ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಾಲಾ ದ.ಕ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

0

ಬಾಲಕ, ಬಾಲಕಿಯರ ಒಟ್ಟು 14 ತಂಡಗಳು ಭಾಗಿ

ಪುತ್ತೂರು: ದ.ಕ.ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇದರ ಆಶ್ರಯದಲ್ಲಿ ಪ್ರೋ. ಕಬಡ್ಡಿ ಮಾದರಿಯ ದ.ಕ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವು ಸೆ.16ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.


ಮಕ್ಕಳ ಸಮಾಜದ ಸಂಪತ್ತಾಗಿ ಬೆಳದಾದ ದೇಶದ ಅಭಿವೃದ್ಧಿ-ಲಾರೆನ್ಸ್ ಮಸ್ಕರೇನಸ್
ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಅವರಲ್ಲಿರುವ ಇತರ ಪ್ರತಿಭೆಗಳಿಗೂ ಮನ್ನಣೆ ಪ್ರೋತ್ಸಾಹ ದೊರೆಯುತ್ತಿದೆ. ಅವರಲ್ಲಿರುವ ಅಭಿರುಚಿಯನ್ನು ಗುರುತಿಸಿ ಪ್ರತಿಭೆ ಅರಳಿಸುವ ಕಾರ್ಯ ಶಾಲೆಗಳ ಮೂಲಕ ನಡೆಯುತ್ತಿದೆ. ಮಕ್ಕಳಿಗೆ ನೀಡುವ ಶಿಕ್ಷಣ ಉತ್ತಮ ಮಾನವೀಯ ಮೌಲ್ಯಗಳಿರುವ ವ್ಯಕ್ತಿಗಳನ್ನಾಗಿ ರೂಪಿಸುವಂತಾಗಬೇಕು. ಅವರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಬೇಕು. ಅವರು ಸಮಾಜದ ಸಂಪತ್ತಾಗಿ ಬೆಳೆದಾಗ ಪರಿಸರ, ದೇಶ ಅಉನ್ನತ ಮಟ್ಟಕ್ಕೆ ಏರುವುದಲ್ಲಿ ಸಂದೇಹವಿಲ್ಲ ಎಂದ ಅವರು ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿಯನ್ನು ಇಂದು ಎಲ್ಲರೂ ಪ್ರೀತಿಸುತ್ತಿದ್ದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಪಂದ್ಯಾಟವನ್ನು ಸಂಘಟಕರು ಬಹಳಷ್ಟು ಉತ್ತಮವಾಗಿ ಸಂಘಟಿಸಿದ್ದಾರೆ ಎಂದರು.


ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಲಿ-ಅರುಣ್ ಕುಮಾರ್ ಪುತ್ತಿಲ:
ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಇಚ್ಚಾ ಶಕ್ತಿಯಿದ್ದರೆ ಏನನ್ನೂ ಸುಲಲಿತವಾಗಿ ಮಾಡಬಹುದು ಎನ್ನುವುದಕ್ಕೆ ಲಿಟ್ಲ್ ಫ್ಲವರ್ ಶಾಲಾ ಆಯೋಜನೆಯೇ ಉದಾಹರಣೆಯಾಗಿದೆ. ಇಲ್ಲಿ ಪ್ರೋ.ಕಬಡ್ಡಿ ಮಾದರಿಯಲ್ಲಿ ಆಯೊಜನೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಪೂರ್ತಿ ತುಂಬಿದೆ. ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಟು ಪ್ರಶಾಂತ್ ರೈಯವರನ್ನು ನಿರ್ಮಿಸಿದ ಮಣ್ಣಿನಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಆಯೋಜಿಸುವ ಮೂಲಕ ದೇಸೀಯ ಕ್ರೀಡೆಯನ್ನು ಎತ್ತರಕ್ಕೆ ಏರಿಸಿದೆ. ಉತ್ತಮ ಆರೋಗ್ಯಕರ ಸ್ಪರ್ಧೆಯ ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಲಿ ಎಂದರು.


ವ್ಯವಸ್ಥಿತ, ಶಿಶ್ತು ಬದ್ದವಾಗಿ ಆಯೋಜನೆ-ರಾಧಾಕೃಷ್ಣ ಆಳ್ವ:
ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಇಲಾಖೆಯ ಪ್ರಾಥಮಿಕ ಶಾಲಾ ಕ್ಲಸ್ಟರ್ ನಿಂದ ರಾಷ್ಟ್ರ ಮಟ್ಟದ ತನಕ ಕ್ರೀಡಾಕೂಟಗಳು ನಡೆಯುತ್ತಿದೆ. ಜಿಲ್ಲಾ ಮಟ್ಟದ ಪಂದ್ಯಾಟದ ಆಯೋಜನೆಯು ಅತ್ಯಂತ ವ್ಯವಸ್ಥಿತ. ಶಿಸ್ತು ಬದ್ದವಾಗಿ ಆಯೋಜನೆಯಾಗಿದೆ. ಪುತ್ತೂರಿನ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರ ತಂಡದ ಪಂದ್ಯಾಟವು ಯಶಸ್ವಿಯಾಗಿ ಮೂಡಿಬಂದಿದೆ ಎಂದರು.


