ಹಕ್ಕುಪತ್ರವಿದ್ದರೂ 20 ವರ್ಷಗಳಿಂದ ಮನೆ ನಿರ್ಮಾಣ ಮಾಡಲಾಗದ ಪರಿಸ್ಥಿತಿ – ನಮಗೆ ನ್ಯಾಯ ಕೊಡಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ

0

ಅನುಸೂಚಿತ ಜಾತಿ/ಪಂಗಡದ ಕುಂದುಕೊರತೆ ಸಭೆಯಲ್ಲಿ ಕೊಳ್ತಿಗೆ ಸಿದ್ದಮೂಲೆ ನಿವೇಶನ ಫಲಾನುಭವಿಗಳ ಎಚ್ಚರಿಕೆ
ಪುತ್ತೂರು: ಬಯಲು ಶೌಚ ಮುಕ್ತ ಭಾರತಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಜ್ಜೆ ಇಟ್ಟಿವೆ.ಆದರೆ ಕೊಳ್ತಿಗೆ ಗ್ರಾಮದ ಸಿದ್ದಮೂಲೆಯಲ್ಲಿ ಬಯಲು ಶೌಚ ನಿಂತಿಲ್ಲ. ಇನ್ನೂ ಹಲವು ವರ್ಷ ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ.ನಮಗೆ ಸರಕಾರದಿಂದ ಮನೆ ನಿವೇಶನದ ಹಕ್ಕುಪತ್ರ ಕೊಟ್ಟರೂ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ಅಡ್ಡಿಯಾಗುತ್ತಿದೆ. ನಾವು 20 ಕುಟುಂಬಗಳವರು ಮನೆ ನಿರ್ಮಾಣ ಮಾಡುವುದು, ಅರಣ್ಯ ಇಲಾಖೆ ಅದನ್ನು ತೆರವು ಮಾಡುವುದೇ ಇಲ್ಲಿ ನಡೆಯುತ್ತಿದೆ.ಇಂದಿಗೂ ಟಾರ್ಪಾಲು ಹೊದಿಕೆಯಲ್ಲಿರುವ ನಮ್ಮ ಕುಟುಂಬಗಳಲ್ಲಿ ಬಯಲು ಶೌಚ ನಿಂತಿಲ್ಲ.ಇನ್ನಾದರೂ ನಮಗೆ ನ್ಯಾಯ ಕೊಡಿಸಿ, ಇಲ್ಲವಾದರೆ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೊಳ್ತಿಗೆಯ ಸಂತ್ರಸ್ತ ಕುಟುಂಬಗಳ ಸುಮಾರು 20 ಮಂದಿ ತಾ.ಪಂ ಸಭಾಂಗಣದಲ್ಲಿ ನಡೆದ ಅನುಸುಚಿತ ಜಾತಿ/ಅನುಸೂಚಿತ ಪಂಗಡದ ಹಿತರಕ್ಷಣೆ ಮತ್ತು ಭದ್ರತೆ ಕುರಿತ ಸಭೆಯಲ್ಲಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.


ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಹಿತರಕ್ಷಣೆ ಮತ್ತು ಭದ್ರತೆ ಕುರಿತ ಸಭೆಯು ಸೆ.29ರಂದು ತಹಶೀಲ್ದಾರ್ ಶಿವಶಂಕರ್ ಜೆ ಅವರ ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಿದ್ದಮೂಲೆ ನಿವಾಸಿಗಳಾದ ಆದಿದ್ರಾವಿಡ ಕೊಳ್ತಿಗೆ ಘಟಕದ ಅಧ್ಯಕ್ಷ ಧನಂಜಯ ಶೇಡಿಗುಂಡಿ ಮತ್ತು ತಾಲೂಕು ನಲಿಕೆ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಶ್ರೀಧರ್ ಎಕ್ಕಡ್ಕ ಅವರ ನೇತೃತ್ವದಲ್ಲಿ ಸುಮಾರು 20 ಮಂದಿ ಸಭೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಸುಮಾರು 20 ವರ್ಷಗಳಿಂದ ನಮ್ಮಲ್ಲಿ ಸುಮಾರು 20 ಕುಟುಂಬಗಳು ಮನೆಯಿಲ್ಲದೆ ಗುಡ್ಡಗಾಡಿನಲ್ಲಿ ಕೂತುಕೊಂಡಿದ್ದೇವೆ. ನಮಗೆ ಪಂಚಾಯತ್‌ನಿಂದ ಆಶ್ರಯ ಮನೆಗೆ ಹಕ್ಕು ಪತ್ರ ಕೊಟ್ಟಿದ್ದಾರೆ. ಮನೆ ಕಟ್ಟಲು ಹೋದಾಗ ಅಲ್ಲಿ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ. ನಮಗೆ ಮನೆ ಇಲ್ಲದೆ ಟಾರ್ಪಾಲು ಹೊದಿಕೆಯಲ್ಲಿ ಕೂತುಕೊಳ್ಳಬೇಕಾಗಿದೆ. ಬಯಲು ಪ್ರದೇಶದಲ್ಲೇ ಮಲಮೂತ್ರ ಮಾಡುವ ಪರಿಸ್ಥಿತಿ. ನಮ್ಮ ನೋವನ್ನು ಎಲ್ಲಾ ಇಲಾಖೆಯಲ್ಲಿ, ಜನಪ್ರತಿನಿಧಿಗಳಲ್ಲಿ ಬೇಡಿಕೊಂಡರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮಗೆ ನ್ಯಾಯಕೊಡಿಸಿ. ಇಲ್ಲವಾದರೆ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು. ಸಭಾಧ್ಯಕ್ಷ ತಹಸೀಲ್ದಾರ್ ಶಿವಶಂಕರ್ ಜೆ.ಅವರು ಅರಣ್ಯ ಇಲಾಖೆಯಿಂದ ಉತ್ತರ ಕೊಡುವಂತೆ ಸೂಚಿಸಿದರು. ಅರಣ್ಯ ಇಲಾಖೆಯ ಅಧಿಕಾರಿಯವರು, ಆ ನಿವೇಶನಗಳು ಕಣಿಯಾರುಮಲೆಗೆ ಸೇರುತ್ತದೆ. ಕಂದಾಯ ಇಲಾಖೆಯಿಂದ ಈ ಹಿಂದೆ ಅಲ್ಲಿ ಘನತ್ಯಾಜ್ಯ ಘಟಕ ಮತ್ತು ಆಶ್ರಯ ನಿವೇಶನಕ್ಕೂ ಮಂಜೂರು ಮಾಡಿದರೂ ಅದು ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಇಲ್ಲದೆ ಅಲ್ಲಿ ಏನೂ ಮಾಡುವಂತಿಲ್ಲ. ಈ ನಡುವೆ ಪಂಚಾಯತ್ ಅಧ್ಯಕ್ಷರಲ್ಲಿ ಹೋದಾಗ ನಿಮ್ಮ ಜಾಗದಲ್ಲಿ ಮನೆ ಕಟ್ಟಿ. ಅರಣ್ಯ ಇಲಾಖೆ ಕೆಡವಿದರೆ ಮತ್ತೊಮ್ಮೆ ಕಟ್ಟಿ ಎಂದು ಹೇಳುತ್ತಾರೆ ಎಂದರು. ನಿವೇಶನಕ್ಕೆ ಮಂಜೂರು ಮಾಡಿದ ಸ್ಥಳವನ್ನು ಜಂಟಿ ಸರ್ವೇ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದು ನೊಂದ ಕುಟುಂಬಗಳಿಗೆ ತಹಸಿಲ್ದಾರ್ ಭರವಸೆ ನೀಡಿದರು. ನಿಮ್ಮ ಭರವಸೆ ಬೇಡ. ಖಚಿತ ದಿನಾಂಕ ತಿಳಿಸಿ ಎಂದು ಸಭೆಯಲ್ಲಿದ್ದ ಸಂತ್ರಸ್ತ ಇತರ ಸದಸ್ಯರು ಪಟ್ಟು ಹಿಡಿದರು. ಸಭೆಯಲ್ಲಿ ಫಲಾನುಭವಿಗಳು ತಮ್ಮ ಹಕ್ಕುಪತ್ರಗಳನ್ನು ಹಿಡಿದುಕೊಂಡು ತಹಸೀಲ್ದಾರ್ ಮತ್ತು ಸಭೆಯಲ್ಲಿದ್ದ ಇತರ ಸದಸ್ಯರಿಗೆ ತೋರಿಸಿದರು. ಹೀಗೆ ಸಭೆಯಲ್ಲಿ ಸುಮಾರು ಅರ್ಧ ಗಂಟೆ ಗಂಭೀರ ಚರ್ಚೆಗಳು ನಡೆಯಿತು. ವಿವಿಧ ಸಂಘಟನೆಗಳ ಮುಖಂಡರಾದ ಗಿರಿಧರ ನಾಯ್ಕ, ಶೇಷಪ್ಪ ನೆಕ್ಕಿಲು, ಲೋಹಿತ್ ಅಮ್ಚಿನಡ್ಕ, ಮುದ್ದ ಸಹಿತ ಹಲವಾರು ಮಂದಿ ಮಾತನಾಡಿ ದೊಡ್ಡವರು ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿದ್ದರೆ ಯಾವುದೇ ಕ್ರಮಕೈಗೊಳ್ಳದೆ ಬಡವರು ಮನೆ ಕಟ್ಟಿದಾಗ ಮಾತ್ರ ಅದು ಅರಣ್ಯ ಜಾಗ ಎಂದು ಕ್ರಮ ಕೈಗೊಳ್ಳುವುದು ಸರಿಯಲ್ಲ. ಇದಕ್ಕೆ ಪರಿಹಾರ ಕೊಡಬೇಕು. ಮುಂದಿನ ಶುಕ್ರವಾರ ಜಿಲ್ಲಾಧಿಕಾರಿಯವರು ಪುತ್ತೂರಿಗೆ ಬರುವಾಗ ಅವರ ಮುಂದೆಯೇ ಈ ಕುರಿತು ಪ್ರಶ್ನಿಸುವ ಎಂದು ಕೊಳ್ತಿಗೆಯ ನಿವೇಶನ ಫಲಾನುಭವಿಗಳಿಗೆ ತಿಳಿಸಿದರು.ತಹಸೀಲ್ದಾರ್ ಸಮಸ್ಯೆ ಕುರಿತು ಇನ್ನೊಮ್ಮೆ ಮನವಿ ಕೊಡುವಂತೆ ಸೂಚಿಸಿದಾಗ, ಕೊಳ್ತಿಗೆಯ ಫಲಾನುಭವಿ ಕುಟುಂಬದವರು ಇನ್ನೊಂದು ಮನವಿ ಸಲ್ಲಿಸುವ ಮೂಲಕ ಜಂಟಿ ಸರ್ವೇ ಮಾಡಿ ಪರಿಹಾರ ನೀಡುವ ಭರವಸೆಯೊಂದಿಗೆ ಚರ್ಚೆಗೆ ಇತ್ತಿಶ್ರಿ ಹಾಡಲಾಯಿತು.
