ಸೆ.15: ಕೊಡಿಪಾಡಿ ಶ್ರೀ ಜನಾರ್ದನ‌ ಕ್ಷೇತ್ರದಲ್ಲಿ ಪವಿತ್ರ ತೀರ್ಥಸ್ನಾನ

0

ಪುತ್ತೂರು: ಕೊಡಿಪ್ಪಾಡಿ ತೀರ್ಥ ಎಂದೇ ಪ್ರಸಿದ್ದಿಯಾಗಿರುವ ಪುತ್ತೂರು ತಾಲೂಕಿನ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪವಿತ್ರ ತೀರ್ಥ ಸ್ನಾನ ಸೆ.15ರಂದು ನಡೆಯಲಿದೆ.
ಪುತ್ತೂರಿನಿಂದ ಮಂಗಳೂರು ರಸ್ತೆಯಲ್ಲಿ ಎರಡು ಕಿಲೋ ಮೀಟರ್ ಸಂಚರಿಸಿದಾಗ ಸಿಗುವ ಮಂಜಲ್ಪಡ್ಪು ಎಂಬಲ್ಲಿರುವ ಶ್ರೀ ಜನಾರ್ದನ ದ್ವಾರದಲ್ಲಿ ಒಳಕ್ಕೆ ಸುಮಾರು ಮೂರು ಕಿಲೋ ಮೀಟರ್ ದೂರ ಕ್ರಮಿಸುವಾಗ ಸಿಗುವ ದೇವಾಲಯವೇ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನ.


ಜನಾರ್ದನನೆಂಬ ಋಷಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಈ ದೇವಾಲಯಕ್ಕೆ ಸುಮಾರು 3000 ವರ್ಷಗಳ ಇತಿಹಾಸವಿದೆ. ಇಲ್ಲಿಯ ಪ್ರಧಾನ ದೇವರು ಶ್ರೀ ಜನಾರ್ದನ ಸ್ವಾಮಿ ಇಲ್ಲಿ ಉಪದೇವರಾಗಿ ವಿಶೇಷ ಬಲಮುರಿ ಶ್ರೀ ಗಣಪತಿ, ಜಿಲ್ಲೆಯಲ್ಲೆ ಅತೀ ಅಪರೂಪದ ಶ್ರೀ ಪಾರ್ಥಸಾರಥಿ, ಶಾಸ್ತಾವು ಹಾಗೂ ಕ್ಷೇತ್ರ ರಕ್ಷಕಿಯಾಗಿ ಹುಲಿಚಾಮುಂಡಿ ದೈವವು ಆರಾಧಿಸಲ್ಪಡುತ್ತಿದೆ. ಇಲ್ಲಿ ಶ್ರಾವಣ ಮಾಸದ ಅಮಾವಾಸ್ಯೆಯಂದು ನಡೆಯುವ ತೀರ್ಥ ಸ್ನಾನವು ಕೊಡಿಪಾಡಿ ತೀರ್ಥವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು 700 ವರ್ಷಗಳ ಹಿಂದೆ ಈ ದೇವಾಲಯಕ್ಕೆ ಶ್ರೀ ಮಧ್ವಾಚಾರ್ಯರು ಆಗಮಿಸಿ ಇಲ್ಲಿ ನಾಲ್ಕು ತಿಂಗಳುಗಳ ಕಾಲ ಚಾತುರ್ಮಾಸ ವ್ರತವನ್ನು ಕೈಗೊಂಡಿದ್ದರು. ಅವರು ತಪವನ್ನಾಚರಿಸಿದ ಶಿಲೆಯನ್ನು ದೇವಾಲಯದಲ್ಲಿ ಇಂದಿಗೂ ಕಾಣಬಹುದು. ಮಧ್ವಾಚಾರ್ಯರು ಪ್ರತಿವರ್ಷ ಶ್ರಾವಣ ಮಾಸದ ಅಮವಾಸ್ಯೆಯಂದು ಕಾಶಿಯಲ್ಲಿ ಗಂಗಾ ಸ್ನಾನ ಮಾಡುತ್ತಿದ್ದರು. ಆದರೆ ಅವರು ಕೊಡಿಪಾಡಿ ದೇವಾಲಯದಲ್ಲಿ ಚಾತುರ್ಮಾಸ ವೃತ ಕೈಗೊಂಡ ಸಂದರ್ಭದಲ್ಲಿ ಈ ಬಾರಿ ತನಗೆ ಕಾಶಿಯಲ್ಲಿ ಗಂಗಾ ಸ್ನಾನ ಪ್ರಾಪ್ತಿಯಾಗುವುದಿಲ್ಲ ಎಂದು ಮನದಲ್ಲಿ ಚಿಂತಿತರಾದರು. ಅದೇ ದಿನ ರಾತ್ರಿ ಗಂಗಾಮಾತೆಯು ಮಧ್ವಾಚಾರ್ಯರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು “ಯತಿವರ್ಯ ನೀನಿರುವ ಕ್ಷೇತ್ರದ ಕೆರೆಯ ಬಳಿ ಇರುವ ಕುಂಡಿಗೆಯಲ್ಲಿ ತೀರ್ಥರೂಪದಲ್ಲಿ ನಾನು ನಿನಗೆ ಕಾಣಿಸಿಕೊಳ್ಳುತ್ತೇನೆ ಅದರಲ್ಲಿ ಮಿಂದು ಪವಿತ್ರನಾಗು” ಎಂದು ಅಭಯವಿತ್ತಳು ಎಂಬುದು ಪ್ರತೀತಿ. ಅಂದಿನಿಂದ ಪ್ರತಿವರ್ಷ ಶ್ರಾವಣಮಾಸದ ಅಮಾವಾಸ್ಯೆಯಂದು ಗಂಗಾ ಮಾತೆಯು ಕೊಡಿಪ್ಪಾಡಿ ದೇವಾಲಯದ ಬಳಿಯ ಕುಂಡಿಗೆಯಲ್ಲಿ ಪ್ರತ್ಯಕ್ಷಳಾಗುತ್ತಾಳೆ ಎಂಬುದು ನಂಬಿಕೆ. ಈ ತೀರ್ಥವೇ ಕೊಡಿಪಾಡಿ ತೀರ್ಥವೆಂದು ಬಹುಪ್ರಸಿದ್ಧಿಯನ್ನು ಹೊಂದಿದೆ. ಆದ್ದರಿಂದ ಪ್ರತೀ ವರ್ಷ ಈ ಪುಣ್ಯ ದಿನದಂದು ಸಾವಿರಾರು ಭಕ್ತರು ಶ್ರೀ ಕ್ಷೇತ್ರದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡುತ್ತಾರೆ.

