ಬಾಣಂತಿ, ಮಗುವಿರುವ ಮನೆಗೆ ನಾಲ್ಕು ಕಂಬ, ಟಾರ್ಪಲ್ ಆಧಾರ – ಅಡ್ಡಕಟ್ಟಿದ ಸೀರೆಯೇ ರೂಮ್- ಒಂದು ಕುಟುಂಬಕ್ಕೆ ಮನೆಯೇ ಇಲ್ಲ- ಕೈಕಾರದ ಬಾಣಬೆಟ್ಟುವಿನ ಎರಡು ಕುಟುಂಬಗಳ ಶೋಚನೀಯ ಸ್ಥಿತಿ

0

*ವಿಶೇಷ ವರದಿ:
ದಾಮೋದರ್ ದೊಂಡೋಲೆ
ಪುತ್ತೂರು:ಇದ್ದ ಮನೆ ಬಿದ್ದು ಹೋಗಿದೆ..ಈಗ ಮನೆಯಿಲ್ಲವೆನ್ನುವ ಕೊರಗು, ಜೊತೆಗೆ ಮಾನಸಿಕ ವೇದನೆಯಲ್ಲಿರುವ ಮಗಳು, ನನಗೆ ಮನೆಯಿಲ್ಲ ಅನ್ನುವ ಕೊರಗಿನ ಜೊತೆಗೆ ನಿತ್ಯದ ಯಾತನೆಯ ಬದುಕು. ಮತ್ತೊಂದು ಮನೆಗೆ ನಾಲ್ಕು ಕಂಬ ಮತ್ತು ಟಾರ್ಪಲೇ ಆಧಾರ..ಜೋರಾಗಿ ಗಾಳಿ ಮಳೆ ಬಂದ್ರೆ ಮನೆಯೇ ಹಾರಿ ಹೋದರೂ ಅಚ್ಚರಿಯಿಲ್ಲ..ಮನೆಯೊಳಗೆ ಬಾಣಂತಿ, ಪುಟ್ಟ ಕಂದ ಎಲ್ಲರೂ ಇದ್ದಾರೆ.ಆದರೆ ಮನೆಯೊಳಗೆ ನಾಲ್ಕು ಸೀರೆ ಕಟ್ಟಿ ರೂಮ್‌ನ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಮನೆಯೊಳಗೆ ವಿಷಜಂತುಗಳು ಬಂದರೂ ಅಚ್ಚರಿಯಿಲ್ಲ.ಹೀಗೊಂದು ಶೋಚನೀಯ ಪರಿಸ್ಥಿತಿಯಲ್ಲಿ ಒಳಮೊಗ್ರು ಗ್ರಾಮದ ಕೈಕಾರದ ಎರಡು ಕುಟುಂಬಗಳು ಬದುಕುತ್ತಿವೆ.

ಕೈಕಾರದ ಸಂಜೀವ, ಜಯಲಲಿತಾ ಕುಟುಂಬದವರ ಪರಿಸ್ಥಿತಿ ಶೋಚನೀಯ ಬಿದ್ದ ಮನೆ ಮರು ನಿರ್ಮಾಣವಾಗಿಲ್ಲ-ಮಾನಸಿಕ ಅಸ್ವಸ್ಥೆ ಮಗಳ ಜೊತೆ ತಾಯಿಯ ನಿತ್ಯ ನರಕ:
ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೈಕಾರದ, ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಸಂಜೀವ ಮತ್ತು ಜಯಲಲಿತಾರವರ ಕುಟುಂಬದ ಪರಿಸ್ಥಿತಿ ಶೋಚನೀಯ.ಸಂಜೀವ ಮತ್ತು ಜಯಲಲಿತಾ ಅಣ್ಣ ತಂಗಿ, ತಮ್ಮ ತಾಯಿ ಜಾಗದಲ್ಲಿ ವಾಸವಿದ್ದಾರೆ.ಇಲ್ಲಿರುವ ಮೂರು ಕುಟುಂಬಗಳ ಪೈಕಿ ಕಮಲಾ ಎಂಬವರ ಮನೆಗೆ ಅಡಿಪಾಯ ಹಾಕಲಾಗುತ್ತಿದೆ.ಜಯಲಲಿತಾರವರು ಕಮಲಾರವರ ಅಕ್ಕ,ಸಂಜೀವರವರ ತಂಗಿ.ಜಯಲಲಿತಾರವರ ಮನೆ ಕೆಲ ತಿಂಗಳುಗಳ ಹಿಂದೆ ಬಿದ್ದು ಹೋಗಿದೆ. ಆ ನಂತರ ಇವರಿಗೆ ಮನೆಯಿಲ್ಲ. ಜಯಲಲಿತಾರವರ ಮಗಳು ಮಾನಸಿಕ ಅಸ್ವಸ್ಥೆ ಬೇರೆ. ಪ್ರಾಯಕ್ಕೆ ಬಂದ ಮಗಳನ್ನು ನೋಡಿಕೊಳ್ಳಬೇಕು, ಅವಳ ಆರೋಗ್ಯದ ಸ್ಥಿತಿ ಬಗ್ಗೆ ಯೋಚಿಸಬೇಕು. ಇದೆಲ್ಲದರ ನಡುವೆ ಇರುವುದಕ್ಕೆ ಸೂರೇ ಇಲ್ಲದ ಕೊರಗು. ಜಯಲಲಿತಾರವರು ರಾತ್ರಿಯಾದರೆ ಪಕ್ಕದಲ್ಲೇ ಇರುವ ತಂಗಿಯ ಮನೆಗೆ ಮಗಳ ಜೊತೆ ಹೋಗುತ್ತಾರೆ. ಕೆಲವು ಸಲ ಗಾಳಿ, ಮಳೆ ಲೆಕ್ಕಿಸದೇ ನೀರು ಬೀಳುವ ಮನೆಯೆದುರಿನ ಸ್ಥಳದಲ್ಲೇ ನಿದ್ದೆ ಮಾಡಿದ್ದೂ ಇದೆ ಅಂತ ಮುಗ್ಧವಾಗಿ ಹೇಳುತ್ತಾರೆ.

