ಬಡಗನ್ನೂರು ಗ್ರಾ.ಪಂ.ಮಾಜಿ ಸದಸ್ಯ ಗುರುಪ್ರಸಾದ್ ರೈ ಮನೆಯಲ್ಲಿ ನಡೆದ ದರೋಡೆ ಪ್ರಕರಣ-ಇನ್ಸ್‌ಪೆಕ್ಟರ್ ರವಿ, ಎಸ್.ಐ.ಉದಯರವಿ ನೇತೃತ್ವದ ತಂಡದಿಂದ ಮುಂದುವರಿದ ಕಾರ್ಯಾಚರಣೆ

0

ನಿಗೂಢವಾಗಿಯೇ ಮುಂದುವರಿದ ಕೇಸ್, ಗುರುಪ್ರಸಾದ್ ಆಪ್ತರ ವಿಚಾರಣೆ
ಊರಿಗೆ ತೆರಳಿದ್ದ ಕೆಲಸದಾಳುವಿನಿಂದಲೂ ದೊರೆಯದ ಮಾಹಿತಿ ಕೇರಳದಿಂದ ವಾಪಸಾದ ತನಿಖಾ ತಂಡ

ಪುತ್ತೂರು:ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪಡುವನ್ನೂರು ಗ್ರಾಮದ ಗುರುಪ್ರಸಾದ್ ರೈ ಅವರ ಕುದ್ಕಾಡಿಯ ಮನೆಯಲ್ಲಿ ಸೆ.6ರಂದು ತಡರಾತ್ರಿ ನಡೆದಿರುವ ದರೋಡೆ ಪ್ರಕರಣದ ತನಿಖೆ ಮುಂದುವರಿದಿದ್ದು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮತ್ತು ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಉದಯರವಿ ನೇತೃತ್ವದ ಪೊಲೀಸ್ ತಂಡ ವಿವಿಧೆಡೆ ಕಾರ್ಯಾಚರಣೆ ನಡೆಸಿದೆ.ಇದುವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.ತನಿಖಾ ತಂಡ ಟೆಕ್ನಿಕಲ್ ಮತ್ತು ಫೀಲ್ಡ್ ವಿಭಾಗದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಂಶಯಿತ ವ್ಯಕ್ತಿಗಳ ಪತ್ತೆಗಾಗಿ ಬಲೆ ಬೀಸಿದೆ.ಇದುವರೆಗೆ ಪೊಲೀಸರ ತಂಡ ಹಲವರನ್ನು ವಿಚಾರಣೆಗೊಳಪಡಿಸಿದೆಯಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಹಾಗಾಗಿ ಸದ್ಯಕ್ಕೆ ಈ ಪ್ರಕರಣದ ನಿಗೂಢತೆ ಮುಂದುವರಿದಿದೆ.ಈ ಮಧ್ಯೆ ಮನೆಯ ಮಾಲಕ ಗುರುಪ್ರಸಾದ್ ರೈಯವರ ನಿಕಟವರ್ತಿಗಳನ್ನೂ ಪೊಲೀಸರು ಠಾಣೆಗೆ ಕರೆಸಿ ಮಾಹಿತಿ ಸಂಗ್ರಹಿಸಿದ್ದಾರೆ.ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮತ್ತು ಪುತ್ತೂರು ಡಿವೈಎಸ್‌ಪಿ ಡಾ.ಗಾನಾ ಪಿ. ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖಾ ಕಾರ್ಯ ನಿರ್ವಹಿಸುತ್ತಿರುವ ತಂಡದ ಜತೆ ಬಂಟ್ವಾಳ ಪೊಲೀಸರೂ ಕೈ ಜೋಡಿಸಿದ್ದಾರೆ.