ಈ ಕುಂಡಿಗೆಯಲ್ಲಿ ತೀರ್ಥ ಸ್ನಾನ ಮಾಡಿದರೆ ಕಾಲಿನ ಆಣಿ, ಕೆಡು ಹಾಗೂ ಅನೇಕ ವಿಧದ ಚರ್ಮ ವ್ಯಾಧಿ ನಿವಾರಣೆಯಾಗುತ್ತದೆ. ಇಲ್ಲಿ ಹರಕೆ ಹೇಳಿಕೊಳ್ಳುವವರು ದೇವಾಲಯಕ್ಕೆ ಆಗಮಿಸಿ ಚರ್ಮರೋಗ ನಿವಾರಣೆಯಾದರೆ ದೇವಾಲಯದ ಕೆರೆಗೆ ಮೂಡೆ ಅಕ್ಕಿ ಅರ್ಪಿಸಿ ಕುಂಡಿಗೆಯಲ್ಲಿ ತೀರ್ಥ ಸ್ನಾನ ಮಾಡುತ್ತೇವೆ ಎಂದು ಅರ್ಚಕರ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಂತೆ ತಮ್ಮ ಚರ್ಮರೋಗ ಸಂಪೂರ್ಣ ನಿವಾರಣೆಯಾದವರು ದೇವಾಲಯದಲ್ಲಿ ತಮ್ಮ ಹರಕೆಯನ್ನು ಸಂದಾಯ ಮಾಡುತ್ತಾರೆ ಈ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಚರ್ಮರೋಗ ನಿವಾರಣೆಯಾದ ಬಗ್ಗೆ ಸಾಕಷ್ಟು ನಿದರ್ಶನಗಳಿವೆ. ವರ್ಷಂಪ್ರತಿ ಸಾವಿರಾರು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ತೀರ್ಥ ಸ್ನಾನ ಗೈಯುತ್ತಿದ್ದಾರೆ. ಈ ಬಾರಿಯ ತೀರ್ಥ ಸ್ನಾನವು ಸೆ.15ರಂದು ಬೆಳಗ್ಗೆ ಗಂಗಾಪೂಜೆಯ ಬಳಿಕ ಆರಂಭಗೊಳ್ಳಲಿದೆ. ತೀರ್ಥ ಸ್ನಾನ ನಂತರ ಶ್ರೀ ದೇವರ ಪೂಜೆ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಊರ ಪುರವೂರಿನಿಂದ ಭಕ್ತರು ತೀರ್ಥಸ್ನಾನಕ್ಕೆ ಬರಲಿದ್ದು, ಅದಕ್ಕಾಗಿ ಸಕಲ ಸಿದ್ದತೆಗಳು ನಡೆಯುತ್ತಿವೆ.

LEAVE A REPLY

Please enter your comment!
Please enter your name here