ನೆಲ್ಯಾಡಿ: ಬಂಟರ ಸಂಘದಿಂದ ಸೋಣದ ಪೊರ್ಲು, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ-ನೂತನ ಸಮಿತಿಯ ಪದ ಪ್ರಧಾನ

0

ನೆಲ್ಯಾಡಿ: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇದರ ಆಶ್ರಯದಲ್ಲಿ ಸೋಣದ ಪೊರ್ಲು-2023, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನೂತನ ಸಮಿತಿಯ ಪದ ಪ್ರಧಾನ ಸಮಾರಂಭ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ಅವರ ಅಧ್ಯಕ್ಷತೆಯಲ್ಲಿ ಸೆ.9ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಪ್ರಧಾನ ಕಚೇರಿಯ ಕಲ್ಪವೃಕ್ಷ ಸೌಹಾರ್ದ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.


ಸಾಧಕರನ್ನು ಸನ್ಮಾನಿಸಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ತಾಲೂಕು ಬಂಟರ ಸಂಘದ ಮಾದರಿಯಲ್ಲಿಯೇ ನೆಲ್ಯಾಡಿ ವಲಯ ಬಂಟರ ಸಂಘವೂ ಕಾರ್ಯಕ್ರಮ ಆಯೋಜನೆ ಮಾಡಿದೆ. ತಾಲೂಕು ಬಂಟರ ಸಂಘದಿಂದ ನೆಲ್ಯಾಡಿ ವಲಯಕ್ಕೆ ಮನೆ ನಿರ್ಮಾಣ ಸೇರಿದಂತೆ ಇತರೇ ಹಲವು ರೀತಿಯ ನೆರವು ನೀಡಲಾಗಿದೆ. ಇನ್ನಷ್ಟೂ ಉತ್ತಮ ಕಾರ್ಯಗಳ ಮೂಲಕ ನೆಲ್ಯಾಡಿ ವಲಯ ಬಂಟರ ಸಂಘವು ಜಾಗತಿಕ ವಲಯ ಬಂಟರ ಸಂಘದಲ್ಲಿ ಗುರುತಿಸಿಕೊಳ್ಳಲಿ. ಸ್ವಂತ ನಿವೇಶನ, ಸಭಾಭವನ ನಿರ್ಮಾಣದ ಕನಸು ಈಡೇರಲಿ ಎಂದರು.
ಅತಿಥಿಯಾಗಿದ್ದ ಬಂಟರ ಯಾನೆ ನಾಡವರ ಮಾತೃಸಂಘ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಸುಸಂಸ್ಕೃತರನ್ನಾಗಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ನೆಲ್ಯಾಡಿ ವಲಯ ಬಂಟರ ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ. ನಿತ್ಯಾನಂದ ಶೆಟ್ಟಿಯವರ ನೇತೃತ್ವದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘವೂ ಯಶಸ್ವಿಯಾಗಿ ಮುನ್ನಡೆದಿದೆ. ಇದು ಮುಂದೆಯೂ ಮುಂದುವರಿಯಲಿ ಎಂದರು. ಇನ್ನೋರ್ವ ಅತಿಥಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಬಂಟ ಸಮುದಾಯಕ್ಕೆ ದೈವದತ್ತವಾಗಿ ನಾಯಕತ್ವ ಗುಣ ಬೆಳೆದುಬಂದಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು. ನೆಲ್ಯಾಡಿ ವಲಯದಲ್ಲಿ ಬಂಟರ ಸಂಖ್ಯೆ ಸೀಮಿತವಾಗಿದ್ದರೂ ಪ್ರತಿ ವರ್ಷವೂ ಉತ್ತಮ ಕಾರ್ಯಗಳ ಮೂಲಕ ಶ್ಲಾಘನೆಗೆ ಪಾತ್ರವಾಗುತ್ತಿದೆ ಎಂದರು.