ಪೊಲೀಸ್ ತಂಡದಿಂದ ನಿರಂತರ ಕಾರ್ಯಾಚರಣೆ:
ಸೆ.6ರಂದು ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಗುರುಪ್ರಸಾದ್ ರೈಯವರ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಸುಮಾರು 5 ಮಂದಿ ಇದ್ದ ದರೋಡೆಕೋರರ ತಂಡ ದರೋಡೆ ಕೃತ್ಯ ಎಸಗಿತ್ತು. ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ, ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ ದರೋಡೆ ಮಾಡಲಾಗಿತ್ತು.ಮನೆಯ ಕಪಾಟನ್ನು ಒಡೆಯಲು ಮಾಡಿದ ಪ್ರಯತ್ನ ವಿಫಲವಾದಾಗ ಗುರುಪ್ರಸಾದ್ ರೈಯವರ ತಾಯಿ ಕಸ್ತೂರಿ ರೈ ಅವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪಶ್ಚಿಮ ವಲಯ ಐಜಿಪಿ ಆಗಿರುವ ಈ ಹಿಂದೆ ಪುತ್ತೂರಿನಲ್ಲಿ ಎಎಸ್ಪಿಯಾಗಿದ್ದ ಡಾ|ಚಂದ್ರಗುಪ್ತ, ದ.ಕ.ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯಾಗಿರುವ ಈ ಹಿಂದೆ ಪುತ್ತೂರು ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್‌ಪಿ ಧರ್ಮಪ್ಪ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ.ಗಾನ ಪಿ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಬೆರಳಚ್ಚು ತಜ್ಞರು, ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.ಬಳಿಕ ಪ್ರಕರಣದ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು.ವೃತ್ತ ನಿರೀಕ್ಷಕ ರವಿ ಬಿ.ಯಸ್ ಮತ್ತು ಎಸ್.ಐ. ಉದಯರವಿ ನೇತೃತ್ವದಲ್ಲಿ ಒಟ್ಟು 4 ತಂಡ ರಚನೆ ಮಾಡಲಾಗಿದ್ದು ತನಿಖಾ ಕಾರ್ಯ ಮುಂದುವರಿದಿದೆ.


ಗುರುಪ್ರಸಾದ್ ರೈ ಆಪ್ತರ ವಿಚಾರಣೆ:
ಸೆ.6ರಂದು ರಾತ್ರಿ ತನ್ನ ತಾಯಿಯೊಂದಿಗೆ ಮನೆಯಲ್ಲಿರುವಾಗ ತಡರಾತ್ರಿ 5 ಜನ ಅಪರಿಚಿತ ಯುವಕರು ಮನೆಯ ಹಿಂದಿನ ಬಾಗಿಲನ್ನು ಒಡೆದು ಮನೆಯನ್ನು ಪ್ರವೇಶಿಸಿದ್ದು, ನನ್ನನ್ನು ಸೋಫಾದಲ್ಲಿ ಕಟ್ಟಿ ಹಾಕಿ ತಾಯಿಗೆ ಚೂರಿಯನ್ನು ತೋರಿಸಿ ಬೆದರಿಸಿ ಮನೆಯಲ್ಲಿದ್ದ ರೂ.2.40 ಲಕ್ಷ ಮೌಲ್ಯದ ಚಿನ್ನದ ಆಭರಣ ಮತ್ತು ರೂ.30 ಸಾವಿರ ನಗದು ದರೋಡೆ ಮಾಡಿದ್ದಾರೆ. ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದಲ್ಲಿ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ಗುರುಪ್ರಸಾದ್ ರೈಯವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.ಕೇಸು ದಾಖಲಾದ ಬಳಿಕ ಗುರುಪ್ರಸಾದ್ ರೈಯವರನ್ನು ಠಾಣೆಗೆ ಕರೆಸಿಕೊಂಡಿದ್ದ ತನಿಖಾ ತಂಡದವರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದರು. ಅಲ್ಲದೆ, ಗುರುಪ್ರಸಾದ್ ರೈಯವರೊಂದಿಗೆ, ಘಟನೆ ನಡೆಯುವ ಮೊದಲ ಒಂದು ವಾರದಿಂದ ಘಟನೆ ನಡೆಯುವವರೆಗೆ ಯಾರೆಲ್ಲಾ ಆಪ್ತರಾಗಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.ಈ ಪೈಕಿ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.ಆದರೂ ಯಾವುದೇ ಮಾಹಿತಿ ದೊರೆತಿಲ್ಲ.


