ಪುತ್ತೂರು:ಬನ್ನೂರು ಗ್ರಾಮದ ಅಡೆಂಚಿಲಡ್ಕ-ಕುಂಟ್ಯಾನ ಸದಾಶಿವ ಕಾಲೊನಿ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ದೊಡ್ಡ ಸಂಖ್ಯೆಯಲ್ಲಿ ನಾಯಿಗಳು ಸಾವನ್ನಪ್ಪಿರುವ ವಿಚಾರಕ್ಕೆ ಸಂಬಂಧಿಸಿ ನಿಯಮಾನುಸಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಹಾಯಕ ಕಮಿಷನರ್ ಅವರು ಪುತ್ತೂರು ನಗರಸಭೆ ಪೌರಾಯುಕ್ತರಿಗೆ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ಬನ್ನೂರು ಗ್ರಾಮದ ಅಡೆಂಚಿಲಡ್ಕದಲ್ಲಿ ನಾಯಿಗಳು ಸಾವನ್ನಪ್ಪಿದ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.ನಾಯಿಗಳ ಸಾವಿನ ಕುರಿತು ತನಿಖೆ ನಡೆಸಲು ಪಶು ಇಲಾಖೆಯ ಸಹಾಯಕ ನಿರ್ದೇಶಕರು ಆಗಮಿಸಿ ಪರಿಶೀಲನೆ ನಡೆಸಿದ್ದರು.ಶ್ವಾನ ಪ್ರಿಯ ರಾಜೇಶ್ ಬನ್ನೂರು ಮತ್ತು ಶಶಿಧರ್ ವಿ.ಎನ್ ಅವರು, ನಾಯಿಗಳು ಸಾವನ್ನಪ್ಪಿರುವ ವಿಚಾರದ ಕುರಿತು ಸಾಕುಪ್ರಾಣಿಗಳ ವಧೆ ದೂರು ದಾಖಲಿಸಿ ದುರಾಚಾರ ನಡೆಸಿರುವ ಪಾತಕಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಸಹಾಯಕ ಕಮಿಷನರ್ ಅವರಿಗೆ ದೂರು ನೀಡಿದ್ದರು.ಅವರ ದೂರಿಗೆ ಸಂಬಂಧಿಸಿ,ನಿಯಮಾನುಸಾರ ಪರಿಶೀಲನೆ ನಡೆಸಿ ಅವಶ್ಯ ಕ್ರಮ ಜರುಗಿಸಬೇಕಾಗಿ ಮತ್ತು ಕೈಗೊಂಡ ಕ್ರಮದ ಕುರಿತು ಸಂಬಂಧಿಸಿದವರಿಗೆ ತಿಳುವಳಿಕೆ ಪತ್ರ ನೀಡುವಂತೆ ನಗರಸಭೆ ಪೌರಾಯುಕ್ತ ಮತ್ತು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸಹಾಯಕ ಕಮಿಷನರ್ ಸೂಚನೆ ನೀಡಿದ್ದಾರೆ.