ಬಾಣಂತಿ, ಮಗುವಿರುವ ಮನೆಗೆ 4 ಕಂಬ, ಟಾರ್ಪಲ್ ಆಧಾರ:
ಜಯಲಲಿತಾರವರ ಅಣ್ಣ ಸಂಜೀವರವರ ಮನೆಯ ಪರಿಸ್ಥಿತಿ ಶೋಚನೀಯವಾಗಿದೆ. ಮೂವರು ಮಕ್ಕಳನ್ನು ಹೊಂದಿರುವ ಸಂಜೀವರವರು ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.
ಸಂಜೀವರ ಪತ್ನಿ ವಿಧಿವಶರಾಗಿದ್ದು, ಇವರ ಮನೆಯೂ ಬಿದ್ದು ಹೋಗಿದೆ. ಮನೆ ಬಿದ್ದ ನಂತರ ನಾಲ್ಕು ಕಂಬ ಹಾಕಿ ಟಾರ್ಪಲ್‌ನಲ್ಲಿ ಮನೆ ಕಟ್ಟಿಕೊಂಡರು. ಆದರೆ ಅದೂ ಕೂಡ ಗಾಳಿಗೆ ಬಿದ್ದಿದ್ದರಿಂದ ಈಗ ಮತ್ತೆ ಕಂಬ ಹಾಕಿ, ಟಾರ್ಪಲ್ ಹೊದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ.ಸಂಜೀವರವರ ಮಗಳು ಬಾಣಂತಿ, ತನ್ನ ಪುಟ್ಟ ಮಗುವಿನ ಜೊತೆ ಇದೇ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ ಅಂದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಮನೆಯೊಳಗೆ ಜಾಗವೇ ಇಲ್ಲ-ಸೀರೆ ಅಡ್ಡ ಕಟ್ಟಿ ರೂಮ್ ಮಾಡಿಕೊಂಡ ಮನೆಯವರು: ಸಂಜೀವರವರ ಮನೆಯೊಳಗೆ ಜಾಗವೇ ಇಲ್ಲ. ಹೀಗಿರುವಾಗ ಮನೆಯೊಳಗೆ ಹಳೆಯ ನಾಲ್ಕು ಸೀರೆಗಳನ್ನು ಅಡ್ಡಕಟ್ಟಿ ಅಡುಗೆ ಕೋಣೆ, ರೂಮ್ ಮಾಡಿಕೊಂಡಿದ್ದಾರೆ.ಆದರೆ ಗೋಡೆಗಳೇ ಇಲ್ಲದ ಮನೆಯಾದ್ದರಿಂದ ಮತ್ತು ಟಾರ್ಪಲ್ ಹಳೆಯದಾಗಿದ್ದು ತೂತು ಬಿದ್ದಿರುವುದರಿಂದ ಹಾವುಗಳು ಮನೆಯೊಳಗೆ ಬಂದರೂ ಅಚ್ಚರಿಯಿಲ್ಲ.ಕೆರೆ ಹಾವು ಯಾವಾಗ್ಲೂ ಬರುತ್ತಿರುತ್ತದೆ ಅಂತ ಸಾಮಾನ್ಯವೆಂಬಂತೆ ಮನೆಯವರು ಹೇಳುತ್ತಾರೆ.