ಕೇರಳದವರಿಗೆ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು-ಆಕ್ರೋಶ:
ಕೇರಳದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಅಕ್ರಮ ಸಕ್ರಮದಲ್ಲಿ ಎಕ್ರೆಗಟ್ಲೆ ಜಮೀನು ಮಂಜೂರಾತಿ ಮಾಡಲಾಗಿದೆ. ಆದರೆ ಕರ್ನಾಟಕದ ದಲಿತ ಸಮುದಾಯದ ನಮಗೆ ಡಿ.ಸಿ ಮನ್ನಾ ಭೂಮಿಯಲ್ಲೂ 5 ಸೆಂಟ್ಸ್ ಜಾಗ ಮಂಜೂರು ಮಾಡುತ್ತಿಲ್ಲ. ಅದೇ ಶ್ರೀಮಂತರಿಗೆ ಬೇಗ ಮಾಡಿಕೊಡುತ್ತಾರೆ. ಕೇರಳದವರಿಗೆ ಇಲ್ಲಿ ಸಿಗುವ ಜಾಗ ನಮಗೇಕೆ ಸಿಗುತ್ತಿಲ್ಲ. ತಹಸೀಲ್ದಾರರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗಿರಿಧರ ನಾಯ್ಕ್ ಆವರು ಪ್ರಸ್ತಾಪಿಸಿದರು.ಬಲ್ನಾಡು ಗ್ರಾಮದಲ್ಲಿ 12 ಸೆಂಟ್ಸ್ ಸರಕಾರಿ ಜಾಗಕ್ಕೆ ಶ್ರೀಮಂತ ವ್ಯಕ್ತಿಯೊಬ್ಬರು ಬೇಲಿ ಹಾಕಿಕೊಂಡು ಸ್ವಂತ ಪಡಿಸಿಕೊಂಡು ಅದರಲ್ಲಿ ಮನೆಯೂ ನಿರ್ಮಿಸುತ್ತಿದ್ದಾರೆ. ಇದಕ್ಕೆ ನೀರಿನ ಸಂಪರ್ಕವನ್ನೂ ಕೊಟ್ಟಿದೆ. ಅಲ್ಲೇ ಪಕ್ಕದ ಬಡವರ ಮೂರು ನಾಲ್ಕು ಮನೆಗಳಿಗೆ ಒಂದೇ ನಳ್ಳಿ ನೀರಿನ ಸಂಪರ್ಕ ಕೊಡಲಾಗಿದೆ.ಆರ್ಯಾಪು ಗ್ರಾಮದ ಸಂಟ್ಯಾರು ಎಂಬಲ್ಲಿ ಕೇರಳದ ವ್ಯಕ್ತಿ ಸುನೀತಾ ಜಯಕುಮಾರ್ ನಾಯರ್ ಎಂಬವರಿಗೆ ಆರ್ಯಾಪು ಗ್ರಾಮದ ಸೆಂಟ್ಯಾರ್‌ನಲ್ಲಿ 2.45 ಎಕ್ರೆ ಜಾಗವನ್ನು ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲಾಗಿದೆ. ಅದಲ್ಲದೆ ಅವರಿಗೆ ಸಾರ್ವಜನಿಕವಾಗಿ ಹಕ್ಕುಪತ್ರ ಮಂಜೂರು ಮಾಡದೆ ಟೌನ್ ಬ್ಯಾಂಕ್ ಹಾಲ್‌ನಲ್ಲಿ ಗುಪ್ತವಾಗಿ ನೀಡಿದ್ದಾರೆ. ಈ ಜಾಗದ ಬಗ್ಗೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರರು ಪರಿಶೀಲನೆ ನಡೆಸಿಲ್ಲ. ಬಡವರು ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿದರೆ ತೆಗೆದು ಬಿಸಾಡುವ ಅಧಿಕಾರಿಗಳು ಶ್ರೀಮಂತರಿಗೆ ಬೆಂಬಲ ನೀಡುತ್ತಾರೆ ಎಂದು ಆರೋಪಿಸಿದರು.ಇದಕ್ಕೆ ಧ್ವನಿಗೂಡಿಸಿದ ಸೇಸಪ್ಪ ನೆಕ್ಕಿಲು ಮತ್ತು ಕೊರಗಪ್ಪ ಈಶ್ವರಮಂಗಲ ಅವರು ಕೇರಳಿಗರಿಗೆ ಅಕ್ರಮ ಸಕ್ರಮ ಜಮೀನು ಮಂಜೂರು ಮಾಡಿರುವ ಬಗ್ಗೆ ತಹಶೀಲ್ದಾರರು ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು. ದಲಿತ ಸಮುದಾಯದ ಬೇಡಿಕೆ ಈಡೇರಿಸದಿದ್ದಲ್ಲಿ ಇಂತಹ ಕುಂದು ಕೊರತೆಗಳ ಸಭೆಯನ್ನು ನಡೆಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಒಂದು ತಿಂಗಳ ಒಳಗಾಗಿ ಪರಿಶೀಲನೆ ನಡೆಸಿ ನಮಗೆ ತಿಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ಗಿರಿಧರ ನಾಯ್ಕ್ ಅವರು ನಾವೂ ಕೂಡಾ ಸರಕಾರಿ ಭೂಮಿಯನ್ನು ನೋಡಿ ಅಲ್ಲಿ ಗುಡಿಸಲು ನಿರ್ಮಿಸುತ್ತೇವೆ ಎಂದು ಎಚ್ಚರಿಸಿದರು.ಉತ್ತರಿಸಿದ ತಹಶೀಲ್ದಾರ್ ಶಿವಶಂಕರ್ ಅವರು ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು. ಒಂದು ತಿಂಗಳ ಅವಧಿಯೊಳಗೆ ಪರಿಶೀಲನೆ ನಡೆಸಿ ಉತ್ತರಿಸುವಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಬಳಿಕ ದಲಿತ ಮುಖಂಡ ಗಿರಿಧರ ನಾಯ್ಕ್ ಅವರು 20 ದಿನಗಳ ಒಳಗಾಗಿ ಪರಿಶೀಲನೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ದಲಿತ ಮುಖಂಡರ ಸಭೆ ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ತಹಶೀಲ್ದಾರ್ ಅವರು ಒಪ್ಪಿಗೆ ಸೂಚಿಸಿದರು.

