ಪುತ್ತೂರಿನಲ್ಲಿ “ನನ್ನ ಮಣ್ಣು ನನ್ನ ದೇಶ” ಮೃತ್ತಿಕೆ ಸಂಗ್ರಹ ಅಭಿಯಾನ

0

40ಕ್ಕೂ ಅಧಿಕ ದೇವಸ್ಥಾನ, ದೈವಸ್ಥಾನಗಳಿಂದ ಆಗಮಿಸಿದ ಮೃತ್ತಿಕೆ ಕಲಶಕ್ಕೆ ಅರ್ಪಣೆ

ಪುತ್ತೂರು: ದೇಶಕ್ಕಾಗಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸಿ ಗೌರವಿಸುವ ಮತ್ತು ದೇಶದ ಏಕತೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ದೇಶದಾದ್ಯಂತ ‘ನನ್ನ ಮಣ್ಣು ನನ್ನ ದೇಶ’ ಮೃತ್ತಿಗೆ ಸಂಗ್ರಹ ಅಭಿಯಾನ ಸೆ.30ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.

ಏಕತೆಯ ಮನೋಭಾವ ಬೆಳೆಯಲಿ:
ಶ್ರೀ ಮಹಾಲಿಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಕಾರ್ಯಕ್ರಮ ಉದ್ಘಾಟಿಸಿ ಮೃತ್ತಿಕೆಯನ್ನು ಕಲಶಕ್ಕೆ ಅರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಹ ಸರಿ ಇದ್ದಾಗ ದೇಶ, ದೇಶ ಸರಿ ಇದ್ದಾಗ ದೇಹ ಎಂಬಂತೆ ದೇಶದ ಎಲ್ಲಾ ಕಡೆಯಿಂದ ಮೃತ್ತಿಗೆ ಸಂಗ್ರಹವಾಗುವ ರೀತಿಯಲ್ಲಿ ಎಲ್ಲರಲ್ಲೂ ಏಕತೆಯ ಮನೋಭಾವ ಬೆಳೆಯಲಿ. ಇದರ ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಇರಲಿ ಎಂದರು.

ಸತ್ಕಾರ್ಯದಲ್ಲಿ ಎಲ್ಲರು ತೊಡಗಿಕೊಳ್ಳಿ:

ನನ್ನ ಮಣ್ಣು ನನ್ನ ದೇಶ ಮೃತ್ತಿಕೆ ಸಂಗ್ರಹ ಅಭಿಯಾನದ ಜಿಲ್ಲಾ ಸಂಚಾಲಕ ಸಂತೋಷ್ ಬೋಳಿಯಾರು ಅವರು ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಸಂಗ್ರಹವಾದ ಮೃತ್ತಿಕೆಯನ್ನು ಮೆರವಣಿಗೆ ಮೂಲಕ ಜಿಲ್ಲೆಗೆ ಸಮರ್ಪಣೆ ಮಾಡಿ, ರಾಜ್ಯಕ್ಕೆ ಮುಟ್ಟಿಸಲಾಗುವುದು. ರಾಜ್ಯದಲ್ಲಿ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿತ ಅಮೃತ ವಾಟಿಕಾ ವನಕ್ಕೆ ಬಳಕೆಯಾಗಲಿದ್ದು, ಪ್ರತಿ ವಾರ್ಡ್ನಲ್ಲಿ ಮಣ್ಣು ಸಂಗ್ರಹದ ಸತ್ಕಾರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ರಾಜಕೀಯ ರಹಿತ ಕಾರ್ಯಕ್ರಮ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಈ ಹಿಂದೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣಕ್ಕೂ ಇದೇ ರೀತಿಯಾಗಿ ದೇಶದ ಎಲ್ಲಾ ಕಡೆಯ ಸಹಕಾರ ನೀಡಲಾಗಿದೆ. ಇವತ್ತು ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಢೀಕರಿಸುವ ಕಾರ್ಯ ಆಗುತ್ತಿದೆ. ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಇದರು ರಾಜಕೀಯ ರಹಿತ ಕಾರ್ಯಕ್ರಮ ಎಂದರು. ಗೋಪಾಲಕೃಷ್ಣ ಹೇರಳೆಯವರು ಪ್ರತಿಜ್ಞಾ ವಿಧಿ ವಿಧಾನ ಬೋಧಿಸಿದರು. ವೇದಿಕೆಯಲ್ಲಿ ರಾಮ್‌ದಾಸ್ ಬಂಟ್ವಾಳ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಮುಳಿಯ ಪ್ರಾರ್ಥಿಸಿದರು. ನನ್ನ ಮಣ್ಣು ನನ್ನ ದೇಶ ಅಭಿಯಾನದ ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಚಾಲಕ ನಿತೀಶ್ ಶಾಂತಿವನ ಸ್ವಾಗತಿಸಿದರು. ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.

40ಕ್ಕೂ ಅಧಿಕ ದೇವಸ್ಥಾನ, ದೈವಸ್ಥಾನಗಳಿಂದ ಮೃತ್ತಿಕೆ ಸಮರ್ಪಣೆ:
ಪುತ್ತೂರಿನಲ್ಲಿ ಸುಮಾರು 40ಕ್ಕೂ ಅಧಿಕ ದೇವಸ್ಥಾನ, ದೈವಸ್ಥಾನಗಳಿಂದ ಸಂಗ್ರಹಗೊಂಡ ಮೃತ್ತಿಕೆಗಳನ್ನು ಆಯಾ ವಾರ್ಡ್ಗಳ ಪ್ರಮುಖರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರುಗಳು ತಂದು ನಟರಾಜ ವೇದಿಕೆಯಲ್ಲಿ ಇರಿಸಲಾದ ದೊಡ್ಡ ಕಲಶಕ್ಕೆ ಸಮರ್ಪಣೆ ಮಾಡಿದರು. ಅರ್ಚಕರು ಕಲಶಕ್ಕೆ ಪೂಜೆ ನೆರವೇರಿಸಿದರು.

LEAVE A REPLY

Please enter your comment!
Please enter your name here