ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

ರೂ.111 ಕೋಟಿ ವ್ಯವಹಾರ, 61.29 ಲಕ್ಷ ಲಾಭ, ಶೇ.16 ಡಿವಿಡೆಂಡ್

ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.111ಕೋಟಿ ವ್ಯವಹಾರ ನಡೆಸಿ ರೂ.61,29,010.51 ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡರವರು ಘೋಷಣೆ ಮಾಡಿದರು.


ಸಭೆಯು ಸೆ.17ರಂದು ಬೆಳಿಯೂರುಕಟ್ಟೆ ಅನುದಾನಿತ ಹಿ.ಪ್ರಾ ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2490 ಸದಸ್ಯರಿಂದ ರೂ. 2,05,38,110 ಪಾಲು ಬಂಡವಾಳ ಹೊಂದಿದೆ. ರೂ.7,02,58,683.44 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ವರದಿ ವರ್ಷದಲ್ಲಿ ಸಂಘವು ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.20,51,37,089 ಸಾಲ ವಿತರಿಸಲಾಗಿದ್ದು ರೂ.17,64,37,996 ಹೊರಬಾಕಿ ಸಾಲವಾಗಿರುತ್ತದೆ. ರೂ.16,47,819 ಸಾಲ ಸುಸ್ತಿಯಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.18 ಸಾಧನೆ ಮಾಡಿದೆ.ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.


ಮುಂದಿನ ಮಹಾಸಭೆಗೆ ಸುಸಜ್ಜಿತ ಕಟ್ಟಡ:
ಸಹಕಾರಿ ಸಂಘದ ಪ್ರಧಾನ ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಮುಖ್ಯ ರಸ್ತೆ ಬದಿಯಲ್ಲಿ ಈಗಾಗಲೇ ರೂ.50ಲಕ್ಷ ವೆಚ್ಚದಲ್ಲಿ 40 ಸೆಂಟ್ಸ್ ಜಾಗ ಖರೀದಿಸಲಾಗಿದೆ. ಇದರ ನೋಂದಾವಣೆ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ರೂ.1.25ಕೋಟಿ ವೆಚ್ಚದಲ್ಲಿ ಎರಡು ಅಂತಸ್ಥಿನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ಕಾಮಗಾರಿಗೆ ಇ-ಟೆಂಡರ್ ನಡೆಯಬೇಕಾಗಿದೆ. ಟೆಂಡರ್ ಆದ ಬಳಿಕ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಕಾಮಗಾರಿಯು ಶೀಘ್ರವಾಗಿ ಪೂರ್ಣಗೊಂಡು ಸುಸಜ್ಜಿತ ಕೇಂದ್ರ ಕಚೇರಿ ಕಟ್ಟಡ ಲೋಕಾರ್ಪಣೆಯಾಗಿ ಸಂಘದ ಮುಂದಿನ ವರ್ಷದ ಮಹಾಸಭೆಯು ಹೊಸ ಕಟ್ಟಡದಲ್ಲಿಯೇ ನಡೆಯಲಿದೆ ಎಂದು ಅಧ್ಯಕ್ಷ ಸತೀಶ್ ಗೌಡ ತಿಳಿಸಿದರು.


ಅ.4,5 ಜನ ಸಂಪರ್ಕ ಅಭಿಯಾನ:
ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ ಆಧಾರ್ ಕಾರ್ಟ್ ನೋಂದಣಿ, ತಿದ್ದುಪಡಿ ಶಿಬಿರ ‘ಜನ ಸಂಪರ್ಕ ಅಭಿಯಾನ’ ನಡೆಸಲಾಗುತ್ತಿದ್ದು ಅ.4ರಂದು ಸಂಘದ ಉಜ್ರುಪಾದೆ ಶಾಖೆಯಲ್ಲಿ ಹಾಗೂ ಅ.5ರಂದು ಬೆಳಿಯೂರುಕಟ್ಟೆಯಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ತಿಳಿಸಿದರು.
ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಪ್ರವೀಣ್‌ಚಂದ್ರ ಆಳ್ವ ಎ.ಯಂ., ಪ್ರಕಾಶ್ಚಂದ್ರ ಆಳ್ವ, ನವೀನ್ ಕರ್ಕೇರ, ಅಂಬ್ರೋಸ್ ಡಿ’ಸೋಜ, ಸೀತಾರಾಮ, ವಿನಯ, ಶುಕವಾಣಿ, ಪ್ರಮೋದ್ ಹಾಗೂ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಣ್ಣಿನ ತಪಾಸಣೆ:
ಮಹಾಸಭೆಯಲ್ಲಿ ಕಾಮತ್ ಒಪ್ಟಿಕಲ್‌ನ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು. ಸದಸ್ಯರು ಇದರ ಪ್ರಯೋಜನ ಪಡೆದುಕೊಂಡರು.
ಅಧ್ಯಕ್ಷ ಸತೀಶ್ ಗೌಡ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು. ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ವಂದಿಸಿದರು. ಸಿಬಂದಿಗಳಾದ ಶುಭ ಕೆ., ಕೀರ್ತನ್ ಶೆಟ್ಟಿ, ಪುಷ್ಪಾ ಎಂ ಹಾಗೂ ವೆಂಕಟಕೃಷ್ಣ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here