ಲೀಡ್ ಬ್ಯಾಂಕ್ ಅಧಿಕಾರಿಗಳೇ ಸಭೆಗೆ ಬರುವಂತೆ ತಹಸೀಲ್ದಾರ್ ಸೂಚನೆ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಾಲ ಸೌಲಭ್ಯದ ಕುರಿತು ಮಾಹಿತಿ ನೀಡಲು ಲೀಡ್ ಬ್ಯಾಂಕ್‌ನ ಅಧಿಕಾರಿಗಳು ಬರುವಂತೆ ನಿರ್ಣಯಿಸದಂತೆ ಸಭೆಗೆ ಆಗಮಿಸಿದ ಲೀಡ್ ಬ್ಯಾಂಕ್‌ನ ಪರವಾಗಿ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಸದಸ್ಯ ಗಿರಿಧರ ನಾಯ್ಕ ಅವರು ಮಾತನಾಡಿ ಫಲಾನುಭವಿಗಳಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲ. ಕೋಟಿಗಟ್ಟಲೆ ಸಾಲ ಇದ್ದವರಿಗೆ ಮತ್ತೆ ಮತ್ತೆ ಸಾಲ ಕೊಡುತ್ತಾರೆ. ಅವರ ಸಾಲವೂ ಮನ್ನಾ ಮಾಡುತ್ತಾರೆ. ಬಡವರಿಗೆ ಕನಿಷ್ಠ ರೂ.3 ಲಕ್ಷ ಸಾಲವೂ ಕೊಡುತ್ತಿಲ್ಲ ಎಂದು ಪ್ರಸ್ತಾಪಿಸಿದರು. ಶೇಷಪ್ಪ ನೆಕ್ಕಿಲು, ಮುದ್ದ ಧ್ವನಿಗೂಡಿಸಿದರು. ಈ ಕುರಿತು ಕೆನರಾ ಬ್ಯಾಂಕ್‌ನ ಅಧಿಕಾರಿ ಸಿಬಿಲ್ ವರದಿ ಪ್ರಕಾರ ಸಾಲ ನೀಡಲಾಗುತ್ತದೆ. ಇತರ ಬ್ಯಾಂಕ್‌ಗಳ ಕುರಿತು ಮಾಹಿತಿ ನನ್ನಲ್ಲಿ ಇಲ್ಲ. ಈ ಕುರಿತು ಲೀಡ್ ಬ್ಯಾಂಕ್‌ನಿಂದಲೇ ಅಧಿಕಾರಿಗಳು ಬರಬೇಕಾಗುತ್ತದೆ ಎಂದು ಉತ್ತರಿಸಿದರು. ಆಕ್ಷೇಪಿಸಿದ ಸದಸ್ಯರು ಯಾವುದೇ ಮಾಹಿತಿ ಇಲ್ಲದಿದ್ದರೆ ಬರುವುದು ಯಾಕೆ ಎಂದರು. ಈ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಿತು. ಕೆನರಾ ಬ್ಯಾಂಕ್ ಅಧಿಕಾರಿ ನಾನು ಇಲ್ಲಿಗೆ ಗಲಾಟೆ ಮಾಡಲು ಬಂದಿಲ್ಲ ಎಂದರು. ಈ ವಿಚಾರ ಸದಸ್ಯರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೆ ತಹಶೀಲ್ದಾರ್ ಅವರು ಮಾತನಾಡಿ ಮುಂದಿನ ಸಭೆಗೆ ಲೀಡ್ ಬ್ಯಾಂಕ್ ಅಧಿಕಾರಿಗಳೇ ಬರುವಂತೆ ಸೂಚಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.

ವಿದ್ಯಾರ್ಥಿವೇತನ ಪಾವತಿಯಾಗದಿದ್ದಲ್ಲಿ ತಿಳಿಸಿ:
ತಾಲೂಕಿನಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ತನಕ ಪರಿಶಿಷ್ಟ ಜಾತಿಯ 5199 ಮತ್ತು ಪರಿಶಿಷ್ಟ ಪಂಗಡದ 2792 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಈ ಪೈಕಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮತ್ತೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾಹಿತಿ ನೀಡಿದರು. ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಶೇಷಪ್ಪ ನೆಕ್ಕಿಲು ಪ್ರಸ್ತಾಪಿಸಿದರು. ಉತ್ತರಿಸಿದ ಬಿ.ಇ.ಒ ಅವರು ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿ ವೇತನ ಪಾವತಿಯಾಗದಿದ್ದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ತಿಳಿಸಿ ಅಥವಾ ನಮ್ಮ ಇಲಾಖೆಗೆ ತಿಳಿಸಿ ಎಂದರು.

