ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯಿಂದ ಸುಧಾಕರ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ

0

ಉತ್ತಮ ವ್ಯಕ್ತಿತ್ವ, ಪಕ್ಷದ ನಿಯತ್ತು, ನಾಯಕತ್ವ ಸುಧನ್ನರವರಲ್ಲಿತ್ತು-ಸೊರಕೆ

ಪುತ್ತೂರು: ಕಂಬಳದ ಪ್ರೇರೇಪಕರು, ಕಿಲ್ಲೆ ಗಣೇಶೋತ್ಸವದ ರೂವಾರಿಯಾಗಿರುವ ಸುಧಾಕರ್ ಶೆಟ್ಟಿಯವರು ಪಕ್ಷದ ತತ್ವ, ಸಿದ್ಧಾಂತಗಳಿಗೆ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಅವರ ಅವಧಿಯಲ್ಲಿ ಆಗಿದೆ. ಸುಧಾಕರ್ ಶೆಟ್ಟಿಯವರಲ್ಲಿನ ವ್ಯಕ್ತಿತ್ವ, ಪಕ್ಷದ ನಿಯತ್ತು ಹಾಗೂ ನಾಯಕತ್ವ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದುವೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಮಾಜಿ ನಗರಾಭಿವೃದ್ಧಿ ಸಚಿವ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿರುವ ವಿನಯಕುಮಾರ್ ಸೊರಕೆಯವರು ಹೇಳಿದರು.
ಸೆ.21ರಂದು ದರ್ಬೆ ನಿರೀಕ್ಷಣ ಮಂದಿರದ ಬಳಿ ಇತ್ತೀಚೆಗೆ ಅಗಲಿದ ಪುತ್ತೂರು ಕಂಬಳ ಸಮಿತಿಯ ಸಂಚಾಲಕರಾದ ಎನ್.ಸುಧಾಕರ್ ಶೆಟ್ಟಿ ನೆಲ್ಲಿಕಟ್ಟೆರವರಿಗೆ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ವತಿಯಿಂದ ಅರ್ಪಿಸುವ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಸುಧಾಕರ್ ಶೆಟ್ಟಿಯವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಸುಧಾಕರ್ ಶೆಟ್ಟಿಯವರು ಕ್ರೀಡೆ, ಸಾಂಸ್ಕೃತಿಕ, ಸಂಘಟನೆಗಳಲ್ಲಿ ಬಹಳ ಮುಂಚೂಣಿಯಲ್ಲಿ ನಿಂತು ತನ್ನ ಅಭಿಮಾನಿಗಳನ್ನು ಹುರಿದುಂಬಿಸುವ ಆಕರ್ಷಕ ವ್ಯಕ್ತಿತ್ವ ಅವರದಾಗಿತ್ತು. ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಸುಧಾಣ್ಣ ಅವರ ಪಾಲುದಾರಿಕೆ, ನೇತೃತ್ವ ಇದ್ದೇ ಇರುತ್ತದೆ ಅಲ್ಲದೆ ಅವರ ಕಾರ್ಯಚಟುವಟಿಕೆ ಪುತ್ತೂರಿಗೆ ಮಾತ್ರ ಸೀಮಿತವಾಗಿತ್ತು. ಹಳ್ಳಿಯಿಂದಾಗಲಿ ಅಥವಾ ಪೇಟೆಯಲ್ಲಿನ ಕಾರ್ಯಕರ್ತರಾಗಲಿ ಅವರಿಗೆ ಮೊದಲು ಸಿಗುವುದು ಸುಧಾಣ್ಣ. ಆದರೆ ಶಾಸಕನಾಗಿ ವಿಧಾನಸಭೆಯ ಮೆಟ್ಟಿಲು ಹತ್ತಿಲ್ಲವಲ್ಲ ಎಂಬ ಕೊರಗು ಮಾತ್ರ ಅವರಲ್ಲಿತ್ತು ಎಂದ ಅವರು ಅಗಲಿದ ಸುಧನ್ನರವರ ಆತ್ಮಕ್ಕೆ ಶ್ರೀ ಮಹಾಲಿಂಗೇಶ್ವರ ದೇವರು ಸದ್ಗತಿಯನ್ನು ಕರುಣಿಸಲಿ ಎಂಬುದೇ ನನ್ನ ಪ್ರಾರ್ಥನೆಯಾಗಿದೆ ಎಂದರು.

ಗಣಪತಿಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿಯೇ ಅವರ ಸದ್ಗತಿ ಕಾರ್ಯ ನಡೆಯಲಿ ಎನ್ನುವುದು ದೇವರ ಇಚ್ಛೆಯಾಗಿದೆ-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಅಂದು ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಪುತ್ತೂರಲ್ಲಿ ರಾಜ್ಯ ಯುವಜನ ಮೇಳ ನಡೆದಿದ್ದು ಅಂದು ನನಗೆ ಸುಧಾಣ್ಣ ರವರ ಪರಿಚಯವಾಗಿತ್ತು. ತಾನು ಬಿಜೆಪಿಯಲ್ಲಿದ್ದ ಸಂದರ್ಭ ಮುತ್ತಪ್ಪ ರೈಯವರು ತನಗೆ ಪುತ್ತೂರಿನಲ್ಲಿ ನಡೆಯುವ ಕಂಬಳದಲ್ಲಿ ಭಾಗವಹಿಸಿ ಎಂದು ಫೋನಾಯಿಸಿದ್ದರು. ಅಂದು ನಾನು ಕಂಬಳದಲ್ಲಿ ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ಸುಧಾಕರ್ ಶೆಟ್ಟಿಯವರು ಕಂಬಳದ ಸಂಚಾಲಕರಾಗಿದ್ದರು ಮಾತ್ರವಲ್ಲ ಕಂಬಳದ ವ್ಯವಸ್ಥೆಯನ್ನು ಅವರು ಅಚ್ಚುಕಟ್ಟಾಗಿ ನೆರವೇರಿಸಿದ್ದರು. ಶಾಸಕರಾಗಲು ಅವರಿಂದ ಸಾಧ್ಯವಾಗಿಲ್ಲ ಆದರೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾಗಲು ವಿನಯಣ್ಣನ ಸಲಹೆಯಂತೆ ನಾನು ಅಂದು ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದೆ. ಸುಧಾಣ್ಣರವರು ದೇವಸ್ಥಾನದ ಅಧ್ಯಕ್ಷರಾದ ಮೇಲೆ ಜನ ಮೆಚ್ಚುವ ಕೆಲಸವನ್ನೇ ಮಾಡಿದ್ದಾರೆ ಮಾತ್ರವಲ್ಲ ಕಂಬಳದ ಜೊತೆಗೆ ಕಿಲ್ಲೆ ಮೈದಾನದಲ್ಲಿ ಗಣೇಶೋತ್ಸವವನ್ನು ಕೂಡ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುತ್ತಾರೆ. ಇನ್ನಷ್ಟು ದಿನ ಅವರು ಇರಬೇಕಾಗಿತ್ತು ಆದರೆ ಗಣಪತಿಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿಯೇ ಅವರ ಸದ್ಗತಿ ಕಾರ್ಯ ನಡೆಯಲಿ ಎನ್ನುವುದು ದೇವರ ಇಚ್ಛೆಯಾಗಿದೆ ಎನ್ನಬಹುದು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ನಿಜಕ್ಕೂ ಸುಧಾಣ್ಣರವರ ಆತ್ಮ ಕಿಲ್ಲೆ ಮೈದಾನದಲ್ಲಿ ನೆಲೆಸಬಹುದು-ಚಂದ್ರಹಾಸ ಶೆಟ್ಟಿ:
ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಅಗಲಿದ ಸುಧಾಕರ್ ಶೆಟ್ಟಿಯವರು ಕಂಬಳ ಸಮಿತಿಯಲ್ಲಿ 20 ವರುಷ ಸಂಚಾಲಕರಾಗಿ ಸೇವೆ ನೀಡಿರುತ್ತಾರೆ. ಅವರ ಸಂಚಾಲಕತ್ವದ ಅವಧಿಯಲ್ಲಿ ಕಂಬಳದ ಕರೆ ನಿರ್ಮಾಣ, ಕಾರ್ಯಕ್ರಮ ಸಂಘಟಿಸುವಿಕೆ ಹೀಗೆ ನಾನಾ ಜವಾಬ್ದಾರಿಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದರು ಮಾತ್ರವಲ್ಲ ಕಂಬಳದ ಕುರಿತು ಅವರಿಂದ ನಮಗೆ ಮಾರ್ಗದರ್ಶನ ಸಿಕ್ಕಿರುವುದಾಗಿದೆ. ಅವರ ಸೇವೆಯನ್ನು ಪರಿಗಣಿಸಿ ಕಳೆದ ವರ್ಷ ಅವರನ್ನು ಸನ್ಮಾನ ಮಾಡಿದ್ದೇವೆ. ಧಾರ್ಮಿಕ ಕ್ಷೇತ್ರದಲ್ಲಿ ಅವರಷ್ಟು ಯಾರೂ ಇಲ್ಲಿವರೆಗೆ ಕೆಲಸ ಮಾಡಿರಲಿಕ್ಕಿಲ್ಲ ಯಾಕೆಂದರೆ ಪ್ರತಿಯೋರ್ವರು ಸುಧಾಣ್ಣನ ಕಾರ್ಯವೈಖರಿಯನ್ನು ಹೊಗಳುತ್ತಿದ್ದರು‌. ಕಂಬಳ ಹಾಗೂ ಕಿಲ್ಲೆ ಗಣಪತಿ ಉತ್ಸವವನ್ನು ಅವರು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುತ್ತಾರೆ. ನಿಜಕ್ಕೂ ಅವರ ಆತ್ಮ ಕಿಲ್ಲೆ ಮೈದಾನದಲ್ಲಿ ನೆಲೆಸಬಹುದು ಎಂದು ಹೇಳಿ ಅಗಲಿದ ಸುಧಾಣ್ಣನ ಆತ್ಮಕ್ಕೆ ಚಿರಶಾಂತಿ ಕೋರಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ವಿಶ್ವನಾಥ ನಾಯ್ಕ್, ರೋಶನ್ ರೈ ಬನ್ನೂರು, ರಂಜಿತ್ ಬಂಗೇರ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪಂದ್ಯಾಟ ಸಮಿತಿ ಗೌರವಾಧ್ಯಕ್ಷ ಶಿವರಾಂ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ನವೀನ್ ಕುಮಾರ್, ಪ್ರವೀಣ್ ಶೆಟ್ಟಿ ಅಳಕೆಮಜಲು, ಅಹಮದ್ ತ್ವಾಹ, ಜಿನ್ನಪ್ಪ ಪೂಜಾರಿ ಮುರ, ಶಶಿಕಿರಣ್ ರೈ ನೂಜಿ, ಮಂಜುನಾಥ್ ತೆಂಕಿಲರವರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿ, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ ವಂದಿಸಿದರು.

ಮೌನ ಪ್ರಾರ್ಥನೆ..
ಈ ಸಂದರ್ಭದಲ್ಲಿ ಅಗಲಿದ ಪುತ್ತೂರು ಕಂಬಳ ಸಮಿತಿಯ ಸಂಚಾಲಕ ಎನ್.ಸುಧಾಕರ್ ಶೆಟ್ಟಿಯವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here