ವಿಟ್ಲ: ಸಿಂಹ ಮಾಸದ ಪ್ರಯುಕ್ತ ವಿಟ್ಲ ಶ್ರೀಭಗವತೀ ದೇವಸ್ಥಾನದಲ್ಲಿ ಭಾನುವಾರ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರ(ರಿ.) ಇದರ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯೋಹಂ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಶ್ರೀಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅವರು ದೀಪ ಬೆಳಗಿಸಿ ಭರತನಾಟ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ನೃತ್ಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಈ ಸಂದರ್ಭ ನೃತ್ಯಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರನ್ನು ವಿಟ್ಲ ಶಾಖೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾದ ತೊಳೆದು, ಹೂಹಾರ, ಹಾಕಿ, ಆರತಿ ಬೆಳಗಿ, ಗುರು ವಂದನೆ ಸಲ್ಲಿಸಿದರು. ಪೋಷಕರಾದ ರಶ್ಮಿ ನಿಡ್ಲೆ ಪರಿಚಯಿಸಿದರು. ಅನ್ನಪೂರ್ಣ ಸ್ವಾಗತಿಸಿ, ನಿರೂಪಿಸಿದರು. ರಮೇಶ್ ವಂದಿಸಿದರು.
ಬಳಿಕ ನಡೆದ ಭರತನಾಟ್ಯ ಪ್ರದರ್ಶನದಲ್ಲಿ ನಟುವಾಂಗ ಮತ್ತು ನೃತ್ಯ ನಿರ್ದೇಶನ ವಿದುಷಿ ಶಾಲಿನಿ ಆತ್ಮಭೂಷಣ್, ವಸಂತ ಕುಮಾರ್ ಗೋಸಾಡ ಹಾಡುಗಾರಿಕೆ, ವಿದ್ವಾನ್ ಗೀತೇಶ್ ನೀಲೇಶ್ವರ ಮೃದಂಗ ಹಾಗೂ ವಿದ್ವಾನ್ ಬಾಲರಾಜ್ ಕಾಸರಗೋಡು ವಾಯಲಿನ್‌ನಲ್ಲಿ ಸಹಕರಿಸಿದರು.