ಕುಕ್ಕುಟ ವಿಭಾಗ ಸುಧಾರಣೆಗೆ ನಿರಾಸಕ್ತಿ, ನಾಟಿ ಕೋಳಿ, ಗಿರಿರಾಜಕ್ಕೆ ಸೀಮಿತವಾದ ಕೇಂದ್ರ
ಪುತ್ತೂರು: ಜನರಿಂದ ಸಾಕಷ್ಟು ಬೇಡಿಕೆ ಇದ್ದರೂ ನಾಟಿ ಆಸಿಲ್ ಕೋಳಿ ಮರಿಗಳ ಉತ್ಪಾದನೆಯನ್ನು ಕೊಯಿಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಘಟಕ ಸ್ಥಗಿತಗೊಳಿಸಿದೆ.
ಬೆಂಗಳೂರಿನ ಹೇಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಲ್ಲಿ ಉತ್ಪಾದನೆ ಮಾಡುವ ಆಸಿಲ್ ಕೋಳಿ ಮರಿಗಳನ್ನು ತಮಿಳುನಾಡು. ಕೇರಳ, ಆಂಧ್ರಪ್ರದೇಶ, ಗುವಾಹಟಿ ಮುಂತಾದ ಕಡೆ ರವಾನೆ ಮಾಡುತ್ತಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನೇರ ಪೂರೈಕೆ ವ್ಯವಸ್ಥೆ ಇರಲಿಲ್ಲ. ಆಸಿಲ್ ಕೋಳಿ ಅಗತ್ಯವಿರುವವರು ಬೆಂಗಳೂರಿನಿಂದ ಸ್ವಂತ ವಾಹನ ವ್ಯವಸ್ಥೆಯಲ್ಲಿ ತರಿಸಿಕೊಳ್ಳಬೇಕಾದ ಸ್ಥಿತಿ ಇತ್ತು. ಎರಡು ವರ್ಷಗಳ ಹಿಂದೆ ಕೊಯಿಲ ಕುಕ್ಕುಟ ವಿಸ್ತರಣಾ ಘಟಕದಲ್ಲಿ ಹೇಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ದಿ ಸಂಸ್ಥೆಯಿಂದ ಒಂದು ದಿನ ವಯಸ್ಸಿನ 800 ಆಸಿಲ್ ಮರಿಗಳನ್ನು ತಂದು ಪೇರೆಂಟ್ ಬರ್ಡ್ (ಮರಿ ಮಾಡುವ ಸಲುವಾಗಿ ಸಾಕುವ ಕೋಳಿಗಳು) ಆಗಿ ಬೆಳೆಸಲಾಗಿತ್ತು.
ಈ ಮಾತೃಕೋಳಿ(ಪೇರೆಂಟ್ ಬರ್ಡ್) ಗಳಿಂದ ದೊರೆತ ಮೊಟ್ಟೆಗಳಿಂದ ಮರಿ ಪಡೆದು ರೈತರಿಗೆ ಹಂಚಿಕೆ ಮಾಡಲಾಗಿತ್ತು. ಆ ಬಳಿಕ ಆಸಿಲ್ ಮಾತೃಕೋಳಿಗಳ ಅವಧಿ ಮುಗಿದ ಬಳಿಕ ಹೊಸ ಆಸಿಲ್ ಮಾತೃಕೋಳಿಗಳ ಬ್ಯಾಚನ್ನು ಕೊಯಿಲ ಕುಕ್ಕುಟ ವಿಸ್ತರಣಾ ಕೇಂದ್ರ ಸಿದ್ಧಪಡಿಸಬೇಕಿತ್ತಾದರೂ ಅದರ ಬದಲಿಯಾಗಿ ಬೇರೆ ನಾಟಿಕೋಳಿ ಬ್ಯಾಚನ್ನು ಸಿದ್ಧಪಡಿಸುತ್ತಿದೆ. ಸಿದ್ಧಪಡಿಸುತ್ತಿರುವ 620 ಹೊಸ ನಾಟಿ ಮಾತೃಕೋಳಿಗಳಿಗೆ 19 ವಾರ ಪ್ರಾಯ ತುಂಬಿದ್ದು, ರೈತರಿಗೆ ಮರಿಗಳನ್ನು ವಿತರಿಸಲು ಇನ್ನೂ ಕನಿಷ್ಠ 40 ದಿನ ಕಾಯಬೇಕು.
