ವಿಶ್ವಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆ- ಸೆ.9: ಪುತ್ತೂರಿನಲ್ಲಿ 13ನೇ ವರ್ಷದ ಮೊಸರು ಕುಡಿಕೆ – ಶೋಭಾಯಾತ್ರೆ

0

ಪುತ್ತೂರು: ವಿಶ್ವಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಸೆ.9ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 13ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಪುತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ.ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಬೆಳಗ್ಗಿನಿಂದಲೇ ವಿವಿಧ ಆಟೋಟ ಸ್ಪರ್ಧೆ ನಡೆಯಲಿದ್ದು, ಸಂಜೆ ವೈಭವದ ಶೋಭಾಯಾತ್ರೆಯೊಂದಿಗೆ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಸಭೆಯು ನಡೆಯಲಿದೆ.


ಶೋಭಾಯಾತ್ರೆ ಉದ್ಘಾಟನೆ:
ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯನ್ನು ಡಾ. ಎಂ.ಕೆ.ಪ್ರಸಾದ್ ಅವರು ಉದ್ಘಾಟಿಸಲಿದ್ದಾರೆ. ಬಜರಂಗದಳ ಮಂಗಳೂರು ವಿಭಾಗದ ಸಹ ಸಂಯೋಜಕ ಪುನಿತ್ ಅತ್ತಾವರ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ದೊರಕಲಿದೆ. ಶೋಭಾಯಾತ್ರೆಯು ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಂಗೊಂಡು ಮುಖ್ಯರಸ್ತೆಯಾಗಿ ಅಂಚೆಕಚೇರಿ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಸಭಾ ಕಾರ್ಯಕ್ರಮ ಮುಗಿದ ಬಳಿಕ ಅದೇ ರಸ್ತೆಯಾಗಿ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಾದು ಕಲ್ಲಾರೆಯ ತನಕ ಸಾಗಿ ಅಲ್ಲಿಂದ ಹಿಂದಿರುಗಿ ಅರುಣಾ ಚಿತ್ರಮಂದಿರ ಬಳಿಯಿಂದ ಎಪಿಎಂಸಿ ರಸ್ತೆಯ ಮೂಲಕ ಆದರ್ಶ ಆಸ್ಪತ್ರೆಯ ಬಳಿಯಿಂದ ತೆರಳಿ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಸಮಾಪನೆಗೊಳ್ಳಲಿದೆ.


ಧಾರ್ಮಿಕ ಸಭೆ:
ಸಂಜೆ ಬೊಳುವಾರಿನಿಂದ ಹೊರಟ ಶೋಭಾಯಾತ್ರೆಯು ದೇವಳದ ಗದ್ದೆಗೆ ಬಂದ ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ವಿಶ್ವಹಿಂದೂ ಪರಿಷದ್‌ನ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಶ್ವಹಿಂದು ಪರಿಷದ್ ಪುತ್ತೂರು ಜಿಲ್ಲೆ ಕಾರ್ಯದರ್ಶಿ ನವೀನ್ ನೆರಿಯ, ನ್ಯಾಯವಾದಿ ಅರುಣ್‌ಶ್ಯಾಮ್, ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೆಸ್ಕಾಂ ಮಾಜಿ ನಿರ್ದೇಶಕರಾಗಿರುವ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಟಿ ತಿಳಿಸಿದ್ದಾರೆ.

ಕಬಡ್ಡಿ ಪಂದ್ಯಾಟ, ಕೃಷ್ಣವೇಷ ಸ್ಪರ್ಧೆ ಯಶಸ್ವಿ:
ಪುತ್ತೂರು ಮೊಸರುಕುಡಿಕೆ ಉತ್ಸವದ ಅಂಗವಾಗಿ ಈಗಾಗಲೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ದಿ| ಟಿ.ರಾಧಾಕೃಷ್ಣ ಭಟ್ ಅವರ ಸ್ಮರಣಾರ್ಥ ಹೊನಲು ಬೆಳಕಿನ ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆದಿದೆ. ಸೆ.3ಕ್ಕೆ ದಿ| ನಿತಿನ್ ಕುಮಾರ್ ನಿಡ್ಪಳ್ಳಿ ಅವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ ನಡೆದಿದೆ.

ಸೆ.9ಕ್ಕೆ ವಿವಿಧ ಸ್ಪರ್ಧೆಗಳು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ ಗಂಟೆ 10 ರಿಂದ 11 ವರ್ಷದಿಂದ 16 ವರ್ಷದ ಒಳಗಿನ ಮಕ್ಕಳಿಗೆ ಭಾರತಮಾತೆಯ ಚಿತ್ರಬಿಡಿಸುವ, ಜಾನಪದ ಗೀತೆ, ಸ್ಮರಣಶಕ್ತಿ, ಅಡ್ಡಕಂಬ, ಗುಂಡೆಸೆತ, ಮಡಿಕೆ ಒಡೆಯುವುದು, ದೇಶಭಕ್ತಿಗೀತೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ಸಂಗೀತ ಸ್ಪರ್ಧೆ, ರಂಗವಲ್ಲಿ, ಗುಂಡೆಸೆತ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಉದ್ದಕಂಬ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here