ರೋಟರಿ ಸಿಟಿ/ಚಾರಿಟೇಬಲ್ ಟ್ರಸ್ಟ್ನಿಂದ ನೆಲ್ಲಿಕಟ್ಟೆ ಸರಕಾರಿ ಶಾಲೆಯಲ್ಲಿ ʼವಿದ್ಯಾಜ್ಯೋತಿʼ ಎಲ್.ಕೆ.ಜಿ, ಯುಕೆಜಿ ತರಗತಿ ಉದ್ಘಾಟನೆ

0

ವರ್ಷದೊಳಗೆ ಸರಕಾರಿ ಶಾಲೆಗಳಲ್ಲಿ ಆ.ಮಾಧ್ಯಮ ಎಲ್‌ಕೆಜಿ ತರಗತಿ ಆರಂಭ-ಅಶೋಕ್ ರೈ

ಪುತ್ತೂರು: ಸರಕಾರ ಮಾಡಬೇಕಾದ ಕಾರ್ಯವನ್ನು ಸೇವಾ ಸಂಸ್ಥೆ ಎನಿಸಿರುವ ರೋಟರಿ ಕ್ಲಬ್ ಮಾಡುತ್ತಿರುವುದು ಶ್ಲಾಘನೀಯ. ರೋಟರಿ ಕ್ಲಬ್‌ನಿಂದ ಸಮಾಜ ಸೇವೆ ಎಂಬುದು ನಿರಂತರವಾಗಿ ನಡೆಯುತ್ತಿದೆ. ಮುಂದಿನ ಒಂದು ವರ್ಷದೊಳಗೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ತರಗತಿಗಳನ್ನು ಆರಂಭಿಸಲಾಗುವುದು ಮಾತ್ರವಲ್ಲ ಶಿಕ್ಷಕರ ನೇಮಕಾತಿಯೂ ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ `ವಿದ್ಯಾಜ್ಯೋತಿ’ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಯ ಉದ್ಘಾಟನಾ ಸಮಾರಂಭವು ಸೆ.9 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆ ಇಲ್ಲಿ ಜರಗಿದ್ದು, ಈ ಸಂದರ್ಭದಲ್ಲಿ ಇದರ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಸಾರ್ವಜನಿಕ ವಲಯದಲ್ಲಿ ಒಂದು ಮಾತಿದೆ. ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಆಂಗ್ಲ ಭಾಷೆ ಬರುವುದು ಎಂದು. ಅದು ತಪ್ಪು. ಸರಕಾರಿ ಶಾಲೆಗಳಲ್ಲಿ ಕಲಿತರೂ ಆಂಗ್ಲ ಭಾಷೆಯನ್ನು ಕಲಿಯಬಹುದಾಗಿದೆ. ಸರಕಾರ ಕೂಡ ಸರಕಾರಿ ಶಾಲೆಗಳ ಮೇಲ್ದರ್ಜೆಗೇರಿಸುವಲ್ಲಿ ಶ್ರಮಿಸುತ್ತಿದೆ. ಆಂಗ್ಲ ಭಾಷೆಯಲ್ಲಿ ಶಿಕ್ಷಣ ಅತೀ ಮುಖ್ಯವಾಗಿದ್ದು ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ರೋಟರಿ ಸಿಟಿ ಸಂಸ್ಥೆಯು ಮಹತ್ವದ ಹೆಜ್ಜೆಯನ್ನಿಟ್ಟಿದ್ದು ಪುತ್ತೂರಿಗೆ ಇದು ನಿದರ್ಶನವಾಗಲಿ ಎಂದರು.

ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಕಲಿಸುವಿಕೆ ಒಂದೇ ತೆರನಾದ್ದು-ವಿಕ್ರಂ ದತ್ತ:
ರೋಟರಿ ಜಿಲ್ಲಾ ಯೋಜನೆಯಾದ ಅಂಗನವಾಡಿ ಪುನಶ್ಚೇತನ ಇದರ ಉದ್ಘಾಟನೆಯನ್ನು ನೆರವೇರಿಸಿದ 2024-25ರ ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಮಾತನಾಡಿ, ಬೆಂಗಳೂರಿನಲ್ಲಿ ಅಂಗನವಾಡಿ ಮಕ್ಕಳಿಗೆ ಕಲಿಸಲು ಸುಮಾರು ರೂ.1.50 ಲಕ್ಷ ಖರ್ಚಾಗುತ್ತದೆ. ಪುತ್ತೂರಿನಲ್ಲಿ ಪೋಷಕರಿಗೆ ಕೈಗೆಟಕುವ ದರದಲ್ಲಿ ಮಕ್ಕಳಿಗೆ ಕಲಿಸಲು ಸಾಧ್ಯವಾಗುತ್ತದೆ. ಆದರೆ ಬೆಂಗಳೂರಿನಲ್ಲಾಗಲಿ, ಪುತ್ತೂರಿನಲ್ಲಾಗಲಿ ಮಕ್ಕಳಿಗೆ ಕಲಿಸುವಿಕೆ ಎನ್ನುವುದು ಒಂದೇ ನಿಯಮವಾಗಿದೆ. ಪುತ್ತೂರಿನಲ್ಲಿ ಅಂಗನವಾಡಿಗಳ ಅಭಿವೃದ್ಧಿ ಸರಕಾರ ಮಾಡುವ ಕೆಲಸ ರೋಟರಿ ಸಂಸ್ಥೆ ಮಾಡುತ್ತಿದೆ. ವಿದ್ಯಾಜ್ಯೋತಿ ಹೆಸರಿನಲ್ಲಿ ಆರಂಭಿಸಿದ ಈ ಶಾಲೆ ಮುಂದಿನ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳ್ಳಲಿ ಎಂದರು.

