ಪುತ್ತೂರು:ಆರು ವರ್ಷಗಳ ಹಿಂದೆ ಕಬಕ ಗ್ರಾಮದ ನೆಹರುನಗರ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಬಸ್ ಚಾಲಕ ಸಹಿತ ಮೂವರು ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಾಮಕೃಷ್ಣ ಅವರು ಹಲ್ಲೆಗೊಳಗಾದವರು.ಬಸ್ ನಿರ್ವಾಹಕ ರಿಯಾಜ್ ಮುಲ್ಲಾರ್ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.2017ರ ಡಿ.29ರಂದು ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನೆಹರು ನಗರ ಎಂಬಲ್ಲಿಗೆ ತಲುಪಿದಾಗ ಖಾಸಗಿ ಬಸ್‌ವೊಂದನ್ನು ದಿಢೀರ್ ಬ್ರೇಕ್ ಹಾಕಿ ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡವಾಗಿ ನಿಲ್ಲಿಸಲಾಗಿತ್ತು.ಈ ಕುರಿತು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ರಾಮಕೃಷ್ಣ ಅವರು ಪ್ರಶ್ನಿಸಿದಾಗ ಆರೋಪಿ ಖಾಸಗಿ ಬಸ್ ಚಾಲಕ ಪಿ.ಎ.ಜೋಯ್ ಎಂಬವರು ರಾಮಕೃಷ್ಣ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಅವರೊಂದಿಗೆ ಇತರ ಮೂವರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ರಿಯಾಜ್ ಮುಲ್ಲಾರ್ ಅವರು ಈ ಕುರಿತು ನೀಡಿದ್ದ ದೂರಿನಂತೆ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಪ್ರಕರಣ ಸಹಿತ ಭಾರತೀಯ ದಂಡ ಸಂಹಿತೆಯ ಕಲಂ 341, 504, 506, 332, 352, ಜೊತೆಗೆ 34 ಕಾಯ್ದೆಯನ್ವಯ ಆರೋಪಿಗಳಾದ ಪಿ.ಎ.ಜೋಯ್, ಧನು ಅಲಿಯಾಸ್ ಧನಂಜಯ, ಇಬ್ರಾಹಿಂ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಚಾಲಕ ಕರ್ತವ್ಯದಲ್ಲಿರುವ ಬಗ್ಗೆ ದಾಖಲಾತಿಯಿಲ್ಲ:
ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು ಸುಮಾರು 14 ಸಾಕ್ಷಿಗಳ ಪೈಕಿ 13 ಸಾಕ್ಷಿಗಳನ್ನು ತನಿಖೆ ನಡೆಸಿ, ಸುಮಾರು 14 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸಲ್ಪಟ್ಟಿತ್ತು, ಮತ್ತು ಅಂತಿಮವಾಗಿ 2ನೇ ಮತ್ತು 3ನೇ ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು, ಆರೋಪಿ ಧನಂಜಯ ಮತ್ತು ಇಬ್ರಾಹಿಂ ಅವರ ಹೆಸರುಗಳೇ ಪ್ರಥಮ ವರ್ತಮಾನ ವರದಿಯಲ್ಲಿ ಕಂಡುಬರುವುದಿಲ್ಲ.ಆರೋಪಿಗಳ ಸಂಖ್ಯೆ ಒಮ್ಮೆ 3, ಒಮ್ಮೆ 4 ಮತ್ತು ಒಮ್ಮೆ 5 ಎಂದು ಬೇರೆ ಬೇರೆ ರೀತಿಯಾಗಿ ಹೇಳಿರುತ್ತಾರೆ.ಆರೋಪಿಗಳ ಚಹರೆಯ ಬಗ್ಗೆ ಎಲ್ಲೂ ವಿವರ ಇರುವುದಿಲ್ಲ, ಮತ್ತು ಅವರ ಗುರುತಿಸುವ ಬಗ್ಗೆ ಯಾವುದೇ ಕವಾಯತು ಮಾಡಿರುವುದಿಲ್ಲ. ಯಾವ ಆಧಾರದಲ್ಲಿ ಈ ಕೇಸಿನಲ್ಲಿ ಅವರನ್ನು ಸೇರಿಸಲ್ಪಟ್ಟಿದೆ ಎಂಬುವುದಕ್ಕೂ ಸೂಕ್ತವಾದ ಮಾಹಿತಿ ಇಲ್ಲ.ಅದೇ ಪ್ರಕಾರ ಆರೋಪಿಗಳ ಬಂಧಿಸಿದ ನಂತರ ಅವರ ಗುರುತಿಸುವಿಕೆಯ ಬಗ್ಗೆ ರಿಯಾಜ್ ಮುಲ್ಲಾರ್‌ರವರು ಹೇಳಿದಂತೆ ಕಂಡು ಬರುತ್ತದೆ.ಮಾತ್ರವಲ್ಲದೆ, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ರಾಮಕೃಷ್ಣರವರು ಘಟನೆ ನಡೆದಿದೆ ಎನ್ನಲಾದ ಸಮಯ ಕರ್ತವ್ಯದಲ್ಲಿ ಇದ್ದರು ಎಂಬುವುದರ ಬಗ್ಗೆ ಸೂಕ್ತ ದಾಖಲಾತಿಗಳೂ ಇರುವುದಿಲ್ಲ ಎಂಬುದಾಗಿ ಆರೋಪಿಗಳ ಪರ ವಕೀಲರು ವಾದಿಸಿದ್ದರು.ವಾದ ವಿವಾದಗಳನ್ನು ಅಲಿಸಿದ ನಂತರ ಸದ್ರಿ ಅಭಿಯೋಜನ ಪರ ದಾಖಲೆಗಳನ್ನು ಪರಿಶೀಲಿಸಿ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸ೦ಶಯಾತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎ೦ದೂ ತೀರ್ಮಾನಿಸಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶ ಗೌಡ ಆರ್.ಪಿ ರವರು ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿ ಆದೇಶಿಸಿರುತ್ತಾರೆ.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.2 ಮತ್ತು 3ನೇ ಆರೋಪಿಗಳ ಪರ ಹಿರಿಯ ವಕೀಲ ಮಹೇಶ್ ಕಜೆ, 1ನೇ ಆರೋಪಿ ಪರ ಮಾಧವ ಪೂಜಾರಿ ವಾದ ಮಂಡಿಸಿದ್ದರು