ತೆರವಿಗೆ ತಾ.ಪಂ.ಇಒರಿಂದ ಸಿಗದ ಸ್ಪಂದನೆ; ಜಿ.ಪಂ.ಸಿಇಒಗೆ ಬರೆಯಲು ನಿರ್ಣಯ
ಪೆರಾಬೆ: ತಳ್ಳುಗಾಡಿಗೆ ಪರವಾನಿಗೆ ಪಡೆದು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವ ಸಂಬಂಧ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಜರುಗಿಸದೇ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪತ್ರ ಬರೆಯಲು ಪೆರಾಬೆ ಗ್ರಾ.ಪಂ.ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಸೆ.21ರಂದು ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾರವರು ನೋಡೆಲ್ ಅಧಿಕಾರಿಯಾಗಿದ್ದರು. ಕುಶಾಲಪ್ಪ ಗೌಡ ಎಂಬವರು ಪಂಚಾಯತ್‌ನಿಂದ ತಳ್ಳುಗಾಡಿ ವ್ಯಾಪಾರಕ್ಕೆ ಪರವಾನಿಗೆ ಪಡೆದುಕೊಂಡು ಕುಂತೂರಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿ ವ್ಯಾಪಾರ ಮಾಡುತ್ತಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಫಯಾಝ್‌ರವರು, ಸದ್ರಿ ಕಟ್ಟಡ ತೆರವುಗೊಳಿಸುವ ಸಂಬಂಧ 2021ರಲ್ಲಿಯೇ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಂದಿನ ಕ್ರಮಕ್ಕಾಗಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಬರೆಯಲಾಗಿದೆ. ಆದರೆ ಅಲ್ಲಿಂದ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ ಮುಂದಿನ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಗ್ರಾಮ ಪಂಚಾಯಿತಿಯಿಂದ ವಿಳಂಬ ಆಗುತ್ತಿಲ್ಲ ಎಂದರು. ಈ ಕುರಿತು ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಕೆ.ಬಿ.ಅವರು, ಸಾಮಾನ್ಯ ಸಭೆಯ ನಿರ್ಣಯದ ಹಿನ್ನೆಲೆಯಲ್ಲಿ ತಾ.ಪಂ.ಇಒ ಅವರು ಬಂದು ಸದ್ರಿ ಕಟ್ಟಡದ ಪರಿಶೀಲನೆ ನಡೆಸಿದ್ದಾರೆ. ಸದ್ರಿ ಕಟ್ಟಡವನ್ನು ಗ್ರಾ.ಪಂ.ಗೆ ನೇರವಾಗಿ ತೆರವುಗೊಳಿಸಲು ಆಗುವುದಿಲ್ಲ. ಈಗ ಕಡಬ ತಾ.ಪಂ.ಗೆ ಹೊಸ ಇಒ ಅವರು ಬಂದಿದ್ದು ಅವರಿಗೂ ಈ ಸಂಬಂಧ ಮನವಿ ಮಾಡುವುದಾಗಿ ಹೇಳಿದರು. ಸದ್ರಿ ಜಮೀನಿನ ಸರ್ವೆಗೆ ಸಂಬಂಧಿಸಿ ತಹಶೀಲ್ದಾರ್ ಅವರಿಗೆ ಎರಡು ಸಲ ಪತ್ರ ಬರೆಯಲಾಗಿದೆ. ಅವರಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದರು.
