ಕುಂಬ್ರ: ಕೈಕಾರ ಬಾಣಬೆಟ್ಟುವಿನಲ್ಲಿ ಸಂಕಷ್ಟದಲ್ಲಿರುವ ಮನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಂಡ ಭೇಟಿ

0

ವಿಕಲಚೇತನೆ ಸವಿತಾ ಹಾಗೂ ಜಯಲಲಿತಾ ಕುಟುಂಬಕ್ಕೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಾಣದ ಭರವಸೆ

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಾರ ಸಮೀಪದ ಬಾಣಬೆಟ್ಟು ಎಂಬಲ್ಲಿ ಟಾರ್ಪಲು ಹಾಸಿದ ಗುಡಿಸಲಿನಲ್ಲಿ ವಾಸವಾಗಿರುವ ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಸಂಜೀವ,ಜಯಲಲಿತಾ, ಕಮಲರವರ ಮನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಂಡವು ಸೆ.12 ರಂದು ಭೇಟಿ ನೀಡಿ ಮನೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಈ ಬಡ ಸಮುದಾಯದ ಬಗ್ಗೆ ಸುದ್ದಿ ವರದಿ ಪ್ರಕಟಿಸಿತ್ತು ಈ ವರದಿಗೆ ಸ್ಪಂದಿಸಿದ ಗ್ರಾಮಾಭಿವೃದ್ಧಿಯ ಯೋಜನೆಯ ತಂಡವು ಮನೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಛೇರಿಯ ಜ್ಞಾನವಿಕಾಸದ ನಿರ್ದೇಶಕರಾದ ವಿಠಲ ಪೂಜಾರಿಯವರು, ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಾಣ ಮಾಡಿಕೊಡುತ್ತಿದ್ದೇವೆ. ಸುಮಾರು 52 ಸಾವಿರ ಕುಟುಂಬಗಳು ಈ ವಾತ್ಸಲ್ಯ ಕಾರ್ಯಕ್ರಮದ ಸಮೀಕ್ಷೆಯಲ್ಲಿದ್ದು ಈ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಸಂಪೂರ್ಣ ನಿರ್ಗತಿಕ ಕುಟುಂಬಗಳು ಎಂದು ಪರಿಗಣಿಸಲಾಗಿರುವ ಸುಮಾರು 16873 ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಪೂರೈಸುವ ಕೆಲಸ ಆಗುತ್ತಿದೆ. ಈ ಕುಟುಂಬಗಳಿಗೆ ಬೇಕಾದ ಆಹಾರ, ಔಷಧಿ ಪೂರೈಕೆ ಹಾಗೂ ವಿವಿಧ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.


ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಾಣ
ಬಾಣಬೆಟ್ಟುವಿನಲ್ಲಿರುವ ಈ ಕುಟುಂಬಗಳ ಬಗ್ಗೆ ಮಾಹಿತಿ ನೀಡಿದ ವಿಠಲ ಪೂಜಾರಿಯವರು, ಈ ಕುಟುಂಬದಲ್ಲಿ ವಿಕಲಚೇತನೆಯಾಗಿರುವ ಸವಿತಾ ಮತ್ತು ಅವರ ತಾಯಿ ಜಯಲಲಿತಾ ವಾಸವಾಗಿರುವ ಕುಟುಂಬಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಕಟ್ಟಿ ಕೊಡುವ ಬಗ್ಗೆ ಭರವಸೆ ನೀಡಿದರು. ವಾಸಕ್ಕೆ ಯೋಗ್ಯವಾದ ಹೆಚ್ಚು ಆಡಂಬರವಿಲ್ಲದ ಮನೆಯನ್ನು ವಾತ್ಸಲ್ಯ ಕಾರ್ಯಕ್ರಮದಡಿ ಕಟ್ಟಿ ಕೊಡುತ್ತಿದ್ದೇವೆ. ಇದಕ್ಕೆ ಮನೆಯವರ ಒಪ್ಪಿಗೆ ಅವಶ್ಯಕ ಎಂದರು. ಮನೆಯವರು ಒಪ್ಪಿಗೆ ನೀಡಿದರೆ ಮನೆ ಕಟ್ಟಿ ಕೊಡುವ ಬಗ್ಗೆ ಭರವಸೆ ನೀಡಿದರು. ಮನೆ ನಿರ್ಮಾಣಕ್ಕೆ ಕುಟುಂಬದವರು ಸಂಪೂರ್ಣ ಒಪ್ಪಿಗೆ ಸೂಚಿಸಬೇಕಾಗಿದ್ದು ಇದಲ್ಲದೆ ಮನೆ ನಿರ್ಮಾಣಕ್ಕೆ ಸೂಕ್ತವಾದ ಸ್ಥಳವನ್ನು ಗುರುತಿಸಿ ಯೋಜನೆಯ ತಂಡದೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು. ಕುಟುಂಬದ ಓರ್ವ ಯುವಕ ಪ್ರಜನ್ ಎಂಬವರಿಗೆ ಅವರು ಒಪ್ಪಿಗೆ ನೀಡಿದರೆ ಧರ್ಮಸ್ಥಳದಲ್ಲಿ ಉದ್ಯೋಗ ಕೂಡ ಮಾಡಿಕೊಡುವ ಬಗ್ಗೆ ವಿಠಲ ಪೂಜಾರಿಯವರು ತಿಳಿಸಿದರು.


ವಿಕಲಚೇತನೆಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತೇವೆ
ವಿಕಲಚೇತನೆಯಾಗಿರುವ ಸವಿತಾರವರಿಗೆ ಈಗಾಗಲೇ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಂದೊಮ್ಮೆ ಚಿಕಿತ್ಸೆ ನೀಡಲಾಗಿದ್ದು ಈಗಲೂ ಔಷಧಿ ಸೇವನೆ ಮಾಡುತ್ತಿದ್ದಾರೆ ಎಂದು ಮನೆಯವರು ಮಾಹಿತಿ ನೀಡಿದರು. ಈ ಬಗ್ಗೆ ಮಾತನಾಡಿದ ವಿಠಲ ಪೂಜಾರಿಯವರು, ಸವಿತಾರವರಿಗೆ ಬೇಕಾದ ಚಿಕಿತ್ಸೆಯನ್ನು ಕೂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಲಾಗುವುದು ಇದಕ್ಕೆ ಮನೆಯವರು ಒಪ್ಪಿಗೆ ನೀಡಬೇಕಾಗಿದೆ ಹಾಗೂ ಸವಿತಾರವರೊಂದಿಗೆ ಆಸ್ಪತ್ರೆಯಲ್ಲಿ ನಿಲ್ಲಲು ಸಿದ್ಧರಿರಬೇಕು ಎಂದು ಮನೆಯವರಿಗೆ ತಿಳಿಸಿದರು. ಸವಿತಾರವರನ್ನು ಮತ್ತೊಮ್ಮೆ ವೈದ್ಯರಲ್ಲಿ ಪರೀಕ್ಷಿಸಿ ಅವರಿಗೆ ಬೇಕಾದ ಔಷಧಿಗಳನ್ನು ಪಡೆದುಕೊಳ್ಳುವಂತೆ ಇದಕ್ಕೆ ಯೋಜನೆ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ 2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ ಎಂ, ಜ್ಷಾನ ವಿಕಾಸ ಯೋಜನಾಧಿಕಾರಿ ಅಮೃತ ಶೆಟ್ಟಿ,ಕುಂಬ್ರ ವಲಯ ಮೇಲ್ವಿಚಾರಕಿ ಮೋಹಿನಿ ಎಸ್.ಗೌಡ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವಲಯ ಜನಜಾಗೃತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯ ಆಚಾರ್ಯ, ಸೇವಾ ಪ್ರತಿನಿಧಿ ಅಕ್ಷತಾ ರೈ, ಒಳಮೊಗ್ರು ಗ್ರಾಪಂ ಸದಸ್ಯೆ ರೇಖಾ ಯತೀಶ್ ಉಪಸ್ಥಿತರಿದ್ದರು.