ಮನೆ ಕಟ್ಟಿಸಿಕೊಡಲು ಜಾಗದ ದಾಖಲೆಯೇ ಸಮಸ್ಯೆ: ಸಂಜೀವ, ಕಮಲಾ,ಜಯಲಲಿತಾರವರು ಬೋರ ಎಂಬವರ ಮಕ್ಕಳು.ಇವರಿಗೆ ಜಮೀನಿದೆ. ಆದರೆ ಅದು ಇವರ ಹೆಸರಿನಲ್ಲಿ ಆಗಿರುವುದಕ್ಕೆ ದಾಖಲೆಗಳಿಲ್ಲ ಅಥವಾ ಇನ್ನೂ ಕೂಡ ಆಗಿಲ್ಲ ಅನ್ನುವ ಕಾರಣಕ್ಕೆ ಮನೆ ಕಟ್ಟಿಸಿಕೊಡಲು ಸಮಸ್ಯೆ ಅಂತ ಮನೆಯವರು ಹೇಳುತ್ತಾರೆ. ಕೂಲಿ ಕೆಲಸ ಮಾಡುವ ಈ ಮನೆಯವರಿಗೆ ಕಾನೂನಿನ ಜ್ಞಾನವಿಲ್ಲ. ಜಾಗದ ದಾಖಲೆ ಪತ್ರ, ಸರ್ಕಾರದಿಂದ ಸಿಗುವ ಸೌಲಭ್ಯ ಇವೆಲ್ಲದರ ಬಗ್ಗೆಯೂ ತಿಳಿದಿಲ್ಲ. ಮನೆ ನಿರ್ಮಿಸಿಕೊಡುವಂತೆ ಅರ್ಜಿ ಕೊಟ್ಟಿದ್ದೇವೆ ಅಂತಷ್ಟೇ ಹೇಳುತ್ತಾರೆಯೇ ಹೊರತು, ಅದರ ನಂತರ ಏನ್ಮಾಡ್ಬೇಕು ಅಂದ್ರೆ ಅವರಿಗೂ ಗೊತ್ತಿಲ್ಲ. ಮಾನಸಿಕ ಅಸ್ವಸ್ಥೆಗೆ ಬರುತ್ತಿಲ್ಲ ಪೆನ್ಶನ್: ಜಯಲಲಿತಾರವರ ಮಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.ಅವರಿಗೆ ಸರ್ಕಾರದಿಂದ ಬರುವ ಪೆನ್ಶನ್ ಕೂಡಾ ಬರುತ್ತಿಲ್ಲ ಅಂತ ಸುದ್ದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜಯಲಲಿತಾ ತಿಳಿಸಿದ್ದಾರೆ. ಇದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದ್ದು, ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಾಗಿದೆ.

ನೇರವಾಗಿ ಕುಟುಂಬಕ್ಕೆ ನೆರವಾಗಿ ಅವರನ್ನು ತಲುಪಲು ಸುದ್ದಿಯ ಸಾಥ್: ಜಯಲಲಿತಾ ಮತ್ತು ಸಂಜೀವರವರ ಕುಟುಂಬಕ್ಕೆ ನೆರವಾಗುವವರು ನೇರವಾಗಿ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಾರ ಗ್ರಾಮದ ಬಾಣಬೆಟ್ಟುವಿನಲ್ಲಿರುವ ಅವರ ಮನೆಗೆ ಭೇಟಿ ನೀಡಬಹುದು. ಭೇಟಿ ಮಾಡಲು ಬಯಸುವವರು, ನೆರವಾಗಲು ಬಯಸುವವರು ಸುದ್ದಿ ಸಂಸ್ಥೆಯನ್ನು ಸಂಪರ್ಕಿಸಿದರೆ ಅವರ ಮನೆಯನ್ನು ತಲುಪಲು ಸಹಕರಿಸಲಾಗುವುದು. ಆದರೆ, ಹಣ ಸಹಾಯ ಸೇರಿದಂತೆ ಯಾವುದೇ ಸಹಾಯ ಮಾಡುವವರು `ಸುದ್ದಿ’ ಕಚೇರಿಯಲ್ಲಿ ನೀಡುವಂತಿಲ್ಲ. ನೇರವಾಗಿ ಅವರ ಮನೆಗೇ ಹೋಗಿ ನೀಡಬಹುದು.

