7.29 ಲಕ್ಷ ರೂ.ನಿವ್ವಳ ಲಾಭ; ಶೇ.12 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 75 ಪೈಸೆ ಬೋನಸ್ ಘೋಷಣೆ
ರಾಮಕುಂಜ: ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.23ರಂದು ಬೆಳಿಗ್ಗೆ ಕೊಯಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಮುರಳೀಕೃಷ್ಣ ಬಡಿಲ ಅವರು ಮಾತನಾಡಿ, ಸಂಘದಲ್ಲಿ 453 ಸದಸ್ಯರಿದ್ದು 258 ಸದಸ್ಯರು ಹಾಲು ಪೂರೈಸುತ್ತಿದ್ದಾರೆ. 77,300 ರೂ. ಪಾಲು ಬಂಡವಾಳವಿದೆ. ವರದಿ ಸಾಲಿನಲ್ಲಿ ಸದಸ್ಯರಿಂದ 4,61,585 ಲೀ.ಹಾಲು ಖರೀದಿಸಿ 14,158 ಲೀ.ಹಾಲು ಸ್ಥಳೀಯವಾಗಿ ಹಾಗೂ 4,62,129 ಕೆ.ಜಿ.ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 2300 ಚೀಲ ಪಶುಆಹಾರ ಖರೀದಿಸಿ 2171 ಚೀಲ ಪಶು ಆಹಾರ ಮಾರಾಟ ಮಾಡಲಾಗಿದೆ. 1275 ಕೆ.ಜಿ.ಲವಣ ಮಿಶ್ರಣ ಖರೀದಿಸಿ 959 ಕೆ.ಜಿ.ಮಾರಾಟ ಮಾಡಲಾಗಿದೆ. ಹೀಗೆ ಹಾಲು ಹಾಗೂ ಪಶು ಆಹಾರ ಮಾರಾಟದಿಂದ 7,29,633.26 ರೂ.ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಶೇ.12 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 75 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಸದಸ್ಯರ ಸಹಕಾರದಿಂದ ಸಂಘ ಬೆಳೆಯುತ್ತಿದೆ. ಪರಿಶುದ್ಧ ಹಾಲು ಹಾಗೂ ಗುಣಮಟ್ಟದ ಹಾಲು ಪೂರೈಕೆಗೆ ಸದಸ್ಯರು ಒತ್ತು ನೀಡಬೇಕು. ಮುಂದಿನ ಮಹಾಸಭೆಯಿಂದ ಪ್ರತಿ ವರ್ಷ ಓರ್ವ ಸದಸ್ಯನಿಗೆ ಉತ್ತಮ ಹೈನುಗಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮುರಳೀಕೃಷ್ಣ ಬಡಿಲ ಹೇಳಿದರು.
ಸನ್ಮಾನ:
ಪಶುಸಂಗೋಪನಾ ಇಲಾಖೆಯಲ್ಲಿ ಸುಮಾರು 36ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಪಶುವೈದ್ಯ ಅಶೋಕ್ ಕೊಯಿಲ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಿರ್ದೇಶಕ ಪ್ರಕಾಶ್ ಕೆ.ಆರ್. ಅವರು ಸನ್ಮಾನಿತರನ್ನು ಪರಿಚಯಿಸಿ ಅಭಿನಂದಿಸಿದರು. ಅಶೋಕ್ ಕೊಯಿಲ ಅವರು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ:
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆಶಿಸ್ ಕುಮಾರ್ ಬರೆಂಬೆಟ್ಟು, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ನಿಶ್ಚಿತ್ ಶೆಟ್ಟಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಂಪತ್‌ಕುಮಾರ್ ಕಂಪ, ಕ್ರೀಡೆಯಲ್ಲಿ ಸಾಧನೆ ಮಾಡಿದ ಚರಣ್ ಪಾಣಿಗ, ವಾತ್ಸಲ್ಯ ಬಿ.ಗೌಡ ಅವರನ್ನು ಗೌರವಿಸಲಾಯಿತು.