ಸಂಘಟಕರಿಗೆ ಅಭಿನಂದನೆ-ಚಂದ್ರಹಾಸ ಶೆಟ್ಟಿ:
ಅಮೆಚೂರ್ ಕಬಡ್ಡಿ ಲೀಗ್‌ ಅಸೋಸಿಯೇಷನ್ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತು ಬದ್ದವಾಗಿ ಆಯೋಜಿಸಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ ಸಂಘಟಕರಿಗೆ ಅಮೆಚ್ಚೂರು ಕಬಡ್ಡಿ ಅಸೋಸಿಯೇಷನ್ ಪರವಾಗಿ ಅಭಿನಂದನೆ ಸಲ್ಲಿಸಿದರು.


ವೈಭವದಿಂದ ಕಬಡ್ಡಿ ಜಾತ್ರೆಯಾಗಿ ಮೂಡಿಬಂದಿದೆ-ಉಮೇಶ್ ನಾಯಕ್:
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಉತ್ತಮ ಸಂಘಟನೆಯೊಂದಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವು ಅತ್ಯಂತ ವೈಭವದಿಂದ ನಡೆಯುತ್ತಿದ್ದು ಕಬಡ್ಡಿ ಜಾತ್ರೆಯಾಗಿ ಮೂಡಿಬಂದಿದೆ. ಅಮೆಚೂರು ಕಬಡ್ಡಿ ಎಸೋಸಿಯೇಷನ್ ಮೂಲಕ ಕಬಡ್ಡಿಯು ಉತ್ತಮವಾಗಿ ನಡೆಯುತ್ತಿದ್ದು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವು ಅದಕ್ಕೆ ಮತ್ತೊಂದು ಗರಿಯಾಗಿದೆ ಎಂದರು.


ಶಾಲೆಗೆ ಶಾಸಕರ ಮೂಲಕ ಸಹಕಾರ-ಕೃಷ್ಣಪ್ರಸಾದ್ ಆಳ್ವ:
ಕೆಡಿಪಿ ಮಾಜಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ, ಗುಣಮಟ್ಟದ ಶಿಕ್ಷಣದಲ್ಲಿ ಪುತ್ತೂರಿನಲ್ಲಿರುವ ಶಾಲೆಗಳಲ್ಲಿ ಲಿಟ್ಲ್ ಫ್ಲವರ್ ಶಾಲೆಯೂ ಒಂದು. ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು ಜಿಲ್ಲಾ ಮಟ್ಟದ ಕಬಡ್ಡಿ ಅದಕ್ಕೊಂದು ಕಿರೀಟವಾಗಿದೆ. ನೂರರ ಸಂಭ್ರಮದ ಸನೀಹದಲ್ಲಿರುವ ಶಾಲೆಗೆ ಶಾಸಕರ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.


ಗೆಲ್ಲುವ ಗುರಿ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು-ಲೋಕೇಶ್ ಎಸ್.ಆರ್:
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಕ್ರೀಡೆಯಲ್ಲಿ ಸತತ ಕಠಿಣ ಪರಿಶ್ರಮ, ಶಿಕ್ಷಕರ ಸಹಕಾರ ತರಬೇತಿ ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲು-ಗೆಲುವನ್ನು ಸಮಾನ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಗೆಲ್ಲಲು ಇರುವ ಗುರಿಯನ್ನು ವಿದ್ಯಾರ್ಥಿಗಳು ಮುಂದಿನ ಜೀವನದ ಪ್ರತಿ ಹಂತದಲ್ಲಿಯೂ ಅಳವಡಿಸಿಕೊಳ್ಳಬೇಕು. ಏಳು ತಾಲೂಕುಗಳ ಸ್ಪರ್ಧಿಗಳು ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ವಿಜೇತರಾದವರು ವಿಭಾಗ ಹಾಗೂ ರಾಜ್ಯಮಟ್ಟದ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.


ಬೆಥನಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಶಿಕ್ಷಣ ಸಂಯೋಜಕಿ ಶುಭ, ಮಂಗಳೂರು ಪ್ರಾಂತ್ಯದ ಸಹಾಯಕ ಪ್ರಾವಿನ್ಸನ್ ರೋಷಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಅಮೆಚೂರು ಕಬಡ್ಡಿ ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ದಯಾನಂದ ರೈ, ಕಹಲೆ ನ್ಯೂಸ್ ಶ್ಯಾಮ್ ಸುದರ್ಶನ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.