ಎಸ್ಸಿ,ಎಸ್ಟಿ ಹೆಸರಿನಲ್ಲಿ ಕಾಮಗಾರಿ ದುರ್ಬಳಕೆ:
ಎಸ್ಸಿ ಎಸ್ಟಿ ಅನುದಾನದಲ್ಲಿ ನಡೆಯುವ ರಸ್ತೆ ಕಾಮಗಾರಿ ದುರ್ಬಳಕೆಯಾಗುತ್ತಿದೆ.ಹಿರೇಬಂಡಾಡಿಯಲ್ಲಿ ಮುಡಿಪು ರಸ್ತೆ ಕಾಮಗಾರಿ ಆಗಿದೆ. ಇದೇ ರೀತಿ ಹಲವಾರು ಕಡೆ ರಸ್ತೆ ಕಾಮಗಾರಿ ದುರ್ಬಳಕೆಯಾಗಿದೆ ಎಂದು ಶೇಷಪ್ಪ ನೆಕ್ಕಿಲು ಪ್ರಸ್ತಾಪಿಸಿದರು. ಅಧಿಕಾರಿಗಳು ಎಲ್ಲೆಲ್ಲಾ ದುರ್ಬಳಕೆ ಆಗಿದೆ ಎಂಬುದನ್ನು ತಿಳಿಸಿ. ನಾವು ಪರಿಶೀಲಿಸುತ್ತೇವೆ ಎಂದರು.
ಪಾಲನಾ ವರದಿಯಲ್ಲಿ ತಪ್ಪು ಮಾಹಿತಿ-ಆಕ್ಷೇಪ:
ಕೆಯ್ಯೂರು ಗ್ರಾಮದ ಎರಕ್ಕಳ ರಸ್ತೆ ಕಾಮಗಾರಿಯನ್ನು ಸರಿಯಾಗಿ ಪೂರ್ಣಗೊಳಿಸಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿ ಪಾಲನಾ ವರದಿಯಲ್ಲಿ ತಪ್ಪು ಮಾಹಿತಿ ನೀಡಿದ್ದೀರಿ ಎಂದು ಉದಯ ಕುಮಾರ್ ಆಕ್ಷೇಪಿಸಿದರು. ಎರಕ್ಕಳದಲ್ಲಿ ಮೋರಿ ರಚನೆಯಾಗಿದೆ. ಆದರೆ ಸರಿಯಾಗಿ ನೀರು ಹೋಗಲು ವ್ಯವಸ್ಥೆ ಮಾಡಿಲ್ಲ. ಇದರ ಜೊತೆಗೆ ಖಾಸಗಿ ಭೂಮಿಯಲ್ಲೂ ಕಾಮಗಾರಿ ನಡೆಸಿದ್ದಾರೆ. ಈ ಕುರಿತು ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್‌ನವರು ನಮಗೆ ಸಂಬಂಧವಿಲ್ಲ ಎಂದು ಹೇಳುತ್ತಾರೆ. ತಹಸೀಲ್ದಾರ್ ಮಾತನಾಡಿ ನಾವು ಲೋಕೋಪಯೋಗಿ ಇಲಾಖೆ ಮತ್ತು ತಾ.ಪಂ ಸಮಕ್ಷಮದಲ್ಲಿ ಪರಿಶೀಲನೆ ಮಾಡುತ್ತೇವೆ ಎಂದರು.
ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಹೆಸರಿಗೆ ಮತ್ತೆ ಆಗ್ರಹ:
ದರ್ಬೆ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನಾಮಕರಣ ಮಾಡುವಂತೆ 2012ರಲ್ಲೇ ಮನವಿ ಮಾಡಲಾಗಿದೆ. ಆದರೆ ಅದು ಇನ್ನೂ ಪೆಂಡಿಂಗ್ ಆಗಿದೆ ಯಾಕೆ ಎಂದು ಸದಸ್ಯರು ಪ್ರಸ್ತಾಪಿಸಿದರು. ಉತ್ತರಿಸಿದ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ದರ್ಬೆ ವೃತ್ತಕ್ಕೆ ನಾಮಕರಣಕ್ಕೆ ನಿರ್ಣಯ ಆದ ಬಳಿಕ ಅದಕ್ಕೆ ಆಕ್ಷೇಪಣಾ ಅರ್ಜಿಯನ್ನು ಕೌನ್ಸಿಲ್ ಸಭೆಗೆ ತರಬೇಕಾಗುತ್ತದೆ.ಹೀಗೆ ಆಕ್ಷೇಪಣಾ ಪ್ರಕಟಣೆಯ ಸಂದರ್ಭ ಆಕ್ಷೇಪಣೆ ಬಂದಾಗ ಮತ್ತೆ ಕೌನ್ಸಿಲ್ ಸಭೆಯಲ್ಲಿ ಅದನ್ನು ಜಿಲ್ಲಾಧಿಕಾರಿ ಪ್ರಸ್ತಾವನೆಗೆ ಕೇಳಿಕೊಂಡಿದ್ದಾರೆ. ಮುಂದಿನ ಕೌನ್ಸಿಲ್ ಸಭೆಯಲ್ಲಿ ಅದನ್ನು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಮಾಡಲಾಗುವುದು ಎಂದರು.

