ಪುತ್ತೂರು:ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ನಗದು ತುಂಬಿದ್ದ ಬ್ಯಾಗ್ ಹೊಂದಿದ್ದ ರಾಜಸ್ಥಾನಿ ಮೂಲದ ವ್ಯಕ್ತಿಯೋರ್ವರನ್ನು ನಗರ ಪೊಲೀಸ್ ಠಾಣಾ ಪೊಲೀಸರು ವಶಕ್ಕೆ ಪಡೆದು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ರಾಜಾಸ್ಥಾನಿ ಮೂಲದ ರಾವ್ ಭೋಪಾಲ್ ಸಿಂಗ್ ಅವರು ಯಾವುದೇ ದಾಖಲೆಗಳಿಲ್ಲದೆ ಬ್ಯಾಗ್‌ನಲ್ಲಿ 25 ಲಕ್ಷ ರೂ.ನಗದು ಹೊಂದಿರುವುದನ್ನು ಪತ್ತೆ ಮಾಡಿದ ಪೊಲೀಸರು ನಗದು ಸಮೇತ ಅವರನ್ನು ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.ಬೆಂಗಳೂರುಗೆ ಹೋಗಲೆಂದು ಬಂದಿರುವುದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಅನುಮಾನಗೊಂಡ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದಾಗ ಬ್ಯಾಗ್‌ನಲ್ಲಿ ದಾಖಲೆ ರಹಿತ 25 ಲಕ್ಷ ರೂ.ಇರುವುದು ಕಂಡು ಬಂತು.ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಎಸ್.ಐ ಸೇಸಮ್ಮ ಅವರು ರಾವ್ ಭೋಪಾಲ್ ಸಿಂಗ್ ಅವರನ್ನು ವಶಕ್ಕೆ ಪಡೆದು ಐಟಿ ಇಲಾಖೆಗೆ ಮಾಹಿತಿ ನೀಡಿದರು.
ಸೆ.23ರಂದು ಐಟಿ ಇಲಾಖೆಯವರು ರಾವ್ ಬೋಪಾಲ್ ಸಿಂಗ್ ಅವರನ್ನು ತಮ್ಮ ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಅಕ್ರಮ ಹಣ ಎಲ್ಲಿಂದ ಬಂತು, ಈತ ಎಲ್ಲಿಗೆ ಹೋಗುವವರು ಮತ್ತು ಹಣವನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬ ಕುರಿತು ಐಟಿ ಇಲಾಖೆ ತನಿಖೆ ಮಾಡಲಿದೆ.