ವಿದ್ಯೆಗಿಂತ ಬೇರೆ ಸೇವೆಯಿಲ್ಲ ಎಂಬಂತೆ ಆರಂಭಿಸಿದ್ದೇವೆ-ಸುರೇಂದ್ರ ಕಿಣಿ:
ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿ.ಸುರೇಂದ್ರ ಕಿಣಿರವರು ಸ್ವಾಗತಿಸಿ ಮಾತನಾಡಿ, ವಿದ್ಯೆಗಿಂತ ಬೇರೆ ಸೇವೆಯಿಲ್ಲ ಎಂಬಂತೆ ರೋಟರಿ ಸಿಟಿ ಸಂಸ್ಥೆಯು ಇದೀಗ ವಿದ್ಯಾಕ್ಷೇತ್ರಕ್ಕೆ ಕಾಲಿಟ್ಟಿದೆ. ಇಲ್ಲಿನ ಶಿಕ್ಷಕರು ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಸಂಚಾಲಕ ಉಲ್ಲಾಸ್ ಪೈಯವರಲ್ಲಿ ಶಾಲೆಯ ಅವ್ಯವಸ್ಥೆ ಬಗ್ಗೆ ಹೇಳಿದಾಗ ಕೂಡಲೇ ಉಲ್ಲಾಸ್ ಪೈಯವರು ಈ ಅವ್ಯವಸ್ಥೆ ಬಗ್ಗೆ ರೋಟರಿ ಸಿಟಿಗೆ ತಿಳಿಸಿದ್ದರಿಂದ ಶಾಸಕರ ಅನುಮತಿ ಪಡೆದು ಈ ವಿದ್ಯಾನಿಧಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಈಗಾಗಲೇ ಹದಿನೈದು ಮಕ್ಕಳು ಈ ಶಾಲೆಯಲ್ಲಿ ನೋಂದಾವಣೆ ಆಗಿದ್ದು ಮುಂದಿನ ವರ್ಷದಲ್ಲಿ ಇದು ದ್ವಿಗುಣಗೊಳ್ಳಲಿದೆ ಎಂದರು.

ಫಲಾನುಭವಿಗಳು ಪ್ರಯೋಜನ ಪಡೆದು ಉತ್ತಮ ಪ್ರಜೆಗಳಾಗಿ-ಲಾರೆನ್ಸ್ ಗೊನ್ಸಾಲ್ವಿಸ್:
ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಮಾತನಾಡಿ, ಜಿಲ್ಲಾ ಗವರ್ನರ್‌ರವರ ಪ್ರಸ್ತುತ ವರ್ಷದ ಜಿಲ್ಲಾ ಯೋಜನೆಗಳ ಪೈಕಿ ತಾಲೂಕಿನ ಅಂಗನವಾಡಿಗಳ ಪುನಶ್ಚೇತನ ಕಾರ್ಯಕ್ರಮ ಒಂದಾಗಿದ್ದು ಈ ನಿಟ್ಟಿನಲ್ಲಿ ರೋಟರಿ ಸಿಟಿ ಆಯ್ದ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಫಲಾನುಭವಿಗಳು ಇದರ ಪ್ರಯೋಜನ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕು ಎನ್ನುವುದೇ ಆಶಯವಾಗಿದೆ ಎಂದರು.