ಗಾಂಧಿ ಜಯಂತಿಗೆ ಅಂಗನವಾಡಿಗೆ ಅಂಬೇಡರ್ ಭಾವ ಚಿತ್ರ ವಿತರಣೆ:
ಅಂಗನವಾಡಿ ಕೇಂದ್ರಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವ ಕುರಿತು ಸಭೆಯಲ್ಲಿ ಶೇಷಪ್ಪ ನೆಕ್ಕಿಲು ಪ್ರಸ್ತಾಪಿಸಿದರು. ಉತ್ತರಿಸಿದ ತಾ.ಪಂ ಯೋಜನಾ ನಿರ್ದೇಶಕಿ ಸುಕನ್ಯ ಅವರು ಅ.2ರ ಗಾಂಧಿ ಜಯಂತಿಯಂದು ಎಲ್ಲಾ ಅಂಗನವಾಡಿಗಳಿಗೆ ಅಂಬೇಡ್ಕರ್ ಭಾವ ಚಿತ್ರ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು.

ಎಸ್ಸಿಎಸ್ಟಿ ಸಭೆಗೆ ಅಧಿಕಾರಿಗಳ ನಿರಾಸಕ್ತಿ:
ಎಸ್ಸಿ ಎಸ್ಟಿ ಸಭೆ ಪ್ರತಿ ಮೂರು ತಿಂಗಳಿಗೆ ಆಗಬೇಕು. ಆದರೆ ಇದೀಗ ಒಂದು ವರ್ಷ ಆಗುತ್ತಾ ಬಂದಿದೆ. ಜನವರಿಯಲ್ಲಿ ಒಮ್ಮೆ ಆದ ಸಭೆ ಮತ್ತೆ ಸುದೀರ್ಘ ಸಮಯದ ಬಳಿಕ ಇದೀಗ ನಡೆಯುತ್ತಿದೆ.ಅಧಿಕಾರಿಗಳು ಈ ಸಭೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಮುದ್ದ ಅವರು ಪ್ರಸ್ತಾಪಿಸಿದರು. ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಅವರು ಮಾತನಾಡಿ ಜುಲೈಯಲ್ಲಿ ಸಭೆ ಆಗಿದೆ. ಆ ಬಳಿಕ ಚುನಾವಣೆ ಬಂತು. ಮತ್ತೊಮ್ಮೆ ಮಂತ್ರಿಗಳು ಬರುವ ಕಾರ್ಯಕ್ರಮಕ್ಕಾಗಿ ಮುಂದೂಡಲಾಗಿತ್ತು. ಈ ವರ್ಷ ಮತ್ತೆ ಇನ್ನೊಂದು ಸಭೆಯು ನಡೆಯಲಿದೆ ಎಂದರು.

ಚರಂಡಿಗೆ ವೇಸ್ಟ್ ನೀರು ನಮ್ಮ ಮೇಲೆ ಮಾತ್ರ ಕ್ರಮ ಯಾಕೆ ?:
ನಾಲ್ಕೈದು ಮನೆಗಳಿಂದ ಚರಂಡಿಗೆ ವೇಸ್ಟ್ ನೀರು ಬಿಡುವ ವಿಚಾರದಲ್ಲಿ ನನ್ನ ಮೇಲೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ನೋಟೀಸ್ ನೀಡಿದ್ದಾರೆ. ನಾನು ವೇಸ್ಟ್ ನೀರು ಚರಂಡಿಗೆ ಬಿಡುವುದನ್ನು ನಿಲ್ಲಿಸಿದರೂ ಉಳಿದವರು ಈಗಲೂ ವೇಸ್ಟ್ ನೀರು ಚರಂಡಿಗೆ ಬಿಡುತ್ತಾರೆ. ಅವರ ಮೇಲೆ ಯಾಕೆ ಕ್ರಮವಿಲ್ಲ ಎಂದು ನೆಹರುನಗರ ಕಾರೆಕ್ಕಾಡು ನಿವಾಸಿ ಶೀನ ಪ್ರಶ್ನಿಸಿದರು. ಈ ಕುರಿತು ಪರಿಶೀಲನೆ ಮಾಡುವುದಾಗಿ ನಗರಸಭೆ ಪೌರಾಯುಕ್ತರು ತಿಳಿಸಿದರು.

ಕಾರೆಕ್ಕಾಡು ರಸ್ತೆ ಸಮಸ್ಯೆ:
ಕಾರೆಕ್ಕಾಡುವಿನಲ್ಲಿ ರಸ್ತೆ ಸಮಸ್ಯೆಯಿಂದಾಗಿ ಆಂಬುಲೆನ್ಸ್ ಹೋಗದೆ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಎತ್ತಿಕೊಂಡು ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಕುರಿತು ನಗರಸಭೆಗೆ ಮಾಹಿತಿ ನೀಡಲಾಗಿದೆ ಎಂದು ಗಣೇಶ್ ಕಾರೆಕ್ಕಾಡು ತಿಳಿಸಿದರು. ಉತ್ತರಿಸಿದ ಪೌರಾಯುಕ್ತರು ಪರಿಶೀಲಿಸುವುದಾಗಿ ತಿಳಿಸಿದರು.

