7.56 ಲಕ್ಷ ರೂ.,ನಿವ್ವಳ ಲಾಭ; ಶೇ.25 ಡಿವಿಡೆಂಡ್, ಲೀ.ಹಾಲಿಗೆ 92 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.15ರಂದು ಬೆಳಿಗ್ಗೆ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕೆ.,ರವರು ಮಾತನಾಡಿ, ವರದಿ ವರ್ಷದಲ್ಲಿ ದ.ಕ.ಹಾಲು ಒಕ್ಕೂಟಕ್ಕೆ 3,98,850 ಕೆ.ಜಿ.ಹಾಲು ಕಳುಹಿಸಲಾಗಿದ್ದು 1,31,11,189 ರೂ. ಸಂಘದ ಖಾತೆಗೆ ಜಮೆಯಾಗಿದೆ. 34,49,998 ರೂಪಾಯಿಯ ಪಶು ಆಹಾರ ಮಾರಾಟ ಮಾಡಲಿದೆ. 92,758 ರೂಪಾಯಿಯ ಲವಣಮಿಶ್ರಣ ಮಾರಾಟ ಮಾಡಲಾಗಿದೆ. ಹೀಗೆ ಹಾಲು, ಪಶು ಆಹಾರ ಮತ್ತು ಲವಣ ಮಿಶ್ರಣ ಮಾರಾಟದಿಂದ ಒಟ್ಟು 7,56,916.18 ರೂ., ನಿವ್ವಳ ಲಾಭ ಬಂದಿದೆ. ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತೀ ಲೀ.ಹಾಲಿಗೆ 92 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು. ಹಸುಗಳನ್ನು ಮಾರಾಟ ಮಾಡದೆ ಉತ್ತಮ ತಳಿಯ ಹಸುಗಳನ್ನು ಖರೀದಿಸಿ ಹೆಚ್ಚಿನ ಪ್ರಮಣದಲ್ಲಿ ಸಂಘಕ್ಕೆ ಹಾಲು ಪೂರೈಸುವುದರೊಂದಿಗೆ ತಮ್ಮ ಅಭಿವೃದ್ಧಿಯೊಂದಿಗೆ ಸಂಘದ ಅಭಿವೃದ್ಧಿಗೂ ಸಹಕರಿಸುವಂತೆ ಅಧ್ಯಕ್ಷ ಕೊರಗಪ್ಪ ಗೌಡ ಕೆ.ಹೇಳಿದರು.
ದ.ಕ.ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ರವರು ಜಾನುವಾರು ವಿಮೆ, ಜಾನುವಾರುಗಳಿಗೆ ಬರುವ ಕಾಯಿಲೆ, ಮನೆ ಔಷಧಿ, ಜಂತುಹುಳ ಹಾಗೂ ಲವಣ ಮಿಶ್ರಣ ನೀಡುವ ಕುರಿತಂತೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಜನಾರ್ದನ ಪಟೇರಿ, ನಿರ್ದೇಶಕರಾದ ನೋಣಯ್ಯ ಪೂಜಾರಿ ಅಂಬರ್ಜೆ, ಹೇಮಲತಾ ತಿರ್ಲೆ, ಕೆ.ಕುಶಾಲಪ್ಪ ಗೌಡ ಕೊಂಬ್ಯಾನ, ರಮೇಶ ಕೆ.ಬಿ.ಕೊಂಕೋಡಿ, ಶಶಿಧರ ಪಟೇರಿ, ಎ.ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಮೂಲ್ಯ ನೆಕ್ಕರೆ, ಮೀನಾಕ್ಷಿ ಆಲಂತಾಯ, ಹರೀಶ ನಾಯ್ಕ ತಿರ್ಲೆ, ಭಾರತಿ ಎಸ್.ಪುಳಿತ್ತಡಿ, ರಾಜೀವಿ ಬೊಟ್ಟಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪದ್ಮನಾಭ ಭಟ್ ಕೆ,ವರದಿ ಮಂಡಿಸಿದರು. ರಮೇಶ್ ಕೆ.ಬಿ.ಸ್ವಾಗತಿಸಿ, ಹಾಲು ಪರೀಕ್ಷಕ ಧನಂಜಯ ಎ.,ವಂದಿಸಿದರು. ಜಯಂತ ಅಂಬರ್ಜೆ ನಿರೂಪಿಸಿದರು. ಹೇಮಲತಾ ತಿರ್ಲೆ ಪ್ರಾರ್ಥಿಸಿದರು. ಓಡಿಯಪ್ಪ ಗೌಡ ಪೆರಣ, ಜನಾರ್ದನ ಶಾಂತಿಮಾರು ಸಹಕರಿಸಿದರು.
ಬಹುಮಾನ:
ವರದಿ ವರ್ಷದಲ್ಲಿ ಸಂಘಕ್ಕೆ 13,368 ಲೀ. ಹಾಲು ಪೂರೈಸಿದ ಕುಶಾಲಪ್ಪ ಗೌಡ ಕೊಂಬ್ಯಾನ(ಪ್ರಥಮ), 7918 ಲೀ. ಹಾಲು ಪೂರೈಸಿದ ದೇವಕಿ ಪಟೇರಿ(ದ್ವಿತೀಯ) ಹಾಗೂ 7298 ಲೀ.ಹಾಲು ಪೂರೈಸಿದ ಕೃಷ್ಣ ಕೆ.,(ತೃತೀಯ)ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಭೆಗೆ ಹಾಜರಾದ ಎಲ್ಲಾ ಸದಸ್ಯರುಗಳಿಗೆ ಪ್ರೋತ್ಸಾಹಕ ಬಹುಮಾನ ಮತ್ತು ನಂದಿನಿ ಪೇಡಾ ವಿತರಿಸಲಾಯಿತು.
ಸಂಘದ ಸದಸ್ಯರಾಗಿದ್ದು ಅಕಾಲಿಕವಾಗಿ ಅಗಲಿದ ಮೋಹನ ಗೌಡ ಪಟೇರಿ, ಕೇಶವ ಗೌಡ ಆಲಂಬಿಲ, ಸತ್ಯ ಎಂ.ಕೋಲ್ಪೆ, ತಿಮ್ಮಪ್ಪ ಶೆಟ್ಟಿ ಪುಳಿತ್ತಡಿಯವರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.