ಉಪ್ಪಿನಂಗಡಿ: ಆರು ತಿಂಗಳಾವಧಿಯ ಆಶ್ರಯವನ್ನು ಕೇಳಿ ಮೂರು ವರ್ಷಗಳಿಂದ ಇಲ್ಲಿನ ಪಂಚಾಯತ್ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ನಾಡಕಚೇರಿಯನ್ನು ಪಂಚಾಯತ್ ಆಡಳಿತದ ಅವಶ್ಯಕತೆಯನ್ನು ಮನಗಂಡು ಸೆ.30 ರಂದು ತೆರವುಗೊಳಿಸಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳಿಸುವುದಾಗಿ ಪುತ್ತೂರು ತಹಶೀಲ್ದಾರ್ ಶಿವಶಂಕರ್ ತಿಳಿಸಿದರು.
ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಈಗಿರುವ ಗ್ರಂಥಾಲಯ ಕಟ್ಟಡವನ್ನು ಕೆಡವಿ ಅಲ್ಲಿ ಸುಸಜ್ಜಿತ ಗ್ರಂಥಾಲಯ, ವಾಣಿಜ್ಯ ಕಟ್ಟಡ ಸೇರಿದಂತೆ ಎರಡು ಮಹಡಿಗಳ ಕಟ್ಟಡವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದು, ಈ ಸಂದರ್ಭ ಈಗಿನ ಗ್ರಂಥಾಲಯವನ್ನು ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಪಂಚಾಯತ್ ಕಟ್ಟಡದಲ್ಲಿ ಆಶ್ರಯ ಪಡೆದಿರುವ ನಾಡಕಚೇರಿಯ ತೆರವು ಅಗತ್ಯವಾಗಿತ್ತು. ಆದರೆ ನೂತನವಾಗಿ ನಿರ್ಮಾಣಗೊಂಡ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂಬ ಕಾರಣ ನೀಡಿ ನಾಡಕಚೇರಿಯನ್ನು ಪಂಚಾಯತ್ ಕಟ್ಟಡದಲ್ಲಿಯೇ ಮುಂದುವರೆಸಿದಾಗ ಪಂಚಾಯತ್ ಆಡಳಿತವು ಈ ಬಗ್ಗೆ ಸಹಾಯಕ ಕಮಿಷನರ್ರವರಿಗೆ ದೂರು ಸಲ್ಲಿಸಿತ್ತು. ಈ ಪತ್ರಿಕೆಯಲ್ಲಿ ಸಚಿತ್ರ ವರದಿಯೂ ಪ್ರಕಟವಾಗಿತ್ತು.
ಪತ್ರಿಕಾ ವರದಿಯಿಂದ ಎಚ್ಚೆತ್ತ ಕಂದಾಯ ಇಲಾಖಾಧಿಕಾರಿಗಳು ಪುತ್ತೂರು ತಹಶೀಲ್ದಾರ್ರವರ ನೇತೃತ್ವದಲ್ಲಿ ಉಪ್ಪಿನಂಗಡಿ ಹೊಸ ನಾಡಕಚೇರಿ ಕಟ್ಟಡಕ್ಕೆ ಭೇಟಿ ನೀಡಿ, ಕಚೇರಿಯ ಕಾರ್ಯಾರಂಭದ ಬಗ್ಗೆ ಮಾತುಕತೆ ನಡೆಸಿದರು. ಈ ವೇಳೆ ಶೌಚಾಲಯದ ನಿರ್ಮಾಣಕ್ಕೆ ಆದ್ಯತೆ ನೀಡುವುದು. ಅಲ್ಲಿಯ ವರೆಗೆ ತಾತ್ಕಾಲಿಕ ಶೌಚಾಲಯವನ್ನು ಅಳವಡಿಸುವ ಬಗ್ಗೆ ತೀರ್ಮಾನಿಸಿ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ನಾಡಕಚೇರಿಯನ್ನು ಪಂಚಾಯತ್ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ತಹಶೀಲ್ದಾರ್ರವರು ಪ್ರಕಟಿಸಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ರಂಜನ್ , ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಪಂಚಾಯತ್ ಸದಸ್ಯರು ಇದ್ದರು.