ಕೃಷಿ ಜಮೀನು ಸಾಲವನ್ನು ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಿ:
ಕೃಷಿ ಜಮೀನು ಸಾಲವನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುತ್ತದೆ.ಆದರೆ 10 ಕಿ.ಮೀ ವ್ಯಾಪ್ತಿಯೊಳಗೆ ಖರೀದಿಸುವ ನಿರ್ದೇಶನ ಸರಿಯಲ್ಲ. ಅದರ ವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವಂತೆ ಕೊರಗಪ್ಪ ಪ್ರಸ್ತಾಪಿಸಿದರು.ಉತ್ತರಿಸಿದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹೇಶ್ ನಾಯ್ಕ್ ಅವರು ಮಾಹಿತಿ ನೀಡಿ ಇಲಾಖೆಯ ನಿಯಮದಂತೆ 10 ಕಿ.ಮೀ ಸೀಮಿತವಾಗಿದೆ.ಸಾಲ ಸೌಲಭ್ಯ ಮತ್ತು ಸಬ್ಸಿಡಿ ಕೂಡಾ ಇದೆ ಎಂದು ಮಾಹಿತಿ ನೀಡಿದರು.
34 ನೆಕ್ಕಿಲಾಡಿಯಲ್ಲಿ ಜಾಗ ಒತ್ತುವರಿ:
34 ನೆಕ್ಕಿಲಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನ ಪಡಿಸಿದ್ದಾರೆ. ಇದನ್ನು ಸರ್ವೇ ಮಾಡಿ ಸ್ವಾಧೀನ ಪಡಿಸುವಂತೆ ಶೇಷಪ್ಪ ನೆಕ್ಕಿಲು ಹೇಳಿದರು.
ಆಟೋ ರಿಕ್ಷಾ ಪಾರ್ಕ್ ನಲ್ಲಿ ಮೆಂಬರ್‌ಶಿಪ್ ಇಲ್ಲ:
ಆಟೋ ರಿಕ್ಷಾ ಪಾರ್ಕ್‌ನಲ್ಲಿ ಇಲಾಖೆಯಿಂದ ಮೆಂಬರ್‌ಶಿಪ್ ಮಾಡುತ್ತಿಲ್ಲ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಗಣೇಶ್ ಕಾರೆಕ್ಕಾಡು ಅವರು ಮಾತನಾಡಿ ಆಟೋ ರಿಕ್ಷಾ ತಂಗುಣಾದಲ್ಲಿ ಮೆಂಬರ್‌ಶಿಪ್ ಕೇಳುತ್ತಾರೆ. ಪಾರ್ಕ್ ಬಳಿ ಸರ್ವಿಸ್ ರಿಕ್ಷಾದಲ್ಲಿ ಜನ ಹಾಕಿದರೆ ಜೋರು ಮಾಡುತ್ತಾರೆ ಎಂದು ಪ್ರಸ್ತಾಪಿಸಿದರು. ಉತ್ತರಿಸಿದ ಅಧಿಕಾರಿ ತಮ್ಮ ವಿಳಾಸಕ್ಕೆ ಹತ್ತಿರ ಇರುವ ತುಂಗುದಾಣದಲ್ಲಿ ಅಟೋ ರಿಕ್ಷಾ ನಿಲ್ಲಿಸಬಹುದು. ಅದಕ್ಕೆ ಮೆಂಬರ್ ಶಿಪ್ ಅಗತ್ಯವಿಲ್ಲ ಎಂದರಲ್ಲದೆ ಈ ಕುರಿತು ದೂರು ಬಂದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.ಅಮ್ಚಿನಡ್ಕ, ಕಾವು, ಕೌಡಿಚ್ಚಾರಿಗೆ ಬೆಳಿಗ್ಗೆ ಗಂಟೆ 8ಕ್ಕೆ ಅಗತ್ಯ ಬಸ್ ವ್ಯವಸ್ಥೆಯಿಲ್ಲ ಎಂದು ಲೋಹಿತ್ ಅಮ್ಚಿನಡ್ಕ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಅಂಬೇಡ್ಕರ್ ನಿಗಮದಿಂದ ಸ್ವ ಉದ್ಯೋಗ ಯೋಜನೆಯಲ್ಲಿ ಸರಕಾರಿ ನೌಕರಿಯಾಗಿದ್ದವರ ಮನೆಗೂ ಸೌಲಭ್ಯ ನೀಡಲಾಗಿದೆ. ಬಡವರಿಗೆ ಅನ್ಯಾಯವಾಗಿದೆ ಎಂದು ಸಂಘಟನೆ ಮುಖಂಡ ರಾಜು ಹೊಸ್ಮಠ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಕೊರಗಪ್ಪ ಈಶ್ವರಮಂಗಲ ಅವರು ಮಾತನಾಡಿ ಆರ್ಯಾಪು ಗ್ರಾಮದ ಲಕ್ಷ್ಮಣ ಎಂಬವರು ಡಿ.ಸಿ.ಮನ್ನಾ ಜಮೀನಿಗೆ ಅರ್ಜಿ ಕೊಟ್ಟು 2 ವರ್ಷ ಆಗಿದೆ. ಈ ಕುರಿತು ಇನ್ನೂ ಪರಿಶೀಲಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದನ್ನು ಪರಿಶೀಲಿಸುವುದಾಗಿ ಪೌರಾಯುಕ್ತರು ತಿಳಿಸಿದರು. ಮಹಾಲಿಂಗ ನಾಯ್ಕ ಅವರು ಮಾತನಾಡಿ ನಗರಸಭೆಯಲ್ಲಿ ಅಕ್ರಮ ಸಕ್ರಮ ಅರ್ಜಿಗಳು ಪೆಂಡಿಂಗ್ ಆಗಿದೆ ಎಂದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯಾ, ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹೇಶ್ ನಾಯ್ಕ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಿ. ಕೃಷ್ಣ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಹಲವು ಸೌಲಭ್ಯ
