮಾತನ್ನು ಮನೆಮಂದಿ ಹೇಳಿದ್ದಾರೆ.

ಇಂಚಿಂಚೂ ಜಾಲಾಡಿರುವ ಕಳ್ಳರು:
ದರೋಡೆಕೋರರ ತಂಡ ಮನೆಯ ಇಂಚಿಂಚೂ ಬಿಡದೆ ಜಾಲಾಡಿದ್ದಾರೆ. ಗೋಡೆಯಲ್ಲಿ ನೇತುಹಾಕಿದ್ದ ದೇವರ ಫೋಟೋಗಳನ್ನೂ ಬಿಡದೆ ಹುಡುಕಾಟ ನಡೆಸಿದ್ದಾರೆ. ಬಾತ್‌ರೂಮ್, ಸ್ನಾನಗೃಹ ಎಲ್ಲದಕ್ಕೂ ಹೋಗಿ ಹುಡುಕಾಡಿದ್ದಾರೆ. ವಾಷಿಂಗ್ ಮೆಷಿನ್‌ನ ಮುಚ್ಚಳವನ್ನೂ ತೆಗೆದುನೋಡಿದ್ದಾರೆ. ಕೊಟ್ಟಿಗೆಯಲ್ಲಿ ಅಡಿಕೆ ಚೀಲಗಳನ್ನು ಸಂಗ್ರಹಿಸಿಟಿದ್ದ ಕೊಠಡಿಗೆ ಬೀಗ ಹಾಕಿದ್ದು, ಅಲ್ಲಿನ ಕೀ ಸಿಗದೇ ಇದ್ದಾಗ ಕೊಟ್ಟಿಗೆಯ ಗೋಡೆ ಏರಿ ಅಡಿಕೆ ತುಂಬಿಸಿಟ್ಟಿದ್ದ ಕೋಣೆಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಗೋಲ್ಡ್ ಬೋಡು, ಮನಿ ಬೋಡು’ ಎನ್ನುತ್ತಿದ್ದರು:
ಮನೆಯೊಳಗೆ ಬಂದು ಕಸ್ತೂರಿ ಹಾಗೂ ಗುರುಪ್ರಸಾದ್ ರೈಯವರನ್ನು ಬೆದರಿಸಿದ್ದ ತಂಡವು ಮನೆಯನ್ನಿಡೀ ಜಾಲಾಡಿ ಹುಡುಕಾಡಿತ್ತು. ಎಲ್ಲದರ ಬಗ್ಗೆ ತಿಳಿದುಕೊಂಡು ಅವುಗಳನ್ನು ಪಡೆದುಕೊಂಡರೂ ಇನ್ನೂ ಇದೆ, ಪಾತ್ರಗಳು ಇನ್ನೂ ಇವೆ, ಬಾಕ್ಸ್‌ಗಳು ಇವೆ, ಚಿನ್ನ ಇನ್ನೂ ಇದೆ, ಎಲ್ಲವನ್ನೂ ಕೊಡಿ ಎಂದು ಹೇಳಿ ಬೆದರಿಸುತ್ತಿದ್ದರು ಎಂದು ಕಸ್ತೂರಿ ರೈಯವರು ಮಾಹಿತಿ ನೀಡಿದ್ದಾರೆ.


ಗೊತ್ತಿದ್ದವರೇ ಮಾಡಿದ ಕೃತ್ಯ?!:
ಮನೆಯ ಬಗ್ಗೆ ಚೆನ್ನಾಗಿ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಬಗ್ಗೆ ಗೊತ್ತಿರುವವರೇ ಸುಳಿವು ನೀಡಿರುವ ಸಂಶಯವಿದೆ. ಇಲ್ಲದಿದ್ದರೆ ಅಷ್ಟೊಂದು ಸರಾಗವಾಗಿ ಅವರು ಮನೆಯೊಳಗೆ ಬರಲು ಸಾಧ್ಯವಿರಲಿಲ್ಲ. ಮಗ ಮಲಗಿರುವಲ್ಲೇ ಬೀಗದ ಕೀ ಇದೆ ಎಂದು ಹೊರಗಡೆಯಿಂದ ಬಂದವರಿಗೆ ಹೇಗೆ ಗೊತ್ತಾಗುತ್ತದೆ? ತಿಳಿದಿರುವವರೇ ಮಾಡಿರುವ ಕೃತ್ಯ ಎಂದು ಕಸ್ತೂರಿಯವರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಿವಿಯೋಲೆ ಬಿಟ್ಟುಬಿಟ್ಟರು..!:
ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ದೋಚಿದ ಡಕಾಯಿತರು ಕಸ್ತೂರಿಯವರ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಓರ್ವ ಡಕಾಯಿತ ಅದು ಬೇಡ ಎಂದು ಹೇಳಿದ್ದರೆ ಇನ್ನೊಬ್ಬ ಬೇಕು ಎಂದನಂತೆ. ಇನ್ನೊಬ್ಬ ಒಂದು ಇರಲಿ, ಒಂದು ತೆಗೆದುಕೊಳ್ಳೋಣ ಎಂದು ಹೇಳಿದ್ದನಂತೆ. ಕೊನೆಗೆ ಅವರೊಳಗೆ ಚರ್ಚೆ ನಡೆದು, ಬೇಡ ಎಂದು ಎರಡೂ ಕಿವಿಯೋಲೆಗಳನ್ನು ಮುಟ್ಟದೆ ಹೋಗಿದ್ದಾರೆ ಎನ್ನಲಾಗಿದೆ.


