ಪುತ್ತೂರು ಕಿಲ್ಲೆ ಮೈದಾನ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ ನಿಧನ

0

ಸೆ.11ಕ್ಕೆ ಮೃತ ದೇಹ ಪುತ್ತೂರಿಗೆ
ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರ ಮೃತ ದೇಹವನ್ನು ಸೆ.11ರಂದು ಪುತ್ತೂರು ನೆಲ್ಲಿಕಟ್ಟೆ ಮನೆಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಪುತ್ತೂರು: ಇಲ್ಲಿನ ಕಿಲ್ಲೆ ಮೈದಾನದಲ್ಲಿ ದೇವತಾ ಸಮಿತಿ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವ ರೂವಾರಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಸಂಚಾಲಕರೂ, ಸಾಮಾಜಿಕ,ಧಾರ್ಮಿಕ ಮುಂದಾಳೂ ಆಗಿದ್ದ ಅಜಾತ ಶತ್ರು ನೆಲ್ಲಿಕಟ್ಟೆ ನಿವಾಸಿ ಎನ್.ಸುಧಾಕರ ಶೆಟ್ಟಿ(80ವ.)ರವರು ಸೆ.10 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಇವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೨ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದರು.

ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಸುಧಾಕರ ಶೆಟ್ಟಿಯವರು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸೆ.10ರಂದು ರಾತ್ರಿ ವೇಳೆ ನಿಧನರಾದರು. ಮೃತರು ಪತ್ನಿ ಗೀತಾ. ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅಭಿಷೇಕ್ ಮತ್ತು ಅಭಿಜಿತ್‌ರನ್ನು ಅಗಲಿದ್ದಾರೆ.

44 ವರ್ಷಗಳಿಂದ ದೇವತಾ ಸಮಿತಿ ಅಧ್ಯಕ್ಷರಾಗಿ ಸೇವೆ:

ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ 44 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 1957ರಲ್ಲಿ ದಿ.ಹನುಮಂತ ಮಲ್ಯ ಅವರು ಕಿಲ್ಲೆ ಮೈದಾನದಲ್ಲಿ ಮಹಾಗಣೇಶೋತ್ಸವ ಆರಂಭಿಸಿದ್ದರು. ಅವರ ಬಳಿಕ ಕಳೆದ 44 ವರ್ಷಗಳಿಂದ ಎನ್.ಸುಧಾಕರ್ ಶೆಟ್ಟಿಯವರು ಅದರ ನೇತೃತ್ವ ವಹಿಸಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಕಿಲ್ಲೆ ಮೈದಾನದಲ್ಲಿ 66ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು 60ನೇ ವರ್ಷದಲ್ಲಿ ಸುಧಾಕರ ಶೆಟ್ಟಿಯವರ ನೇತೃತ್ವದಲ್ಲಿ ನಿರಂತರ 9 ದಿನಗಳ ಕಾಲ ಕಾರ್ಯಕ್ರಮ ನಡೆಸಲಾಗಿತ್ತು. ಬಳಿಕದ ದಿನಗಳಲ್ಲಿ ನಿರಂತರ 7 ದಿನ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದೆ. ಕಿಲ್ಲೇ ಮೈದಾನದ ಗಣಪತಿಯು ವರ್ಣ, ಜಾತಿ, ಮತ ಹಾಗೂ ಧರ್ಮ ಬೇಧವಿಲ್ಲದೆ ನಡೆಯುತ್ತಿರುವ ಸಾರ್ವಜನಿಕ ಮಹೋತ್ಸವ ಎಂಬುದಾಗಿ ಹೇಳಲು ಹೆಮ್ಮೆಯಾಗುತ್ತದೆ ಎಂದು ಸುಧಾಕರ್ ಶೆಟ್ಟಿಯವರೇ ಹೇಳಿಕೊಂಡಿದ್ದರು.

ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಸೇವೆ:

