ಕಾಮಗಾರಿಯ ಅನುದಾನಕ್ಕೆ ಬಳಸುವುದು ನಿಮ್ಮದೇ ಹಣ, ಸ್ವಂತ ಹಣದಿಂದ ಯಾರೂ ಕಾಮಗಾರಿ ನಡೆಸುವುದಿಲ್ಲ: ಅಶೋಕ್ ರೈ

0

ಪುತ್ತೂರು: ನಿಮ್ಮ ಊರಿನ ಕಾಮಗಾರಿಗೆ ಸರಕಾರದಿಂದ ಅನುದಾನ ಬಂದಿದ್ದರೆ ಅದು ನಿಮ್ಮದೇ ಹಣ. ನೀವು ಕಟ್ಟಿದ ಟ್ಯಾಕ್ಸ್ ಸೇರಿದಂತೆ ವಿವಿಧ ಮೂಲಗಳಿಂದ ನಿಮ್ಮಿಂದಲೇ ಸಂಗ್ರಹಿಸಿದ ಹಣವನ್ನು ಯಾವುದೇ ಕಾಮಗಾರಿಗೆ ಬಳಕೆ ಮಡುತ್ತಾರೆ. ಯಾವ ಜನಪ್ರತಿನಿಧಿಯೂ ಸ್ವಂತ ಹಣವನ್ನು ಕಾಮಗಾರಿಗೆ ನೀಡುತ್ತಿಲ್ಲ, ನೀಡುವುದೂ ಇಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.

ಶಾಂತಿಗೋಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಈಗ ಶಾಸಕನಾಗಿದ್ದೇನೆ, ನಿಮ್ಮೂರಿನ ಶಾಲೆಗೆ, ರಸ್ತೆಗೆ, ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತೇನೆ. ಆ ಹಣ ಎಲ್ಲವೂ ನಿಮ್ಮದೇ ಹಣ. ಅದು ಶಾಸಕನಾದ ನಾನು ಅದನ್ನು ಸರಕಾರದಿಂದ ತಂದು ನಮಗೆ ಕೊಡುತ್ತೇನೆ ವಿನಾ ನನ್ನ ಹಣವಲ್ಲ. ಆ ಕೆಲಸ ನಾನು ಮಾಡಿದ್ದೇನೆ, ನಿಮ್ಮ ಊರಿಗೆ ನಾನು ರಸ್ತೆ ಮಾಡಿದ್ದೇನೆ, ನಿಮ್ಮ ಶಾಲೆಯ ಕೊಠಡಿಗೆ ನಾನು ಅನುದಾನ ನೀಡಿದ್ದೇನೆ, ನಾನು ಸೇತುವೆ ನಿರ್ಮಾಣ ಮಾಡಿದ್ದೇನೆ ಎಂದು ಹೇಳುವ ಹಕ್ಕು ನನಗಿಲ್ಲ ಮತ್ತು ಯಾವ ಜನಪ್ರತಿನಿಧಿಗಳಿಗೂ ಇಲ್ಲ ಅದೆಲ್ಲವೂ ಆಗುವುದು ನಿಮ್ಮದೇ ಹಣದಿಂದ, ಎಲ್ಲವೂ ನಿರ್ಮಾಣವಾಗುವುದು ನಿಮ್ಮದೇ ಹಣದಿಂದ ಎಂದು ಶಾಸಕರು ಹೇಳಿದರು. ನಿಮ್ಮ ಊರಿನ ಬೇಡಿಕೆ, ಸಮಸ್ಯೆಗಳು ಏನೆಂಬುದು ನಿಮಗೆ ಗೊತ್ತಿರುತ್ತದೆ. ಸಾರ್ವಜನಿಕರು ಬೇಡಿಕೆ ಮತ್ತು ಸಮಸ್ಯೆಗಳನ್ನು ಶಾಸಕರ ಬಳಿ ಹೇಳಿಕೊಂಡಲ್ಲಿ ಅದಕ್ಕೆ ನಾನು ಅನುದಾನವನ್ನು ಇಡುತ್ತೇನೆ. ಆ ಅನುದಾನದ ಹಣ ನಿಮ್ಮದೇ ಹಣವಾಗಿದೆ ಎಂದು ಶಾಸಕರು ಹೇಳಿದರು. ನಾನು ಮಾಡಿದ್ದೇನೆ, ನಾನು ಕಟ್ಟಿಸಿದ್ದೇನೆ ಎಂದು ಯಾವ ಜನಪ್ರತಿನಿಧಿಯೂ ಹೇಳುವಂತಿಲ್ಲ ಎಂದು ಹೇಳಿದರು.

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ:
ಬಹುತೇಕ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ ಯಾವ ಕಾರಣಕ್ಕೆ ಹೀಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇದೆ, ಶಿಕ್ಷಕರೂ ಇದ್ದಾರೆ ಉಳಿದಂತೆ ಎಲ್ಲಾ ವ್ಯವಸ್ಥೆಗಳೂ ಇದೆ ಆದರೆ ಮಕ್ಕಳ ಸಂಖ್ಯೆ ಮಾತ್ರ ತೀರಾ ಕಡಿಮೆ ಇದೆ ಎಂದು ಶಾಸಕರು ನೋವು ವ್ಯಕ್ತಪಡಿಸಿದರು. ಪೋಷಕರು ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು. ಆಂಗ್ಲ ಮಾಧ್ಯಮ ಶಿಕ್ಷಣದ ಕೊರತೆ ಇತ್ತು ಅದನ್ನು ನೀಗಿಸುವ ಕೆಲಸವನ್ನು ಸರಕಾರ ಮಾಡಲಿದೆ. ಮುಂದಿನ ವರ್ಷಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ತರಗತಿ ಆರಂಭವಾಗಲಿದೆ ಇದಕ್ಕಾಗಿ ಉತ್ತಮ ತರಬೇತಿ ಪಡೆದ ಶಿಕ್ಷಕರನ್ನು ಸರಕರ ನೇಮಿಸಲಿದೆ ಎಂದು ಹೇಳಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲು ಸ್ಕಾಲರ್ ಶಿಪ್ ನೀಡುತ್ತಿದೆ. ಮನೆ ಯಜಮಾನಿಗೆ 2000 ಕೊಡುತ್ತಿದೆ, ಕರೆಂಟ್ ಬಿಲ್ ಉಚಿತವಾಗಿ ನೀಡುತ್ತಿದೆ, ಬಡವರಿಗೆ ಅಕ್ಕಿ ಮತ್ತು ಹಣವನ್ನು ನೀಡುತ್ತಿದೆ ಇದೆಲ್ಲವೂ ಸರಕಾರ ಬಡವರಿಗಾಗಿ ಜಾರಿಗೆ ತಂದ ಯೋಜನೆಗಳು ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು. ಮಕ್ಕಳ ಶಿಕ್ಷಣದ ಕಡೆ ಹೆಚ್ಚಿನ ಒತ್ತು ಕೊಡಿ. ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸಿಕೊಡಿ ಎಂದು ಶಾಸಕರು ವಿನಂತಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಹರಿಣಾಕ್ಷಿ, ಸದಸ್ಯರಾದ ಹೊನ್ನಪ್ಪ ಕೈಂದಾಡಿ, ಸಿಆರ್‌ಪಿ ಪರಮೇಶ್ವರಿ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗೇಶ್, ಮುಖ್ಯ ಶಿಕ್ಷಕಿ ಸವಿತಾಕುಮಾರಿ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ಯೋಗೀಶ್ ಪಿ ನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ಲೀಲಾವತಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here