ಕುಡಿಯಲು ನೀರು ಕೊಟ್ಟರು:
ದರೋಡೆಕೋರರ ನಡೆ ಬಹಳಷ್ಟು ವಿಚಿತ್ರವಾಗಿ ಕಂಡುಬಂದಿದೆ. ದರೋಡೆಕೋರರ ವಶದಲ್ಲಿದ್ದ ಕಸ್ತೂರಿಯವರಿಗೆ ಭಯದಿಂದಾಗಿ ಗಂಟಲ ಪಸೆ ಒಣಗಿದಂತಾಗಿತ್ತು. ಕಪಾಟಿನ ಕೀ ಕೊಡಲೆಂದು ನಾನು ಎದ್ದಾಗ ನಾನು ನೀರು ಕುಡಿಯಬೇಕು ಎಂದು ಹೇಳಿದ್ದೆ. ಆಗ ಅವರೇ ಪಾತ್ರೆಯಲ್ಲಿ ತಂದು ನೀರು ಕೊಟ್ಟರು. ಬಳಿಕ ಮಂಚದಲ್ಲಿ ಕೂರಿಸಿದ್ದು, ಅಲ್ಲಿಗೂ ನೀರು ತಂದು ಕೊಟ್ಟರು ಎಂದು ಕಸ್ತೂರಿಯವರು ನೀಡಿರುವ ಮಾಹಿತಿ ಅಚ್ಚರಿ ಮೂಡಿಸಿದೆ.



ಹೋಗುವಾಗ ಕಾಲು ಹಿಡಿದು ಹೋದರು..!:
ದರೋಡೆಕೋರರು ತಮ್ಮ ಕೆಲಸ ಮುಗಿಸಿ ಹೋಗುವಾಗ ಕಸ್ತೂರಿಯವರ ಹಾಗೂ ಗುರುಪ್ರಸಾದ್ ರೈಯವರ ಕಾಲು ಹಿಡಿದು, ಬರುತ್ತೇವೆ ಎಂದು ಹೇಳಿಹೋಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಎರಡು ಬಾರಿ ನನ್ನ ಹಾಗೂ ಒಂದು ಬಾರಿ ಗುರುಪ್ರಸಾದ್ ಅವರ ಕಾಲು ಹಿಡಿದು ನಾವು ಬರುತ್ತೇವೆ ಎಂದು ಹೇಳಿದರು. ಇದನ್ನು ನೋಡುವಾಗ ಯಾರೋ ಮನೆಯಲ್ಲಿ ಊಟ ಮಾಡಿದ ಋಣ ಇದ್ದವರೇ ಆಗಿರಬೇಕೆಂಬ ಸಂಶಯ ಮೂಡುತ್ತಿದೆ ಎಂದು ಹೇಳಿದ್ದಾರೆ ಕಸ್ತೂರಿಯವರು.


