ಬಡಗನ್ನೂರು:ಗುರುಪ್ರಸಾದ್ ರೈ ಮನೆಯಲ್ಲಿ ನಡೆದ ದರೋಡೆ ಪ್ರಕರಣ-ಆರು ಮಂದಿ ಆರೋಪಿಗಳ ಬಂಧನ?

0

ಕೇರಳದ ಕುಖ್ಯಾತ ದರೋಡೆಕೋರರ ತಂಡದ ಕೃತ್ಯ
ಬಂಧನ ಖಚಿತಪಡಿಸದ ಪೊಲೀಸರು
ಇಂದು ಮಹಜರು-ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ


ಪುತ್ತೂರು:22 ದಿನಗಳ ಹಿಂದೆ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.ಆದರೆ ಪೊಲೀಸರು ಇದನ್ನು ಖಚಿತ ಪಡಿಸಿಲ್ಲ.
ಕೇರಳದ ಕುಖ್ಯಾತ ದರೋಡೆಕೋರರ ತಂಡ ಈ ಕೃತ್ಯ ಎಸಗಿದೆ.ಕೆಲ ದಿನಗಳ ಹಿಂದೆ ಸೀತಂಗೋಳಿ ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ವರ್ಷಗಳ ಹಿಂದೆ ಗುರುಪ್ರಸಾದ್ ರೈಯವರ ಮನೆಗೆ ವಾಹನವೊಂದರಲ್ಲಿ ಚಾಲಕನಾಗಿ ಬಂದಿದ್ದ ವ್ಯಕ್ತಿಯೋರ್ವ ಗುರುಪ್ರಸಾದ್ ರೈಯವರ ಮನೆಯ ವಿಷಯವನ್ನು ತಿಳಿದುಕೊಂಡು ದರೋಡೆ ತಂಡಕ್ಕೆ ಮಾಹಿತಿ ನೀಡಿ ಬಳಿಕ ಆತನೂ ಸೇರಿ ತಂಡ ಈ ಕೃತ್ಯ ಎಸಗಿದೆ.ಸೆ.6ರಂದು ರಾತ್ರಿ ಕುದ್ಕಾಡಿ ಮನೆಯಲ್ಲಿ ದರೋಡೆ ನಡೆದಿತ್ತು.ಕೃತ್ಯ ಎಸಗುವ ಮೊದಲೂ ಒಂದು ದಿನ ರಾತ್ರಿ ತಂಡವೊಂದು ರಾತ್ರಿ ವೇಳೆ ಗುರುಪ್ರಸಾದ್ ರೈಯವರ ಮನೆಯ ಬಳಿ ಬಂದು ಬಾಗಿಲು ಬಡಿದು ಹೋಗಿತ್ತು ಎನ್ನಲಾಗುತ್ತಿದೆ.


ಐವರು ದರೋಡೆಕೋರರ ತಂಡ ಸೆ.6ರಂದು ತಡರಾತ್ರಿ ಗುರುಪ್ರಸಾದ್ ರೈಯವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ ದರೋಡೆ ಮಾಡಿತ್ತು.ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿತ್ತು.ಹೋಗುವಾಗ ಗುರುಪ್ರಸಾದ್ ರೈ ಮತ್ತವರ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ, ಕಸ್ತೂರಿ ರೈಯವರಿಗೆ ಕುಡಿಯಲು ನೀರು ಕೊಟ್ಟು ಹೋಗಿದ್ದು, ಈ ಮನೆಯ ಋಣ ಹೊಂದಿರುವವರೇ ಯಾರೋ ಕೃತ್ಯ ಎಸಗಿದ್ದಾರೆ ಎನ್ನುವ ಸಂಶಯಕ್ಕೆ ಕಾರಣವಾಗಿತ್ತು.ಮನೆಯ ಮಾಹಿತಿ ಇರುವವರೇ ಈ ಕೃತ್ಯ ಎಸಗಿದ್ದಾರೆ ಮತ್ತು ಕೇರಳ ಮೂಲದ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿದೆ ಎನ್ನುವ ಬಲವಾದ ಸಂಶಯದೊಂದಿಗೆ ಪೊಲೀಸರ ಒಂದು ತಂಡ ಕೇರಳದಲ್ಲಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಆರೋಪಿಗಳ ಬಂಧನದ ಕುರಿತು ಪೊಲೀಸರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.


ಇಂದು ಮಹಜರು?: ಬಂಧಿತ ಆರೋಪಿಗಳನ್ನು ಸೆ.29ರಂದು ಗುರುಪ್ರಸಾದ್ ರೈಯವರ ಮನೆಗೆ ಕರೆದೊಯ್ದು ಮಹಜರು ನಡೆಸಿ ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಪೆರೋಲ್‌ನಲ್ಲಿ ಬಂದವನೂ ಭಾಗಿ?
ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ಶಿಕ್ಷೆ ವಿಧಿಸಲ್ಪಟ್ಟು ಕೇರಳದ ಕಾರಾಗೃಹದಲ್ಲಿರುವ ಓರ್ವನೂ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.ಪೆರೋಲ್ ಮೇಲೆ ಬಂದಿದ್ದ ಈತ ಕೃತ್ಯವೆಸಗಿದ ಬಳಿಕ ಮತ್ತೆ ಕಾರಾಗೃಹಕ್ಕೆ ವಾಪಸಾಗಿದ್ದು ಆತನನ್ನು ಈ ಪ್ರಕರಣದಲ್ಲಿ ಇನ್ನಷ್ಟೆ ವಶಕ್ಕೆ ಪಡೆಯಬೇಕಾಗಿದೆ.ಈತ ಸೇರಿದಂತೆ ಒಟ್ಟು ಏಳು ಮಂದಿ ಸೇರಿ ದರೋಡೆ ಎಸಗಿದ್ದು ಈ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿ ಹರಡಿದೆ.

LEAVE A REPLY

Please enter your comment!
Please enter your name here