ಪುತ್ತೂರು: ಅಲ್ಲಿ ಎತ್ತ ನೋಡಿದರೂ ಬೌವ್..ಬೌವ್.. ಕುಂಯ್..ಕುಂಯ್ ಸದ್ದುಗಳದ್ದೇ ಕಾರುಬಾರು. ನಾನಾ ಜಾತಿಯ ನಾಯಿಗಳದ್ದೇ ಸದ್ದು. ಎಲ್ಲವೂ ಒಂದಕ್ಕೊಂದು ಭಿನ್ನ. ಮುದ್ದು ಮುದ್ದಾದ ನಾಯಿ ಮರಿ, ಮುಟ್ಟೋಣ ಅಂತ ಹೋದ್ರೆ ಪಕ್ಕದಲ್ಲೇ ಕಚ್ಚೋಕೆ ರೆಡಿಯಾಗಿರುವಂತೆ ನಿಂತಿರುವ ಕೋಪಿಷ್ಟ ನಾಯಿಗಳು. ಇವೆಲ್ಲಾ ಅನಾವರಣಗೊಂಡಿರುವುದು ಜೇಸಿಐನಿಂದ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆದ ಪೆಟ್ ಡಾಗ್ ಶೋದಲ್ಲಿ.
ಜೇಸಿಐ ಪುತ್ತೂರು ಇದರ ಜೇಸಿ ಸಪ್ತಾಹದ ಅಂಗವಾಗಿ ಜೇಸಿಐ ಪುತ್ತೂರು ಹಾಗೂ ಪುತ್ತೂರು ಕ್ಲಬ್ ಸಹಯೋಗದೊಂದಿಗೆ ಸೆ.10ರಂದು ಮರೀಲ್‌ನಲ್ಲಿರುವ ಪುತ್ತೂರು ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ವಿಶೇಷ ಗಮನ ಸೆಳೆಯಿತು. ಇಲ್ಲಿ ಒಂದಕ್ಕಿಂತ ಒಂದು ಶ್ವಾನಗಳು ನೋಡುಗರನ್ನು ಆಕರ್ಷಿಸಿದವು. ಪ್ರದರ್ಶನಕ್ಕೆ ಬಂದಿದ್ದ ಶ್ವಾನ ಪ್ರಿಯರು ಮೊಬೈಲ್‌ನಲ್ಲಿ ಅವುಗಳ ಭಾವಚಿತ್ರ ಸೆರೆ ಹಿಡಿದರು. ಮಾಲೀಕ ಹೇಳುವ ಮಾತುಗಳನ್ನು ಕೇಳುತ್ತಿದ್ದ ಶ್ವಾನಗಳೂ ಜನರ ಗಮನ ಸೆಳೆಯಿತು. ನಾನಾ ಜಾತಿಗೆ ಸೇರಿದ ಮರಿಶ್ವಾನಗಳ ಬೆಲೆಯನ್ನು ಹಲವರು ಕೇಳಿ ತಿಳಿದುಕೊಂಡರು. ಪ್ರದರ್ಶನದಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದ ಶ್ವಾನಗಳನ್ನು ಯುವಕರು ಕಾಡಿಸಿ ಪೀಡಿಸಿ ಮಜಾ ಪಡೆಯುತ್ತಿದ್ದರೆ, ಇನ್ನೂ ಕೆಲವರು ಭಯಂಕರ ರೂಪದ ಶ್ವಾನಗಳನ್ನು ಕಂಡು ಗಾಬರಿಯಿಂದ ಹಿಂದೆ ಸರಿಯುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ರಜಾ ದಿನವಾದ ಭಾನುವಾರ ನಡೆದ ಈ ಪೆಟ್ ಮತ್ತು ಡಾಗ್ ಶೋವನ್ನು ನೂರಾರು ಮಂದಿ ಶ್ವಾನ ಪ್ರಿಯರು ಕಣ್ತುಂಬಿಸಿಕೊಂಡರು.