ಅಡ್ಡ ಬಿದ್ದ ಕಪಾಟನ್ನು ನೇರಮಾಡಿದ್ರು:
ಡಕಾಯಿತರ ತಂಡವು ಕಪಾಟನ್ನು ಒಡೆಯಲು ಪ್ರಯತ್ನಿಸಿ ಅದನ್ನು ನೆಲಕ್ಕೆ ಬೀಳಿಸಿತ್ತು. ಅದು ಬಾಗಿಲಿಗೆ ಅಡ್ಡವಾಗಿ ಬಿದ್ದಿತ್ತು. ಇವರಿಂದ ಕೀ ಪಡೆದು ಕಪಾಟನ್ನು ತೆರೆದು ಚಿನ್ನಾಭರಣ ದೋಚಿದ ಬಳಿಕ ಅದನ್ನು ಹಾಗೆಯೇ ಬಿಟ್ಟಿದ್ದರು. ದರೋಡೆಕೋರರು ಹೋಗುವಾಗ ಅದನ್ನು ನೇರ ಮಾಡಿಟ್ಟುಬಿಡಿ, ಇಲ್ಲಿ ಜನವಿಲ್ಲ, ನಮಗೆ ಒಳಗೆ ಹೋಗಬೇಕಲ್ವಾ ಎಂದು ಅವರಲ್ಲಿ ಕಸ್ತೂರಿಯವರು ತುಳುವಿನಲ್ಲಿ ಕೇಳಿಕೊಂಡಾಗ ಅದಕ್ಕೆ ಸ್ಪಂದಿಸಿ ಅಡ್ಡಬಿದ್ದ ಕಪಾಟನ್ನು ನೇರ ನಿಲ್ಲಿಸಿ ಹೋಗಿದ್ದಾರೆ ಎಂದು ಕಸ್ತೂರಿಯವರು ಮಾಹಿತಿ ನೀಡಿದ್ದಾರೆ.


ಬೈಕ್‌ನ ಪೆಟ್ರೋಲ್ ಖಾಲಿ ಮಾಡಿದ್ರು:
ಎಲ್ಲಾ ಹಂತದಲ್ಲೂ ದರೋಡೆಕೋರರು ಚಾಲಾಕಿತನ ತೋರಿರುವುದು ಬೆಳಕಿಗೆ ಬಂದಿದೆ. ತಮ್ಮ ಕೃತ್ಯ ಮುಗಿಸಿ ಹೊರಡುವ ವೇಳೆಗೆ ದರೋಡೆಕೋರರು ಮನೆಯಂಗಳದಲ್ಲಿ ನಿಲ್ಲಿಸಿದ್ದ ಗುರುಪ್ರಸಾದ್ ರೈಯವರ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕಿನ ಕೀಯನ್ನು ಹೊತ್ತೊಯ್ದಿದ್ದಾರೆ. ಬೈಕ್‌ನ ಟ್ಯಾಂಕ್‌ನಲ್ಲಿದ್ದ ಪೆಟ್ರೋಲ್‌ನ್ನು ಖಾಲಿ ಮಾಡಿದ್ದಾರೆ. ಜೊತೆಗೆ ಸ್ಪಾರ್ಕ್ ಪ್ಲಗ್‌ನ್ನು ಕಿತ್ತೆಸೆದಿದ್ದಾರೆ. ಈ ಮೂಲಕ ಮನೆಯವರು ಯಾವುದೇ ರೀತಿಯಲ್ಲಿ ತಮ್ಮನ್ನು ಹಿಂಬಾಲಿಸದಂತೆ, ಯಾರಿಗೂ ಮಾಹಿತಿ ನೀಡಲು ಸಾಧ್ಯವಾಗದಂತೆ ಮಾಡಿದ್ದಾರೆ.

ಪಕ್ಕದ ಮನೆಗೆ ಹೋಗಿ ಪೊಲೀಸರಿಗೆ ಕರೆ:
ಮನೆಯಿಂದ ಹೊರಗೆ ಸಂಪರ್ಕ ಸಾಧಿಸುವ ಎಲ್ಲಾ ಸಾಧ್ಯತೆಗಳನ್ನು ನಾಶಮಾಡಿದ್ದ ದರೋಡೆಕೋರರು ರಾತ್ರಿ 2 ಗಂಟೆಯಿಂದ ಮುಂಜಾನೆ 4.30ರವರೆಗೂ ಸಾವಕಾಶವಾಗಿ ಮನೆಯನ್ನು ಜಾಲಾಡಿದ್ದಾರೆ. ಇನ್ನು ಘಟನೆಯ ಬಳಿಕ ಆಘಾತಗೊಂಡಿದ್ದ ಗುರುಪ್ರಸಾದ್ ರೈಯವರು ಬೆಳಗ್ಗೆ ಸುಮಾರು 6.30ರ ವೇಳೆಗೆ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮನೆಗೆ ಹೋಗಿ, ಅಲ್ಲಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ತನಿಖೆ ಆರಂಭಿಸಿದ್ದಾರೆ.