ಬಂದು ನೋಡಿ ಹೋಗಿದ್ದಾರೆ… ಏನೂ ಮಾಡಿಲ್ಲ
ರಾತ್ರಿ 10 ಗಂಟೆ ಆಗುವಾಗ ತಂಗಿಯ ಮನೆಗೆ ಹೋಗುತ್ತೇವೆ. ಅಡುಗೆಯನ್ನೂ ಅವರ ಮನೆಯಲ್ಲೇ ಮಾಡುತ್ತೇವೆ. ನಾವು ಮನೆ ಬೇಕು ಅಂತ ಯಾರಲ್ಲೂ ಕೇಳಿಲ್ಲ. ಕಳೆದ ಬಾರಿ ಮನೆ ಬಿದ್ದಾಗ ಬಂದು ಜೆಸಿಬಿಯಲ್ಲಿ ನೆಲವನ್ನು ತಟ್ಟು ಮಾಡಿ ಹೋಗಿದ್ದರು. ಬಂದವರು, ಮಾಡಿ ಕೊಡುವ ಅಂತ ಹೇಳಿದ್ದರು, ಮತ್ತೆ ಸುದ್ದಿಯೇ ಇಲ್ಲ. ತಂಗಿಯ ಮನೆಯಲ್ಲೂ ಒಂದೇ ರೂಮ್ ಇರುವುದು. ಅದರಲ್ಲಿ ತಂಗಿ, ತಂಗಿ ಗಂಡ ಮತ್ತು ನಾನು, ನನ್ನ ಮಗಳು ಅಲ್ಲಿ ಮಲಗುತ್ತೇವೆ. ಕೆಲವು ಸಲ ಚಪ್ಪರದಲ್ಲೇ ಮಲಗುತ್ತೇವೆ. ತುಂಬಾ ಜನ ಬಂದು ನೋಡಿ ಹೋಗಿದ್ದಾರೆ. ಏನೂ ಆಗಿಲ್ಲ. ರೇಷನ್ ಕಾರ್ಡ್ ಇದೆ. ಅಕ್ಕಿಯೆಲ್ಲ ಸಿಗುತ್ತಿದೆ. ಮಗಳಿಗೆ ಮಾನಸಿಕ ಅನಾರೋಗ್ಯ, ಅದಕ್ಕಾಗಿ ಪೆನ್ಶನ್‌ಗಾಗಿ ಅರ್ಜಿ ಕೊಟ್ಟಿದ್ದೇವೆ. ಆದರೆ ಏನೂ ಬರುತ್ತಿಲ್ಲ-

ಜಯಲಲಿತಾ, ಮನೆಯಿಲ್ಲದವರು

ಹಳೆಯ ಮನೆ ಬಿದ್ದು ಹೋಗಿತ್ತು, ನಂತರ ಟಾರ್ಪಲ್‌ದ್ದೂ ಬಿತ್ತು-ಇದು ಮೂರನೆಯದ್ದು
30 ವರ್ಷದಿಂದ ಇಲ್ಲೇ ಬದುಕುತ್ತಿದ್ದೇವೆ. ಕೂಲಿ ಕೆಲಸ ಮಾಡುತ್ತಿದ್ದೇವೆ. ಇಬ್ಬರು ಹೆಣ್ಣು ಮಕ್ಕಳು,ಒಬ್ಬ ಮಗನಿದ್ದಾನೆ. ಹಿಂದೆ ನನ್ನ ಹೆಂಡತಿ ಸಾವನ್ನಪ್ಪಿದಾಗ ಮನೆ ಬಿದ್ದಿತ್ತು. ಆ ನಂತರ ಟಾರ್ಪಲ್ ಕಟ್ಟಿ ಮನೆ ನಿರ್ಮಾಣ ಮಾಡಿದ್ದೆವು. ಅದೂ ಕೂಡ ಬಿದ್ದು ಹೋಗಿತ್ತು. ನಂತರ ಗ್ರಾಮ ಪಂಚಾಯತ್‌ನವರು ಬಂದಿದ್ದರು. ಬರಲು ಹೇಳಿದ್ದರು, ನಾವಿನ್ನೂ ಹೋಗಿಲ್ಲ. ನಮಗೆ ಒಂದು ಸಹಾಯವಾಗಬೇಕಿದೆ-
ಸಂಜೀವ, ಟಾರ್ಪಲ್ ಮನೆಯಲ್ಲಿ ವಾಸಿಸುವವರು

ಸಂಜೀವ, ಟಾರ್ಪಲ್ ಮನೆಯಲ್ಲಿ ವಾಸಿಸುವವರು


ಸುದ್ದಿ ಚಾನೆಲ್‌ನಲ್ಲಿ ಸಮಗ್ರ ವರದಿಬಾಣಬೆಟ್ಟುವಿನ ಸಂಜೀವ ಮತ್ತು ಜಯಲಲಿತಾ ಅವರ ಕುಟುಂಬದ ಶೋಚನೀಯ ಸ್ಥಿತಿಯ ಕುರಿತು ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ಸಮಗ್ರ ವರದಿ ಪ್ರಸಾರಗೊಂಡಿದ್ದು, ಈಗಾಗಲೇ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here