ಗ್ರಾಮಸ್ಥ ನಾಗಪ್ಪ ಗೌಡರವರು ಮಾತನಾಡಿ, ಸದ್ರಿ ಕಟ್ಟಡ ಸರಕಾರಿ ಜಾಗದಲ್ಲಿ ಇದೆ. ಪಂಚಾಯತ್‌ಗೆ ತೆರವುಗೊಳಿಸಲು ಬರುತ್ತದೆಯೇ ?, ಆ ಪರಿಸರದ ಅಂಗಡಿಯಲ್ಲಿ ಗಾಂಜಾ ಮಾರಾಟವೂ ಆಗುತ್ತಿದೆ. ಅಂತವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಸದಸ್ಯೆ ಮಮತಾ ಅಂಬರಾಜೆ ಮಾತನಾಡಿ, ತಳ್ಳುಗಾಡಿಗೆ ಪರವಾನಿಗೆ ಪಡೆದುಕೊಂಡು ಅಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಆ ಕಟ್ಟಡದ ಮಾಲಕರೂ ಬೆದರಿಕೆ, ಅವಾಚ್ಯ ಪದ ಬಳಸಿ ನಿಂದನೆಯೂ ಮಾಡಿದ್ದಾರೆ. ಇಲ್ಲಿ ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸದ್ರಿ ಕಟ್ಟಡ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಸದ್ರಿ ಅಕ್ರಮ ಕಟ್ಟಡ ತೆರವಿಗೆ ಸಂಬಂಧಿಸಿ ತಾ.ಪಂ.ಇಒ ಅವರಿಂದ ಸೂಕ್ತ ಸ್ಪಂದನೆ ಸಿಗದೇ ಇರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕಾಗಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಮೀನು ಮಾರಾಟ ಹಕ್ಕು ಏಲಂ ಮಾಡದೇ ಇರುವುದಕ್ಕೆ ಆಕ್ಷೇಪ:
ಆಲಂಕಾರು ಪೇಟೆಗೆ ಹೊಂದಿಕೊಂಡಿರುವ ಪೆರಾಬೆ ಗ್ರಾ.ಪಂ.ನ ಮೀನು ಮಾರುಕಟ್ಟೆಯಲ್ಲಿನ ಹಸಿ ಮೀನು ಮಾರಾಟದ ಹಕ್ಕು ಏಲಂ ಮಾಡದೇ ಮುಂದುವರಿಸಿರುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಗ್ರಾಮಸ್ಥ ಗುರುರಾಜ್ ರೈಯವರು ವಿಷಯ ಪ್ರಸ್ತಾಪಿಸಿ ಮೀನು ಮಾರುಕಟ್ಟೆ ಏಲಂ ಮಾಡದೇ ಇರುವುದಕ್ಕೆ ಆಕ್ಷೇಪ ಸೂಚಿಸಿದರು. ಇದಕ್ಕೆ ಗ್ರಾಮಸ್ಥ ಪ್ರಭಾಕರ ಶೆಟ್ಟಿ ಹಾಗೂ ಇತರರೂ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿಕಟಪೂರ್ವ ಅಧ್ಯಕ್ಷ ಮೋಹನದಾಸ ರೈಯವರು, ಮುಸ್ತಫಾ ಎಂಬವರು ನಿರಂತರವಾಗಿ ಮೀನು ಮಾರಾಟದ ಹಕ್ಕು ಪಡೆದುಕೊಳ್ಳುತ್ತಿದ್ದರು. ಅವರು ಆಕಸ್ಮಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮಗನಿಗೆ ಸಿಂಪತಿ ಮೇಲೆ ಅವರ ಕೋರಿಕೆಯಂತೆ ಕಳೆದ ವರ್ಷದ ಏಲಂನ ಮೊತ್ತದಲ್ಲಿ ಶೇ.10ರಷ್ಟು ಏರಿಕೆ ಮಾಡಿ 1 ವರ್ಷದ ಅವಧಿಗೆ ಮುಂದುವರಿಕೆ ಮಾಡಲು ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಕೊಡಲಾಗಿದೆ. ಅವರು ವ್ಯವಸ್ಥಿತವಾಗಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂದರು. ಆದರೂ ಏಲಂ ಮಾಡದೇ ಮೀನು ಮಾರಾಟದ ಹಕ್ಕು ಹಿಂದಿನವರಿಗೇ ಮುಂದುವರಿಸಿರುವುದಕ್ಕೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತಪಡಿಸಿದರು.
ಸಿಬ್ಬಂದಿ ರಾಜೀನಾಮೆ ವಿಚಾರ–ಚರ್ಚೆ:
ಗ್ರಾ.ಪಂ.ಸಿಬ್ಬಂದಿ ಹರೀಶ್ ಅವರು ರಾಜೀನಾಮೆ ನೀಡಿರುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು. ಸಿಬ್ಬಂದಿ ಹರೀಶ್ ಅವರ ತಾಯಿ ಮಾತನಾಡಿ, ನನ್ನ ಮಗ 12 ವರ್ಷದಿಂದ ಪಂಚಾಯತ್‌ನಲ್ಲಿ ಕೆಲಸ ನಿರ್ವಹಿಸಿದ್ದಾನೆ. ಅವನಿಂದ ತಪ್ಪು ಆಗಿರಬಹುದು. ಎಲ್ಲಾ ಸದಸ್ಯರಲ್ಲೂ ಮನವಿ ಮಾಡಿದ್ದೇನೆ. ಆತನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಫಯಾಜ್ ಅವರು, ಹರೀಶ್ ಅವರೇ ಬಿಡುಗಡೆ ಕೋರಿ ಪತ್ರ ನೀಡಿದ್ದಾರೆ. ಅದರಂತೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಇಒ ಅವರಿಗೆ ಕಳುಹಿಸಲಾಗಿದ್ದು ಅವರು ಅಂಗೀಕರಿಸಿದ್ದಾರೆ ಎಂದರು.
ಪಂಚಾಯತ್ ರಸ್ತೆಯಲ್ಲಿ ಮರಳು ಸಾಗಾಟ ಮಾಡುವವರಿಂದ ತೆರಿಗೆ ವಸೂಲಿ ಮಾಡಬೇಕು, ಪರವಾನಿಗೆ ಪಡೆದುಕೊಂಡ ಜಾಗದಲ್ಲಿಯೇ ಪರವಾನಿಗೆದಾರರು ಮರಳುಗಾರಿಕೆ ಮಾಡಬೇಕೆಂದೂ ಸಭೆಯಲ್ಲಿ ಒತ್ತಾಯ ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅವರು, ಗಣಿಗಾರಿಕೆ ಇಲಾಖೆಯವರು ಪಂಚಾಯಿತಿಗೆ ರಾಜಧನ ಪಾವತಿಸಿದ್ದಾರೆ ಎಂದು ಹೇಳಿದರು. ಗಣಿ ಇಲಾಖೆಯಿಂದ ಬಂದ ರಾಜಧನವನ್ನು ರಸ್ತೆ ಕಾಂಕ್ರಿಟೀಕರಣಕ್ಕೆ ಬಳಕೆ ಮಾಡಲಾಗಿದೆ ಎಂದು ಸದಸ್ಯ ಸದಾನಂದ ಕುಂಟ್ಯಾನ ಅವರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
ಸುರುಳಿ ರಸ್ತೆ ದುರಸ್ತಿ, ಬೀದಿ ದೀಪ ಅಳವಡಿಕೆ ವಿಚಾರವನ್ನು ಗ್ರಾಮಸ್ಥ ರಮೇಶ್ ರೈಯವರು ಪ್ರಸ್ತಾಪಿಸಿದರು. ಅನ್ನಡ್ಕದಲ್ಲಿ ಬಸ್ ನಿಲ್ದಾಣ, ಕುಂತೂರುಪದವು ಬಸ್‌ನಿಲ್ದಾಣಕ್ಕೆ ಸುತ್ತಿಕೊಂಡಿರುವ ಬಲ್ಲೆಗಳ ತೆರವು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕ, ಕುಂತೂರು ಪದವು ಪಶುಚಿಕಿತ್ಸಾಲಯಕ್ಕೆ ಪಶುವೈದ್ಯರ ನೇಮಕ, ಬೀದಿದೀಪ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನ ಸೆಳೆದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ವಾಣಿಶ್ರೀ, ಸಿಆರ್‌ಪಿ ಪ್ರಕಾಶ್, ಮೆಸ್ಕಾಂ ಜೆಇ ಪ್ರೇಮ್‌ಸಿಂಗ್, ಕೃಷಿ ಇಲಾಖೆಯ ಸೀಮ ಕೆ.ಎಸ್., ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯ ಆರೋಗ್ಯ ಸುರಕ್ಷಾಧಿಕಾರಿಗಳಾದ ಲೀಲಾವತಿ, ಮೋಹನಾಂಗಿ, ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿಯವರು ಮಾಹಿತಿ ನೀಡಿದರು. ಜಿ.ಪಂ.ಇಂಜಿನಿಯರ್, ಗ್ರಾಮಕರಣಿಕರು ಗೈರು ಹಾಜರಿಯಾಗಿರುವುದಕ್ಕೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಯಿತು. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಕುಮಾರ, ಸುಶೀಲ, ಸದಾನಂದ, ರಾಜು ಪಿ.ಜಿ., ಕೃಷ್ಣ ವೈ, ಮೋಹಿನಿ, ಕಾವೇರಿ, ಲೀಲಾವತಿ, ಮೇನ್ಸಿ ಸಾಜನ್, ಫಯಾಝ್, ಮಮತಾ, ಮೋಹನದಾಸ ರೈಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ.,ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿಗಳಾದ ಪದ್ಮಾವತಿ, ಉತ್ತೇಶ್, ಪ್ರಜ್ವಲ್, ಉಮೇಶ್, ವಿಆರ್‌ಡಬ್ಲ್ಯೂ ಕಾರ್ಯಕರ್ತ ಮುತ್ತಪ್ಪ ಸಹಕರಿಸಿದರು.