ಐಜಿಪಿ ಭೇಟಿ:
ಘಟನೆಯ ಬಗ್ಗೆ ಮಾಹಿತಿ ಪಡೆದ ಈಶ್ವರಮಂಗಲ ಹೊರಠಾಣೆ ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಜೊತೆಗೆ ಶ್ವಾನದಳ, ಬೆರಳಚ್ಚು ತಜ್ಞರು, ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಸಿಬ್ಬಂದಿಗಳು ಕೂಡ ಆಗಮಿಸಿ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್ಪಿ ಧರ್ಮಪಾಲ್, ಪುತ್ತೂರು ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್, ಪುತ್ತೂರು ಗ್ರಾಮಾಂತರ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ರವಿ ಬಿ.ಎಸ್., ಎಸ್‌ಐ ಧನಂಜಯ್, ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ಚಂದ್ರಶೇಖರ ಸಹಿತ ಸಿಬ್ಬಂದಿ ಸಹಕರಿಸಿದರು. ಜೊತೆಗೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಅವರು ಭೇಟಿ ನೀಡಿ ತನಿಖೆಯ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.


ಶ್ವಾನದಳ ತಪಾಸಣೆ:
ಶ್ವಾನದಳ ಸ್ಥಳಕ್ಕೆ ಬಂದಿದ್ದು ಮನೆಯ ಮುಖ್ಯ ದ್ವಾರದ ಮೂಲಕ ಶ್ವಾನ ಹೊರಬಂದು ಮನೆಯ ಪಕ್ಕದಲ್ಲಿರುವ ಅಡಕೆ ಒಣಗಿಸುವ ಸೋಲಾರ್ ಕೊಠಡಿಯ ಪಕ್ಕ ತಡಕಾಡಿ ರಸ್ತೆಯ ಮೂಲಕ ಗುಡ್ಡದ ಕಡೆಗೆ ಓಡಿದೆ.


ಕಾಂಗ್ರೆಸ್ ಮುಖಂಡರ ಭೇಟಿ:
ಕಳ್ಳತನ ನಡೆದ ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯ ಗುರುಪ್ರಸಾದ್ ರೈಯವರ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ವಿಶ್ವನಾಥ ರೈ, ಪ್ರಮುಖರಾದ ಕೃಷ್ಣಪ್ರಸಾದ್ ಆಳ್ವ ಶಕೂರ್ ಹಾಜಿ, ಶಶಿಕಿರಣ್ ರೈ, ಮಹಾಲಿಂಗ ನಾಯ್ಕ, ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮೊದಲಾದವರು ಭೇಟಿ ನೀಡಿದರು.


ತನಿಖೆಗೆ ಪ್ರತ್ಯೇಕ ತಂಡ ರಚನೆ
ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ಮಾಡಲಾಗಿದೆ. ಪ್ರಕರಣದ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣದ ತನಿಖೆಗೆ ಪ್ರತ್ಯೇಕವಾದ ತನಿಖಾ ತಂಡ ರಚಿಸಿ ತನಿಖೆ ಮಾಡುತ್ತೇವೆ. ಆದಷ್ಟು ಶೀಘ್ರ ದರೋಡೆ ಕೋರರನ್ನು ಬಂಧಿಸುತ್ತೇವೆ.”

-ರಿಷ್ಯಂತ್, ಎಸ್ಪಿ, ದ.ಕ. ಜಿಲ್ಲೆ

ಮನೆಯ ಬಗ್ಗೆ ಚೆನ್ನಾಗಿ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಬಗ್ಗೆ ಗೊತ್ತಿರುವವರೇ ಸುಳಿವು ನೀಡಿರುವ ಸಂಶಯವಿದೆ. ಇಲ್ಲದಿದ್ದರೆ ಅಷ್ಟೊಂದು ಸರಾಗವಾಗಿ ಅವರು ಮನೆಯೊಳಗೆ ಬರಲು ಸಾಧ್ಯವಿರಲಿಲ್ಲ. ಮಗ ಮಲಗಿರುವಲ್ಲೇ ಬೀಗದ ಕೀ ಇದೆ ಎಂದು ಹೊರಗಡೆಯಿಂದ ಬಂದವರಿಗೆ ಹೇಗೆ ಗೊತ್ತಾಗುತ್ತದೆ ? ತಿಳಿದಿರುವವರೇ ಮಾಡಿರುವ ಕೃತ್ಯ ಎನ್ನುವ ಸಂಶಯ ಮೂಡುತ್ತಿದೆ. ”ಕಸ್ತೂರಿ, ಗುರುಪ್ರಸಾದ್ ರೈಯವರ ತಾಯಿ