ನಾನಾ ತಳಿಯ ಶ್ವಾನಗಳು: ಪ್ರದರ್ಶನಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಣಿ ಭೇಟೆಗೆ ಬಳಸುವ ಜನಪ್ರಿಯ ಮುಧೋಳ, ಲ್ಯಾಬ್ರೋಡಾರ್, ಡಾಬರ್‌ಮನ್, ಬೀಗಲ್, ಜರ್ಮನ್ ಶಫರ್ಡ್, ಪೋಮೆರಿಯನ್, ಪಗ್ಗ್, ರೋಟ್ ವೀಲ್ಲರ್, ಇಂಗ್ಲಿಷ್ ಮೇಸ್ಟಿಪ್, ಗೋಲ್ಡನ್ ರಿಟ್ರಿಬಾರ್, ಸ್ವಿಝ, ಫಿಟ್‌ಪಾಲ್, ಡ್ಯಾಶ್‌ಆನ್, ಸೈಬಿರಿಯನ್ ಹಸ್ಕಿ, ಡ್ಯಾಸ್‌ಹ್ಯುಂಡ್ ಸೇರಿದಂತೆ ಹಲವು ಜಾತೀಯ ಸುಮಾರು 60 ಶ್ವಾನಗಳು, ಪರ್ಷಿಯನ್ ಮತ್ತು ಸೈಬೀರಿಯನ್ ಜಾತಿಯ ಬೆಕ್ಕುಗಳು, ಪೈನಾಪುಲ್ ಹಾಗೂ ಕೊನುಗೋರೆ ಜಾತಿಯ ಹಕ್ಕಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಪುತ್ತೂರು ಮಾತ್ರವಲ್ಲದೆ ಉಡುಪಿ, ಮಣಿಪಾಲ, ಮೂಡಿಗೆರೆಯಿಂದಲೂ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಪ್ರತಿ ತಳಿಗಳ ವಿಭಾಗದಲ್ಲಿ ಉತ್ತಮ ಶ್ವಾನಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಶ್ವಾನಗಳ ಮಾಲಕರಿಗೂ ಪ್ರೋತ್ಸಾಹಕ ಬಹುಮಾನವನ್ನು ವಿತರಿಸಲಾಯಿತು. ವಿಜಯ ಫೆರ್ನಾಂಡೀಸ್ ಪ್ರದರ್ಶನವನ್ನು ನಡೆಸಿಕೊಟ್ಟರು. ಡಾ. ಪ್ರಸನ್ನ ಕುಮಾರ್ ಹೆಬ್ಬಾರ್, ಡಾ. ತಮ್ಮಯ್ಯ, ಡಾ.ಅಶೋಕ್ ಕೆ.ಆರ್., ಡಾ. ರಾಮ್‌ಪ್ರಕಾಶ್ ತೀರ್ಪಗಾರರಾಗಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನಗರ ಪೊಲೀಸ್ ಠಾಣಾ ನಿರೀಕ್ಷಕ ಸುನಿಲ್ ಕುಮಾರ್ ಮಾತನಾಡಿ, ನಾಗರಿಕತೆಯ ಕಾಲದಿಂದಲೂ ಮನುಷ್ಯ ಹಾಗೂ ಪ್ರಾಣಿ ಸಂಬಂಧ ಬೆಳೆದು ಬಂದಿದೆ. ಹೀಗಾಗಿ ಮಾನವನ ಜೀವನದ ಜೊತೆಗೆ ವಿವಿಧ ಪ್ರಾಣಿಗಳನ್ನು ಸಾಕಲಾಗುತ್ತಿದೆ. ಮನೆಯ ಸದಸ್ಯರಂತೆ ಶ್ವಾನಗಳು ಬಾಂಧವ್ಯವನ್ನು ಹೊಂದಿರುತ್ತದೆ. ಅವುಗಳನ್ನು ಮಕ್ಕಳನ್ನು ಸಾಕಿದಂತೆ ಸಾಕುತ್ತೇವೆ. ಶ್ವಾನಗಳನ್ನು ಅಪರಾಧ ಪತ್ತೆಗಳಿಗೂ ಬಳಸಲಾಗುತ್ತದೆ. ಸಾಕು ಪ್ರಾಣಿಗಳು ಎಲ್ಲಾ ರೀತಿಯಲ್ಲಿ ಹೊಂದಾಣಿಕೆಯಲ್ಲಿರುತ್ತದೆ ಎಂದ ಅವರು ಪುತ್ತೂರಿನಲ್ಲಿ ಪ್ರಥಮ ಸಲ ಆಯೋಜಿಸಿದ್ದ ಶ್ವಾನ ಪ್ರದರ್ಶನ ನನಗೂ ನೋಡುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.
ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈಯವರು ಮಾತನಾಡಿ, ಇದು ಶ್ವಾನ ಪ್ರಿಯರಿಗೆ ಉತ್ತಮ ಅವಕಾಶವಾಗಿದೆ. ಈ ಪ್ರದರ್ಶನವು ಮನುಷ್ಯ ಮತ್ತು ಪ್ರಾಣಿಯ ನಡುವಿನ ಪ್ರೇಮ ವೃದ್ಧಿಗೆ ಅನುಕೂಲವಾಗಲಿದೆ. ಮುಂದಿನ ವರ್ಷದಲ್ಲಿ ಪುತ್ತೂರು ಕ್ಲಬ್ ವತಿಯಿಂದ ‘ಪೆಟ್ ಡಾಗ್ ಶೋ’ಆಯೋಜನೆ ಮಾಡಲಾಗುವುದು. ಇದಕ್ಕೆ ಸಲಹೆ, ಸೂಚನೆಗಳನ್ನು ನೀಡುವಂತೆ ಹೇಳಿದರು.
ಸನ್ಮಾನ: ಬೀದಿ ನಾಯಿಗಳಿಗೆ ಆಹಾರ ನೀಡಿ ಸಲಹುತ್ತಿರುವ ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕತ್ವ ನೀಡಿದ ದಯಾನಂದ ನಾಯಕ್‌ರವರನ್ನು ಗೌರವಿಸಲಾಯಿತು. ಪುತ್ತೂರು ಕ್ಲಬ್‌ನ ಕಾರ್ಯದರ್ಶಿ ದಿವಾಕರ ಕೆ.ಪಿ., ಜೇಸಿಐ ಕಾರ್ಯದರ್ಶಿ ಕಾರ್ತಿಕ್, ಜೇಸಿ ಸಪ್ತಾಹ ಸಂಯೋಜಕ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ ಸ್ವಾಗತಿಸಿದರು. ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.