ಮಂಗಳೂರು ಸುಬ್ರಹ್ಮಣ್ಯ ಬೆಳಿಗ್ಗೆ ಸಂಜೆ ರೈಲು ಸಂಚಾರಕ್ಕೆ ಸಂಸದರಿಗೆ ಮಾಜಿ ಶಾಸಕ ಮಠಂದೂರು ಮನವಿ

0

ಪುತ್ತೂರು:ಮಂಗಳೂರುನಿಂದ ಸುಬ್ರಹ್ಮಣ್ಯಕ್ಕೆ ಬೆಳಿಗ್ಗೆ ಮತ್ತು ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಜೆ ಪ್ರಯಾಣಿಕ ರೈಲು ಸಂಚಾರ ಸೌಲಭ್ಯ ಒದಗಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿದ್ದಾರೆ.


1979-80ರಲ್ಲಿ ಹಾಸನ ಮಂಗಳೂರು ರೈಲ್ವೇ ಲೈನ್ ಪ್ರಾರಂಭವಾದ ನಂತರ ಪ್ರತಿ ದಿನ ರಾತ್ರಿ ಬೆಂಗಳೂರಿನಿಂದ ಹೊರಟ ಎಕ್ಸ್ಪ್ರೆಸ್ ರೈಲು ಸುಬ್ರಹ್ಮಣ್ಯಕ್ಕೆ ಬೆಳಿಗ್ಗೆ ಗಂಟೆ 6.30ರ ಸುಮಾರಿಗೆ ತಲುಪಿ, ನಂತರ ಮಂಗಳೂರು ಕಡೆ ಹೋಗುವಾಗ ಎಲ್ಲಾ ಗ್ರಾಮೀಣ ಸ್ಟೇಷನ್‌ಗಳಾದ ಬಜಕರೆ, ಕೋಡಿಂಬಾಳ, ಎಡಮಂಗಲ, ಕಾಣಿಯೂರು, ನರಿಮೊಗರು ಇತ್ಯಾದಿ ಸ್ಥಳಗಳಲ್ಲೂ ನಿಲ್ಲುತ್ತಿತ್ತು. ಅದೇ ರೀತಿ ಸಂಜೆ ಗಂಟೆ 6ರ ನಂತರ ಮಂಗಳೂರಿನಿಂದ ಹೊರಟ ಅದೇ ರೈಲು ಸುಬ್ರಹ್ಮಣ್ಯದ ತನಕ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುತ್ತಿತ್ತು.1996ರಲ್ಲಿ ಈ ಲೈನ್ ಬ್ರಾಡ್‌ಗೇಜ್ ಕಾರ್ಯ ಪ್ರಾರಂಭವಾಗಿ 2008ರಿಂದ ರೈಲು ಚಲಿಸತೊಡಗಿದ ನಂತರ, ಗ್ರಾಮೀಣ ಪ್ರದೇಶಗಳ ಜನರಿಗೆ ಬೆಳಿಗ್ಗೆ ಸಂಜೆ ರೈಲಿನ ಅನಾನುಕೂಲವಾಗಿದ್ದು, ರೈಲು ಬೆಳಿಗ್ಗೆ ಬೇಗ ಮಂಗಳೂರಿನಿಂದ ಪುತ್ತೂರು ತನಕ ಬಂದು ಮಂಗಳೂರಿಗೆ ಪುನಃ ಹೋಗುತ್ತಿದೆ. ಬಳಿಕ ಬೆಳಗ್ಗೆ ಗಂಟೆ 10ಕ್ಕೆ ಮಂಗಳೂರಿನಿಂದ ಹೊರಟ ಅದೇ ರೈಲು ಗಂಟೆ 11ಕ್ಕೆ ಕಬಕ ಪುತ್ತೂರು, 11.40ಕ್ಕೆ ಕಾಣಿಯೂರು, 11.50ಕ್ಕೆ ಎಡಮಂಗಲ, 11.55ಕ್ಕೆ ಕೋಡಿಂಬಾಳ, ಬಳಿಕ ಬಜಕರೆ, 12.30ಕ್ಕೆ ಸುಬ್ರಹ್ಮಣ್ಯ ಸ್ಟೇಷನ್ ತಲುಪುತ್ತದೆ.ಆಮೇಲೆ ಅಲ್ಲಿಂದ ಗಂಟೆ 1.30ಕ್ಕೆ ಸುಬ್ರಹ್ಮಣ್ಯ ಸ್ಟೇಷನ್ ನಿಂದ ಹಿಂದಿರುಗಿ ಸಂಜೆ ಗಂಟೆ 4ಕ್ಕೆ ಮಂಗಳೂರಿಗೆ ತಲುಪುತ್ತದೆ.ಸಂಜೆ ಮತ್ತೆ ಅದೇ ರೈಲು ಪುತ್ತೂರಿಗೆ ಬಂದು ಮಂಗಳೂರಿಗೆ ವಾಪಸಾಗುತ್ತಿದೆ.ಆದರೆ ಇದು ಗ್ರಾಮೀಣ ಪ್ರದೇಶದ ಜನರಿಗೆ ಉಪಯೋಗ ಆಗುತ್ತಿಲ್ಲ.ಈ ನಿಟ್ಟಿನಲ್ಲಿ ಆ ಪ್ರದೇಶದ ಜನರಿಗೆ ಉಪಯೋಗ ಆಗುವಂತೆ ಬೆಳಿಗ್ಗೆ ಸುಬ್ರಹ್ಮಣ್ಯ ಸ್ಟೇಷನ್‌ನಿಂದ ಮಂಗಳೂರು ಕಡೆ ರೈಲು ಹೋಗಿ ಸಂಜೆ ಹಿಂದಿರುಗಿ ವಾಪಸ್ ಬರಬಹುದು.ಇದರಿಂದ ಶಾಲಾ ಕಾಲೇಜು ಮಕ್ಕಳಿಗೂ ಅನುಕೂಲವಾಗುವುದು.ಲೋಕಲ್ ಪ್ಯಾಸೆಂಜರ್ ರೈಲು ಚಲಾಯಿಸಿದರೆ, ಬೆಂಗಳೂರಿನಿಂದ ರಾತ್ರಿಯ ಎಕ್ಸ್ಪ್ರೆಸ್ ರೈಲ್‌ನಲ್ಲಿ ಸುಬ್ರಹ್ಮಣ್ಯಕ್ಕೆ ಬೆಳಿಗ್ಗೆ ತಲುಪಿದ ಪ್ರಯಾಣಿಕರು, ಈ ಲೋಕಲ್ ಪ್ಯಾಸೆಂಜರ್ ರೈಲಿನಲ್ಲಿ ಎಲ್ಲಾ ಗ್ರಾಮೀಣ ಸ್ಟೇಷನ್‌ಗಳಿಗೆ ಹೋಗಿ ಇಳಿದುಕೊಳ್ಳಬಹುದು. ಅದೇ ರೀತಿ ಬೆಂಗಳೂರಿಗೆ ಹೋಗುವವರು, ತಮ್ಮ ತಮ್ಮ ಗ್ರಾಮೀಣ ಸ್ಟೇಷನ್‌ಗಳಿಂದ ಮುಸ್ಸಂಜೆಯ ನಂತರದ ಲೋಕಲ್ ಪ್ಯಾಸೆಂಜರ್ ರೈಲಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಎಕ್ಸ್ಪ್ರೆಸ್ ರೈಲು ಹತ್ತಬಹುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here