ಎನ್.ಸುಧಾಕರ್ ಶೆಟ್ಟಿಯವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷರಾಗಿ, ಬ್ರಹ್ಮರಥ ಸಮರ್ಪಣಾ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ಹಲವು ವರ್ಷ ದೇವರ ಸೇವೆ ಮಾಡಿದರು. ಅವರ ಅವಧಿಯಲ್ಲಿ ದೇವಳದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಮೊದಲ ಬಾರಿಗೆ ದೇವಸ್ಥಾನದ ಬಾಲಗಣಪತಿಗೆ ಮೂಡಪ್ಪ ಸೇವೆ ಮಾಡಿಸಿದರು. ದೇವಳದ ಪೂರ್ವ ದ್ವಾರದ ಗೋಪುರ ರಚನೆ ಮಾಡಿದರು. ಸ್ವರ್ಣಲೇಪಿತ ಧ್ವಜಸ್ತಂಭ ಮಾಡಿಸಿದರು. ದೇವರಿಗೆ ಸೇವೆ ನೀಡುವ ಭಕ್ತರ ಮನಸಂಕಲ್ಪದಂತೆ ಅರ್ಚಕರ ಮೂಲಕ ಸಂಕಲ್ಪ ಕಾರ್ಯ ಆರಂಭಿಸಿದ್ದರು. ದೇವಳದ ಗರ್ಭಗುಡಿಯಲ್ಲಿ ಕಾರ್ತಿಕ ಪೂಜೆ ಸಂದರ್ಭ ನಿಂತು ಹೋಗಿದ್ದ ‘ದಳಿ’ಯನ್ನು ಮತ್ತೆ ಹೊಸ ದಳಿಯನ್ನು ಆರಂಭಿಸುವ ಮೂಲಕ ದೇವರಿಗೆ ನಿತ್ಯ ಬೆಳಕಿನ ಸೇವೆ ನೀಡಿದರು. ಇವೆಲ್ಲದರ ನಡುವೆ ದೇವರ ಮೇಲೆ ಅಪಾರ ಭಕ್ತಿಯಿಟ್ಟಿದ್ದ ಅವರು ಪ್ರತಿ ದಿನ ಬೆಳಿಗ್ಗೆ ದೇವಳಕ್ಕೆ ಬರುತ್ತಿದ್ದರು. ಧನುರ್ಮಾಸ ಪೂಜೆ ಸಂದರ್ಭವೂ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 10 ವರ್ಷ:
10 ವರ್ಷ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದರು. ಅಲ್ಲದೇ 2 ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ವಿದ್ಯಾರ್ಥಿಯಾಗಿದ್ದಾಲೇ ರಾಜಕೀಯದೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಅವರು ಎನ್.ಎಸ್.ಯು.ಐ ಘಟಕದ ಅಧ್ಯಕ್ಷರಾಗಿ, ಬಳಿಕ ರಾಜಕೀಯ ಪ್ರವೇಶ ಮಾಡಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕರಾಗಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು.

ವೈಭವದ ಗಣೇಶೋತ್ಸವಕ್ಕೆ ಕಾರಣಕರ್ತರು
ಕಿಲ್ಲೆ ಮೈದಾನದಲ್ಲಿ ಸುಧಾಕರ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿ ವರ್ಷವೂ ಗಣೇಶೋತ್ಸವ ವೈಭವವಾಗಿ ನಡೆಯುತ್ತಿತ್ತು. ಮಹಾಗಣೇಶೋತ್ಸವದ ಮೂಲಕ ಕಿಲ್ಲೆ ಮೈದಾನ ಅಥವಾ ಕೋರ್ಟ್ ಮೈದಾನವು ಒಂದು ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಇದಕ್ಕೆ ಕಾರಣವೆಂಬಂತೆ ಎನ್.ಸುಧಾಕರ್ ಶೆಟ್ಟಿಯವರು ಧಾರ್ಮಿಕ ವೈದಿಕ ಕಾರ್ಯಕ್ರಮವನ್ನು ಚಾಚೂ ತಪ್ಪದೆ ಮಾಡಿಸಿಕೊಂಡು ಬಂದಿದ್ದಾರೆ. ಪ್ರತಿನಿತ್ಯ ಮೂರು ಬಾರಿ ನಡೆಯುವ ಗಣೇಶನ ಪೂಜೆ, ಹೋಮ ಹವನಗಳು, ತುಲಾಭಾರ, ರಂಗಪೂಜೆ, 108 ಕಾಯಿಗಳ ಗಣಪತಿ ಹೋಮ, ವಿಶೇಷವಾದ ಮೂಡಪ್ಪ ಸೇವೆ, ದೇವರ ಬಲಿ, ದೈವಗಳ ಕೋಲ, ವೈಭವದ ಮೆರವಣಿಗೆ ಇವೆಲ್ಲವನ್ನು ಮಾಡಿಸುವ ಮೂಲಕ ಕಿಲ್ಲೆ ಮೈದಾನದ ಪಾವನಕ್ಕೆ ಕಾರಣೀಭೂತರಾಗಿದ್ದಾರೆ.

ಇಂದು ಮೃತದೇಹ ಪುತ್ತೂರಿಗೆ:
ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರ ಮೃತ ದೇಹವನ್ನು ಸೆ.11ರಂದು ಬೆಳಿಗ್ಗೆ 10 ಗಂಟೆ ವೇಳೆಗೆ ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಅವರ ಮನೆಗೆ ತರಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here