ಮಕ್ಕಳನ್ನು ಸಣ್ಣ ಹರೆಯದಲ್ಲಿಯೇ ಉತ್ತಮತೆಯತ್ತ ಕೊಂಡೊಯ್ಯಬೇಕಾಗಿದೆ-ಗ್ರೇಸಿ ಗೊನ್ಸಾಲ್ವಿಸ್:
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ರೋಟರಿ ಸಿಟಿಯ ಸರ್ವ ಸದಸ್ಯರ ಸಹಕಾರದಿಂದ ಉತ್ತಮ ಕಾರ್ಯಗಳಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಲ್ಲಾ ಯೋಜನೆಯಾಗಿರುವ ಅಂಗನವಾಡಿಗಳ ಪುನಶ್ಚೇತನ ಎಂಬುವುದು ಉತ್ತಮ ವಿಷಯವಾಗಿದೆ. ಯಾಕೆಂದರೆ ಸಣ್ಣ ಪ್ರಾಯದಲ್ಲಿಯೇ ಮಕ್ಕಳನ್ನು ಉತ್ತಮ ಹಂತಕ್ಕೆ ಕೊಂಡೊಯ್ಯುತ್ತಿರುವ ವಿಷಯ ಎನ್ನುವುದು ಮೆಚ್ಚತಕ್ಕದ್ದು ಎಂದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಹರಿಪ್ರಸಾದ್, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನೆಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಯಶೋಧ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ವಸುಧಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ವಿನಯಾ ಹಾಗೂ ವೇದಾವತಿ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬಿ. ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಕಾರ್ಯದರ್ಶಿ ಶ್ರೀಮತಿ ಶ್ಯಾಮಲ ಎಂ ಶೆಟ್ಟಿ ಪುನಶ್ಚೇತನ ಅಂಗನವಾಡಿಗಳ ಹೆಸರನ್ನು ಓದಿದರು. ರೋಟರಿ ಸಿಟಿಯ ಡಾ.ಶಶಿಧರ್ ಕಜೆ ಕಾರ್ಯಕ್ರಮ ನಿರೂಪಿಸಿದರು.

ಆಯ್ದ 40 ಅಂಗನವಾಡಿಗಳ ಪುನಶ್ಚೇತನಕ್ಕೆ ಚಾಲನೆ..
ರೋಟರಿ ಜಿಲ್ಲಾ ಯೋಜನೆಯನ್ವಯ ತಾಲೂಕಿನಲ್ಲಿನ ಬನ್ನೂರು, ಸಾಲ್ಮರ, ಶಾಂತಿನಗರ, ಇರ್ದಾಪೆ, ಶೇಖಮಲೆ, ಕೆಮ್ಮಾಯಿ, ನೆಲ್ಲಿಕಟ್ಟೆ, ಬೆಟ್ಟಂಪಾಡಿ, ಸೂರಂಬೈಲು, ಆನಡ್ಕ, ಕಾಂತಿಜಾಲು, ಪೆರಿಯತ್ತೋಡಿ, ನೈತ್ತಾಡಿ, ಇಡಬೆಟ್ಟು, ಮಲಾರ್, ಮಾವಿನಕಟ್ಟೆ, ಉಜ್ರುಪಾದೆ, ಕಂಬಳದಡ್ಡ, ಮಂಜಲ್ಪಡ್ಪು, ಬುಳೇರಿಕಟ್ಟೆ, ನೆಲ್ಯಾಡಿ ಜೇಸಿ, ಸೀಟಿಗುಡ್ಡೆ, ಇರ್ದೆ-ಉಪ್ಪಳಿಗೆ, ಕೂರ್ನಡ್ಕ, ಚೆಲುವಮ್ಮನಕಟ್ಟೆ, ಕಬಕ, ಸಾಜ, ಪಲ್ಲತ್ತಾರು, ಹಿಂದಾರು, ಪಾಪೆತ್ತಡ್ಕ ಹೀಗೆ ಆಯ್ದ 40 ಅಂಗನವಾಡಿ ಕೇಂದ್ರಗಳಿಗೆ ರೋಟರಿ ಸದಸ್ಯರ ಕೊಡುಗೆಯೊಂದಿಗೆ ಸಮವಸ್ತç, ಇನ್ವರ್ಟರ್, ಬ್ಯಾಗ್, ಕೊಡೆ, ಆಲ್ಮೇರಾ, ಟೇಬಲ್, ಚೇರ್ ಮುಂತಾದ ಅಗತ್ಯ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು.

ಜಾರುಬಂಡಿ ಹಸ್ತಾಂತರ..
ಇದೇ ಸಂದರ್ಭದಲ್ಲಿ ರೋಟರಿ ಸಿಟಿ ವತಿಯಿಂದ ನೆಲ್ಲಿಕಟ್ಟೆ ಶಾಲೆಯಲ್ಲಿ ನಿರ್ಮಿಸಲ್ಪಟ್ಟ ಜಾರುಬಂಡಿಯನ್ನು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಉದ್ಘಾಟಿಸುವ ಮೂಲಕ ಹಸ್ತಾಂತರ ಮಾಡಿದರು. ತಾಲೂಕಿನ ಅಂಗನವಾಡಿ ಶಿಕ್ಷಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here