ಪ್ರಸ್ತುತ ಕೊಯಿಲ ಕುಕ್ಕುಟ ವಿಸ್ತರಣಾ ಘಟಕದಲ್ಲಿ ರೈತರಿಗೆ ವಿತರಿಸಲು ಗಿರಿರಾಜ ಕೋಳಿಯ ಒಂದು ದಿನದ ಮರಿಗಳು ಮಾತ್ರ ಲಭ್ಯ. ಪಶುಪಾಲನಾ ಆಯುಕ್ತಾಲಯ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಅಧೀನದಲ್ಲಿರುವ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಕುಕ್ಕುಟ ವಿಸ್ತರಣಾ ಘಟಕದಲ್ಲಿ ರೈತರಿಗೆ ಆವಶ್ಯವಿರುವ ತಳಿಗಳನ್ನು ಒದಗಿಸಲು ಅವಕಾಶವಿದ್ದರೂ ಕೇಂದ್ರ ಈ ಬಗ್ಗೆ ಗಮನಹರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಮೊಟ್ಟೆ ಕೋಳಿಗಳಿಗೆ ಹೆಸರಾದ ಸ್ವರ್ಣಧಾರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬೇಡಿಕೆ ಹೊಂದಿರುವ ಆಂಧ್ರ ಪ್ರದೇಶ ಮೂಲದ ನಾಟಿ ಫೈಟರ್ ಕೋಳಿಗಳಿಗೆ ಬೇಡಿಕೆ ಇರುವಾಗಲೇ ಕೇಂದ್ರವು ವಿತರಣೆ ನಿಲ್ಲಿಸಿತ್ತು.
ಸ್ವರ್ಣಧಾರ, ಫೈಟರ್, ಆಸಿಲ್ ಮತ್ತಿತರ ತಳಿಗಳ ಗುಣಮಟ್ಟದ ಕೋಳಿಮರಿಗಳ ವಿತರಣೆಗೆ ಕೊಯಿಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಕೋಳಿ ಮರಿ ಉತ್ಪಾದನೆ ಘಟಕ ಆಸಕ್ತಿ ತೋರಿಸುತ್ತಿಲ್ಲ. ಬದಲಿಗೆ ಗುಣಮಟ್ಟವಿಲ್ಲದ ಸಾಮಾನ್ಯ ನಾಟಿಕೋಳಿಗಳ ವಿತರಣೆಗೆ ಕೇಂದ್ರ ಸಜ್ಜಾಗಿದೆ. ಕೊಯಿಲ ಕೇಂದ್ರದಲ್ಲಿ ಈ ಹಿಂದೆ ವಿತರಣೆಯಾಗುತ್ತಿದ್ದ ನಾಟಿ ಕೋಳಿಗಳು ಕರಾವಳಿಯ ನಾಟಿ ಕೋಳಿಗಳಿಗೆ ಹೋಲಿಸಿದರೆ ಗುಣಮಟ್ಟ ಕಡಿಮೆ. ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಿಂದ ತಂದ ಮರಿಗಳಿಂದ ಮಾತೃಕೋಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳು ಮಾಂಸಕ್ಕೆ ಮಾತ್ರ ಸೂಕ್ತವಾಗಿದೆ. ಸರ್ಕಾರದಿಂದ ಪೂರೈಕೆಯಾಗುವ ನಾಟಿಕೋಳಿ ಮರಿಗಳ ಗುಣಮಟ್ಟ ವೃದ್ಧಿ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ. ಕಳೆದ ಅವಧಿಯಲ್ಲಿ ವಿತರಣೆಯಾದ ಅಸಿಲ್ ಕೋಳಿ ಮರಿಗಳಲ್ಲಿ ಕೂಡ ಬೆರಕೆ ತಳಿಗಳು ಇತ್ತು ಎನ್ನುವ ದೂರುಗಳು ಕೇಳಿಬಂದಿತ್ತು.
ಪ್ರಸ್ತುತ ಕೊಯಿಲ ಫಾರ್ಮ್ನಲ್ಲಿ ನಾಟಿ ಕೋಳಿ ಮತ್ತು ಗಿರಿರಾಜ ಕೋಳಿ ಮರಿಗಳು ಇವೆ. ಉತ್ಪಾದನೆಯಾಗುವ ಕೋಳಿ ಮರಿಗಳಿಗೆ ಬೇಡಿಕೆಯಿದ್ದು, ಸುತ್ತಲಿನ ಊರುಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಕೊಂಡೊಯ್ಯುತ್ತಿದ್ದಾರೆ.
-ಡಾ.ಪ್ರಸನ್ನ ಹೆಬ್ಬಾರ್, ಉಪ ನಿರ್ದೇಶಕರು (ಪ್ರಭಾರ), ಜಾನುವಾರು ಸಂವರ್ಧನಾ ತರಬೇತಿ ಕೇಂದ್ರ, ಕೊಯಿಲ