‘ ಬಾಣಬೆಟ್ಟುವಿನಲ್ಲಿರುವ ಕುಟುಂಬಗಳ ಬಗ್ಗೆ ಸುದ್ದಿ ಪತ್ರಿಕೆ ವರದಿ ಮಾಡಿದ್ದು ಈ ವರದಿಗೆ ಸ್ಪಂದಿಸಿ ನಾವು ಇಲ್ಲಿಗೆ ಭೇಟಿ ನೀಡಿದ್ದೇವೆ. ಮನೆಯವರು ಪರಿಸ್ಥಿತಿ ಅವಲೋಕನ ನಡೆಸಿದಾಗ ಈ ಕುಟುಂಬಗಳಲ್ಲಿ ಮಾನಸಿಕ ಅಸ್ವತ್ಥೆಯಾಗಿರುವ ಸವಿತಾ ಹಾಗೂ ಅವರ ತಾಯಿ ಜಯಲಲಿತಾ ವಾಸವಾಗಿರುವ ಟಾರ್ಪಲ್ ಹೊದಿಸಿದ ಬಡ ಗುಡಿಸಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ನಿರ್ಮಿಸಿ ಕೊಡಲು ಸಾಧ್ಯವಿದೆ. ಏಕೆಂದರೆ ಇಲ್ಲಿ ಸವಿತಾರವರನ್ನು ಬಿಟ್ಟು ಅವರ ತಾಯಿಗೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ ಹೀಗಿರುವಾಗ ಅವರಿಗೆ ಸೂರಿನ ಅಗತ್ಯತೆ ತುಂಬಾ ಇದೆ.ಈ ಬಗ್ಗೆ ಮನೆಯವರು ಒಪ್ಪಿಗೆ ಸೂಚಿಸಿದರೆ ವಾಸಕ್ಕೆ ಯೋಗ್ಯವಾದ ಮನೆಯನ್ನು ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಮಿಸಿ ಕೊಡುತ್ತೇವೆ. ಹಾಗೇ ಮಾನಸಿಕ ಅಸ್ವಸ್ಥೆಯಾಗಿರುವ ಸವಿತಾರವರ ಆರೋಗ್ಯದ ಬಗ್ಗೆಯೂ ಗ್ರಾಮಾಭಿವೃದ್ಧಿ ಯೋಜನೆಯ ನಿಗಾ ವಹಿಸುವುದು ಅವರಿಗೆ ಬೇಕಾದ ಔಷಧಿಗಳನ್ನು ಕೂಡ ಪೂರೈಕೆ ಮಾಡಲಾಗುವುದು ಇದಕ್ಕೆ ಮುಖ್ಯವಾಗಿ ಮನೆಯವರ ಸಂಪೂರ್ಣ ಒಪ್ಪಿಗೆಯ ಅವಶ್ಯಕತೆ ಇದೆ.’

ವಿಠಲ ಪೂಜಾರಿ, ನಿರ್ದೇಶಕರು, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ಕಛೇರಿ


‘ ಬಾಣಬೆಟ್ಟು ಕುಟುಂಬದ ಅಭಿವೃದ್ಧಿಯ ಬಗ್ಗೆ ಗ್ರಾಮ ಪಂಚಾಯತ್ ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದೆ. ಇವರಿಗೆ ಜಾಗದ ರೇಕಾರ್ಡ್ ಸಮಸ್ಯೆ ಇರುವುದರಿಂದ ತುಂಬಾ ಸಮಸ್ಯೆಯಾಗಿದೆ. ಈಗಾಗಲೇ ಇದರಲ್ಲಿ ಕಮಲರವರ ಕುಟುಂಬಕ್ಕೆ ಸರಕಾರದಿಂದ ಮನೆ ಮಂಜೂರಾಗಿದ್ದು ಪಂಚಾಂಗ ಕೂಡ ಆಗಿದೆ. ಇವರ ಆರೋಗ್ಯದ ಬಗ್ಗೆಯೂ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು ಮಾನಸಿಕ ಅಸ್ವಸ್ಥೆಯಾಗಿರುವ ಸವಿತಾರವರನ್ನು ನಾವೇ ಸ್ವಂತ ಆಂಬುಲೆನ್ಸ್‌ನಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೇವೆ. ಕೇಂದ್ರ ಸರಕಾರದ ಉಜ್ವಲ ಗ್ಯಾಸ್ ಸಂಪರ್ಕವನ್ನು ಕೂಡ ಮಾಡಿಕೊಡಲಾಗಿದೆ. ಇದಲ್ಲದೆ ವಿಕಲಚೇತನೆಯವರ ಮಾಸಿಕ ಪಿಂಚಣಿ ವ್ಯವಸ್ಥೆಯನ್ನು ಮಾಡಿಕೊಡಲಾಗಿದ್ದು ಸದ್ಯದಲ್ಲೇ ಪಿಂಚಣಿ ಕೂಡ ಜಾರಿಯಾಗಬಹುದು ಇನ್ನೂ ಕುಡಿಯುವ ನೀರಿನ ಬಗ್ಗೆ ಜಲಜೀವನ್ ಮಿಷನ್ ಯೋಜನೆಯಡಿ ಪೈಪು ಲೈನ್, ನೀರಿನ ನಳ್ಳಿ ಸಂಪರ್ಕ ಆಗಿದ್ದು ಶೀಘ್ರದಲ್ಲೇ ನೀರು ಸರಬರಾಜು ಆಗಲಿದೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here