ಪುತ್ತೂರು: ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಲ್ಕೊ ಸೋಲಾರ್ ಸಂಸ್ಥೆಗೆ ದಕ್ಷಿಣ ಆಫ್ರೀಕಾ ಖಂಡದ ಮೂರು ದೇಶಗಳ ಅಧ್ಯಯನ ತಂಡ ಭೇಟಿ ನೀಡಿ, ಸೆಲ್ಕೋ ಸೋಲಾರ್ ಸಂಸ್ಥೆ ಮಾಡಿದ ಸಾಧನೆಗಳ ಮಾಹಿತಿ ಪಡೆದುಕೊಂಡಿತು.
ಸೆಲ್ಕೋ ಫೌಂಡೇಶನ್ ಮತ್ತು ಗ್ಲೋಬಲ್ ಎಸ್ಡಿ ಜಿ7 ಹಬ್ ಜತೆಯಾಗಿ 10 ದಿನಗಳ ಉದ್ಯಮ ಆಧಾರಿತ ತರಬೇತಿಯನ್ನು ವಹಿಸಿಕೊಂಡಿದೆ. ಭಾರತ ಮತ್ತು ಆಫ್ರಿಕಾದ ಇಂಧನ ಆಧಾರಿತ ಉದ್ಯಮಗಳಿಂದ ಅನೇಕ ವಾಣಿಜ್ಯೋದ್ಯಮಿಗಳು ಭೇಟಿ ಮಾಡಿ ಶುದ್ಧ ಇಂಧನ ಸಂಬಂಧಿತ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ಧೇಶ ಈ ಭೇಟಿಯಲ್ಲಿತ್ತು. ದಕ್ಷಿಣ ಆಫ್ರೀಕಾ ಖಂಡದ ಇಥಿಯೋಪಿಯಾ, ಸಿಯೆರಾಲಿಯೋನ್ ಮತ್ತು ಟಾಂಜೆನಿಯಾದ ದೇಶಗಳ 11 ಸೌರಶಕ್ತಿ ಆಧಾರಿತ ಉದ್ಯಮ ಸಂಸ್ಥೆಗಳ ಉದ್ಯಮಿಗಳು, ಸಿಇಒಗಳು ಹಾಗೂ ಎನ್ಜಿಒಗಳು ಸೇರಿದಂತೆ 23 ಮಂದಿ ಅಧ್ಯಯನ ತಂಡದಲ್ಲಿದ್ದರು. ಸೋಲಾರ್ ಶಕ್ತಿಯ ಬಳಕೆಯ ಅಧ್ಯಯನ ಮಾಡಿ ತಮ್ಮ ದೇಶದಲ್ಲಿ ಅಳವಡಿಕೆ ಮಾಡುವ ಉದ್ಧೇಶದಿಂದ ತಂಡ ಭೇಟಿ ನೀಡಿದೆ.
ಸೆಲ್ಕೋ ಸೋಲಾರ್ ಸಂಸ್ಥೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗುರುಪ್ರಕಾಶ್ ಶೆಟ್ಟಿ ಮಾತನಾಡಿ ಸೆಲ್ಕೋ ಸಂಸ್ಥೆಯು ಇಲ್ಲಿ ಅನೇಕ ಸೌರಚಾಲಿತ ಜೀವನಾಧಾರಿತ ಉತ್ಪನ್ನಗಳನ್ನು ಮತ್ತು ಪರಿಹಾರಗಳನ್ನು ಅನುಷ್ಠಾನಗೊಳಿಸಿದೆ. ಸೆಲ್ಕೋ ಸಂಸ್ಥೆಯು ಇಲ್ಲಿ ಅನೇಕ ಪಾಲುದಾರರನ್ನು ಮತ್ತು ಚಾಂಪಿಯನ್ಗಳನ್ನು ಕಳೆದ ಇಪ್ಪತ್ತು ವರ್ಷಗಳಿಂದ ಬೆಳೆಸಿದೆ. ಈ ಪಾಲುದಾರರು ಮತ್ತು ಚಾಂಪಿಯನ್ಗಳು ಅನೇಕ ಆರ್ಥಿಕಸಂಸ್ಥೆಗಳು, ಸ್ಥಳೀಯ ಸರಕಾರಿ ಸಂಸ್ಥೆಗಳು, ಶಿಕ್ಷಣಸಂಸ್ಥೆಗಳು ಇತ್ಯಾದಿಗಳನ್ನು ಪ್ರತಿನಿಧಿಸುತ್ತಾರೆ. ಸೆಲ್ಕೋ ಸೋಲಾರ್ ಸ್ಥಾಪನೆಯಾದ ಬಗೆ, ಮಾಡಿದ ಪ್ರಗತಿಗಳನ್ನು ತಿಳಿಸಿದರು. ಶಿಕ್ಷಣ, ಉದ್ಯೋಗ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ ಸಾಧನೆಗಳು ಸೋಲಾರ್ಗಳ ವ್ಯವಸ್ಥಿತ ಬಳಕೆಯ ವಿಧಾನಗಳನ್ನು ತಿಳಿಸಿದರು. ಸೆಲ್ಕೋ ಸೋಲಾರ್ನ ಏರಿಯಾ ಮ್ಯಾನೇಜರ್ ಸಂಜಿತ್ ರೈ, ಸೆಲ್ಕೋ ಫೌಂಡೇಶನ್ನ ಶೀಕಾ, ಶ್ವೇತಾ, ಜಗನ್ ಮಾಹಿತಿ ನೀಡಿದರು. ಸೆಲ್ಕೋ ಸೋಲಾರ್ನ ಶಾಖಾ ಮ್ಯಾನೇಜರ್ ಸುಧಾಕರ ಆಳ್ವ, ಎಚ್.ಆರ್. ವೇಣುಗೋಪಾಲ್ ನಾಯಕ್, ಲಾಜೆಸ್ಟಿಕ್ ವಸಂತ್, ಸಿಬಂದಿಗಳಾದ ಗುಣಶೀಲ, ಪ್ರಿಯಾ, ರೋಶನ್ ಜಗದೀಶ್, ಸುಶಾಂತ್ ಉಪಸ್ಥಿತರಿದ್ದರು.