ಬಹುಮಾನ ವಿತರಣೆ:
ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ವಾಸಪ್ಪ ಬರಮೇಲು(ಪ್ರಥಮ), ಸತ್ಯಸುಂದರ ರಾವ್ ಅರ್ವೆ(ದ್ವಿತೀಯ)ಅವರುಗೆ ಬಹುಮಾನ ನೀಡಿ ಗೌರವಿಸಲಾಯಿತು. ಗುಣಮಟ್ಟದ ಹಾಲು ಪೂರೈಕೆ ಮಾಡಿದ ಗುಲಾಬಿ ಕುಂಡಡ್ಕ, ನಾಗಪ್ಪ ಗೌಡ ಪಲ್ಲಡ್ಕ, ಜಯಂತಿ ಪಾಣಿಗ, ಚಂದ್ರಶೇಖರ ಪಲ್ಲಡ್ಕ, ಯದುಶ್ರೀ ಆನೆಗುಂಡಿ, ಹೊನ್ನಪ್ಪ ಗೌಡ ಆನೆಗುಂಡಿ, ತನಿಯಪ್ಪ ಕಾಯರಕಟ್ಟ, ಉಮಾವತಿ, ಕೃಷ್ಣಪ್ರಸಾದ್, ಶಾಂಭವಿ ಅರ್ವೆ ಹಾಗೂ 365 ದಿನ ಹಾಲು ಪೂರೈಕೆ ಮಾಡಿದ 26 ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದಿಂದ ಅತೀ ಹೆಚ್ಚು ಪಶುಆಹಾರ ಖರೀದಿಸಿದ ಜಯಂತ ಸಾಲ್ಯಾನ್ ಬರೆಂಬೆಟ್ಟು, ಬೀಪಾತುಮ ಹಲ್ಯಾರ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಪ್ರವೀಣ್ ದೇರೆಜಾಲು, ನಿರ್ದೇಶಕರಾದ ಸುಬ್ರಹ್ಮಣ್ಯ ಭಟ್ ಯನ್.ಬರೆಂಬಾಡಿ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಮೋನಪ್ಪ ಮೂಲ್ಯ ಬೊಳ್ಳರೋಡಿ, ಪ್ರಕಾಶ್ ಕೆ.ಆರ್.ಬಡ್ಡಮೆ, ಕೆ.ವಿಶ್ವನಾಥ ಮೂಲ್ಯ ಕುಂಡಡ್ಕ, ರವಿಪ್ರಸನ್ನ ಸಿ.ಕೆ.ಕುಂಡಡ್ಕ, ರತ್ನಾವತಿ ಎಸ್.ಗೌಡ ಬಟ್ಟೋಡಿ, ರೇಖಾಶೆಟ್ಟಿ ಬರೆಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಿತ್ತರಂಜನ್ ರಾವ್ ವರದಿ ಮಂಡಿಸಿದರು. ನಿರ್ದೇಶಕ ಬಾಲಕೃಷ್ಣ ಗೌಡ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ವಂದಿಸಿದರು. ಸ್ನೇಹಾ ಬರೆಂಬೆಟ್ಟು ಪ್ರಾರ್ಥಿಸಿದರು. ಸಿಬ್ಬಂದಿಗಳಾದ ಹರಿಪ್ರಸಾದ್ ರಾವ್, ಜಲಜಾಕ್ಷಿ ಹಾಗೂ ಧರ್ಣಪ್ಪ ಗೌಡ ಸಹಕರಿಸಿದರು.
ಹಾಲಿನ ದರ ಹೆಚ್ಚಳಕ್ಕೆ ಮನವಿ:
ಪ್ರಸ್ತುತ ಇರುವ ಹಾಲಿನ ದರದಿಂದ ಸದಸ್ಯರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದಲೇ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಪ್ರತಿ ಲೀಟರ್ ಹಾಲಿನ ದರ ಕನಿಷ್ಠ 50 ರೂ.ಆಗಬೇಕು. ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚಳ ಆಗಲಿದೆ ಎಂದು ಸದಸ್ಯ ಮೋಹನದಾಸ ಶೆಟ್ಟಿ ಬಡಿಲ ಹೇಳಿದರು. ಇದಕ್ಕೆ ಇತರೇ ಸದಸ್ಯರೂ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಒಕ್ಕೂಟ ಹಾಗೂ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.
ಯಶಸ್ವಿನಿ ವಿಮೆ ಯೋಜನೆಗೆ ಅಪಸ್ವರ:
ಯಶಸ್ವಿನಿ ವಿಮೆ ಮಾಡಿದರೂ ಅದರ ಪ್ರಯೋಜನ ಸದಸ್ಯರಿಗೆ ಸಿಗುತ್ತಿಲ್ಲ. ಈ ಯೋಜನೆಯ ಆಸ್ಪತ್ರೆಗಳು ಪುತ್ತೂರಿನಲ್ಲಿ ಇಲ್ಲ. ಆದ್ದರಿಂದ ಈ ವಿಮಾ ಯೋಜನೆ ಮುಂದುವರಿಸುವುದು ಬೇಡ ಎಂಬ ಅಭಿಪ್ರಾಯವೂ ಸದಸ್ಯರಿಂದ ಬಂತು. ಸಿಬ್ಬಂದಿಗಳಿಗೆ, ಸದಸ್ಯರಿಗೆ ವಿಮೆ, ಆರೋಗ್ಯ ನಿಧಿ ಸ್ಥಾಪನೆ ಸೇರಿದಂತೆ ವಿವಿಧ ವಿಚಾರಗಳನ್ನು ಸದಸ್ಯರು ಪ್ರಸ್ತಾಪಿಸಿದರು. ಸದಸ್ಯರಾದ ಶಿವರಾಮ ಭಟ್ ಕಂಪ, ನಿರಂಜನ್ ಭಟ್ ಬದೆಂಜ, ಧನಂಜಯ ಪೆರ್ಜಿ ಮತ್ತಿತರರು ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು.