ಮದ್ಯದಂಗಡಿ ತೆರೆಯುವ ಮೂಲಕ ಗಾಂಧಿ ತತ್ವಕ್ಕೆ ವಿರೋಧ-ರಾಜ್ಯ ಸರಕಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

0

ಮದ್ಯದಂಗಡಿ ತೆರೆಯುವುದು ಬಿಟ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ – ನಶ್ರೀಯಾ ಬೆಳ್ಳಾರೆ

ಪುತ್ತೂರು: ರಾಜ್ಯ ಸರಕಾರ 1 ಸಾವಿರ ಮದ್ಯದಂಗಡಿ ತೆರೆಯುವ ಮೂಲಕ ಗಾಂಧಿ ತತ್ವಕ್ಕೆ ವಿರೋಧವಾಗಿ ನಡೆಯುತ್ತಿದೆ ಮತ್ತು ಮದ್ಯದಂಗಡಿ ಹೆಚ್ಚಿಸಿ ಗಾಂಧಿ ಜಯಂತಿ ಆಚರಿಸುತ್ತಿದೆ ಎಂದು ಆರೋಪಿಸಿ ಎಸ್ ಡಿ ಪಿ ಐ ಪುತ್ತೂರು ಕ್ಷೇತ್ರ ಸಮಿತಿಯಿಂದ ಅ.2 ರಂದು ಪುತ್ತೂರು ತಾಲೂಕು ಆಡಳಿತ ಸೌಧ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.


ಮದ್ಯದಂಗಡಿ ತೆರೆಯುವುದು ಬಿಟ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ:
ಉಮೆನ್ಸ್ ಇಂಡಿಯಾ ಮೂವುಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರೀಯಾ ಬೆಳ್ಳಾರೆ ಅವರು ಮಾತನಾಡಿ ರಾಜ್ಯ ಸರಕಾರ ಗ್ಯಾರೆಂಟಿಗೆ ಹಣ ಸರಿದೂಗಿಸಲು ಮದ್ಯಪಾನ ಹೆಚ್ಚಿಸುತ್ತಿದೆ. ಇವರಿಗೆ ಗಾಂಧಿ ಜಯಂತಿ ಆಚರಣೆ ಮಾಡಲು ನೈತಿಕ ಹಕ್ಕಿಲ್ಲ. ದೇಶದಲ್ಲೇ ಅತಿ ಹೆಚ್ಚು ಮದ್ಯ ಮಾರಾಟ ಆಗುತ್ತಿರುವ ಕರ್ನಾಟಕದಲ್ಲಿ ಇದೀಗ ಸಿದ್ದರಾಮಯ್ಯ ಸರಕಾರ ಮತ್ತೆ ಗ್ರಾಮ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಯೋಜನೆ ಹಾಕಿದೆ. ಇದನ್ನು ಪ್ರಶ್ನಿಸಿದರೆ ಜನಸಂಖ್ಯೆಗೆ ಆಧಾರವಾಗಿ ಮದ್ಯದಂಗಡಿ ತೆರೆಯುವುದೆಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಅಗತ್ಯ ಇರುವುದು ಮದ್ಯದಂಗಡಿಯಲ್ಲ. ಶಾಲಾ ಕಾಲೇಜು, ಸರಕಾರಿ ಆಸ್ಪತ್ರೆಯನ್ನು ತೆರೆಯುವ ಮೂಲಕ ಸಮಾಜದ ಸ್ವಾಸ್ತ್ಯ ಕಾಪಾಡಬೇಕು ಎಂದ ಅವರು ಚುನಾವಣೆಗೆ ಮುಂದೆ 2ಬಿ ಮೀಸಲಾತಿ, ಬಜರಂಗದಳ ನಿಷೇಧವನ್ನು ಇನ್ನೂ ಮಾಡಲು ಮುಂದಾಗಿಲ್ಲ. ಹೆಚ್ಚುವರಿ ಮದ್ಯದಂಗಡಿ ತೆರೆಯುವುದನ್ನು ಬಿಟ್ಟು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.


ಮದ್ಯಮುಕ್ತ ಗಾಂಧಿ ಕಂಡ ಕನಸು ಕನಸಾಗಿಯೇ ಉಳಿದಿದೆ:
ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಸ್ವಾಸ್ತ್ಯ ನೈತಿಕತೆ ಕೆಟ್ಟಾಗ ಎಚ್ಚರಿಸುವ ಕೆಲಸವನ್ನು ಪಕ್ಷ ಮಾಡಿಕೊಂಡು ಬಂದಿದೆ. ಇವತ್ತು ಗಾಂಧಿ ಜಯಂತಿಯ ದಿನ ಗಾಂಧಿ ಕಂಡ ಕನಸು ನನಸು ಮಾಡಬೇಕಾದ ಕಾಂಗ್ರೆಸ್ ಸರಕಾರ ಗಾಂಧಿ ತತ್ವಕ್ಕೆ ವಿರೋಧ ಕೆಲಸ ಮಾಡುತ್ತಿದೆ. ಮದ್ಯಮುಕ್ತ ದೇಶವಾಗಬೇಕೆಂಬ ಗಾಂಧಿ ಕನಸು ಕನಸಾಗಿಯೇ ಉಳಿದಿದೆ. ಮಹಿಳೆಯರಿಗೆ ಗ್ಯಾರೆಂಟಿ ಕೊಟ್ಟಂತೆ ಪುರುಷರಿಗೆ ಮದ್ಯದ ಗ್ಯಾರೆಂಟಿ ಕೊಡುವ ಮೂಲಕ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿದೆ. ಭ್ರಷ್ಟಾಚಾರ, ಹಿಂಸೆ, ಅತ್ಯಾಚಾರದ ವಿರುದ್ಧ ಮಾತನಾಡುವ ಕಾಂಗ್ರೆಸ್ ಗಾಂಧಿ ತತ್ವ ಅನುಸರಿಸುತ್ತಿಲ್ಲ ಎಂದರು.


ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಉಮೆನ್ಸ್ ಇಂಡಿಯಾ ಮೂಮೆಂಟ್ ಪುತ್ತೂರು ಅಧ್ಯಕ್ಷ ಜಾಯಿದಾ ಸಾಗರ್, ನಗರಸಭಾ ಸದಸ್ಯೆ ಪಾತಿಮಾತ್ ಜೋರಾ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯೆ ಸೌದ, ಎಸ್‌ಡಿಪಿಐ ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು, ಹಿರಿಯರಾದ ಪಿಬಿಕೆ, ಉಸ್ಮಾನ್ ಎ.ಕೆ. ಸಲೀಂ ಪುರುಷರಕಟ್ಟೆ, ಅಶ್ರಫ್ ಬಡಕ್ಕೋಡಿ, ನವಾಜ್ ಕೆರೆಮೂಲೆ, ಎಸ್‌ಡಿಟಿಯು ಕಾರ್ಯದರ್ಶಿ ಇಫಾಜ್ ಬನ್ನೂರು ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಿಯಾಜ್ ಬಳಕ್ಕ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ರಹೀಮ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here