ಪರಿಚಿತರ ಕೈವಾಡ- ಸಂಶಯ:
ಒಬ್ಬರೇ ಇರುತ್ತಿದ್ದ ಗುರುಪ್ರಸಾದ್ ರೈಯವರ ಮನೆಗೆ ಅವರ ಅಮ್ಮ ಬಂದ ಕೆಲ ದಿನಗಳ ಬಳಿಕ ಕೃತ್ಯ ನಡೆದಿದೆ.ಗುರುಪ್ರಸಾದ್ ರೈಯವರ ಅಮ್ಮನ ಬಳಿ ಚಿನ್ನಾಭರಣ ಇದೆ ಎಂದು ಗೊತ್ತಿದ್ದವರೇ ಬಂದು ದರೋಡೆ ಮಾಡಿದರೇ ಅಥವಾ ದರೋಡೆಕೋರರ ತಂಡಕ್ಕೆ ಮಾಹಿತಿ ನೀಡಿ ಕೃತ್ಯಕ್ಕೆ ಕಾರಣವಾದರೇ ಎನ್ನುವ ಸಂಶಯದೊಂದಿಗೆ ಕೂಡಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಒಟ್ಟಾರೆಯಾಗಿ ಗುರುಪ್ರಸಾದ್ ರೈಯವರ ಮನೆಯವರಿಗೆ ಪರಿಚಿತರೇ ಕೃತ್ಯದ ಹಿಂದಿರುವ ಬಲವಾದ ಸಂಶಯ ವ್ಯಕ್ತವಾಗುತ್ತಿದೆ.
ಕಳ್ಳತನ ನಡೆದಿರುವ ಕುದ್ಕಾಡಿಯ ಮನೆ ಕುದ್ಕಾಡಿ ಗುರುಪ್ರಸಾದ್ ರೈಯವರ ಅಜ್ಜಿ ಶೀಲಾವತಿ ರೈಯವರದಾಗಿದ್ದು ಸುಮಾರು ಎರಡು ತಿಂಗಳ ಹಿಂದೆ ಅವರು ಮೃತಪಟ್ಟಿದ್ದರು.ಗುರುಪ್ರಸಾದ್ ರೈಯವರ ಸಹೋದರ ಕೇರಳದ ನಾರಂಪಾಡಿಯಲ್ಲಿದ್ದು ಗುರುಪ್ರಸಾದ್ ರೈಯವರ ತಾಯಿ ಕಸ್ತೂರಿಯವರು ನಾರಂಪಾಡಿಗೆ ಮತ್ತು ಇಲ್ಲಿಗೆ ಹೋಗಿ ಬರುತ್ತಿದ್ದರು.ಆ.26ರಂದು ಇಲ್ಲಿಂದ ನಾರಂಪಾಡಿಗೆ ತೆರಳಿದ್ದ ಕಸ್ತೂರಿಯವರು ಘಟನೆ ನಡೆದ ವಾರದ ಹಿಂದೆಯಷ್ಟೇ ಕುದ್ಕಾಡಿ ಮನೆಗೆ ಬಂದಿದ್ದರು.ಇತ್ತೀಚೆಗೆ ಕುಟುಂಬದ ಪೈಕಿ ಕಾರ್ಯಕ್ರಮವೊಂದಿದ್ದು ಅದಕ್ಕೆಂದು ಬಂದಿದ್ದ ಅವರು ತನ್ನೊಂದಿಗೆ ಚಿನ್ನಾಭರಣವನ್ನೂ ತಂದಿದ್ದರು.ಅದು ಗೊತ್ತಿದ್ದವರೇ ದರೋಡೆಗೆ ಸ್ಕೆಚ್ ಹಾಕಿದರೇ ಎಂಬುದನ್ನು ಪೊಲೀಸರ ಟೆಕ್ನಿಕಲ್ ತಂಡ ಮಾಹಿತಿ ಸಂಗ್ರಹಿಸುತ್ತಿದೆ.ದರೋಡೆ ನಡೆಸಿದ ತಂಡದವರು ಗುರುಪ್ರಸಾದ್ ಮತ್ತು ಅವರ ತಾಯಿ ಕಸ್ತೂರಿಯವರಿಗೆ ಕುಡಿಯಲು ನೀರು ನೀಡಿ, ಕಾಲು ಹಿಡಿದು ತೆರಳಿರುವುದರಿಂದ ಅವರ ಋಣ ಇದ್ದವರೇ ಈ ಕೃತ್ಯ ಎಸಗಿರಬಹುದು ಅಥವಾ ತನಿಖೆಯ ಹಾದಿ ತಪ್ಪಿಸುವ ಉದ್ದೇಶದಿಂದಲೂ ಈ ರೀತಿ ಮಾಡಿರಬಹುದು ಎಂಬ ಸಂಶಯ ಪೊಲೀಸರದ್ದಾಗಿದೆ.ಕುಖ್ಯಾತ ದರೋಡೆಕೋರರ ತಂಡವೇ ಕೃತ್ಯ ಎಸಗಿರುವ ಬಲವಾದ ಸಂಶಯ ಹೊಂದಿರುವ ಪೊಲೀಸರು ಆದಷ್ಟು ಶೀಘ್ರ ಆರೋಪಿಗಳನ್ನು ಪತ್ತೆ ಮಾಡುವ ವಿಶ್ವಾಸ ಹೊಂದಿದ್ದಾರೆ.