“ನನ್ನ ಕೈಯನ್ನು ಹಗ್ಗದಿಂದ ಕಟ್ಟಿದ್ದರು. ತಾಯಿಯ ಕುತ್ತಿಗೆಗೆ ಮಾರಕಾಸ್ತ್ರ ಹಿಡಿದು ದರೋಡೆ ಮಾಡಿದರು. ಮನೆಯಲ್ಲಿ ನಾಯಿಯೊಂದಿದ್ದು ಅದು ದರೋಡೆಕೋರರು ಬಂದ ಸಂದರ್ಭ ಓಡಿಹೋಗಿತ್ತು. ಶಬ್ದವಾದ ಕೂಡಲೇ ಎದ್ದುಬಂದಾಗ ದರೋಡೆಕೋರರು ಮನೆಯೊಳಗೆ ನುಗ್ಗಿಯಾಗಿತ್ತು. ಮತ್ತೆ ನಮ್ಮನ್ನು ಕಟ್ಟಿ ದರೋಡೆ ಮಾಡಿದರು. ಮೊಬೈಲ್‌ನ್ನು ಪುಡಿಮಾಡಿದ್ದಾರೆ. ಅವರ ಕೈಯಲ್ಲಿ ಚೂರಿ, ರಾಡ್, ಕತ್ತಿ ಮೊದಲಾದ ಮಾರಕಾಸ್ತ್ರಗಳು ಇದ್ದವು. ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು. ಪ್ರೊಫೆಷನಲ್ ತಂಡದ ಕೃತ್ಯ ಎನಿಸುತ್ತದೆ. ೬ ಗಂಟೆ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, 7 ಗಂಟೆ ಸುಮಾರಿಗೆ ಪೊಲೀಸರು ಬಂದಿದ್ದಾರೆ.”

-ಗುರುಪ್ರಸಾದ್ ರೈ,


ಮನೆಯವರು ಪ್ರೊಫೆಷನಲ್ ಟೀಂನ ಕೃತ್ಯ
ದರೋಡೆಕೋರರ ತಂಡ ಕೈಚಳಕ ತೋರಿರುವುದನ್ನು ನೋಡಿದರೆ ಇದು ಪಕ್ಕಾ ಪ್ರೊಫೆಷನಲ್ ಟೀಮ್ ಮಾಡಿರುವ ಕೃತ್ಯದಂತಿದೆ. ದರೋಡೆಕೋರರು ಎಲ್ಲರೂ ಮುಖಕ್ಕೆ ಮುಸುಕು ಹಾಕಿಕೊಂಡು ಬಂದಿದ್ದರು. ಐದು ಮಂದಿ ಮನೆಯೊಳಗೆ ಸೊತ್ತುಗಳನ್ನು ದೋಚುವುದರಲ್ಲಿ ತೊಡಗಿದ್ದರೆ ಇಬ್ಬರು ಮನೆಯ ಹೊರಗಡೆ ಇದ್ದರು. ಇನ್ನುಳಿದವರು ವಾಹನದ ಜೊತೆ ಇದ್ದರು ಎನ್ನುವ ಸಂಶಯ ವ್ಯಕ್ತವಾಗಿದೆ. ಮನೆಯೊಳಗೆ ಬಂದ ಕೂಡಲೇ ಮೊಬೈಲ್ ಫೋನ್‌ಗಳನ್ನು ನೀರಿಗೆ ಹಾಕಿ ನಿಷ್ಕ್ರಿಯಗೊಳಿಸಿರುವುದು, ಮಾರಕಾಸ್ತ್ರ ಹಿಡಿದು ಬೆದರಿಸಿರುವುದು, ಬೈಕ್‌ನ ಪೆಟ್ರೋಲ್ ಟ್ಯಾಂಕ್ ಖಾಲಿ ಮಾಡಿ, ಸ್ಪಾರ್ಕ್ ಪ್ಲಗ್ ಕಿತ್ತೆಸೆದಿರುವುದು ಎಲ್ಲವನ್ನೂ ನೋಡುವಾಗ ದರೋಡೆಯಲ್ಲಿ ಪರಿಣತಿ ಪಡೆದ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here