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾನೂನು ಪದವಿ ಪಡೆದ ಅಭ್ಯರ್ಥಿಗಳು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡು ಆಯ್ಕೆಯಾದ ಹಿರಿಯ ವಕೀಲರ ಮೂಲಕ ತರಬೇತಿ ಪಡೆಯುವವರಿಗೆ ತಿಂಗಳಿಗೆ ರೂ.10 ಸಾವಿರದಂತೆ 2 ವರ್ಷ ಶಿಷ್ಯವೇತನ ನೀಡುವ ಕಾರ್ಯಕ್ರಮವಿದೆ. ಮೆಟ್ರಿಕ್ ಪೂರ್ವದ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿ 1 ರಿಂದ 5ನೇ ತರಗತಿ ಬಾಲಕರಿಗೆ ತಲಾ ರೂ. 1 ಸಾವಿರದಂತೆ ವಿದ್ಯಾರ್ಥಿವೇತನ, ಬಾಲಕಿಯರಿಗೆ ರೂ.1,1೦೦ ಪ್ರೋತ್ಸಾಹಧನ, 6 ಮತ್ತು 7ನೇ ತರಗತಿಯ ಬಾಲಕರಿಗೆ ತಲಾ ರೂ.ತಲಾ ರೂ.115೦ ವಿದ್ಯಾರ್ಥಿವೇತನ, ಬಾಲಕಿಯರಿಗೆ ತಲಾ ರೂ. 1250 ಪ್ರೋತ್ಸಾಹಧನ, 8 ನೇ ತರಗತಿಯ ಬಾಲಕರಿಗೆ ರೂ. 125೦ ವಿದ್ಯಾರ್ಥಿವೇತನ, ಬಾಲಕಿಯರಿಗೆ ರೂ. 1250 ಪ್ರೋತ್ಸಾಹಧನ, 9 ರಿಂದ 10ನೇ ತಗತಿಯ ವಿದ್ಯಾರ್ಥಿಗಳಿಗೆ ರೂ.2250 ಪ್ರೋತ್ಸಾಹಧನ ನೀಡಲಾಗುತ್ತದೆ. ಪಿಯುಸಿ, ಪದವಿ ನಂತರ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯ ರೂ.2.5೦ ಲಕ್ಷ ಆದಾಯ ಮಿತಿ ಹೊಂದಿದವರಿಗೆ ಭಾರತ ಸರಕಾರದ ವಿದ್ಯಾರ್ಥಿವೇತನ ನೀಡಲಾಗುವುದು. ನಿರ್ವಹಣೆಯ ಜೊತೆಗೆ ಸರಕಾರ ನಿಗದಿಪಡಿಸಿದ ಶುಲ್ಕವನ್ನು ನೀಡಲಾಗುವುದು.ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ಪ್ರೋತ್ಸಾಹ ಧನ ಕಾರ್ಯಕ್ರಮದಡಿಯಲ್ಲಿ ರೂ.3 ಲಕ್ಷ, ಇತರೆ ಜಾತಿ ಹುಡುಗಿ, ಹುಡಗನನ್ನು ವಿವಾಹವಾದಲ್ಲಿ ರೂ.2.5೦ ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು. ಸಮುದಾಯದ ಒಳಗೆ ಅಂತರ್ ಜಾತಿ ವಿವಾಹಕ್ಕೆ ರೂ.2 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು. ಸರಳ ವಿವಾಹ ಯೋಜನೆಯಲ್ಲಿ ರೂ.5೦ ಸಾವಿರ ಆರ್ಥಿಕ ನೇರವಾಗಿ ನೀಡಲಾಗುವುದು ಸೇರಿದಂತೆ ವಿವಿಧ ಮಾಹಿತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಕ ಕೃಷ್ಣ ಅವರು ತಿಳಿಸಿದರು.

ನಗರಸಭೆಯಲ್ಲಿ 58 ಸೈಟ್ ಮಂಜೂರು
ನಗರಸಭಾ ವ್ಯಾಪ್ತಿಯಲ್ಲಿ 2013ರ ಬಳಿಕ ಯಾವ ನಿವೇಶನವೂ ಹಂಚಿಕೆಯಾಗಿಲ್ಲ. ಇದೀಗ ಡಿಸಿ ಮನ್ನಾ ಭೂಮಿಯಲ್ಲಿ 68 ಸೈಟು ಗುರುತಿಸಲಾಗಿದ್ದು, 58 ಸೈಟು ಆಶ್ರಯ ಸಮಿತಿಯಲ್ಲಿ ಮಂಜೂರುಗೊಂಡಿದೆ. ಹೊಸ ಮನೆ ರಚನೆ, ಮನೆ ದುರಸ್ತಿ, ಶೌಚಾಲಯ, ವಸತಿಯೋಜನೆಗೆ ಸಂಬಂಧಿಸಿ ಸಾಮಾನ್ಯ ಸಭೆಯಲ್ಲಿ ನಿಗದಿಪಡಿಸಿದಂತೆ ಪಾವತಿಗೆ ಕ್ರಮಕೈಗೊಳ್ಳುತ್ತೇವೆ ಎಂದು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಸಭೆಗೆ ತಿಳಿಸಿದರು.

LEAVE A REPLY

Please enter your comment!
Please enter your name here