ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ 42 ನೇ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ

0

ಗಣೇಶ ಪ್ರಕೃತಿ ಮತ್ತು ಸಂಸ್ಕೃತಿಯ ಸಂಕೇತವಾಗಿದ್ದಾರೆ : ಸಂಜೀವ ಮಠಂದೂರು

ಪುತ್ತೂರು: ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರನ್ನು ಒಗ್ಗೂಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಾಲ ಗಂಗಾಧರನಾಥ ತಿಲಕರು ಮಹಾರಾಷ್ಟ್ರದಲ್ಲಿ ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇಂದಿಗೂ ದೇಶದೆಲ್ಲಡೆ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಗಣೇಶ ಎಂದರೆ ಪ್ರಕೃತಿ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಗಣೇಶನಲ್ಲಿ ನಾವು ಪ್ರಕೃತಿ ಮತ್ತು ಸಂಸ್ಕೃತಿ ಅನಾವರಣಗೊಂಡಿರುವುದನ್ನು ಕಾಣಬಹುದಾಗಿದೆ. ಗಣೇಶನೊಂದಿಗೆ ಇರುವ ಇಲಿ, ಸರ್ಪ, ಗರಿಕೆ ಹುಲ್ಲು,ಆತನ ಆನೆಯ ಮೊಗ ಇವೆಲ್ಲವೂ ಪ್ರಕೃತಿಯ ಸಂಕೇತಗಳಾಗಿವೆ.ಆದ್ದರಿಂದಲೇ ನಾವು ಗಣೇಶನ ಆರಾಧನೆಯ ಮೂಲಕ ಸಂಸ್ಕೃತಿಯ ಪಾಠವನ್ನು ಕಲಿಯಲು ಸಾಧ್ಯವಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುತ್ತಿರುವ 42 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ 2 ನೇ ದಿನವಾದ ಸೆ.20 ರಂದು ನಡೆದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಾವು ಇತಿಹಾಸವನ್ನು ಓದುತ್ತೇವೆ ಆದರೆ ಇತಿಹಾಸ ನಿರ್ಮಾಣ ಮಾಡುವುದಿಲ್ಲ ನಾವು ಇತಿಹಾಸ ನಿರ್ಮಾಣಕಾರರಾಗಬೇಕು ಎಂದ ಮಾಜಿ ಶಾಸಕರು, ಸನಾತನ ಧರ್ಮದ ಬಗ್ಗೆ ಎದ್ದಿರುವ ಅಪಸ್ವರದ ಬಗ್ಗೆ ಮಾತನಾಡಿ ಜಗತ್ತಿನ ಆರಂಭದೊಂದಿಗೆ ಆರಂಭಗೊಂಡ ಧರ್ಮ ಸನಾತನ ಧರ್ಮವಾಗಿದೆ. ಇಂತಹ ಸಂಸ್ಕೃತಿ, ಧರ್ಮವನ್ನು ಕೆಲವು ಮೂಲಭೂತವಾದಿಗಳು ಪ್ರಶ್ನೆ ಮಾಡುತ್ತಿದ್ದಾರೆ ಇವರಿಗೆ ಸರಿಯಾದ ಉತ್ತರವನ್ನು ನಾವು ಕೊಡಬೇಕಾಗಿದೆ ಎಂದರು. ಸನಾತನ ಧರ್ಮ, ಸಂಸ್ಕೃತಿಯಿಂದಾಗಿ ಇಡೀ ಜಗತ್ತು ನಮ್ಮ ಭಾರತವನ್ನು ನೋಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಶಿಕ್ಷಣ ಪದ್ಧತಿ, ಧರ್ಮಜಾಗೃತಿ ಎಂಬ ವಿಷಯದಲ್ಲಿ ಸವಣೂರು ಸ.ಪ.ಪೂ ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯರವರು ಉಪನ್ಯಾಸ ನೀಡುತ್ತಾ, ಧರ್ಮ ಮತ್ತು ರಾಷ್ಟ್ರಕ್ಕಾಗಿ ಬದುಕುವ ವ್ಯಕ್ತಿತ್ವ ನಿರ್ಮಾಣ ಆಗಬೇಕಾಗಿದೆ. ನಮ್ಮ ಜೀವಮಾನದಲ್ಲಿ ಧರ್ಮ ಕಾರ್ಯವೊಂದೇ ದೇವರನ್ನು ಕಾಣಲು ಇರಲು ದಾರಿಯಾಗಿದೆ ಎಂದ ಅವರು, ದೇವರು ಎಲ್ಲಾ ಕಡೆಗಳಲ್ಲಿಯೂ ಇದ್ದಾರೆ ಪ್ರತಿಯೊಬ್ಬರಲ್ಲೂ ದೇವರು ಇದ್ದಾರೆ ಆದರೆ ದೇವರನ್ನು ಕಾಣುವ ಮನಸ್ಸು ನಮ್ಮಲ್ಲಿರಬೇಕು ಇದಕ್ಕಾಗಿ ನಮಗೆ ಧರ್ಮ ಶಿಕ್ಷಣದ ಅಗತ್ಯತೆ ಇದೆ. ನಮ್ಮ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರದ ಶಿಕ್ಷಣವನ್ನು ಕಲಿಸಬೇಕಾಗಿದೆ. ಅದಕ್ಕಾಗಿ ಮಕ್ಕಳನ್ನು ಧಾರ್ಮಿಕ ಕೇಂದ್ರಗಳಿಗೆ, ದೈವಸ್ಥಾನ, ದೇವಸ್ಥಾನಗಳಿಗೆ, ಧಾರ್ಮಿಕ ಸಭೆಗಳಿಗೆ ಕರೆದುಕೊಂಡ ಬರಬೇಕಾದ ಅಗತ್ಯತೆ ಇದೆ ಆ ಮೂಲಕ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರದ ಅರಿವನ್ನು ಮೂಡಿಸುವ ಕೆಲಸ ಹೆತ್ತವರಿಂದ ಆಗಬೇಕು ಎಂದರು. ಒಳ್ಳೆಯ ಶಿಕ್ಷಣ ಎಲ್ಲಿಂದ ಆರಂಭವಾಗಬೇಕು ಎಂದರೆ ಅದು ನಮ್ಮ ಮನೆಯಿಂದಲೇ ಆರಂಭವಾಗಬೇಕು ನಮ್ಮ ಮಕ್ಕಳಿಗೆ ಹೆತ್ತವರನ್ನು, ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು ಯಾರೂ ಹೆತ್ತವರನ್ನು, ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದ ಪಡೆದುಕೊಂಡು ಮುಂದೆ ಸಾಗುತ್ತಾರೋ ಅವರು ಜೀವನದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಉನ್ನತ ಮಟ್ಟಕ್ಕೆ ಏರುತ್ತಾರೆ ಎಂದು ಗಿರಿಶಂಕರ ಸುಲಾಯ ಹೇಳಿದರು. ವಾಟ್ಸಫ್, ಪೇಸ್‌ಬುಕ್‌ನಂತಹ ಸೋಶಿಯಲ್ ಮೀಡಿಯಾಗಳು ನಮ್ಮ ದಾರಿ ತಪ್ಪಿಸುತ್ತಿವೆ ಅದರಲ್ಲಿ ಬಂದಂತಹ ಬರಹಗಳು, ಮಾತುಗಳೇ ವೇದ ವಾಕ್ಯ ಅಂತ ನಂಬುವ ಕಾಲಘಟ್ಟದಲ್ಲಿ ನಾವಿದ್ದೇವೆ ಇದು ಸರಿಯಲ್ಲ ಎಂದ ಅವರು ಉತ್ತಮ ಶಿಕ್ಷಣ ಪದ್ಧತಿಯಿಂದ ಧರ್ಮ ಜಾಗೃತಿ ಮೂಡಲು ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಬ್ರೈಟ್‌ವೇ ಇಂಡಿಯಾದ ಆಡಳಿತ ನಿರ್ದೇಶಕ ಡಾ.ಹರ್ಷ ಕುಮಾರ್ ರೈ ಮಾಡಾವುರವರು ಮಾತನಾಡಿ, ಕಳೆದ ೪೨ ವರ್ಷಗಳಿಂದ ಕುಂಬ್ರ ಶ್ರೀರಾಮಭಜನಾ ಮಂದಿರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವವು ಹಲವು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ಲಾಘನೀಯ, ಮುಂದಿನ ದಿನಗಳಲ್ಲಿ ಇನ್ನಷ್ಟು ಧರ್ಮ ಜಾಗೃತಿ ಕಾರ್ಯಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಶಿವರಾಮ ಗೌಡ ಇದ್ಯಪೆಯವರು ಮಾತನಾಡಿ, ಕುಂಬ್ರ ಭಜನಾ ಮಂದಿರಕ್ಕೆ ತನ್ನದೇ ಆದ ಇತಿಹಾಸವಿದೆ. ಆರಂಭದಲ್ಲಿ ಸಮಾಜ ಮಂದಿರದಲ್ಲಿ ಭಜನೆ ಆರಂಭವಾಯಿತು. ಮುಂದೆ ಎಲ್ಲರ ಸಹಕಾರದೊಂದಿಗೆ 1981 ರಲ್ಲಿ ಕಟ್ಟಡ ನಿರ್ಮಾಣವಾಯಿತು. ಇದರ ಹಿಂದೆ ಬಹಳ ಮಂದಿ ಹಿರಿಯರು ಕಷ್ಟಪಟ್ಟಿದ್ದಾರೆ. ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದೆ ಭವ್ಯವಾದ ಮಂದಿರ ನಿರ್ಮಾಣಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯ ಶೀನಪ್ಪ ನಾಯ್ಕ ಬೊಳ್ಳಾಡಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ,ಮಂದಿರದ ಆಡಳಿತ ಸಮಿತಿ ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಂಕಿತ್ ರೈ ಕುಯ್ಯಾರು ಸ್ವಾಗತಿಸಿದರು. ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರತನ್ ರೈ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತೀಶ್ ಕುಮಾರ್ ಶಾಂತಿವನ, ಅಶೋಕ್ ಕುಮಾರ್ ಬಡಕ್ಕೋಡಿ, ಆದರ್ಶ್, ಎಸ್.ಮಾಧವ ರೈ ಕುಂಬ್ರ, ಮಂದಿರದ ಕನ್ಯಾ ಸಂಕ್ರಮಣದ ಸಂಚಾಲಕ ರಾಜೇಶ್ ರೈ ಪರ್ಪುಂಜ, ರಾಮಯ್ಯ ಗೌಡ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಆಶಾಲತಾ ಎಸ್.ರೈ ವಂದಿಸಿದರು. ಯುವರಾಜ್ ಪೂಂಜಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಯ ಪದಾಧಿಕಾರಿಗಳು ಸಹಕರಿಸಿದ್ದರು.


ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ ಸಾರ್ವಜನಿಕ ರಂಗಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಅರ್ಚಕ ಪ್ರಕಾಶ್ ನಕ್ಷಿತ್ರಿತ್ತಾಯ ತಂಡದವರು ವೈಧಿಕ ವಿಧಿ ವಿಧಾನ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಪರ್ಪುಂಜ ಶಿವಸ್ವರ ಸಂಗಮ ಸಂಗೀತಾ ಶಾಲೆಯ ಕವಿತಾ ದಿನಕ ಮತ್ತು ಶಿಷ್ಯ ವೃಂದವರಿಂದ ಭಕ್ತಿ ರಸಮಂಜರಿ, ರಾತ್ರಿ ಅಕ್ಷಯ ಕಾಲೇಜು ಸಂಪ್ಯ ಇವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಅಪರಾಹ್ನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.


ಶ್ರೀ ಗಣೇಶನ ದರ್ಶನ ಪಡೆದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ
ಕುಂಬ್ರ ಶ್ರೀ ರಾಮ ಭಜನಾ ಮಂದಿರಕ್ಕೆ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಆಗಮಿಸಿ ಶ್ರೀ ಗಣೇಶನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಉದ್ಯಮಿ ಪುರಂದರ ರೈ ಮಿತ್ರಂಪಾಡಿ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

ಇಂದು ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ
ಸೆ.21 ರಂದು ಬೆಳಿಗ್ಗೆ ವೈಧಿಕ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಚಂದ್ರಯಾನ 3 ಬಗ್ಗೆ ಪ್ರಬಂಧ ಸ್ಪರ್ಧೆ, ಧಾರ್ಮಿಕ ಸಭೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ,ಅಪರಾಹ್ನ ಬೃಂದಾವನ ನಾಟ್ಯಾಲಯ ಕುಂಬ್ರ ಇವರಿಂದ ಕಾರ್ಯಕ್ರಮ ವೈವಿಧ್ಯ, ಸಂಜೆ ಭಜನೆ, ರಾತ್ರಿ ಮಹಾಪೂಜೆ ಬಳಿಕ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕುಂಬ್ರ ಕಟ್ಟೆ ಬಳಿ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ತಿಂಗಳಾಡಿಯ ಗಣೇಶ ವಿಗ್ರಹದ ಜೊತೆ ಸೇರಿ ಶೇಖಮಲೆ ನದಿಯಲ್ಲಿ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here