ಕೈಕಾರ ಬಾಣಬೆಟ್ಟುವಿನಲ್ಲಿ ಸಂಕಷ್ಟದಲ್ಲಿದ್ದ ಮನೆಗಳಿಗೆ ಶಾಸಕ ಅಶೋಕ್ ರೈ ಭೇಟಿ

0

ಸುದ್ದಿ ವರದಿಗೆ ಸ್ಪಂದನೆ

ಪುತ್ತೂರು: ತಲೆಯ ಮೇಲೊಂದು ಭದ್ರವಾದ ಸೂರಿಲ್ಲದೆ, ಟಾರ್ಪಾಲು ಹೊದಿಕೆಯ ಗುಡಿಸಲಿನಲ್ಲಿ ವಾಸವಾಗಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಾರದ, ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಸಂಜೀವ ಮತ್ತು ಜಯಲಲಿತಾ ಹಾಗೂ ಕಮಲಾ ಅವರ ಮನೆಗೆ ಶಾಸಕ ಅಶೋಕ್ ಕುಮಾರ್ ರೈಯವರು ಸೆ.೧೦ರಂದು ಭೇಟಿ ನೀಡಿ ಕುಟುಂಬಗಳ ವಸ್ತುಸ್ಥಿತಿಯನ್ನು ಅವಲೋಕಿಸಿದರು.


ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಾರದ, ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಸಂಜೀವ ಮತ್ತು ಜಯಲಲಿತಾ, ಕಮಲಾ ಅವರ ಕುಟುಂಬದ ಪರಿಸ್ಥಿತಿಯ ಬಗ್ಗೆ ಸುದ್ದಿ ವರದಿ ಬಿತ್ತರಿಸಿತ್ತು. ಈ ವರದಿಗೆ ಸ್ಪಂದಿಸಿದ ಶಾಸಕರು, ಈ ಮನೆಗಳಿಗೆ ಭೇಟಿ ನೀಡಿದರು. ಈ ವೇಳೆ ಮನೆಯವರ ಜೊತೆಗೆ ಮಾತನಾಡಿದ ಶಾಸಕರು ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪಂಚಾಯತ್‌ನಿಂದ ಸೌಲಭ್ಯಗಳನ್ನು, ಮನೆ ಪಡೆದುಕೊಳ್ಳಲು ದಾಖಲೆ ಪತ್ರಗಳ ಸಮಸ್ಯೆಯಿದ್ದು, ಅದನ್ನು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಉಚಿತವಾಗಿ ಮಾಡಿಸಿಕೊಡುವ ಭರವಸೆ ನೀಡಿದರು. ದಾಖಲಾತಿಗಳು ಸರಿಯಾದರೆ ಪಂಚಾಯತ್ ಮೂಲಕ ಮನೆ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಡಲು ಸಹಾಯವಾಗುತ್ತದೆ ಎಂದು ಹೇಳಿದರು. ಮನೆಗೆ ಪೈಪ್‌ಲೈನ್ ಒದಗಿಸಿ ಕುಡಿಯುವ ನೀರಿನ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಪಿಡಿಒಗೆ ಸ್ಥಳದಿಂದಲೇ ಫೋನ್ ಕರೆ ಮಾಡಿ ಶಾಸಕರು ಸೂಚನೆ ನೀಡಿದರು. ಜೊತೆಗೆ ಇಲ್ಲೊಂದು ಮರ ಅಪಾಯಕಾರಿಯಾಗಿದ್ದು, ಗುಡಿಸಲಿನ ಮೇಲೆ ಬೀಳುವ ಅಪಾಯವಿದೆ. ಅದನ್ನು ಕಡಿಸಿಕೊಡುವಂತೆ ಮನೆಯವರು ಶಾಸಕರಿಗೆ ಮನವಿ ಮಾಡಿದ್ದು, ಅದಕ್ಕೆ ಕೂಡ ಸ್ಪಂದಿಸಿದ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ಸುದ್ದಿ’ ಜೊತೆಗೆ ಮಾತನಾಡಿದ ಶಾಸಕರು, ಸುದ್ದಿ ಪತ್ರಿಕೆಯಲ್ಲಿ ಈ ಕುಟುಂಬಗಳ ಪರಿಸ್ಥಿತಿಯ ಬಗ್ಗೆ ಓದಿದೆ. ಇಂದಿನ ದಿನಗಳಲ್ಲಿ ಕೂಡ ಇಂತಹ ಪರಿಸ್ಥಿತಿ ಇದೆ ಎನ್ನುವುದು ನನಗೆ ಬಹಳ ಬೇಜಾರಾಗಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿ ವಸ್ತುಸ್ಥಿತಿ ನೋಡಿದ್ದೇನೆ. ಇವರಿಗೆ ಸ್ವಂತ ಆಸ್ತಿ ಇದ್ದರೂ ಸರಕಾರದಿಂದ ಬರುವ ಯೋಜನೆಗಳನ್ನು ಪಡೆದುಕೊಳ್ಳಲು ಆಗಿಲ್ಲ. ಒಂದು ಮನೆ ಈಗಾಗಲೇ ಮಂಜೂರಾಗಿದೆ. ಅವರ ಆಸ್ತಿಯ ದಾಖಲೆಗಳು ಸರಿಯಿಲ್ಲ. ಇದು ಸರಿ ಇದ್ದರೆ ಯೋಜನೆಗಳನ್ನು ಸುಲಭದಲ್ಲಿ ಪಡೆಯಬಹುದು. ಇದನ್ನು ನಮ್ಮ ಟ್ರಸ್ಟ್ ಮೂಲಕ ಸರಿಪಡಿಸಿ ಕೊಡುವ ಕೆಲಸ ಮಾಡುತ್ತೇವೆ. ಮನೆ ಕಟ್ಟಲು ಅವರಿಗೆ ಪೂರಕ ಸಾಮಾಗ್ರಿಗಳ ಕೊರತೆ ಇದೆ. ಹೀಗಾಗಿ ಆರಂಭಿಕ ಹಂತದಲ್ಲಿ ಟ್ರಸ್ಟ್ ವತಿಯಿಂದ ಸಿಮೆಂಟ್, ಕಲ್ಲು ಇತ್ಯಾದಿಗಳನ್ನು ನೀಡುವ ಕೆಲಸ ಮಾಡುತ್ತೇವೆ. ದಾಖಲೆಗಳನ್ನು ಸರಿಪಡಿಸಿ ಪಂಚಾಯತ್ ಮತ್ತು ನಾವು ಸೇರಿಕೊಂಡು ಎರಡೂ ಮನೆಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕುಟುಂಬಕ್ಕೆ ಈ ಹಿಂದೆ ನೆರವಾಗಿದ್ದವರು:
ಬಾಣಬೆಟ್ಟುವಿನ ಸಂಜೀವ ಮತ್ತು ಜಯಲಲಿತಾ ಅವರ ಕುಟುಂಬಗಳ ಶೋಚನೀಯ ಸ್ಥಿತಿಯ ಕುರಿತುಸುದ್ದಿ’ಯಲ್ಲಿ ವರದಿ ಪ್ರಸಾರವಾದ ಬಳಿಕ, ಈ ಹಿಂದೆ ಈ ಕುಟುಂಬಗಳಿಗೆ ಊರಿನ ಹಲವರು ನೆರವಾಗಿರುವ ಬಗ್ಗೆ ಊರಿನವರು `ಸುದ್ದಿ’ಯ ಗಮನಕ್ಕೆ ತಂದಿದ್ದಾರೆ. ಅದರ ಮಾಹಿತಿ ಇಲ್ಲಿ ನೀಡಲಾಗಿದೆ. ಈ ಕುಟುಂಬಗಳ ದಾಖಲೆಪತ್ರಗಳ ಸಮಸ್ಯೆಯಿದ್ದು, ಅದನ್ನು ಸರಿಪಡಿಸೋಣ ಎಂದು ಕರೆದಾಗ ಆ ಮನೆಯವರಿಂದ ನಮಗೆ ಸ್ಪಂದನೆ ಸಿಕ್ಕಿಲ್ಲ, ಕೆಲವರು ನೆರವು ನೀಡಲು ಬಂದಾಗಲೂ ಸೂಕ್ತ ಸ್ಪಂದನೆ ನೀಡಿಲ್ಲ ಎನ್ನುವ ವಿಚಾರಗಳನ್ನು ತಿಳಿಸಿದ್ದಾರೆ. ಈ ಮನೆಗಳಿಗೆ ಸಂತೋಷ್ ಕುಮಾರ್ ರೈ ಕೈಕಾರ ಅವರು ಟಾರ್ಪಾಲ್ ವ್ಯವಸ್ಥೆ ಮಾಡಿದ್ದರು. ಪ್ರಜ್ವಲ್ ರೈಯವರು ಕೂಡ ನೆರವು ನೀಡಿದ್ದಾರೆ.

ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ವಿಚಾರದಲ್ಲಿ ಸಂತೋಷ್ ರೈ ಕೈಕಾರ, ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ತ್ರಿವೇಣಿ, ವಿದ್ಯಾ, ರೇಖಾ, ಗಿರಿಜಾ ಎನ್ನುವವರು ನೆರವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಹೇಶ್ ರೈ ಕೇರಿ ಎನ್ನುವವರು ಸೇವಾ ಸಂಘಟನೆ ಮಾಡಿದ ಕೆಲಸಗಳ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ. ಜೊತೆಗೆ ಹರೀಶ್ ಬಿಜತ್ರೆ, ಪ್ರವೀಣ್ ಪಲ್ಲತ್ತಾರು, ಪ್ರಕಾಶ್ಚಂದ್ರ ರೈ ಕೈಕಾರ, ಕಿರಣ್ ಪುಂಡಿಕಾಯಿ, ಬಿಜತ್ರೆ ಶ್ರೀನಿವಾಸ್, ಯತೀಶ, ರೇಖಾ ಹೀಗೆ ಬಹಳಷ್ಟು ಮಂದಿ ಈ ಕುಟುಂಬಗಳಿಗೆ ನೆರವು ನೀಡಿದ್ದಾರೆ ಎಂದು ತಿಳಿದುಬಂದಿದೆ. ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸ್ಟವ್ ಪಡೆದ ಸಂದರ್ಭದಲ್ಲಿ ಗ್ಯಾಸ್ ಅಳವಡಿಕೆ, ಬಳಕೆ ಹೇಗೆ ಎನ್ನುವ ಬಗ್ಗೆ ಈ ಕುಟುಂಬಗಳಿಗೆ ಮಾಹಿತಿ ಇರಲಿಲ್ಲ. ಈ ಸಂದರ್ಭದಲ್ಲಿ ಸದಸ್ಯೆ ರೇಖಾ ಎನ್ನುವವರು ಮನೆಗೆ ತೆರಳಿ ಬಳಕೆಯ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.

`ನೀವು ಅಲ್ಲಿಂದ ಬಂದು ಇಂತಹ ವಿಚಾರಗಳನ್ನು ಹುಡುಕಿ ಜನಪ್ರತಿನಿಧಿಗಳಿಗೆ ತಲುಪಿಸಿದ್ದೀರಿ. ಅವರಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಇದನ್ನು ನಮ್ಮ ಗಮನಕ್ಕೆ ತರುವ ಕೆಲಸ ಮಾಡಿದ್ದೀರಿ. ಮಾಧ್ಯಮಗಳು ಇಂತಹ ಕೆಲಸ ಮಾಡಬೇಕು. ಇದಕ್ಕಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಮೂಲಕ ಇವರಿಗೆ ಸೂರು ಆಗುವುದಿದ್ದರೆ ಅದರ ವಿಚಾರಗಳುಸುದ್ದಿ’ಗೆ ಸಲ್ಲಬೇಕು. ಮುಂದಿನ ದಿನಗಳಲ್ಲಿ ಅವರಿಗೆ ಮನೆ ಮಾಡಿಕೊಡುವ ಕೆಲಸ ಖಂಡಿತಾ ಮಾಡುತ್ತೇವೆ.”
-ಅಶೋಕ್ ಕುಮಾರ್ ರೈ, ಶಾಸಕರು

LEAVE A REPLY

Please enter your comment!
Please enter your name here