ಸವಣೂರು: ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರಕಾರ ಅತಿಥಿ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಕಳೆದ 3 ತಿಂಗಳಿಂದ ಅತಿಥಿ ಶಿಕ್ಷಕರಿಗೆ ವೇತನವಾಗಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸರಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಕರ್ತವ್ಯ ಆರಂಭಿಸಿ ಮೂರು ತಿಂಗಳಾದರೂ ವೇತನ ಭಾಗ್ಯ ಸಿಕ್ಕಿಲ್ಲ. ಶಿಕ್ಷಕರ ಕೊರತೆಯನ್ನು ನೀಗಿಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವ ಅತಿಥಿ ಶಿಕ್ಷಕರು ವೇತನ ಇಲ್ಲದೇ ಸಂಕಷ್ಟದ ಜೀವನ ಸಾಗಿಸುತ್ತಿರುವ ಕುರಿತು ದೂರುಗಳು ವ್ಯಕ್ತವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅರ್ಧವಾರ್ಷಿಕ ಮುಗಿಯುತ್ತಾ ಬಂದರೂ ಅತಿಥಿ ಶಿಕ್ಷಕರಿಗೆ ಇನ್ನೂ ಸಂಬಳವಾಗಿಲ್ಲ.ನಮ್ಮ ಬೇಡಿಕೆಗಳ ಕುರಿತು ರಾಜ್ಯ ಸಂಘದ ಪದಾಧಿಕಾರಿಗಳು ಶಿಕ್ಷಣ ಸಚಿವರ ಗಮನಕ್ಕೆ ಈ ವಿಚಾರವನ್ನು ಈಗಾಗಲೇ ತಂದಿದ್ದು ಸಚಿವರು ನೀಡಿರುವ ಆಶ್ವಾಸನೆ ಈಡೇರಿಲ್ಲ.ಹಿಂದಿನ ವರ್ಷ ಆರಂಭದಲ್ಲಿ ಸ್ವಲ್ಪ ವಿಳಂಬವಾಗಿತ್ತಾದರೂ ಬಳಿಕ ಪ್ರತಿ ತಿಂಗಳು ಸಂಬಳ ದೊರೆಯುತ್ತಿತ್ತು.ಆದರೆ ಈ ವರ್ಷ ಜೂನ್ನಿಂದ ಇಲ್ಲಿಯವರೆಗೆ ನಮಗೆ ಸಂಬಳವಾಗದೇ ಇರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ ಎಂದು ಅತಿಥಿ ಶಿಕ್ಷಕರೆಲ್ಲರ ಪರವಾಗಿ ಪುತ್ತೂರು ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ.
ತಾಲೂಕಿನಲ್ಲಿಯೇ ಸುಮಾರು 190 ಮಂದಿ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದೇವೆ.ನಮ್ಮಲ್ಲಿ 12 ವರ್ಷಗಳ ಸೇವಾ ಅನುಭವ ಹೊಂದಿರುವವರೂ ಇದ್ದಾರೆ.ಸೇವಾ ಹಿರಿತನದ ಆಧಾರದಲ್ಲಿ ನಮಗೆ ಸೇವಾ ಭದ್ರತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು `ತರಗತಿ ತೊರೆಯೋಣ’ ಪ್ರತಿಭಟನೆ ನಡೆದಿದೆ.ಆದರೂ ಪ್ರಯೋಜನವಾಗಿಲ್ಲ.ಶಾಸಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಗಮನಕ್ಕೂ ವಿಷಯ ತಿಳಿಸಿದ್ದೇವೆ.ಮುಂದಿನ ನಮ್ಮ ನಿರ್ಧಾರದ ಕುರಿತು ಜಿಲ್ಲಾ ಸಂಘದ ಸಭೆಯಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಅತಿಥಿ ಶಿಕ್ಷಕರಾಗಿ ನಾವು ಕರ್ತವ್ಯ ಮಾಡುತ್ತಿದ್ದೇವೆ. ಆದರೆ, ವೇತನ ಬಾರದಿರುವುದು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ದಿನ ನಿತ್ಯದ ಖರ್ಚಿಗಾಗಿ ಹಣ ಹೊಂದಿಸುವುದೂ ಕಷ್ಟವಾಗಿದೆ. ಹೀಗಾದರೆ ನಮ್ಮ ಗತಿ ಏನು? ಎಂದು ಅತಿಥಿ ಶಿಕ್ಷಕರೋರ್ವರು ಹೇಳಿದ್ದಾರೆ.
ಹಲವಾರು ಅತಿಥಿ ಶಿಕ್ಷಕರಿಗೆ ವೇತನ ಬಾರದೆ ದಿನದೂಡುವುದೇ ಕಷ್ಟ ಸಾಧ್ಯವಾಗಿದೆ. ಸರ್ಕಾರವೂ ಅತಿಥಿ ಶಿಕ್ಷಕರನ್ನು ಗುಲಾಮರಂತೆ ನೋಡುವುದನ್ನು ಬಿಟ್ಟು ಗೌರವಯುತವಾಗಿ ನಡೆದುಕೊಳ್ಳಬೇಕು. ಪ್ರತೀ ತಿಂಗಳು ಅತಿಥಿ ಶಿಕ್ಷಕರ ಖಾತೆಗೆ ಸರಿಯಾಗಿ ವೇತನ ಪಾವತಿಸಬೇಕು.
-ಎಂ.ಎ.ರಫೀಕ್ , ಅಧ್ಯಕ್ಷರು ಶಾಲಾಭಿವೃದ್ದಿ ಸಮಿತಿ ಮೊಗರು ಸವಣೂರು