ಆಶಯ ಮಾತುಗಳನ್ನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈಯವರು, ತುಳುವರ ಪ್ರತಿ ತಿಂಗಳುಗಳಿಗೆ ಅದರದೇ ಆದ ವಿಶೇಷತೆ ಇದೆ. ಹಬ್ಬದ ಆಚರಣೆಯ ವಿಧಾನ ಬದಲಾದಂತೆ ತಿನಸುಗಳೂ ಬದಲಾಗುತ್ತವೆ. ಇವು ವೈಜ್ಞಾನಿಕ ಆಹಾರ ಪದ್ಧತಿಯನ್ನು ಸೂಚಿಸುತ್ತದೆ. ಆಚರಣೆಗಳು ಯಾಂತ್ರಿಕೃತ ಆಗಿರಬಾರದು. ಅದರ ಮೂಲ ಅರ್ಥೈಸಿಕೊಂಡು ಆಚರಣೆ ನಡೆಯಬೇಕು ಎಂದರು. ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಜನ್ಮ ಫೌಂಡೇಶನ್ ಟ್ರಸ್ಟ್‌ನ ಹರ್ಷ ಕುಮಾರ್ ರೈ ಮಾಡಾವು ಅವರು, ನೆಲ್ಯಾಡಿ ವಲಯ ಬಂಟರ ಸಂಘವು ಸಾಮಾಜಿಕ ಚಟುವಟಿಕೆಗಳೊಂದಿಗೆ ಬಂಟ ಸಮುದಾಯವನ್ನು ಬಲಪಡಿಸಲು ಪ್ರತಿ ವರ್ಷವೂ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾರ್ಥಿ ವೇತನ ವಿತರಣೆ, ಸಾಧಕರ ಸನ್ಮಾನ ನಿರಂತರವಾಗಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ನೆಲ್ಯಾಡಿ ವಲಯ ಬಂಟರ ಸಂಘದ 2023-26ನೇ ಸಾಲಿನ ನೂತನ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು ಮಾತನಾಡಿ, ಮುಂದಿನ ಯೋಜನೆಗಳಿಗೆ ತಾಲೂಕು ಬಂಟರ ಸಂಘದ ಹಾಗೂ ನೆಲ್ಯಾಡಿ ವಲಯದ ಎಲ್ಲಾ ಬಂಟ ಬಾಂಧವರು ಸಹಕಾರ ನೀಡಬೇಕೆಂದು ಹೇಳಿದರು. ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಜಯಪ್ರಕಾಶ್ ರೈ ನೂಜಿ, ನೆಲ್ಯಾಡಿ ವಲಯ ಬಂಟರ ಸಂಘದ ಕಾರ್ಯದರ್ಶಿ ವಾಣಿ ಎಸ್.ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ನೆಲ್ಯಾಡಿ ವಲಯ ಬಂಟರ ಸಂಘದ 2023-26ನೇ ಸಾಲಿನ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀಮಾತ, ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋಂತಿಲ, ಕೋಶಾಧಿಕಾರಿ ಆನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರವೀಣ್ ಭಂಡಾರಿ ಪುರ, ವಿಶಾಲಾಕ್ಷಿ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ನಮಿತಾ ಶೆಟ್ಟಿ, ರಮೇಶ್ ಶೆಟ್ಟಿ ಬೀದಿ, ಭಾಸ್ಕರ ರೈ ತೋಟ, ಚಂದ್ರಶೇಖರ ಶೆಟ್ಟಿ ರಾಮನಗರ, ಜಗನ್ನಾಥ ರೈ, ಆನಂದ ಶೆಟ್ಟಿ ಇಚ್ಲಂಪಾಡಿ, ತುಕರಾಮ ರೈ ಹೊಸಮನೆ, ರವಿಪ್ರಸಾದ್ ಶೆಟ್ಟಿ ರಾಮನಗರ, ರಾಮಚಂದ್ರ ಶೆಟ್ಟಿ ಮತ್ತಿತರರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಕಾರ್ಯದರ್ಶಿ ವಾಣಿ ಎಸ್.ಶೆಟ್ಟಿ ವರದಿ ಮಂಡಿಸಿದರು. ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಬಲ ಶೆಟ್ಟಿ ವಂದಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು. ನಮಿತಾ ಎಸ್.ಶೆಟ್ಟಿ ಪ್ರಾರ್ಥಿಸಿದರು.
ಪುತ್ತೂರು ತಾಲೂಕು ಯುವ ಬಂಟರ ಸಂಘದ ಪದಾಧಿಕಾರಿಗಳಾದ ರವಿಪ್ರಸಾದ್ ಶೆಟ್ಟಿ, ಗಣೇಶ್ ರೈ, ರಂಜಿನಿ, ಆಲಂಕಾರು ವಲಯ ಬಂಟರ ಸಂಘದ ಪ್ರಶಾಂತ್ ರೈ ಮನವಳಿಕೆ, ರಾಧಾಕೃಷ್ಣ ರೈ ಪರಾರಿ, ಪ್ರದೀಪ್ ರೈ ಮನವಳಿಕೆ, ಚೆನ್ನಕೇಶವ ರೈ ಕುಂತೂರು, ಪ್ರಮೋದ್‌ಕುಮಾರ್ ಶೆಟ್ಟಿ, ವಿಠಲ ರೈ ಹೊಸಮಾರಡ್ಡ, ರವಿಪ್ರಸಾದ್ ಶೆಟ್ಟಿ ರಾಮನಗರ, ದಯಾಕರ ರೈ ಮುಂಡಾಳಗುತ್ತು, ಮಹಾಬಲ ಶೆಟ್ಟಿ ದೋಂತಿಲ ಮತ್ತಿತರರನ್ನು ಗುರುತಿಸಿ ಶಾಲು ಹಾಕಿ ಗೌರವಿಸಲಾಯಿತು.

ಸನ್ಮಾನ:
2023-26ನೇ ಸಾಲಿನ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನ 14ರ ವಯೋಮಾನದ ಬಾಲಕರ ವಿಭಾಗದ ಉದ್ದಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಮನೀಷ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಅತಿಥಿಗಳು ಶಾಲು. ಹಾರಾರ್ಪಣೆ, ಸ್ಮರಣಿಕೆ, ಫಲತಾಂಬೂಲ ನೀಡಿ ಗೌರವಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾಣಿ ಎಸ್.ಶೆಟ್ಟಿ ಅವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಪದ ಪ್ರಧಾನ:
ನೆಲ್ಯಾಡಿ ವಲಯ ಬಂಟರ ಸಂಘದ 2023-26ನೇ ಸಾಲಿನ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು ಅವರ ನೇತೃತ್ವದ ತಂಡಕ್ಕೆ ನಿರ್ಗಮನ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ನೇತೃತ್ವದ ತಂಡ ದಾಖಲೆ ಹಸ್ತಾಂತರಿಸುವ ಮೂಲಕ ಪದ ಪ್ರಧಾನ ಮಾಡಲಾಯಿತು.

LEAVE A REPLY

Please enter your comment!
Please enter your name here