ಮೊಬೈಲ್ ಫೋನ್ ನೀರಿಗೆ ಹಾಕಿದ್ದರು:
ಮನೆಯೊಳಗೆ ಬಂದ ತಕ್ಷಣ ದರೋಡೆಕೋರರ ತಂಡ ಮನೆಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ಫೋನ್‌ಗಳನ್ನು ನೀರಿಗೆ ಹಾಕಿ ನಿಷ್ಕ್ರಿಯಗೊಳಿಸಿತ್ತು.ಜೊತೆಗೆ ಗುರುಪ್ರಸಾದ್ ರೈಯವರ ಒಂದು ಮೊಬೈಲ್ ಫೋನ್ ಡಿಸ್‌ಪ್ಲೇಗೆ ಕತ್ತಿಯಿಂದ ಹೊಡೆಯಲಾಗಿತ್ತು.ಇದರ ಪರಿಣಾಮ ಮೊಬೈಲ್ ಡಿಸ್ಪ್ಲೇ ಸಂಪೂರ್ಣ ಒಡೆದುಹೋಗಿತ್ತು.ಆರೋಪಿಗಳು ಮೊಬೈಲ್‌ನ್ನು ನೀರಿಗೆ ಹಾಕಿದ ವಿಚಾರ ಬೆಳಗ್ಗೆ 5.30ರ ವೇಳೆಗೆ ಮನೆಯವರ ಗಮನಕ್ಕೆ ಬಂದಿತ್ತು. ನಂತರ ಗುರುಪ್ರಸಾದ್ ರೈ ಪಕ್ಕದ ಮನೆಗೆ ಹೋಗಿ ವಿಚಾರ ತಿಳಿಸಿದ್ದರು. ಠಾಣೆಗೆ ಮಾಹಿತಿ ನೀಡಿದ್ದರು.

ಕೆಲಸದಾಳುವಿನ ವಿಚಾರಣೆ ಕೇರಳದಿಂದ ತಂಡ ವಾಪಸ್
ಕುದ್ಕಾಡಿಯ ಮನೆಯಲ್ಲಿ ಸಾಮಾನ್ಯವಾಗಿ ಗುರುಪ್ರಸಾದ್ ರೈ ಹಾಗೂ ತೋಟದ ಕೆಲಸದಾಳುಗಳು ಮಾತ್ರ ಇರುತ್ತಿದ್ದರು.ರಾತ್ರಿ ವೇಳೆ ಓರ್ವ ಕೆಲಸದಾಳು ಹಾಗೂ ಗುರುಪ್ರಸಾದ್ ರೈಯವರು ಮಾತ್ರ ಮನೆಯಲ್ಲಿ ಇರುತ್ತಿದ್ದರು.ಘಟನೆ ನಡೆದ 3 ದಿನಗಳ ಹಿಂದೆ ಯಾವುದೋ ಕಾರಣಕ್ಕಾಗಿ ಕೆಲಸದಾಳು ತನ್ನ ಊರು ಕೇರಳಕ್ಕೆ ಹೋಗಿದ್ದರು.ಈ ಹಿನ್ನೆಲೆಯಲ್ಲಿ ತೋಟದ ಕೆಲಸದಾಳುಗಳಿಗೆ ಅಡುಗೆ ಮಾಡಿಕೊಡಲೆಂದು ಕಸ್ತೂರಿ ರೈಯವರು ಕುದ್ಕಾಡಿಯ ಮನೆಯಲ್ಲಿ ಉಳಿದಿದ್ದರು.ರಜೆ ಹಾಕಿ ಊರಿಗೆ ಹೋಗಿದ್ದ ಕೆಲಸದಾಳುವಿನ ಕೈವಾಡ ದರೋಡೆ ಕೃತ್ಯದ ಹಿಂದೆ ಇರಬಹುದೇ ಎಂಬ ಸಂಶಯದೊಂದಿಗೆ ಪೊಲೀಸರ ತನಿಖಾ ತಂಡ ಕೇರಳಕ್ಕೆ ಹೋಗಿ ಆತನನ್ನು ವಿಚಾರಣೆ ನಡೆಸಿದೆಯಾದರೂ ಯಾವುದೇ ಮಾಹಿತಿ ದೊರೆತಿಲ್ಲ.ಪೊಲೀಸರ ತಂಡ ಅಲ್ಲಿಂದ ವಾಪಸ್ ಬಂದಿದೆ.

LEAVE A REPLY

Please enter your comment!
Please enter your name here