ರಾಜ್ಯ ಕ್ರಿಕೆಟ್ ಎಸೋಸಿಯೇಶನ್ ಅಧ್ಯಕ್ಷರಿಂದ ಪುತ್ತೂರು ಶಾಸಕರ ಭೇಟಿ

0

ಕಬಕದಲ್ಲಿ ಶೀಘ್ರದಲ್ಲೇ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಭರವಸೆ


ಪುತ್ತೂರು: ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆಂದು ಕಬಕ ಗ್ರಾಮದ ಸರ್ವೆ ನಂ.260/1ಪಿನಲ್ಲಿ 23.25 ಎಕ್ರೆ ಜಮೀನು ಕಾದಿರಿಸಿದರೂ, ಕ್ರೀಡಾಂಗಣ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಪುತ್ತೂರು ಕ್ರಿಕೆಟ್ ಯೂನಿಯನ್ ಪದಾಧಿಕಾರಿಗಳು ಶಾಸಕರ ಮೂಲಕ ಇಲಾಖೆಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಎಸೋಸಿಯೇಶನ್ ಅಧ್ಯಕ್ಷರಾಗಿರುವ ವಿಟ್ಲ ಮೂಲದ ರಘುರಾಮ ಭಟ್‌ರವರು ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ಅತಿ ಶೀಘ್ರದಲ್ಲಿ ಪುತ್ತೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಭರವಸೆ ನೀಡಿದ್ದಾರೆ.


ಸ್ಥಳೀಯ ಕ್ರಿಕೆಟ್ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಮತ್ತು ಕ್ರಿಕೆಟ್ ಆಟವನ್ನು ಇನ್ನಷ್ಟೂ ಅಭಿವೃದ್ಧಿ ಪಡಿಸುವುದು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಗೆ ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿರುವ ಪುತ್ತೂರಿಗೆ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣದ ಅವಶ್ಯಕತೆಯೂ ಇತ್ತು. ಈ ಕ್ರೀಡಾಂಗಣದಿಂದಾಗಿ ಪ್ರವಾಸೋದ್ಯಮ, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ನಗರದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕ್ರೀಡಾಂಗಣಕ್ಕೆ ಕಬಕ ಮತ್ತು ಬಲ್ನಾಡು ಮೂಲಕ ರಸ್ತೆಯ ವ್ಯವಸ್ಥೆಯಿದೆ. ಈ ಹಿಂದೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದರೆ ಇದನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆಯದಿದ್ದಾಗ ಪುತ್ತೂರು ಕ್ರಿಕೆಟ್ ಯೂನಿಯನ್ ಕ್ಲಬ್ ಶಾಸಕರ ಗಮನಕ್ಕೆ ತಂದಿದ್ದರು. ಶಾಸಕರು ಸಂಬಂಧಿಸಿದ ಇಲಾಖೆಯಲ್ಲಿ ಮಾತುಕತೆ ನಡೆಸಿದ್ದರು. ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಎಸೋಷಿಯೇಶನ್ ಅಧ್ಯಕ್ಷ ರಘುರಾಮ ಭಟ್‌ರವರು ಶಾಸಕರನ್ನು ಭೇಟಿಯಾಗಿ ಪುತ್ತೂರಿನಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರು ಕೆಲವು ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು. ಅವುಗಳನ್ನು ಅಧ್ಯಕ್ಷರು ಒಪ್ಪಿ ಆದಷ್ಟು ಶೀಘ್ರವಾಗಿ ಕ್ರೀಡಾಂಗಣ ನಿರ್ಮಿಸುವ ಭರವಸೆಯನ್ನು ನೀಡಿರುತ್ತಾರೆ. ಶಾಸಕರು ಈ ಕುರಿತು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರಲ್ಲದೆ ಜಿಲ್ಲಾಧಿಕಾರಿಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಮತ್ತು ಪುತ್ತೂರು ಕ್ರಿಕೆಟ್ ಯೂನಿಯನ್ ಕ್ಲಬ್ ನ ಉಪಾಧ್ಯಕ್ಷರೂ ಆಗಿರುವ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಮಂಗಳೂರು ಝೋನ್ ಅಧ್ಯಕ್ಷ ಮನೋಹರ್ ಅಮೀನ್, ಪುತ್ತೂರು ಝೋನ್ ಅಧ್ಯಕ್ಷರು ಮತ್ತು ಪುತ್ತೂರು ಯೂನಿಯನ್ ಕ್ರಿಕೆಟರ್‍ಸ್ ಕ್ಲಬ್ ಸಂಚಾಲಕರಾದ ವಿಶ್ವನಾಥ್ ನಾಯಕ್, ಮಂಗಳೂರು ಝೋನ್ ಸಂಚಾಲಕರಾಗಿರುವ ರತನ್, ಬೆಂಗಳೂರಿನ ಕೆ.ಸಿ.ಎ.ಕೋಚ್ ಆಗಿರುವ ಜಯರಾಜ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here