ಕೆದಂಬಾಡಿ ಯುವರಂಗದಿಂದ ಮೊಸರು ಕುಡಿಕೆ ಉತ್ಸವ

0

ಪುತ್ತೂರು: ಯುವರಂಗ ಕೆದಂಬಾಡಿ ಇದರ ಆಶ್ರಯದಲ್ಲಿ ಶ್ರೀರಾಮ ಮಂದಿರ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇದರ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೆ. 10 ರಂದು ಶ್ರೀರಾಮ ಮಂದಿರದ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ನಬಾರ್ಡ್ ಪ್ರಾದೇಶಿಕ ಕಾರ್ಯಕ್ರಮ ಅಧಿಕಾರಿ ರಾಮಕೃಷ್ಣ ಆಳ್ವ ಮುಂಡಾಳಗುತ್ತು ಉದ್ಘಾಟಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಮಂದಿರದ ಅಧ್ಯಕ್ಷ ಜೈಶಂಕರ ರೈ ಬೆದ್ರುಮಾರ್‌ರವರು ಮಾತನಾಡಿ ʻಯುವರಂಗದ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬರುತ್ತಿದ್ದು, ಮುಂದೆಯೂ ಸಂಘದಿಂದ ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿʼ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿದ್ದ ಆಲಡ್ಕ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ರೈ ಬೋಳೋಡಿ, ಕೆದಂಬಾಡಿ ಗ್ರಾಮ ಸಮಿತಿ ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಶಿವಣ್ಣ ಗೌಡ ಪಯಂದೂರು, ವಕೀಲೆ ಅಶ್ವಿನಿ ಎಸ್. ರೈ ಕುರಿಕ್ಕಾರ, ಕೆದಂಬಾಡಿ ಪ್ರಾಥಮಿಕ ಶಾಲಾ ಮುಖ್ಯಗುರು ನಾಗವೇಣಿ ಕೆ. ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಕೃಷ್ಣವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡ ಕೃಷ್ಣವೇಷಧಾರಿಗಳು


ಗೌರವಾರ್ಪಣೆ
ಇದೇ ವೇಳೆ ಶ್ರೀರಾಮ ಮಂದಿರದಲ್ಲಿ ಹಲವು ವರ್ಷಗಳಿಂದ ಭಜನಾ ಸಂಕೀರ್ತನಕಾರ ಬೆದ್ರುಮಾರ್‌ ಸಾಯಿಪ್ರಸಾದ್‌ ರೈ, ಯುವರಂಗಕ್ಕೆ ಸಹಕಾರ ನೀಡುತ್ತಿರುವ ಪದ್ಮಾವತಿ ಭವಾನಿಶಂಕರ ಗೌಡ ಇದ್ಯಪೆರವರನ್ನು ಗೌರವಿಸಲಾಯಿತು.


ಯುವರಂಗ ಕೆದಂಬಾಡಿಯ ಅಧ್ಯಕ್ಷ ನಿತೇಶ್‌ ರೈ ಕೋರಂಗವರು ಮಾತನಾಡಿ ʻಯುವರಂಗವು ಕ್ರೀಡೆ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮವನ್ನು ಎಲ್ಲರ ಸಹಕಾರದಿಂದ ನಡೆಸಿಕೊಂಡು ಬರುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರುಕುಡಿಕೆ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆʼ ಎಂದರು.
ಬೆಳಿಗ್ಗೆಯಿಂದ ಸಂಜೆಯವರಿಗೆ ಕೃಷ್ಣವೇಷ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಬಹುಮಾನಗಳ ಪ್ರಾಯೋಜಕರನ್ನು ಇದೇ ವೇಳೆ ಅಭಿನಂದಿಸಲಾಯಿತು. ಯುವರಂಗದ ಯುವ ಪ್ರತಿಭೆಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಮಧ್ಯಾಹ್ನ ಇದ್ಯಪ್ಪೆ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಅನ್ನಸಂತರ್ಪಣೆ ಜರಗಿತು. ಬೆಳಿಗ್ಗೆ ಮಂದಿರದ ವತಿಯಿಂದ ಉಪಾಹಾರ ನಡೆದಿತ್ತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಕರುಣಾಕರ ರೈ ಕೋರಂಗ ಬಹುಮಾನ ವಿತರಿಸಿದರು.


ಯುವರಂಗದ ಸಂಚಾಲಕ ಕೃಷ್ಣಕುಮಾರ್‌ ಇದ್ಯಪ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತ್‌ ಗೌಡ ಇದ್ಯಪ್ಪೆ ಸ್ವಾಗತಿಸಿ, ರಕ್ಷಿತ್‌ ಗೌಡ ಇದ್ಯಪ್ಪೆ ವಂದಿಸಿದರು. ವಿಜಯಕುಮಾರ್‌ ರೈ ಕೋರಂಗ, ಜೈದೀಪ್‌ ರೈ ಕೋರಂಗ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ನಿತಿತಾ ರೈ ಕೆರೆಮೂಲೆ, ನಿಮಿತಾ ರೈ ಕೆರೆಮೂಲೆ, ಬಾಲಚಂದ್ರ ಕೋರಂಗ, ಶ್ರೇಷ್ಠ ಬೆದ್ರುಮಾರ್‌, ಸತೀಶ್‌ ಪಟ್ಟೆತ್ತಡ್ಕ, ಲಿಖಿತ್‌ ಗೌಡ ಇದ್ಯಪ್ಪೆ ಸಹಕರಿಸಿದರು. ಯುವರಂಗದ ಸದಸ್ಯರು, ಮಾಜಿ ಪದಾಧಿಕಾರಿಗಳು, ಶ್ರೀರಾಮ ಮಂದಿರ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯವರು ಸಹಕರಿಸಿದರು. 

LEAVE A REPLY

Please enter your comment!
Please enter your name here