ಅಂಬಿಕಾ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಆನಂದೋತ್ಸವ ಶಿಬಿರ

0

ಯೋಗದ ಬಗೆಗೆ ಈಗ ಜಾಗೃತಿ ಮೂಡಲಾರಂಭಿಸಿದೆ : ಡಾ.ಎಚ್.ಮಾಧವ ಭಟ್

ಪುತ್ತೂರು: ಯೋಗ ಭಾರತದಲ್ಲಿ ಸಹಜವಾಗಿ ಹುಟ್ಟಿಬಂದ ಅಮೋಘ ಸಂಗತಿ. ಆದರೆ ಸುಲಭಸಾಧ್ಯವಾದ ವಿಷಯಗಳ ಬಗೆಗೆ ಅನೇಕರಿಗೆ ನಿರ್ಲಕ್ಷ್ಯ ಹುಟ್ಟಿಕೊಳ್ಳುತ್ತದೆ. ಆದ್ದರಿಂದಲೇ ಇತ್ತೀಚೆಗಿನವರೆಗೆ ಯೋಗವನ್ನು ಗಂಭೀರವಾಗಿ ಪರಿಗಣಿಸುವ ಮನೋಭಾವ ಕಂಡುಬರುತ್ತಿರಲಿಲ್ಲ. ಈಗೀಗ ಯೋಗಾಭ್ಯಾಸದ ಮಹತ್ವವನ್ನು ಜನ ಅರಿಯಲಾರಂಭಿಸಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆ ಎಂದು ವಿಶ್ರಾಂತ ಪ್ರಾಚಾರ್ಯ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದ ವತಿಯಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೇತೃತ್ವದಲ್ಲಿ ಆಯೋಜನೆ ಮಾಡಲಾದ ಮೂರು ದಿನಗಳ ಯೋಗ ತರಬೇತಿ ಕಾರ್ಯಕ್ರಮ ಆನಂದೋತ್ಸವ ಶಿಬಿರವನ್ನು ಉದ್ಘಾಟಿಸಿ ಸೆ.25ರಂದು ಮಾತನಾಡಿದರು. ನಮ್ಮ ಧರ್ಮ ನಮ್ಮಲ್ಲಿ ಚಿಂತನೆಗಳನ್ನು, ಜ್ಞಾನವನ್ನು ತುಂಬುತ್ತದೆ. ಆ ಧರ್ಮದ ನೆಲೆಯಲ್ಲಿ ಜಗತ್ತಿಗೇ ಪೂರಕವಾದ ಯೋಗವೂ ಬೆಳೆದುಬಂದಿದೆ. ಇಂದು ಭಾರತೀಯ ಯೋಗ ವಿಶ್ವದಾದ್ಯಂತ ಪ್ರಸಾರ ಕಾಣುವಂತಾಗಿದೆ. ರವಿಶಂಕರ ಗುರೂಜಿಯಂತಹ ವ್ಯಕ್ತಿಗಳು ಯೋಗದ ಮಹತ್ವವನ್ನು ಸಾರುತ್ತಾ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ವಿಚಾರ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಮಹತ್ವದ ಸಂಗತಿಗಳನ್ನು ಅರಿಯುವುದು ಮತ್ತು ಅಳವಡಿಸುವುದು ಅಗತ್ಯ ವಿಚಾರ ಎಂದು ಅಭಿಪ್ರಾಯಪಟ್ಟರು. ಆಟ್ ಆಫ್ ಲಿವಿಂಗ್‌ನ ಶಿಕ್ಷಕಿ ಶರಾವತಿ ರವಿನಾರಾಯಣ ಮಾತನಾಡಿ ಯೋಗ ನಮ್ಮ ಬದುಕಿನ ಭಾಗವಾಗಬೇಕು. ಭಾಗವಹಿಸುವವರ ಉತ್ಸಾಹ, ಆಯೋಜನೆ ಮಾಡುವ ಸಂಸ್ಥೆಯವರ ಬೆಂಬಲ ಇಂತಹ ಕಾರ್ಯಕ್ರಮಗಳಿಗೆ ಅತ್ಯಗತ್ಯ. ಶಿಬಿರ ಮೂರು ದಿನಗಳಲ್ಲಿ ಮುಕ್ತಾಯಗೊಂಡರೂ ಆಚರಣೆ ನಿರಂತರವಾಗಿರಬೇಕಾದದ್ದು ಮುಖ್ಯ ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ತತ್ವಶಾಸ್ತ್ರ ವಿಭಾಗ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here