ಸನ್ಮಾನ, ಗೌರವಾರ್ಪಣೆ:
ಜಿಲ್ಲಾ ಮಟ್ಟದ ಕಬಡ್ಡಿ ಆಯೋಜನೆಯಲ್ಲಿ ಪ್ರಮುಖ ಸಹಕಾರ ಪ್ರೋತ್ಸಾಹ ನೀಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರು, ಅಮೆಚ್ಚೂರು ಕಬಡ್ಡಿ ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಹಾಗೂ ಹಬೀಬ್ ಮಾಣಿಯವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಶಾಲಿನಲ್ಲಿ ವಿಭಾಗ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿಗಳಾದ ಅಜಿತ್, ಅಂಕಿತ, ಪವಿತ್ರ, ಖುಷಿ, ಪೂಜಾ, ದೀಕ್ಷಾ, ವಿಜೇತ, ಅನನ್ಯ ಹಾಗೂ ಪ್ರೀತಿಕಾರವರನ್ನು ಗೌರವಿಸಲಾಯಿತು.


ವ್ಯವಸ್ಥಿತ ಸಂಘಟನೆಗೆ ಅಭಿನಂದನೆಗಳ ಮಹಾಪೂರ
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಅತ್ಯಂತ ವ್ಯವಸ್ಥಿತ, ಶಿಸ್ತು ಬದ್ದವಾಗಿ ಹಾಗೂ ಅಚ್ಚು ಕಟ್ಟಾಗಿ ಆಯೋಜಿಸಿರುವುದಕ್ಕೆ ಕಾರ್ಯಕ್ರಮದ ಅತಿಥಿಗಳೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಲಿಟ್ಲ್ ಫ್ಲವರ್ ಶಾಲಾ ಆಡಳಿತ ಮಂಡಳಿ ಹಾಗೂ ವ್ಯವಸ್ಥಿತವಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಿಕ್ಷಕ ಬಾಲಕೃಷ್ಣ ರೈಯವರನ್ನು ಅಭಿನಂದನೆ ಸಲ್ಲಿಸಿದರು.


ಚೆಂಡೆ, ಬ್ಯಾಂಡ್ ವಾಲಗದ ಜೊತೆ ಸ್ವಾಗತ:
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಹಾಗೂ ಟ್ರೋಫಿಯನ್ನು ಶಾಲಾ ಆವರಣದಿಂದ ಪಂದ್ಯಾಟ ನಡೆಯುವ ಕ್ರೀಡಾಂಗಣಕ್ಕೆ ಚೆಂಡೆ ಹಾಗೂ ಬ್ಯಾಂಡ್ ವಾಲಗದೊಂದಿಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ಪಂದ್ಯಾಟದ ಪ್ರಾರಂಭದಲ್ಲಿಯೂ ಕ್ರೀಡಾಪಟುಗಳನ್ನು ಶಾಲಾ ಆವರಣದಿಂದ ಕ್ರೀಡಾಂಗಣಕ್ಕೆ ಚೆಂಡೆ, ಬ್ಯಾಂಡ್‌ನೊಂದಿಗೆ ಕರೆತರಲಾಯಿತು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ, ಸೋಜ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್, ಡ್ರೆಸ್‌ಕೋಡ್‌ನ ಮ್ಹಾಲಕ ರಮೇಶ್, ಪುತ್ತೂರು ನಗರ ವಲಯದ ನೋಡೆಲ್ ಅಧಿಕಾರಿಗಳಾದ ಸ್ಟಾನಿ ಪ್ರವೀಣ್ ಮಸ್ಕರೇನಸ್, ಐರಿ ಗ್ರೆಟ್ಟಾ ಪಾಯಸ್, ನಗರ ಕ್ಲಸ್ಟರ್‌ನ ಸಿಆರ್‌ಪಿ ಶಶಿಕಲಾ, ಬಂಟ್ವಾಳ ತಾಲೂಕು ಟಿಪಿಓ ವಿಷ್ಣು ಹೆಬ್ಬಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸಿ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ರೈ, ಕರ್ನಾಟಕ ಪ್ರಾಥಮಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಧ್ಯಕ್ಷ ಮಾಮಚ್ಚನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ಇದರ ಅಧ್ಯಕ್ಷ ನವೀನ್ ರೈ, ಕಡಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸವಣೂರು, ಪುತ್ತೂರು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯಸ್, ಕಡಬ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಣಾಲು, ಕಾರ್ಯದರ್ಶಿ ಹರೀಶ್ ರೈ, ಹಿರಿಯ ವಿದ್ಯಾರ್ಥಿ ಜನಾರ್ದನ ಪೂಜಾರಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ವೆನಿಶಾ ಬಿ.ಎಸ್ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಸುರಕ್ಷಾ ಸಮಿತಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here