ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ

0

ಧನಾತ್ಮಕ ಕಾರ್ಯಗಳಿಂದ ಸಾಮಾಜಿಕ ಬದಲಾವಣೆ : ಡಾ.ಹರಿಪ್ರಸಾದ್


ಪುತ್ತೂರು: ನಮ್ಮ ವ್ಯಕ್ತಿತ್ವದಲ್ಲಿ ನಾವು ಮಾಡಿಕೊಳ್ಳುವ ಸಣ್ಣ ಪುಟ್ಟ ಬದಲಾವಣೆಗಳು ದೊಡ್ಡ ದೊಡ್ಡ ಪರಿಣಾಮಗಳಿಗೆ ಕಾರಣೀಭೂತವಾಗುತ್ತವೆ. ನಮ್ಮಿಂದಾಗಿ ಉಂಟಾಗಬಹುದಾದ ಧನಾತ್ಮಕ ಕಾರ್ಯಗಳು ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿ ವ್ಯಕ್ತಿಗಳ ಆಂತರಿಕ ಶಕ್ತಿಯನ್ನು ಅನಾವರಣಗೊಳಿಸಲು ಅತ್ಯುತ್ತಮ ವೇದಿಕೆಯಾಗಿ ಕೆಲಸ ನಿರ್ವಹಿಸುತ್ತದೆ ಎಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಹರಿಪ್ರಸಾದ್ ಎಸ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಜಲ ಸಂರಕ್ಷಣಾ ಅರಿವು ಆಂದೋಲನಕ್ಕೆ ಚಾಲನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.


ನಮ್ಮೊಳಗೆ ಅವಿತಿರುವ ವೈವಿಧ್ಯಮಯ ಪ್ರತಿಭೆಗಳ ಅನಾವರಣಕ್ಕೆ ಎನ್.ಎಸ್.ಎಸ್ ಪೂರಕ. ಎನ್.ಎಸ್.ಎಸ್ ಎಂದಾಕ್ಷಣ ದೈಹಿಕವಾಗಿ ದುಡಿಯುವುದು ಮಾತ್ರ ಎಂಬ ತಪ್ಪು ಕಲ್ಪನೆಯನ್ನು ಅನೇಕರು ಹೊಂದಿದ್ದಾರೆ. ಆದರೆ ಇಲ್ಲಿ ದೈಹಿಕ ಶ್ರಮ ಎಂಬುದು ಸಾಂಕೇತಿಕವಾಗಿ ಅಷ್ಟೇ ಇದೆ. ವ್ಯಕ್ತಿತ್ವ ವಿಕಸನವೇ ಸೇವಾ ಯೋಜನೆಯ ನಿಜವಾದ ಉದ್ದೇಶ. ಸಮಾಜದಲ್ಲಿ ಜಾಗೃತಿ ಮೂಡಿಸುವ, ಬದಲಾವಣೆಗಳನ್ನು ತರುವ ಕಾರ್ಯದಲ್ಲಿ ಸೇವಾ ಯೋಜನೆಯ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಾರೆ ಎಂದರು.


ಇಂದು ಜನಜಾಗೃತಿ ಮೂಡಿಸುವುದು ಅತ್ಯಂತ ಸುಲಭ. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿದರೆ ಜನರನ್ನು ಉತ್ಕೃಷ್ಟ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಬಹುದು. ಆದರೆ ಮೊಬೈಲ್ ಅನ್ನು ಯಾವ ಕಾರಣಕ್ಕಾಗಿ ಬಳಸಬೇಕು ಎಂಬ ನಿರ್ಣಯವನ್ನು ಮೊದಲು ಮಾಡಬೇಕಿದೆ. ಮತ್ತೊಬ್ಬರಿಗೆ ಉಪಯೋಗವಾಗುವಂತಹ ವಿಷಯಗಳಿಗಾಗಿ ನಾವು ಮೊಬೈಲ್ ಬಳಸಲಾರಂಭಿಸಿದರೆ ಬದಲಾವಣೆ ನಮ್ಮಿಂದಲೇ ಆರಂಭಗೊಳ್ಳುತ್ತದೆ ಎಂದು ತಿಳಿಹೇಳಿದರು.


ಅಧ್ಯಕ್ಷತೆ ವಹಿಸಿ, ಜಲ ಸಂರಕ್ಷಣಾ ಅರಿವು ಆಂದೋಲನಕ್ಕೆ ಚಾಲನೆ ನೀಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶ ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಹಾಗಾದಾಗ ದೇಶದ ಮೇಲೆ ಕಸ ಸುರಿಯುವವರನ್ನು ಕಾಣುವಾಗ ಹೋಗಿ ಬುದ್ಧಿ ಮಾತು ಹೇಳಬೇಕೆನಿಸುತ್ತದೆ. ನಿರ್ಲಕ್ಷದಿಂದ ಕರ್ತವ್ಯ ನಿರ್ವಹಿಸುವವರ ಬಳಿ ಹೋಗಿ ಎಚ್ಚರಿಸಬೇಕೆನಿಸುತ್ತದೆ. ನನಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎಂಬ ಭಾವ ನಮ್ಮಲ್ಲಿ ಮೂಡಿದಾಗ ನಾವು ನಿಜವಾದ ಸ್ವಯಂಸೇವಕರಾಗುತ್ತೇವೆ. ರಕ್ತದಾನ, ಅಂಗಾಂಗ ದಾನಗಳಂತಹ ಪುಣ್ಯ ಕಾರ್ಯದಲ್ಲಿ ನಾವು ತೊಡಗುವುದಲ್ಲದೆ ಇತರರನ್ನೂ ತೊಡಗುವಂತೆ ಪ್ರೇರಣೆ ನೀಡಬೇಕಿದೆ ಎಂದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕರು ಹಾಗೂ ಸ್ವಯಂಸೇವಕರಿಗೆ ಪ್ರಮಾಣವಚನ ಬೋಧಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿ ನವನೀತ್ ಸ್ವಾಗತಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರ್ಷಿತ್ ಪಿಂಡಿವನ ಪ್ರಸ್ತಾವನೆಗೈದರು. ಎನ್.ಎಸ್.ಎಸ್. ನಾಯಕಿಯರಾದ ತೃಪ್ತಿ ಎಂ ಮಯ್ಯಾಳ ವಂದಿಸಿ ದೀಪಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here